ದಾರಾವಾಹಿ-

ಅದ್ಯಾಯ-02

Image result for photos village man working in arecanut farm

ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ ಗಂಡು ಮಕ್ಕಳಿಬ್ಬರ ಮದುವೆಯೂ ನಡೆಯಿತು. ಆದರೆ ಗೋಪಾಲ ಅಪ್ಪ ಅಮ್ಮನ ಮುದ್ದಿನ ಕಣ್ಮಣಿಯಾಗಿದ್ದವನು. ಹಾಗಾಗಿ ಅವನು ಏಳನೆಯ ತರಗತಿಯವರೆಗೆ ಮಾತ್ರವೇ ಓದಿ ಮತ್ತೆ ಯಾರ ಒತ್ತಾಯಕ್ಕೂ ಮಣಿಯದೆ ಶಾಲೆಬಿಟ್ಟು ಉಂಡಾಡಿ ಗುಂಡನಂತೆ ಬೆಳೆಯತೊಡಗಿದ. ಕುಡಿಮೀಸೆ ಚಿಗುರಿ, ಐದಾರು ಮಳೆಗಾಲ ಕಳೆಯುತ್ತಲೇ ಮನೆ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಂಡ. ಬಹಳ ಬೇಗನೇ ಆ ಕೆಲಸವನ್ನು ಕಲಿತ. ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಸ್ವತಃ ವಹಿಸಿಕೊಂಡು ದುಡಿಯುತ್ತ ಸಂಪಾದಿಸತೊಡಗಿದ. ತಮ್ಮ ಮಗ ವಿದ್ಯೆಯ ವಿಷಯದಲ್ಲಿ ಹಿಂದೆಬಿದ್ದರೂ ದುಡಿಮೆಯಲ್ಲಿ ಮೆಲುಗೈ ಸಾಧಿಸಿದ ಹಾಗೂ ಅವನು ತನ್ನ ಕೈಕೆಳಗೆ ಹತ್ತಾರು ಮಂದಿಯನ್ನು ದುಡಿಸತೊಡಗಿದ್ದನ್ನು ಕಂಡು ಹೆಮ್ಮೆಪಟ್ಟುಕೊಂಡ ಹೆತ್ತವರು ಅವನಿಗೂ ಮದುವೆ ಮಾಡಲು ಹೊರಟರು. ಹೆಣ್ಣಿನ ಕಡೆಯವರೂ ಗಂಡಿನ ಪ್ರಸ್ತುತ ದುಡಿಮೆಯ ಆಧಾರದ ಮೇಲೆಯೇ ಹೆಣ್ಣು ಕೊಟ್ಟರು. ಅದ್ಧೂರಿಯ ಮದುವೆಯೂ ನಡೆಯಿತು. ಗೋಪಾಲನ ಸಂಗಾತಿಯಾಗಿ ರಾಧಾ ಮನೆಗೆ ಬಂದಳು. ಇಷ್ಟಾಗುವ ಹೊತ್ತಿಗೆ ಸಂಜೀವಣ್ಣನಿಗೂ ವೃದ್ಧಾಪ್ಯ ಸಮೀಪಿಸಿತು. ಚಾಲಕವೃತ್ತಿಯಿಂದ ನಿವೃತ್ತರಾದರು. ಆನಂತರದ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ನೆಮ್ಮದಿಯ ಬಾಳು ಕಂಡರಾದರೂ ಕೆಲವು ವರ್ಷ ಸಂಧಿವಾತ, ಸಕ್ಕರೆ ಕಾಯಿಲೆಗಳಿಂದ ನರಳುತ್ತ ತೀರಿಕೊಂಡರು.

   ಸಂಜೀವಣ್ಣ ಗತಿಸುವ ಕೆಲವು ತಿಂಗಳ ಹಿಂದಷ್ಟೇ ಅವರ ಎರಡನೆಯ ಮಗ ಕೇಶವ ಮಲೆವೂರಿನಲ್ಲಿ ತನ್ನ ಟೈಲರ್ ಶಾಪಿನ ಪಕ್ಕದಲ್ಲಿ ಖಾಲಿಯಿದ್ದ ಬಾಡಿಗೆ ಮನೆಯನ್ನು ಗೊತ್ತುಪಡಿಸಿ ತನ್ನ ಸಂಸಾರವನ್ನು ಕರೆದುಕೊಂಡು ಹೋಗಿ ನೆಲೆಸಿದ್ದ. ಇನ್ನೊಬ್ಬ ಸಹೋದರ ದಿನೇಶ, ಸೈಕಲ್ ಶಾಪ್ ಹೊಂದಿದ್ದವನು ಬೇರೆ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದ್ದರಿಂದ ಹಿರಿಯ ಮಗ ಮಾಧವನೇ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಅವನು ಅಪ್ಪನಿಂದ ಬಸ್ಸು ಚಾಲನೆ ಕಲಿತಿದ್ದವನು ಬಾಡಿಗೆ ಟೆಂಪೋ ಚಾಲಕನಾಗಿ ದುಡಿಯುತ್ತಿದ್ದ. ಅಪ್ಪನ ನಂತರ ಅವರ ಉದ್ಯೋಗ ಮಾಧವನಿಗೆ ಸಿಕ್ಕಿತು. ಹೊಸ ಬಸ್ಸಿನ ಚಾಲಕನಾಗಿ ದುಡಿಮೆಯಾರಂಭಿಸಿದ. ತಾಯಿಯನ್ನೂ ಅವಳ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಂಡ. ಹಾಗಾಗಿ ಅವಳು ತೀರಿದ ನಂತರ ಅವಳ ಇಚ್ಛೆಯಂತೆ ಮನೆಯು ಮಾಧವನ ಹೆಸರಿಗೆ ವರ್ಗವಾಯಿತು. ಹೆತ್ತವರ ಮುದ್ದಿನ ಪುತ್ತಳಿಯಂತೆ ಬೆಳೆದಿದ್ದ ಗೋಪಾಲ ಅವರು ಗತಿಸಿದ ನಂತರ ಕೆಲವು ಕಾಲ ಅನಾಥಪ್ರಜ್ಞೆಯಿಂದ ನರಳಿದ. ಆದರೆ ಚೆಲುವೆಯಾದ ಹೆಂಡತಿಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರಾಧಾ ಮತ್ತು ಅಣ್ಣ, ಅತ್ತಿಗೆಯರ ಒಡನಾಟದಿಂದ ಮರಳಿ ಸುಖವಾಗಿ ಸಂಸಾರ ಮಾಡತೊಡಗಿದ. ಆದರೆ ಬರಬರುತ್ತ ಅಣ್ಣನ ಹೆಂಡತಿ ಶ್ಯಾಮಲಾಳಿಗೆ ಮೈದುನನ ಅನ್ಯೋನ್ಯ ದಾಂಪತ್ಯವನ್ನು ಕಂಡು ಮತ್ಸರ ಹುಟ್ಟತೊಡಗಿ, ಕ್ರಮೇಣ ಅವಳ ಅಸಲಿ ಮುಖ ಮುನ್ನೆಲೆಗೆ ಬರಲಾರಂಭಿಸಿತು.

   ಅವಳ  ಅಂಥ ನಡವಳಿಕೆಯಲ್ಲಿ ಬೇರೊಂದು ಉದ್ದೇಶವೂ ಅಡಗಿತ್ತು. ‘ಮಾವನನ್ನೂ, ಅತ್ತೆಯನ್ನೂ ತಾವೇ ಗಂಡ ಹೆಂಡತಿ ಕಷ್ಟಪಟ್ಟು ನೋಡಿಕೊಂಡಿದ್ದು. ಅದರ ಫಲವಾಗಿಯೇ ನಮಗೆ ಈ ಮನೆ ದಕ್ಕಿದ್ದು. ಹೀಗಿರುವಾಗ ಇಬ್ಬರು ಮೈದುನರು ಪಿತ್ರಾರ್ಜಿತ ಪಾಲು ಗೀಲು ಅಂತ ತಕರಾರೆತ್ತದೆ ಬೇರೆ ಸಂಸಾರ ಹೂಡಿದ್ದಾರೆ. ಆದರೆ ಈ ಗೋಪಾಲನ ಕುಟುಂಬ ಮಾತ್ರ ತಮಗೂ ಈ ಮನೆಯಲ್ಲಿ ಹಕ್ಕಿದೆ ಎಂಬಂತೆ ಠಿಕಾಣಿ ಹೂಡಿರುವುದು ಎಷ್ಟು ಸರಿ? ಇವರನ್ನು ಹೀಗೆಯೇ ಬಿಟ್ಟರೆ ನಾಳೆ ಅಪ್ಪ ಅಮ್ಮನ ಆಸ್ತಿಯಲ್ಲಿ ತಮಗೂ ಪಾಲಿದೆ. ಅಣ್ಣ, ಅತ್ತಿಗೆ ಹೆತ್ತವರನ್ನು ವಂಚಿಸಿ ಮನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ!’ ಎಂದು ಇಬ್ಬರೂ ಆಡಿಕೊಂಡರೆ ಅಥವಾ ಪೊಲೀಸರಿಗೆ ದೂರುಕೊಟ್ಟರೆ ನನ್ನ ಸಂಸಾರದ ಗತಿಯೇನಾದೀತು? ಇಲ್ಲ ಇವರನ್ನು ಇಲ್ಲಿರಲು ಬಿಡಬಾರದು. ಆದಷ್ಟು ಬೇಗ ಓಡಿಸಬೇಕು!’ ಎಂಬದು ಅವಳ ದೂರಾಲೋಚನೆಯಾಗಿತ್ತು. ಅಂದಿನಿಂದ ವಿನಾಕಾರಣ ಗೋಪಾಲನನ್ನು ಚುಚ್ಚಿ, ಹೀಯಾಳಿಸಿ ಮಾತಾಡುವುದು, ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಆರಂಭಿಸಿದಳು. ಅವನು ಕೆಲಸಕ್ಕೆ ಹೊರಟು ಹೋದ ಮೇಲೆ ರಾಧಾಳನ್ನು ಹಿಡಿದು ಪೀಡಿಸತೊಡಗಿದಳು. ಅವಳಿಗೆ ವಿಶ್ರಾಂತಿ ಕೊಡದೆ ದುಡಿಸತೊಡಗಿದಳು. ‘ಗತಿಯಿಲ್ಲದವರು. ಸ್ವತಂತ್ರವಾಗಿ ಬದುಕಲು ಯೋಗ್ಯತೆ ಇಲ್ಲದವರು!’ ಎಂಬಂಥ ವ್ಯಂಗ್ಯ, ತುಚ್ಛ ಮಾತುಗಳಿಂದ ಗಂಡ ಹೆಂಡತಿಯ ನೆಮ್ಮದಿಯನ್ನು ಎಷ್ಟು ಸಾಧ್ಯವೋ ಅಷ್ಟು ಬಗೆಯಲ್ಲಿ ಕೆಡಿಸಲಾರಂಭಿಸಿದಳು.

   ರಾಧಾ  ಮುಗ್ಧೆ ಮತ್ತು ಸಹನಶೀಲೆ ಹೆಣ್ಣು. ಪತಿಯೇ ಪರದೈವ. ಅವನ ಕುಟುಂಬವೂ ತನಗೆ ಅಷ್ಟೇ ಪೂಜ್ಯವಾದುದು. ಆದ್ದರಿಂದ ತನ್ನಿಂದ ಅವರಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಅನುಸರಿಸಿಕೊಂಡು ಬಾಳಬೇಕು. ಅದುವೇ ತನಗೂ ತನ್ನ ಕುಟುಂಬಕ್ಕೂ ಶ್ರೇಯಸ್ಸು! ಎಂಬ ತನ್ನಮ್ಮನ ಗುಣ ಸ್ವಭಾವಗಳನ್ನು ತಾನೂ ಮೈಗೂಡಿಸಿಕೊಂಡು ಬಂದಿದ್ದಳು. ಆದ್ದರಿಂದ ಅಕ್ಕ ಅದೇನೇ ಅಂದರೂ ಎಂಥ ಕಿರುಕುಳ ಕೊಟ್ಟರೂ ತುಟಿ ಪಿಟಿಕ್ ಎನ್ನದೆ ಸಹಿಸಿಕೊಳ್ಳುತ್ತಿದ್ದಳೇ ಹೊರತು ಗಂಡನೊಡನೆ ದೂರು ಹೇಳಿ ದುಃಖಿಸುವುದಾಗಲೀ ಬೇರೆ ಮನೆ ಮಾಡುವಂತೆ  ಒತ್ತಾಯಿಸುವುದಾಗಲೀ ಮಾಡಿದವಳಲ್ಲ. ಅಂಥ ಆಲೋಚನೆ ಅವಳಲ್ಲಿ ಕೆಲವು ಬಾರಿ ಸುಳಿದಾಡಿದ್ದೂ ಉಂಟು. ಆದರೆ ತಾನು ದುಡುಕಿ ಹಾಗೇನಾದರೂ ಮಾಡಿಬಿಟ್ಟರೆ ಒಡಹುಟ್ಟಿದವರನ್ನು ಅಗಲಿಸಿದ ಶಾಪ ತನಗೆ ತಟ್ಟುವುದು ಖಚಿತ ಎಂದು ಯೋಚಿಸಿ ಭಯದಿಂದ ಸುಮ್ಮನಾಗುತ್ತಿದ್ದಳು.

  ಗೋಪಾಲನಿಗೂ ಅಣ್ಣ ಅತ್ತಿಗೆಯೆಂದರೆ ಬಹಳ ಆತ್ಮೀಯತೆಯಿತ್ತು. ಮದುವೆಯಾಗಿ ಬಂದ ಆರಂಭದಲ್ಲಿ ಅತ್ತಿಗೆ ಅವನನ್ನು ಮಗನಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಅವನಿಗೂ ಅವಳೊಡನೆ ಮಧುರ ಬಾಂಧವ್ಯವಿತ್ತು. ಆದರೆ ತನ್ನ ಅಪ್ಪ ಅಮ್ಮ ತೀರಿಕೊಂಡ ಮೇಲೆ ಅವಳಲ್ಲಾದ ಬದಲಾವಣೆ ಅವನನ್ನು ಅಚ್ಚರಿಗೊಳಿಸಿತ್ತು. ಆ ಕುರಿತು ಕೆಲವು ಬಾರಿ ಯೋಚಿಸಿ ತಳಮಳಗೊಂಡಿದ್ದ. ಆದರೆ ಅವಳು ತಮ್ಮನ್ನು ಮನೆಯಿಂದ ತೊಲಗಿಸಲೆಂದೇ ಹಾಗೆಲ್ಲಾ ವರ್ತಿಸುತ್ತಿದ್ದಾಳೆ ಎಂಬ ಸತ್ಯ ಅವನ ಪೆದ್ದು ಮನಸ್ಸಿಗೆ ಹೊಳೆಯಲಿಲ್ಲ. ಆದ್ದರಿಂದ ಅತ್ತಿಗೆ ತನ್ನ ತಲೆ ಕಂಡ ಕೂಡಲೇ ಏನಾದರೊಂದು ಚುಚ್ಚಿ ಮಾತಾಡಿ ನೋಯಿಸುವುದು, ಅಸಡ್ಡೆ ತೋರಿಸುವುದರ ಬಗ್ಗೆ ಅವನು ದಿವ್ಯ ಮೌನ ತಳೆಯುತ್ತಿದ್ದ. ಆದರೆ ರಾಧಾಳಲ್ಲಿ ಈಗೀಗ ಹಿಂದಿನ ಲವಲವಿಕೆಯಿಲ್ಲದೆ, ದಿನೇದಿನೇ ಅವಳು ಸೊರಗುತ್ತಿದ್ದುದನ್ನು ಕಾಣುತ್ತ ಬಂದವನು ಚಿಂತೆಗೊಳಗಾದ. ಆವತ್ತೊಂದು ದಿನ ಬೆಳಿಗ್ಗೆ ಕೆಲಸಗಾರರನ್ನು ಕೆಲಸಕ್ಕೆ ಹಚ್ಚಿ ಬೇಗನೇ ಮನೆಗೆ ಹಿಂದಿರುಗಿದ.

‘ರಾಧಾ, ದೇವಸ್ಥಾನಕ್ಕೆ ಹೋಗದೆ ಕೆಲವು ವಾರಗಳು ಕಳೆದವಲ್ಲ ಮಾರಾಯ್ತೀ. ಇವತ್ತು ಸ್ವಲ್ಪ ಪುರುಸೋತ್ತು ಮಾಡಿಕೊಂಡು ಬಂದಿದ್ದೇನೆ. ನಡೆ ಹೋಗಿ ಬರುವ’ ಎಂದ. ಕೆಲವು ತಿಂಗಳಿನಿಂದ ಹೊರಗೆಲ್ಲೂ ಹೋಗದೆ ಗಂಡನ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತ ಸೋತುಹೋಗಿದ್ದ ರಾಧಾಳಿಗೆ ಗಂಡ ಇಂದು ತನ್ನ ಇಷ್ಟದೇವತೆ ಮಹಾಕಾಳಿಯಮ್ಮನ ಸನ್ನಿಧಿಗೆ ಕರೆದೊಯ್ಯುತ್ತೇನೆಂದುದು ಬಹಳ ಸಂತೋಷವಾಯಿತು. ‘ಆಯ್ತುರೀ, ಈಗಲೇ ಹೊರಟೆ!’ ಎಂದವಳು ತರಾತುರಿಯಲ್ಲಿ ಸ್ನಾನ ಮಾಡಿ ತನ್ನ ಮದುವೆಯಲ್ಲಿ ತವರಿನಿಂದ ಉಡುಗೊರೆ ಬಂದಿದ್ದ ಹೊಸ ಕಾಟನ್ ಸೀರೆಯೊಂದನ್ನು ಉಟ್ಟು ಸರಳವಾಗಿ ಸಿಂಗರಿಸಿಕೊಂಡು ಹೊರಟಳು. 

   ದೇವಸ್ಥಾನಕ್ಕೆ ಹೋಗಿ ಗಂಡನ ಹೆಸರಿನಲ್ಲಿ ಅಮ್ಮನವರಿಗೆ ಮಂಗಳಾರತಿ ಸೇವೆಯನ್ನು ನೀಡಿ, ಹಣ್ಣುಕಾಯಿ ಮಾಡಿಸಿದಳು. ಗಂಡ ಹೆಂಡತಿ ಇಬ್ಬರೂ ಮಹಾಕಾಳಿಯಮ್ಮನೊಡನೆ ಭಕ್ತಿಯಿಂದ ತಮ್ಮ ಮನೋಭಿಲಾಷೆಗಳನ್ನು ನಿವೇದಿಸಿಕೊಂಡು ಸಾಂಷ್ಟಾಂಗ ನಮಸ್ಕರಿಸಿದ ನಂತರ ಅಮ್ಮನವರಿಂದ ಅಭಯ ದೊರಕಿದಂಥ ಪ್ರಸನ್ನತೆ ಇಬ್ಬರಲ್ಲೂ ಮೂಡಿತು. ಅರ್ಚಕರಿಂದ ಪ್ರಸಾದ ಪಡೆದು ಗರ್ಭಗುಡಿಯೆದುರಿನ ಸಂಪಿಗೆ ವನದೊಳಗೆ ಹೋಗಿ ಕುಳಿತರು. ಗೋಪಾಲನೇ ಮೌನ ಮುರಿದ. ‘ಯಾಕೆ ರಾಧಾ ಏನಾಗಿದೆ ನಿನಗೆ? ಮನೆಯಲ್ಲಿ ನೀನು ಮುಂಚಿನಂತೆ ನಗುನಗುತ್ತ ಓಡಾಡದೆ ಎಷ್ಟು ದಿನಗಳಾದವು? ಹೊಟ್ಟೆಗಾದರೂ ಸರಿಯಾಗಿ ತಿಂತಿಯೋ ಇಲ್ವೋ? ಎಷ್ಟೊಂದು ಸೊರಗಿ ಹೋಗಿದ್ದಿ ನೋಡು. ಹುಷಾರಿಲ್ವಾ ಅಥವಾ ಬೇರೇನಾದರೂ ಚಿಂತೆ ಮಾಡುತ್ತಿದ್ದೀಯಾ, ಏನಾಯ್ತೆಂದು ನನ್ನ ಹತ್ತಿರವಾದರೂ ಹೇಳಬೇಕಲ್ವಾ ನೀನು?’ ಎಂದು ಆಕ್ಷೇಪಿಸಿದ. ರಾಧಾಳಿಗೆ ದುಃಖ ಒತ್ತರಿಸಿ ಬಂತು. ಮುಖವನ್ನು ಬೇರೆಡೆ ತಿರುಗಿಸಿಕೊಂಡು, ‘ಛೇ! ಹಾಗೇನಿಲ್ಲರೀ. ಚೆನ್ನಾಗಿಯೇ ಇದ್ದೇನಲ್ಲ. ನೀವು ಸುಮ್ಮನೆ ಏನೇನೋ ಯೋಚಿಸುತ್ತಿದ್ದೀರಷ್ಟೇ’ ಎಂದು ಬಲವಂತದ ನಗು ತಂದುಕೊಳ್ಳುತ್ತ ಅಂದಳು.

   ಗೋಪಾಲ ಅವಳ ಕಣ್ಣುಗಳು ಒದ್ದೆಯಾದುದನ್ನು ನೋಡಿದ. ಅವನ ಮನಸ್ಸು ಹಿಂಡಿತು. ‘ನೋಡು ರಾಧಾ, ನಾವು ದೇವಿಯ ಸನ್ನಿಧಿಯಲ್ಲಿ ಕುಳಿತಿದ್ದೇವೆ. ಸುಳ್ಳು ಹೇಳಬೇಡ. ನಿನ್ನ ಕಣ್ಣೀರೇ ಹೇಳುತ್ತದೆ, ನೀನು ನನ್ನೊಡನೆ ಏನನ್ನೋ ಮುಚ್ಚಿಡುತ್ತಿದ್ದಿ ಅಂತ. ಹೆದರ ಬೇಡ. ಸತ್ಯ ಹೇಳು!’ ಎಂದು ಮೃದುವಾಗಿ ಕೇಳಿದ. ರಾಧಾ ಮೊದಲಿಗೆ ವಿಷಯ ಹೇಳಲು ಹಿಂಜರಿದಳು. ಆದರೆ ಗಂಡನ ಒತ್ತಾಯ ಅವಳಿಂದ ಸತ್ಯವನ್ನು ಹೊರಡಿಸಿತು. ಆದ್ದರಿಂದ ಅತ್ತಿಗೆಯ ಚುಚ್ಚು ಮಾತುಗಳನ್ನೂ ಅವಳು ದಿನವಿಡೀ ನೀಡುತ್ತಿದ್ದ ಕಿರುಕುಳವನ್ನೂ ಒಂದೊಂದಾಗಿ ವಿವರಿಸುತ್ತ ಅತ್ತಳು. ಗೋಪಾಲ ಅವಕ್ಕಾದ. ತನ್ನ ಅತ್ತಿಗೆ ತುಂಬಾ ಒಳ್ಳೆಯವಳು. ಹಾಗಾಗಿ ಅವಳೆಂದೂ ತನ್ನ ಹೆಂಡತಿಯನ್ನು ಹಿಂಸಿಸುವ, ಶೋಷಿಸುವ ಮಟ್ಟಕ್ಕಿಳಿಯುವವಳಲ್ಲ ಎಂದೇ ಅವನು ಭಾವಿಸಿದ್ದ. ಆದರೆ ಕೇವಲ ಆರು ಕೋಣೆಯ ಒಂದು ಮನೆಯೂ ಐದು ಸೆಂಟ್ಸಿನಷ್ಟು ಜಾಗವೂ ಯಾವ ಸಂಬಂಧವನ್ನೂ ಹರಿದು ಚಿಂದಿ ಮಾಡಬಲ್ಲದು ಎಂಬ ಸತ್ಯವು ಅವನಿಗೆ ತಿಳಿಯಲೇ ಇಲ್ಲ! ಹಾಗಾಗಿ ಅಣ್ಣ ಅತ್ತಿಗೆಯ ಮೇಲೆ ಅವನಿಗೆ ಜಿಗುಪ್ಸೆ ಹುಟ್ಟಿತು.

‘ನನ್ನನ್ನು ಕ್ಷಮಿಸು ರಾಧಾ. ಇಷ್ಟೆಲ್ಲ ನನ್ನ ಗಮನಕ್ಕೆ ಬರಲೇ ಇಲ್ಲ ನೋಡು! ಅಣ್ಣ, ಅತ್ತಿಗೆಯ ಮೇಲೆ ನಾನು ಇಟ್ಟುಕೊಂಡಿದ್ದ ಕುರುಡು ನಂಬಿಕೆ, ಪ್ರೀತಿಯೇ ಇಷ್ಟಕ್ಕೆಲ್ಲ ಕಾರಣವಾಯಿತೇನೋ. ನನ್ನನ್ನೇ ನಂಬಿ ಬಂದವಳು ನೀನು. ನಿನಗೆ ಸುಖವಿಲ್ಲದ ಆ ಮನೆಯಿನ್ನು ನನಗೂ ಬೇಡ, ಅವರ ಸಂಬಂಧವೂ ಬೇಡ. ನಿನ್ನ ದುಃಖಕ್ಕೆ ಇನ್ನು ಮುಂದೆ ನಾನು ಅವಕಾಶ ಕೊಡುವುದಿಲ್ಲ. ಆದಷ್ಟು ಬೇಗ ಬೇರೆ ಮನೆ ಮಾಡುತ್ತೇನೆ. ಹೊರಟು ಹೋಗುವ’ ಎಂದು ಹೆಂಡತಿಯನ್ನು ಸಂತೈಸಿದ. ಆದರೆ ರಾಧಾಳಿಗೆ ಅವನ ನಿರ್ಧಾರ ಕೇಳಿ ಆತಂಕವಾಯಿತು. ‘ಅಯ್ಯಯ್ಯೋ, ಮನೆ ಬಿಟ್ಟು ಹೋಗುವುದೆಲ್ಲ ಬೇಡ ಮಾರಾಯ್ರೇ. ಯಾವುದೋ ಚಿಂತೆ, ಬೇಸರದಿಂದ ಅವರು ಹಾಗೆಲ್ಲಾ ನಡೆದುಕೊಳ್ಳುತ್ತಿರಬಹುದು. ಅದನ್ನೆಲ್ಲ ನಾವು ತಲೆಗೆ ಹಚ್ಚಿಕೊಳ್ಳದಿದ್ದರಾಯ್ತು. ಇವತ್ತಲ್ಲ ನಾಳೆ ಸರಿ ಹೋದಾರು!’ ಎಂದಳು ದುಗುಡದಿಂದ.

ತನ್ನ ಹೆಂಡತಿಯ ಒಳ್ಳೆಯ ಮನಸ್ಸನ್ನು ಕಂಡು ಗೋಪಾಲನಿಗೆ ಹೆಮ್ಮೆಯೆನಿಸಿತು. ಆದರೆ ಅವನು ಪ್ರತ್ಯೇಕ ಸಂಸಾರ ಹೂಡಲು ನಿರ್ಧರಿಸಿಯಾಗಿತ್ತು. ಆದ್ದರಿಂದ, ‘ನಿನ್ನ ಆತಂಕ ನನಗೂ ಅರ್ಥವಾಗುತ್ತದೆ ರಾಧಾ. ಅಂಥದ್ದೇನೂ ಆಗುವುದಿಲ್ಲ. ಏನೇನೋ ಯೋಚಿಸಬೇಡ. ಮನೆಬಿಟ್ಟು ಹೋಗುವಾಗ ಅಣ್ಣ, ಅತ್ತಿಗೆಯೊಂದಿಗೆ ನಿಷ್ಠೂರ ಕಟ್ಟಿಕೊಂಡು ಹೋಗದಿದ್ದರಾಯ್ತು. ಸ್ವಲ್ಪ ಕಾಲವಷ್ಟೆ. ನಂತರ ಅವರಿಗೂ ತಮ್ಮ ತಪ್ಪಿನರಿವಾಗಬಹುದು. ಅಣ್ಣ ಒಳ್ಳೆಯವನು. ಅವನಿಗೆ ಬೇಸರವಾದರೂ ಹೋಗುವುದು ಅನಿವಾರ್ಯ. ಹಳಸಿಹೋದ ಸಂಬಂಧಗಳೊಡನೆ ಬದುಕುವುದು ಬಹಳ ಕಷ್ಟ!’ ಎಂದು ಅವಳನ್ನು ಸಮಾಧಾನಿಸಿದ. ಗಂಡನ ಮಾತು ರಾಧಾಳಿಗೂ ಸರಿಯೆನಿಸಿತು. ಮೌನವಾಗಿ ಸಮ್ಮತಿಸಿದಳು. ಗೋಪಾಲ ಅಂದುಕೊಂಡಂತೆಯೇ ಒಂದು ವಾರದೊಳಗೆ ಅಣ್ಣ, ಅತ್ತಿಗೆಯೊಡನೆ ಗೌರವದಿಂದ ಬೀಳ್ಗೊಂಡ. ತಮ್ಮನ ನಿರ್ಧಾರದಿಂದ ಅಣ್ಣ ಮೊದಲಿಗೆ ಅವಕ್ಕಾದಂತೆ ತೋರಿದ. ಗೋಪಾಲ ಹೊರಟುವ ಹೊತ್ತಲ್ಲಿ ಅವನ ಕಣ್ಣಾಲಿಗಳು ತುಂಬಿದವು. ಆದರೆ ಅವನು ಅವರನ್ನು ತಡೆಯುವ ಮನಸ್ಸು ಮಾಡಲಿಲ್ಲ. ಏಕೆಂದರೆ ಅವನ ಹೆಂಡತಿ ಹಿಂದಿನ ದಿನವೇ, ‘ನೋಡಿ ಮಾರಾಯ್ರೇ, ಅವರು ಬೇರೆ ಹೋಗುವ ವಿಷಯದಲ್ಲಿ ನೀವೇನಾದರೂ ತಕರಾರೆತ್ತಿದಿರೋ ಜಾಗ್ರತೆ! ನಿಮ್ಮ ಈಗಿನ ಗತಿಗೋತ್ರವಿಲ್ಲದ ಸಂಪಾದನೆಯಿಂದ ಮುಂದೆ ನಿಮ್ಮ ಹೆಂಡತಿ ಮಕ್ಕಳು ಗೆರಟೆ ಹಿಡಿದು ಭಿಕ್ಷೆ ಬೇಡಬೇಕಾದೀತು. ಎಚ್ಚರವಿಟ್ಟುಕೊಳ್ಳಿ!’ ಎಂದು ಆ ಸಂಬಂಧದ ಚಿಗುರನ್ನಲ್ಲೇ ಚಿವುಟಿ ಬಿಟ್ಟಿದ್ದಳು. ಆದ್ದರಿಂದ ತಮ್ಮನ ಸಂಸಾರವು ಹೊಸ್ತಿಲು ದಾಟಿ ಕಣ್ಮರೆಯಾಗುವ ತನಕ ಅಣ್ಣ ಮೂಕನಂತೆ ನಿಂತುಬಿಟ್ಟ. ಆದರೆ ಶ್ಯಾಮಲಳಿಗೆ ಅಮೃತ ಕುಡಿದಷ್ಟು ಸಂತೋಷವಾಯಿತು. ಆರು ಕೋಣೆಗಳ ಮನೆಗೂ, ಐದು ಸೆಂಟ್ಸ್ ಜಮೀನಿಗೂ ಇನ್ನು ಮುಂದೆ ತಾನೊಬ್ಬಳೇ ಹಕ್ಕುದಾರಳು ಎಂದು ಸಂಭ್ರಮಿಸಿದ   ಅವಳು ಕೂಡಲೇ ದೇವರ ಕೋಣೆಗೆ ಧಾವಿಸಿ ತುಪ್ಪದ ದೀಪ ಹಚ್ಚಿ ಭಕ್ತಿಯಿಂದ ಕೈಮುಗಿದು ದೇವರಿಗೆ ಕೃತಜ್ಞತೆ ಸಲ್ಲಿಸಿದಳು.

   ರಕ್ತ ಸಂಬಂಧದ ಇನ್ನೊಂದು ಮುಖವನ್ನೂ ನೋಡಿ ಜಿಗುಪ್ಸೆಗೊಂಡಿದ್ದ ಗೋಪಾಲ ಹುಟ್ಟಿದ ಮನೆಯನ್ನು ತೊರೆದು ಹೊರಟ. ಆದರೆ ಬೆಟ್ಟದ ಮೇಲಿನ ತೊರೆಯಂತೆ ಭೋರ್ಗರೆಯುತ್ತ ಇಳಿದು ಹೊರಟ ಅವನ ಜೀವನ ಪ್ರವಾಹವು ಯಾವ ರೀತಿಯಲ್ಲಿ ಮುಂದುವರೆದು, ಎಂಥೆಂಥ ಏಳುಬೀಳುಗಳಲ್ಲಿ ಸಾಗುತ್ತ ಸುಗಮವಾಗಿ ಸಾಗರ ಸೇರುತ್ತದೋ ಅಥವಾ ನಡು ಹಾದಿಯಲ್ಲೆಲ್ಲೋ ಬಿಸಿಲ ಝಳಕ್ಕೆ ಆರಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತದೋ ಎಂಬರಿವು ಅವನಿಗಿರಲಿಲ್ಲ. ಅಂಥ ಸುಳಿವನ್ನು ಬಹುಶಃ ವಿಧಾತ ಶಕ್ತಿಯು ಯಾವ ಜೀವಿಗೂ ನೀಡುವುದಿಲ್ಲ.  ಆದರೂ ಮುಂದುವರೆಯಲೇಬೇಕು. ಗೋಪಾಲನೂ ಹೊಸ ಜೀವನ ಕಟ್ಟಿಕೊಳ್ಳುವ ಹುಮ್ಮಸ್ಸಿನಿಂದ ಹೊರಟವನು, ಅಶೋಕ ನಗರದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಮಣ್ಣಪಳ್ಳಿಯಲ್ಲಿ ಬಾಡಿಗೆ ಮನೆಯೊಂದನ್ನು ಹಿಡಿದು ಸಂಸಾರ ಹೂಡಿದ.

   ಆದರೆ ಅಣ್ಣನ ಮನೆಯನ್ನು ತೊರೆದು ಬಂದವನಿಗೆ ಅಲ್ಲಿನ ನೆನಪುಗಳು ತೀವ್ರವಾಗಿ ಕಾಡಲಾರಂಭಿಸಿದವು. ಮುದ್ದಿನ ಹೆಂಡತಿ ಬಳಿಯಲ್ಲಿದ್ದರೂ ಕೆಲಕಾಲ ಹತಾಶೆಯಿಂದ ನರಳಿದ. ಆದರೆ ರಾಧಾಳ ಪ್ರೀತಿಯಿಂದ ಮತ್ತೆ ಮೊದಲಿನಂತಾದ. ಅವರ ಅನ್ಯೋನ್ಯ ದಾಂಪತ್ಯದ ಫಲವಾಗಿ ಒಂದು ಹೆಣ್ಣು ಮತ್ತೊಂದು ಗಂಡು ಮಕ್ಕಳಾದವು. ಇದೇ ಕಾಲಘಟ್ಟದಲ್ಲಿ ಗೋಪಾಲನ ವೃತ್ತಿಕ್ಷೇತ್ರದಲ್ಲಿ ಹೊಸ ಗುತ್ತಿಗೆದಾರರು ತಲೆ ಎತ್ತಲಾರಂಭಿಸಿ ಇವನೊಡನೆ ತೀವ್ರ ಪೈಪೋಟಿಗೂ ನಿಂತರು. ಅವರೊಡನೆ ಸ್ಪರ್ಧಿಸಲಾಗದ ಇವನ ಉದಾಸೀನತೆಯಿಂದಾಗಿ ನಿಧಾನಕ್ಕೆ ಕೆಲಸದ ಬೇಡಿಕೆಯೂ ಕುಸಿಯಿತು. ಅದು ಇವನ ತಂಡದ ಕೆಲಸಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಅವರು ವಿಧಿಯಿಲ್ಲದೆ ಒಬ್ಬೊಬ್ಬರಾಗಿ ಇತರ ಗುತ್ತಿಗೆದಾರರೊಡನೆ ಸೇರಿಕೊಂಡರು. ಕೊನೆಗೊಂದು ದಿನ ಇವನ ಪರಿಸ್ಥಿತಿಯೂ ಇನ್ನೊಬ್ಬನೊಡನೆ ದಿನಗೂಲಿಗೆ ದುಡಿಯುವ ಮಟ್ಟಕ್ಕೆ ಬಂದು ತಲುಪಿತು. ಆದರೆ ಗೋಪಾಲನೊಳಗೊಬ್ಬ ಜನಪದೀಯ ಕಲೆಗಾರನಿದ್ದ. ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯಂಥ ಹಬ್ಬಗಳ ಆಚರಣೆಯಂಗವಾಗಿ ಈಶ್ವರಪುರದಲ್ಲಿ ವಿಜೃಂಭಿಸುವ ಹುಲಿವೇಷ ಮತ್ತು ಇನ್ನಿತರ ಪೌರಾಣಿಕ ವೇಷಗಳಿಗೆ ಕಲಾತ್ಮಕ ಬಣ್ಣ ಬಳಿಯುವುದರಲ್ಲಿ ಗೋಪಾಲ ನಿಸ್ಸೀಮನಾಗಿದ್ದ. ಆದ್ದರಿಂದ ವರ್ಷದ ಒಂದೆರಡು ತಿಂಗಳು ಇವನಿಗೆ ಬಹಳ ಬೇಡಿಕೆ ಇರುತ್ತಿತ್ತು. ಆ ಮೂಲಕವೂ ಒಂದಷ್ಟು ಗಳಿಸುತ್ತಿದ್ದ. ಆದರೆ ತನ್ನ ಅಣ್ಣ ತಮ್ಮಂದಿರೆದುರು ತನ್ನ ಬದುಕು ಬಡವಾಗುತ್ತಿದ್ದುದನ್ನು ನೆನೆಯುತ್ತಿದ್ದವನಿಗೆ  ಕೆಲವೊಮ್ಮೆ ಜಿಗುಪ್ಸೆ ಮೂಡುತ್ತಿತ್ತು. ಆದ್ದರಿಂದ ಅವರು ಸಿಕ್ಕಾಗ ಮುಖಕೊಟ್ಟು ಮಾತಾಡಲೂ ಕಷ್ಟವಾಗುತ್ತಿತ್ತು. ಆ ಕಾರಣವೂ ಅವನನ್ನು ತಾನು ಹುಟ್ಟಿದ ಊರನ್ನು ತೊರೆಯಲು ಪ್ರಚೋಧಿಸತೊಡಗಿತು. ಪರಿಣಾಮ ವೇಷಗಳಿಗೆ ಬಣ್ಣ ಹಚ್ಚುವ ಕಾಯಕದಿಂದಲೂ ದೂರವಾದ. ಮಣ್ಣಪಳ್ಳಿಯ ಬಾಡಿಗೆ ಮನೆಯನ್ನು ಬಿಟ್ಟು ಹೆಂಡತಿಯೊಂದಿಗೆ ಎರಡು ಎಳೆ ಹಸುಳೆಗಳನ್ನು ಹೆಗಲು, ಬಗಲಿಗೇರಿಸಿಕೊಂಡು ಅಂಬಾಗಿಲಿನತ್ತ ಪ್ರಯಾಣ ಬೆಳೆಸಿದ.

   ಈಶ್ವರಪುರ ಜಿಲ್ಲೆಯ ಹೃದಯಭಾಗದಲ್ಲಿ ‘ಮನ್ಮಥ ಬಾರ್ ಅಂಡ್ ರೆಸ್ಟೋರೆಂಟ್’ ಹೊಂದಿದ್ದ ಅಣ್ಣಯ ಎಂಬವನ ಬಾಡಿಗೆ ಮನೆಯೊಂದು ಖಾಲಿಯಿದೆ ಎಂಬ ಸುದ್ದಿಯನ್ನು ಮೊದಲೇ ತಿಳಿದಿದ್ದ ಗೋಪಾಲ ಅವನಲ್ಲಿಗೆ ಬಂದಿದ್ದ. ಅಣ್ಣಯ ತನ್ನ ಹದಿನಾರನೆಯ ವಯಸ್ಸಿನಿಂದಲೇ ಗುಂಡಾಗಿರಿ ಪ್ರಾರಂಭಿಸಿ ಅನೇಕರನ್ನು ಸುಲಿದು, ವಂಚಿಸಿ ಮೇಲೆ ಬಂದವನು. ಆದರೆ ಆ ಮಾರ್ಗದಿಂದ ಸಾಕಷ್ಟು ಸಂಪಾದಿಸಿದ ಮೇಲೆ ಹಿಂದಿನ ಕಾರನಾಮೆಗಳನ್ನು ಬಿಟ್ಟು ಸಭ್ಯತೆಯ ಮುಖವಾಡ ತೊಟ್ಟು ಹೊಟೇಲ್ ಉದ್ಯಮ ಆರಂಭಿಸಿದ್ದ. ಹೆಂಗಸರ ವಿಷಯದಲ್ಲಿ ಅವನು ಮಹಾ ವಿಲಾಸಿಯಾಗಿದ್ದ. ಹಾಗಾಗಿ ರಾಧಾಳ ಉಬ್ಬು ತಗ್ಗಿನ, ತುಂಬಿದೆದೆಯ ಸೌಂದರ್ಯವನ್ನು ನೋಡಿ ವಿಚಲಿತನಾಗಿ ಗೋಪಾಲನಿಗೆ ತನ್ನ ತೋಟದ ಮನೆಯನ್ನು ಅತೀ ಕಡಿಮೆ ಬಾಡಿಗೆಗೆ ನೀಡಿದ. ಮನೆಯೇನೋ ಸಿಕ್ಕಿತು. ಆದರೆ ದುಡಿಮೆಗೇನು ಮಾಡುವುದು? ಎಂದು ಗೋಪಾಲ ಚಿಂತೆಯಲ್ಲಿದ್ದಾಗಲೇ ‘ರಾತ್ರಿ ಪಾಳಿ ಮಾಡುವುದಿದ್ದರೆ ಪೇಟೆಯ ತ್ರೀಸ್ಟಾರ್ ಹೊಟೇಲೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸವಿದೆ’ ಎಂದು ಅಣ್ಣಯನೇ ತಿಳಿಸಿದ. ಅಷ್ಟು ಕೇಳಿದ ಗೋಪಾಲನಿಗೆ ಆ ಹೊತ್ತು ಅಣ್ಣಯ ತನ್ನ ಕುಲ ದೈವದಂತೆಯೇ ಕಾಣಿಸಿದ. ಅವನಿಗೆ ಮನಸಾರೆ ಕೃತಜ್ಞತೆ ಸಲ್ಲಿಸಿ, ಅವನದೇ ಶಿಫಾರಸ್ಸಿನ ಮೇಲೆ ಕೆಲಸಕ್ಕೆ ಸೇರಿಕೊಂಡ.

   ಇತ್ತ ಒಂದು ತಿಂಗಳ ನಂತರ ಅಣ್ಣಯ ತನ್ನ ತೋಟದ ಮನೆಯತ್ತ ಬಂದು ರಾಧಾಳೊಡನೆ ಕಷ್ಟ ಸುಖ ವಿಚಾರಿಸಲು ಶುರುವಿಟ್ಟುಕೊಂಡ. ಹೀಗೆಯೇ ಮತ್ತೊಂದು ತಿಂಗಳು ಕಳೆಯಿತು. ಆವತ್ತೊಮ್ಮೆ ಹದವಾಗಿ ನಶೆಯೇರಿಸಿಕೊಂಡು ಬಂದವನು  ರಾಧಾಳನ್ನು ಹೊರಗೆ ಕರೆದು ಮಾತಿಗೆ ಕುಳಿತ. ರಾಧಾಳಿಗೆ ಅವನೊಡನೆ ಮಾತಾಡಲು ತೀರಾ ಇರುಸುಮುರಿಸಾಗುತ್ತಿತ್ತು. ಆದರೆ ತನ್ನ ಕುಟುಂಬಕ್ಕೊಂದು ನೆಲೆ ನೀಡಿದ ಧಣಿಯಲ್ಲವೇ ಎಂಬ ಗೌರವದಿಂದ ಮುಜುಗರವನ್ನು ಬದಿಗೊತ್ತಿ ಮಾತಾಡುತ್ತಿದ್ದಳು. ಇವತ್ತು  ಅವನು ತನ್ನ ಮಾತಿನ ಮಧ್ಯೆ ಹೊಸ ವಿಚಾರವೊಂದಕ್ಕೆ ಪೀಠಿಕೆ ಹಾಕುತ್ತ  ತನ್ನ ಬಯಕೆಯನ್ನು ಅವಳಲ್ಲಿ ಸೂಕ್ಷ್ಮವಾಗಿ ವ್ಯಕ್ತಪಡಿಸಿದ. ಅವನ ಗೋಮುಖದ ಹಿಂದೆ ಕಾಮುಕ ವ್ಯಾಘ್ರನಿದ್ದಾನೆಂದು ತಿಳಿದ ರಾಧಾ ಅವಕ್ಕಾದಳು. ಅವನಿಗೆ ಏನು ಉತ್ತರಿಸಬೇಕೆಂದು ತೋಚದೆ ಎದ್ದು ಒಳಗೆ ನಡೆಯುವುದರಲ್ಲಿದ್ದಳು. ಆಗ ಅಣ್ಣಯನೂ ಎದ್ದವನು, ‘ರಾಧಾ, ನಾನು ಹೀಗೆ ಹೇಳಿದೆನೆಂದು ಬೇಸರಿಸಬೇಡ. ನಿನಗಿಷ್ಟವಿದ್ದರೆ ಮಾತ್ರ. ಒತ್ತಾಯವಿಲ್ಲ. ನಾಳೆ ಬರುತ್ತೇನೆ. ಚೆನ್ನಾಗಿ ಯೋಚಿಸಿ ಒಂದೊಳ್ಳೆಯ ನಿರ್ಧಾರಕ್ಕೆ ಬಂದುಬಿಡು. ಆಮೇಲೆ ನಿನ್ನೆಲ್ಲ ಕಷ್ಟಸುಖಗಳು ನನ್ನವೆಂದೇ ತಿಳಿ!’ ಎಂದು ನಗುತ್ತ ಹೇಳಿ ಹೊರಟು ಹೋದ.

   ಅಣ್ಣಯ ದಿನಾಲು ಬಂದು ತನ್ನ ನೆಮ್ಮದಿ ಕೆಡಿಸುತ್ತಿದ್ದುದನ್ನು ರಾಧಾ ಗಂಡನಿಗೆ ತಿಳಿಸಿರಲಿಲ್ಲ. ಆದರೆ ಇಂದು ಅವನ ಲಂಪಟತನ ತಿಳಿದ ಮೇಲೂ ಮುಚ್ಚಿಡುವುದು ತಪ್ಪು ಎಂದೆನ್ನಿಸಿತವಳಿಗೆ. ಆದ್ದರಿಂದ ಮರುದಿನ ಬೆಳಿಗ್ಗೆ ಗಂಡ ಕೆಲಸದಿಂದ ಮನೆಗೆ ಬಂದ ಮೇಲೆ ಗಟ್ಟಿ ಮನಸ್ಸು ಮಾಡಿ ನಡೆದ ವಿಷಯವನ್ನು ವಿವರಿಸಿ ಕಣ್ಣೀರಿಟ್ಟಳು. ಗೋಪಾಲನಿಗೆ ಸಿಡಿಲು ಬಡಿದಂತಾಯಿತು. ಅಣ್ಣಯನ ಮೇಲೆ ಅವನು ತುಂಬಾ ಗೌರವ ಇಟ್ಟುಕೊಂಡಿದ್ದ. ಅದೆಲ್ಲ ಸುಟ್ಟು ಬೂದಿಯಾಯಿತು. ಅವನನ್ನು ಹಿಡಿದು ಕೊಚ್ಚಿ ಹಾಕುವಷ್ಟು ಕೋಪವೆದ್ದಿತು. ಆದರೆ ಅಣ್ಣಯ ಬಹಳ ಪ್ರಭಾವಿ ವ್ಯಕ್ತಿ ಮತ್ತು ಒಂದು ಕಾಲದಲ್ಲಿ ದೊಡ್ಡ ಗೂಂಡನಾಗಿದ್ದವನು ಎಂಬುದು ಗೋಪಾಲನ ಕಿವಿಗೂ ಬಿದ್ದಿತ್ತು. ಆದ್ದರಿಂದ ಬಡವನ ಕೋಪ ದವಡೆಗೆ ಮೂಲ ಎಂದು ಯೋಚಿಸಿ ಕೋಪವನ್ನು ನುಂಗಿಕೊಂಡ.  ಆದರೆ ಇನ್ನು ಮುಂದೆ  ಇಲ್ಲಿದ್ದರೆ ತನ್ನ ಸಂಸಾರ ಬೀದಿ ಪಾಲಾಗುವುದು ಖಂಡಿತಾ ಎಂದು ಅವನಿಗನ್ನಿಸಿಬಿಟ್ಟಿತು. ಈ ಘಟನೆ ನಡೆಯುವುದಕ್ಕಿಂತ ನಾಲ್ಕು ದಿನಗಳ ಹಿಂದೆ, ‘ಪಡುಕೆರೆಯಲ್ಲೊಂದು ಒಳ್ಳೆಯ ಬಾಡಿಗೆ ಮನೆಯಿತ್ತು ಮಾರಾಯಾ…!’ ಎಂದು ಗೋಪಾಲನ ಜೊತೆಗಾರ ವಾಚ್‍ಮನ್ ರಾಮಣ್ಣ ಮಾತಕತೆಯ ಮಧ್ಯೆ ಹೇಳಿದ್ದು ಅವನಿಗೆ ತಟ್ಟನೆ ನೆನಪಾಯಿತು. ರಾತ್ರಿಯ ನಿದ್ರೆಯನ್ನು ಹಗಲಲ್ಲಿ ಸರಿದೂಗಿಸಿಕೊಳ್ಳುತ್ತಿದ್ದವನು ಅದನ್ನು ಬದಿಗೊತ್ತಿ ಅಲ್ಲಿಗೆ ಧಾವಿಸಿದ. ಇವನ ಪುಣ್ಯಕ್ಕೆ ಅದಕ್ಕಿನ್ನೂ ಬಾಡಿಗೆ ಬಂದಿರಲಿಲ್ಲ. ಆ ಮನೆಯ ಮಾಲಕಿ ತುಂಗಕ್ಕನೊಡನೆ ತನ್ನ ಪರಿಸ್ಥಿತಿಯನ್ನು ವಿವರಿಸಿ ಅವಳ ಅನುಕಂಪ ಗಿಟ್ಟಿಸಿಕೊಂಡು ಮನೆಯನ್ನು ಖಚಿತಪಡಿಸಿಕೊಂಡೇ ಹಿಂದಿರುಗಿದ. ಮರುದಿನ ಅಣ್ಣಯನಿಗೆ ಹೇಳದೆಯೇ, ಅವನು ಕೊಡಿಸಿದ್ದ ವಾಚ್‍ಮನ್ ಕೆಲಸಕ್ಕೂ ನಮಸ್ಕಾರ ಹೊಡೆದು ಸಂಸಾರ ಕಟ್ಟಿಕೊಂಡು ಪಡುಕೆರೆಗೆ ಹೋಗಿ ನೆಲೆಸಿದ. ಅಲ್ಲೇ ಸಮೀಪವಿದ್ದ ಮೀನಿನ ಬಂದರಿನಲ್ಲಿ ಕನ್ನಿ ಹಿಡಿಯುವ (ಮೀನು ಹೊರುವ ಕೆಲಸ) ಕೆಲಸವೂ ಸಿಕ್ಕಿತು. ಕೆಲವು ತಿಂಗಳು ಅದನ್ನು ಮಾಡಿದ.

   ಆದರೆ ದಿನಾ ನಸುಕಿನ ಮೂರು ಗಂಟೆಯೊಳಗೆ ಎದ್ದು ಮುಂಡಕ್ಕೆ ಹೋಗಿ, ದೊಡ್ಡ ದೋಣಿಗಳು ಆಳಸಮುದ್ರದಲ್ಲಿ ಬಲೆ ಬೀಸಿ ತರುತ್ತಿದ್ದ ಮೀನುಗಳನ್ನು ಸ್ವಲ್ಪವೂ ವಿರಮಿಸದೆ ಹೊತ್ತು ತಂದು ರಾಶಿ ಹಾಕುವ ಹೊತ್ತಿಗೆ ಅರೆಜೀವವಾಗುತ್ತಿದ್ದುದಲ್ಲದೇ  ಮೈಕೈಯೆಲ್ಲ ಇಡೀದಿನ ದುರ್ವಾಸನೆ ಬೀರುತ್ತ ವಾಕರಿಕೆ ಬರುವಂತಾದಾಗ ಇನ್ನು ಈ ಕೆಲಸ ತನ್ನಿಂದ ಸಾಧ್ಯವಿಲ್ಲ ಎಂದು ಅವನಿಗನ್ನಿಸಿಬಿಟ್ಟಿತು. ಹಾಗಾಗಿ ಆ ವೃತ್ತಿಗೂ ಎಳ್ಳು ನೀರು ಬಿಟ್ಟ. ಕೆಲವು ಕಾಲ ಬೇರೆಲ್ಲೂ ಕೆಲಸ ಸಿಗದೆ ಮನೆಯಲ್ಲೇ ಕಳೆದ. ಬರಬರುತ್ತ ಸಂಸಾರ ನಿರ್ವಾಹಣೆ ಕಷ್ಟವಾಗಿ ತೊಳಲಾಡಿದ. ಆದರೆ ಅದೇ ಸಮಯದಲ್ಲಿ ಶೀಂಬ್ರಗುಡ್ಡೆಯ, ‘ಮುತ್ತಯ್ಯನ ತೋಟಕ್ಕೆ ಕೆಲಸದಾಳು ಕುಟುಂಬವೊಂದು ಬೇಕಾಗಿದೆ. ಇರಲು ಮನೆಯನ್ನು ಉಚಿತವಾಗಿ ಕೊಡಲಾಗುವುದು’ ಎಂದು ಯಾರಿಂದಲೋ ಮೌಖಿಕ ಜಾಹೀರಾತು ದೊರೆತಾಗ ಅಲ್ಲಿಗೆ ಧಾವಿಸಿದ. ಮುತ್ತಯ್ಯನೊಡನೆಯೂ ತನ್ನ ತಾಪತ್ರಯವನ್ನು ಬಣ್ಣಸಿದ. ಆದರೆ ಮುತ್ತಯ್ಯನಿಗೆ ಯಾರ ಬಡತನ ಕಟ್ಟಿಕೊಂಡು ಏನೂ ಆಗಬೇಕಾಗಿರಲಿಲ್ಲ. ಅವನಿಗೆ ತನ್ನ ತೋಟದಲ್ಲಿ ನಿಯತ್ತಿನಿಂದ ದುಡಿದು ತನ್ನನ್ನು ಉದ್ದರಿಸುವ ಶ್ರಮಜೀವಿಗಳು ಬೇಕಿತ್ತು. ಆದ್ದರಿಂದ ಗೋಪಾಲನ ಬಗ್ಗೆ ಕೃತಕ ಅನುಕಂಪ ತೋರಿಸುತ್ತ ಕೆಲಸ ಕೊಟ್ಟ. ಗೋಪಾಲ ಮರುದಿನವೇ ಮಗಳು ಅಶ್ವಿನಿಯನ್ನೂ ಮಗ ಪೃಥ್ವೀಶನನ್ನೂ ಪಡುಕೆರೆ ಶಾಲೆಯಿಂದ ಬಿಡಿಸಿ ಕರೆದು ತಂದು ಶೀಂಬ್ರಗುಡ್ಡೆಯ ಶಾಲೆಗೆ ಸೇರಿಸಿ ಮರಳಿ ಹೊಸ ಜೀವನ ಆರಂಭಿಸಿದ.

   ಹೀಗೆ ರಾಧಾ ಕೆಲವಾರು ವರ್ಷಗಳಿಂದ ಗಂಡನೊಂದಿಗೆ ಪಡಬಾರದ ಪಾಡು ಪಡುತ್ತ, ಮಕ್ಕಳನ್ನು ಕಟ್ಟಿಕೊಂಡು ಕಾಯಾ ವಾಚಾ ಮನಸಾ ಗಂಡನನ್ನು ಅನುಸರಿಸಿ ಬರುತ್ತಿದ್ದಳು. ಆದರೆ ಗೋಪಾಲನೊಬ್ಬ ವಿಚಿತ್ರ ಸೊಂಬೇರಿ. ಅವನು ತನ್ನ ಕುಟುಂಬದ ಭವಿಷ್ಯದ ಕುರಿತು ಚಿಂತಿಸದಿದ್ದರೂ ಹೆಂಡತಿ ಮಕ್ಕಳನ್ನು ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ. ಅವರೇ ಅವನ ಪ್ರಪಂಚವಾಗಿದ್ದರು. ಆದ್ದರಿಂದ ಅದೆಷ್ಟೇ ಕಷ್ಟವಾದರೂ ಅವರನ್ನು ಉಪವಾಸ ಬೀಳಲು ಬಿಟ್ಟವನಲ್ಲ. ಸಾಲಸೋಲ ಮಾಡಿಯಾದರೂ ಅಕ್ಕಿ, ಮೀನು ತಂದು ಅವರನ್ನು ನೆಮ್ಮದಿಯಿಂದ ನೋಡಿಕೊಳ್ಳಲು ಹೆಣಗುತ್ತಿದ್ದ. ಗಂಡನಲ್ಲಿದ್ದ ಈ ಒಂದೇ ಒಂದು ವಿಶೇಷ ಗುಣವೇ ರಾಧಾಳಿಂದ ತನ್ನ ಕರುಳಕುಡಿಗಳನ್ನೂ, ಸಾಮಾನು ಸರಂಜಾಮುಗಳನ್ನೂ ನೆತ್ತಿಯ ಮೇಲೆ ಹೊತ್ತುಕೊಂಡು ಊರಿನ ಹತ್ತಾರು ಬಾಡಿಗೆ ಮನೆಗಳನ್ನೆಣಿಸುತ್ತ ಅವನನ್ನು ಹಿಂಬಾಲಿಸುವಂತೆ ಮಾಡುತ್ತಿತ್ತು. ಆದರೆ ಈಗೀಗ ಅವಳಿಗೂ ಗಂಡನ ಸೋಮಾರಿತನ, ಅಲೆಮಾರಿ ಗುಣಗಳಿಂದ ಜಿಗುಪ್ಸೆ ಹುಟ್ಟಿತ್ತು. ತಮ್ಮ ಮುಂದಿನ ಜೀವನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಏನೊಂದೂ ಚಿಂತಿಸದ ಅವನ ಮೇಲೆ ತಿರಸ್ಕಾರ ಮೂಡತೊಡಗಿತ್ತು. ಆದ್ದರಿಂದ ಇನ್ನು ಮುಂದೆ ಈ ಪರದೇಸಿ ಗುಣದವನನ್ನು ಹಿಂಬಾಲಿಸಿ ಎಲ್ಲಿಗೂ ಹೋಗಲಿಕ್ಕಿಲ್ಲ. ಹೋಗುವುದಿದ್ದರೆ ಅದು ತನ್ನದೆಂಬ ಸ್ವಂತ ಮನೆಗೆ ಮಾತ್ರ! ಎಂದು ಅವಳು ದೃಢವಾಗಿ ನಿಶ್ಚಯಿಸಿದ್ದಳು. ಆನಂತರ ಅವಳು ಸುಮ್ಮನಾಗಲಿಲ್ಲ. ತನ್ನ ಇಚ್ಛೆಯನ್ನು ಗೋಪಾಲನಿಗೂ ಖಡಾಖಂಡಿತವಾಗಿ ತಿಳಿಸಿ, ಸ್ವಂತ ಜಾಗದ ಹುಡುಕಾಟಕ್ಕೆ ಅವನನ್ನು ನಿರಂತರ ಪೀಡಿಸತೊಡಗಿದಳು. ಆದರೆ ಗೋಪಾಲನಿಗೂ ಆ ಯೋಚನೆ ತನ್ನ ಹುಟ್ಟೂರು ತೊರೆದಂದಿನಿಂದಲೇ ಬೆನ್ನಟ್ಟಿತ್ತಾದರೂ ಮೂರ್ತ ರೂಪ ಪಡೆದಿರಲಿಲ್ಲ. ಈಗೀಗ ಹೆಂಡತಿಯ ಒತ್ತಾಯ, ಒತ್ತಡಗಳಿಂದ ಅವನೂ ಆ ಬಗ್ಗೆ ಯೋಚಿಸತೊಡಗಿದ್ದ.  

  ಮುತ್ತಯ್ಯನ ತೋಟದಲ್ಲಿ ದುಡಿಯತೊಡಗಿದ ಮೇಲೆ ಗೋಪಾಲ ಸ್ವಲ್ಪ ಚುರುಕಾದ. ಬಿಡುವಿನಲ್ಲಿ ಮತ್ತೊಂದು ಉಪ ಸಂಪಾದನೆಯ ದಾರಿಯನ್ನು ಕಂಡುಕೊಂಡ. ಸಂತೋಷ ನಗರದ, ತನ್ನ ಹಳೆಯ ದೋಸ್ತಿ ಅಬೂಬಕ್ಕರ್‍ನೊಂದಿಗೆ ಸೇರಿ ಗುಜರಿ ವ್ಯಾಪಾರ ಶುರು ಮಾಡಿದ. ಅದಕ್ಕೆ ಸ್ವಲ್ಪ ಬಂಡವಾಳವಿದ್ದರೆ ಸಾಕಿತ್ತು. ಒಂದು ಪಟ್ಟು ವಿನಿಯೋಗಿಸಿ ನಾಲ್ಕೈದು ಪಟ್ಟು ಹೆಚ್ಚು ಗಳಿಸುವುದು ಹೇಗೆ? ಹಿತ್ತಾಳೆ, ತಾಮ್ರ, ಅಲೂಮೀನಿಯಂ, ಕಬ್ಬಿಣದಂಥ ಲೋಹಗಳನ್ನೂ ಪ್ಲಾಸ್ಟಿಕ್, ಗಾಜಿನ ಬಾಟಲಿ, ಮತ್ತಿತರ ವಸ್ತುಗಳನ್ನೂ ಹೇಗೆ ಪರೀಕ್ಷಿಸಿಬೇಕು? ಯಾವ, ಯಾವ ಬೆಲೆಗೆ ಕೊಂಡುಕೊಳ್ಳಬೇಕು ಎಂಬುವುದನ್ನೂ ಆ ವಸ್ತುಗಳನ್ನು ಪೇಟೆಯ ಯಾವ ಯಾವ ಅಂಗಡಿಗಳಿಗೆ ಮಾರಿದರೆ ಹೆಚ್ಚು ಬೆಲೆ ಸಿಗುತ್ತದೆ ಎಂಬುದನ್ನೆಲ್ಲ ಅಬೂಬಕ್ಕರ್‍ನಿಂದ ತಿಳಿದುಕೊಂಡ. ಮೊದಲಿಗೆ ಇಬ್ಬರೂ ಸೇರಿಯೇ ವ್ಯಾಪಾರ ಆರಂಭಿಸಿದರು. ಅಬೂಬಕ್ಕರ್ ತನ್ನ ಬೇಗಮ್ಮನ ಬಂಗಾರವನ್ನೂ ಇವನು ತನ್ನ ಹೆಂಡತಿಯ ಬೆಂಡೋಲೆಯನ್ನೂ ಅಡವಿಟ್ಟು ದುಡ್ಡು ಹೊಂದಿಸಿದರು. ಬಳಿಕ ಅಲ್ಲಲ್ಲಿ ಗುಜರಿ ಮಾಲು ಖರೀದಿಸುತ್ತ ಸಗಟು ವ್ಯಾಪಾರಸ್ಥರಿಗೆ ಮಾರಿ ಸಾಕಷ್ಟು ಗಳಿಸತೊಡಗಿದರು.

   ಆದರೆ ಅವರ ಸ್ನೇಹ ಹೆಚ್ಚುಕಾಲ ಉಳಿಯಲಿಲ್ಲ. ಕಾರಣ, ವ್ಯಾಪಾರದಲ್ಲಿ ತಾನೇ ಹೆಚ್ಚು ಅನುಭವಸ್ಥ ಮತ್ತು ಮಾಲು ಹೊಂಚುವುದರಲ್ಲೂ ತಾನೇ ಹೆಚ್ಚು ಶ್ರಮಿಸುವುದು. ಹಾಗಾಗಿ ಬರುವ ಲಾಭದಲ್ಲೂ ದೊಡ್ಡ ಪಾಲು ತನಗೇ ಬೇಕು! ಎಂದು ಅಬೂಬಕ್ಕರ್ ತಕರಾರೆತ್ತಿದ. ಅದನ್ನು ಇವನು ಒಪ್ಪಿಕೊಳ್ಳಲಿಲ್ಲ. ಅಲ್ಲಿಗೆ ಮನಸ್ತಾಪವೆದ್ದು ಪಾಲುದಾರಿಕೆಯ ವ್ಯಾಪಾರ ನಿಂತು ಹೋಯಿತು. ಇಬ್ಬರೂ ಸ್ವತಂತ್ರವಾಗಿ ವ್ಯಾಪಾರಕ್ಕೆ ಶುರುವಿಟ್ಟುಕೊಂಡರು. ಆದರೆ ಗುಜರಿ ವ್ಯಾಪಾರದಲ್ಲಿ ಅಬೂಬಕ್ಕರನಿಗಿದ್ದ ಜ್ಞಾನವಾಗಲೀ ಚಾಣಾಕ್ಷತನವಾಗಲೀ ಗೋಪಾಲನಿಗಿರಲಿಲ್ಲ. ಹಾಗಾಗಿ ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವನಿಂದ ಸಾಧ್ಯವಾಗಲಿಲ್ಲ. ಅಪರೂಪಕ್ಕೊಮ್ಮೆ ಶೀಂಬ್ರಗುಡ್ಡೆಯ ಗ್ರಾಮದೊಳಗೆ ಸಂಚರಿಸುತ್ತ ಕಣ್ಣಿಗೆ ಬಿದ್ದ ಅಥವಾ ಯಾರಾದರೂ ಕರೆದು ಕೊಡುತ್ತಿದ್ದ ವಸ್ತುಗಳನ್ನು ಗುರುತು ಹಾಕಿಕೊಂಡು ಕೆಲವು ದಿನಗಳಲ್ಲಿ ದುಡ್ಡು ಹೊಂದಿಸಿ, ಕೊಂಡು ಮಾರುತ್ತ ತೋಟದ ಕೆಲಸದಲ್ಲೇ ಮುಂದುವರೆದ.

    ಗಂಡ ಉತ್ಸಾಹದಿಂದ ದುಡಿಯತೊಡಗಿದ್ದನ್ನು ಕಂಡು ರಾಧಾ ನೆಮ್ಮದಿಪಟ್ಟಳು. ಆದರೆ ಅವನು ಸ್ವಂತ ಜಾಗ ಕೊಳ್ಳುವ ವಿಚಾರ ಮರೆತಂತಿದ್ದುದು ಅವಳಿಗೆ ಆತಂಕವಾಗುತ್ತಿತ್ತು. ಹಾಗಾಗಿ ಈಗೀಗ ದಿನಾಲು ಗಂಡ ಮನೆಯೊಳಗೆ ಹೆಜ್ಜೆಯಿಡುತ್ತಲೇ, ‘ಜಾಗದ ವಿಷಯ ಏನಾಯ್ತು ಮಾರಾಯ್ರೇ, ಎಲ್ಲಾದರೂ ನೋಡುತ್ತಿದ್ದೀರಾ ಅಥವಾ ಮರೆತೇ ಬಿಟ್ಟಿದ್ದೀರಾ? ಇನ್ನೂ ಎಷ್ಟು ಕಾಲ ಅಂತ ಉದಾಸೀನ ಮಾಡುತ್ತ ಕೂರುತ್ತೀರಿ? ನನ್ನಿಂದಿನ್ನು ಇಲ್ಲಿರಲು ಸಾಧ್ಯವೇ ಇಲ್ಲ. ಮಕ್ಕಳನ್ನು ಕಟ್ಟಿಕೊಂಡು ಅಮ್ಮನ ಮನೆಗೆ ಹೊರಟು ಹೋಗುತ್ತೇನಷ್ಟೇ!’ ಎಂದೆನ್ನುತ್ತ ಕಣ್ಣೀರಿಡತೊಡಗಿದಳು. ಆದರೆ ಆ ಕೊರಗು ಈಗೀಗ ರಾಧಾಳಿಗಿಂತ ಗೋಪಾಲನನ್ನೇ ಹೆಚ್ಚಾಗಿ ಭಾದಿಸುತ್ತಿತ್ತು. ತನ್ನ ಬಂಧು ಬಳಗ ಮತ್ತು ಅಣ್ಣಂದಿರು ದಿನೇದಿನೇ ಶ್ರೀಮಂತರಾಗುತ್ತ ಹಲವೆಡೆ ಜಾಗ, ತೋಟಗಳನ್ನು ಕೊಂಡು ತಾರಸಿ ಮನೆಗಳನ್ನು ಕಟ್ಟಿಕೊಂಡು ಬಾಡಿಗೆಗೂ ಕೊಡುತ್ತ ಗತ್ತಿನಲ್ಲಿ ಬದುಕುತ್ತಿರುವಾಗ ತನ್ನಿಂದ ಒಂದು ಅಂಗೈಯಗಲದ ಭೂಮಿಯನ್ನೂ ಮಾಡಲಾಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಸದಾ ಕಾಡುತ್ತಿತ್ತು. ಅದರೊಂದಿಗೆ ಇನ್ನೊಂದು ಯೋಚನೆಯೂ ಬರುತ್ತಿತ್ತು. ಅಣ್ಣಂದಿರಿಗೆಲ್ಲ ಅವರದ್ದೇ ಆದ ಉದ್ಯೋಗವಿದೆ, ವ್ಯಾಪಾರ ವಹಿವಾಟುಗಳಿವೆ. ಹಾಗಾಗಿ ಮೆರಿತಾರೆ. ಆದರೆ ತನಗೇನಿದೆ? ಪಿತ್ರಾರ್ಜಿತವೂ ಇಲ್ಲ, ಪುತ್ರಾರ್ಜಿತವೂ ಇಲ್ಲ. ನನ್ನ ದಿನಗೂಲಿಯಿಂದಲೇ ಎಲ್ಲವೂ ನಡೆಯಬೇಕಲ್ಲಾ. ತನ್ನ ಸಂಸಾರವೂ ಯಾರ ಹಂಗಿಗೂ ಬೀಳದೆ ಚೆನ್ನಾಗಿರಬೇಕೆಂಬ  ಆಸೆ ತನಗೂ ಇಲ್ಲವಾ? ಈ ವಿಷಯ ರಾಧಾಳಿಗೇಕೆ ಅರ್ಥವಾಗುವುದಿಲ್ಲ! ಎಂದು ಅವನು ಸಿಡಿಮಿಡಿಗೊಳ್ಳುತ್ತಿದ್ದ. ಅದೇ ವಿಷಯವಾಗಿ ದಂಪತಿಯ ನಡುವೆ ಪದೇಪದೇ ಚರ್ಚೆ ನಡೆಯುತ್ತ ಮನಸ್ತಾಪದಲ್ಲಿ ಕೊನೆಯಾಗುತ್ತಿತ್ತು.

ಆದರೆ ರಾಧಾಳೂ ಗಂಡನನ್ನು ಪೀಡಿಸಲು ಕಾರಣವಿತ್ತು. ಹಿಂದೆ ಅವರಿದ್ದ ಕೆಲವು ಬಾಡಿಗೆ ಮನೆ ಮಾಲಕರ ಹಿಂಸೆ, ಶೋಷಣೆಗಳು ಅದೊಂದು ರೀತಿಯದ್ದಾಗಿದ್ದರೆ ಈಚೆಗೆ ಮುತ್ತಯ್ಯನ ಕಾಮುಕ ದೃಷ್ಟಿಯೂ ಅವಳ ಮೇಲೆ ಬಿದ್ದು ತೀವ್ರ ಕಿರುಕುಳ ಅನುಭವಿಸುತ್ತಿದ್ದಳು.

(ಮುಂದುವರೆಯುವುದು.)

******************************************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

3 thoughts on “

  1. ಸಾಂಸಾರಿಕ ಬದುಕಿನಲ್ಲಿ ಕಂಡು ಬರುವ ಏರುಪೇರು, ಬಾಡಿಗೆ ಮನೆಯಲ್ಲಿರಬೇಕಾದ ಪರಿಸ್ಥಿತಿಯಲ್ಲಿ ಅನುಭವಿಸಬೇಕಾದ ಭವಣೆಗಳು. ಜೀವನವನ್ನು ಸರಿ ಹೊಂದಿಸಲು ನಡೆಸುವ ಹೆಣಗಾಟ…. ಈ ಅಧ್ಯಾಯದಲ್ಲಿ ಮಾರ್ಮಿಕವಾಗಿ ಮೂಡಿ ಬಂದಿವೆ. ಅಭಿನಂದನೆ ಸರ್

Leave a Reply

Back To Top