ಮೂಗು ಮತ್ತು ಮಾಸ್ಕು

ಕವಿತೆ

ಮೂಗು ಮತ್ತು ಮಾಸ್ಕು

ಬೆಂಶ್ರೀ ರವೀಂದ್ರ .

ಒಂದು ದಿನ ಬೆಳಗಾದಾಗ
ಇವನ ಮೂಗು ಹೀಗೆ…ಹಾಗೇ
ಅಗಲಗಲ ಉದ್ದುದ್ದ ಬೆಳೆಯತೊಡಗಿತು
ಮುಖದಿಂದ ಕೆಳಗಿಳಿದು ನೆಲವ ಮೂಸಿ
ಮೇಲೆ ಕೆಳಗೆ ಸುತ್ತಮುತ್ತ ಫಾಸಲೆಯಲ್ಲಿ
ಸಣ್ಣ ವಾಸನೆ ಇದ್ದರೂ ಹಿಡಿಯತೊಡಗಿತು
ಮನೆಮನೆ ಅಡಿಗೆಯೂ
ಇವನ ಮೂಗಿಗೆ ಗೊತ್ತಾಗತೊಡಗಿತು
ಹಾಗಾಗಿ
ಊರಲ್ಲಿ ಇವನ ಮೂಗೇ ಢಾಳಾಯಿತು ಆಳಾಯಿತು

ಸುತ್ತಿನ ಮಂದಿ ಖುಷಿಯಿಂದ ಕುಣಿದು
ಯಾರಿಗಿಲ್ಲದ ಮೂಗು ಇವನಿಗಿದೆ
ಅಂತ ಗಾಳಿ ಬೀಸಿ, ಹೂ ಚೆಲ್ಲಿದರು
ಹಾಡಿ ಹೊಗಳಿದರು; ಏರಿಸಿ
ಇವನ ಹೆಸರಿನಲಿ ಅಟ್ಟವೇರಿದರು
ತಕ್ಷಣ
ಎಲ್ಲರೂ ಮೂಗಿಗೆ ಮಾಸ್ಕ ಹಾಕಿದರೆ
ಇವ ಮುಖಕ್ಕೆ ಹಾಕಿಕೊಂಡ

ಹೂ ಅರಳುವಂತಿಲ್ಲ,
ಹಣ್ಣು ಮಾಗಿ ಕಳೆಯುವಂತಿಲ್ಲ,
ವಗ್ಗರಣೆಯ ಘಮ ಏಳುವಂತಿಲ್ಲ
ಎಲ್ಲೇನನ್ನು ಮಾಡಿದರೂ
ಇವನ ಮೂಗು ಹಾಕಿಬಿಡುತ್ತದೆ ಹಾಜರಿ
ಎಲ್ಲವನೂ ಸೆಳೆದು ಬಿಡುತ್ತದೆ
ಮನೆಯ ಗುಟ್ಟೆಲ್ಲ ಇವನ ಮೂಗಿನಡಿಯಲ್ಲಿ

ಮತ್ತೊಂದು ದಿನ ರಾತ್ರಿ ಮತ್ತೆ
ಮೂಗು ಬೆಳೆಯತೊಡಗಿತು‌ ಮುಗಿಲೆತ್ತರ
ಜಗದ ಆಗು ಹೋಗುಗಳೆಲ್ಲ ಮೂಗಿನ ಹೊರಳೆಯೊಳಗೆ ಅರಳಿಬಿಡಬೇಕೆಂಬ ಬಯಕೆ;
ದೇಶ ದೇಶದ ಮಂದಿ ಅಂಜಿ
ಹಿಪ್ಪೆಯಾಗಿದ್ದಾರೆ ಹಿಂಜಿ
ಹೇಗೆ ತಪ್ಪಿಸುವುದು ಇವನ ಮೂಗು.

ಸದ್ಯ ಕೊರೊನ ಈಗ ಕಡಿಮೆಯಾಗಿದೆ
ಅಂತ ಮಾರಾಯ ಒಮ್ಮೆ ಮಾಸ್ಕ ಸರಿಸಿದರೆ
ಸಾಕು, ಬಡಿದು ಬಿಡಲಿ ಕೊರೊನ
ಸೋರಲಿ ಮೂಗು ; ಕಳೆಯಲಿ ವಾಸನೆ
ಕಷ್ಟವಾಗಲಿ ಉಸಿರು; ಕತ್ತರಿಸಲಿ ಮೂಗು
ಅಲ್ಲಿಲ್ಲಿ ತೂರಿಸದಂತೆ.
ನೋಡಬೇಕು ಏನಾದರೂ ಆಗಬಹುದು.

ಈಗ
ಎಲ್ಲರೂ ಇವನ ಮೂಗು
ತುಂಡಾಗುವುದನ್ನು ಕಾಯುತ್ತಿದ್ದಾರೆ
ಹೂವು ಅರಳಿಸಲು ಹಣ್ಣು ಕತ್ತರಿಸಲು
ವಗ್ಗರಣೆ ಹಾಕಲು.

***********

2 thoughts on “ಮೂಗು ಮತ್ತು ಮಾಸ್ಕು

Leave a Reply

Back To Top