ಕಾಯುವ ಕಷ್ಟ.

ಕವಿತೆ

ಕಾಯುವ ಕಷ್ಟ.

ಅಬ್ಳಿ,ಹೆಗಡೆ

Image result for photos of paddy

ಈ ‘ಹಡಿಲು ಬಿದ್ದ’ನೆಲ,
ಈ ದಟ್ಟ ಕತ್ತಲು,ಈ ಮೌನ,
ಈ,,ಖಾಲಿ ಹಾಳೆ,
ಕಾಯುತ್ತಿವೆ….
ಉತ್ತು ಬಿತ್ತುವವರ.
ಉಳುವದೆಂದರೆ….
ಬೇಕಾಬಿಟ್ಟಿ ಅಗೆಯುವದಲ್ಲ.
ಮೊದಲು ಒದ್ದೆ-
ಯಾಗಿಸಬೇಕು
ಗಟ್ಟಿ ಮೇಲ್ಪದರ.
ಗುದ್ದಲಿ,ಪಿಕಾಸಿಗಿಂತ
ನೇಗಿಲಾದರೆ ಸಲೀಸು-
ಭೇದಿಸಿ ಒಳಗಿಳಿಯಲು.
ತೀರ ಆಳಕ್ಕೂ ಇಳಿಯದೆ
ಹಿತವಾಗಿ,ಹದವಾಗಿ,
ಸಾವಕಾಶ,ನಾಜೂಕಾಗಿ-
ಸಾಗುವಾಗಿನ
ಖುಷಿಯೇ ಬೇರೆ.
ಆಮೇಲೆ…
ಬಿತ್ತಿದಂತೇ ಬೆಳೆ.
ನೆಲದೊಳಗೊಂದು ಬೀಜ,
ಕತ್ತಲೊಳಗೊಂದು
ಬೆಳಕ ಸಣ್ಣ ಕಿಡಿ,
ಮೌನದೊಳಗೊಂದು
ಪಿಸು ಮಾತು,
ಹಾಳೆಯ ಖಾಲಿ-
ಯಲ್ಲೊಂದು ಅಕ್ಷರ
ಮೊಳೆಯುವ ಕನಸ ಖುಷಿ.
ಮೊದ,ಮೊದಲು
ನೋವಾದರೂ,
ಕೊನೆ,ಕೊನೆಗೆ….
‘ಆಹಾ’ ಸುಖದ ನರಳಿಕೆ.
ಆ ಒಂದು ಕ಼ಣಕ್ಕಾಗಿ
ಕಾಯುತ್ತಿವೆ..–
ಈ,,ನೆಲ,ಈ..ಕತ್ತಲು,
ಈ..ಮೌನ,ಈ..ಖಾಲಿ’ಹಾಳೆ’?,
ಮೊದಲ ಮಳೆಯಾಗುವ
ಮೊದಲು ಉಳುವವರಿಗಾಗಿ
ಕಾಯುತ್ತಿವೆ ಎದೆತೆರೆದು
ಅಂಗಾತ ಮಲಗಿ…!!!

******************************

Leave a Reply

Back To Top