ಕವಿತೆ
ಯಾವ ಲೆಕ್ಕ?
ಬಸೂ
ಬೇಲಿ ಕಟ್ಟಿದರು
ಗೋಡೆ ನಿಲ್ಲಿಸಿದರು
ಹೂವಾಗಿಯೇ ಇದ್ದೆ
ಬೇಲಿ ಗೋಡೆ ಯಾವ ಲೆಕ್ಕ?
ಕೋಟೆ ಕಟ್ಟಿದರು
ಕಾವಲು ನಿಲ್ಲಿಸಿದರು
ಇರುವೆಯಾಗಿಯೇ ಇದ್ದೆ
ಕೋಟೆ ಕಾವಲು ಯಾವ ಲೆಕ್ಕ?
ಪಂಜರ ತಂದಿಟ್ಟರು
ಬಾಗಿಲು ಮುಚ್ಚಿದರು
ಹಕ್ಕಿಯಾಗಿಯೇ ಇದ್ದೆ
ಪಂಜರ ಬಾಗಿಲು ಯಾವ ಲೆಕ್ಕ?
ಕಡಲಾಗಿ ಬಂದರು
ನದಿಯಾಗಿ ನಿಂತರು
ಹುಲ್ಲುಕಡ್ಡಿಯಾಗಿಯೇ ಇದ್ದೆ
ಕಡಲು ನದಿ ಯಾವ ಲೆಕ್ಕ?
ಗುಡ್ಡ ಎತ್ತಿಟ್ಟರು
ಕಲ್ಲುಮುಳ್ಳು ಹರಡಿದರು
ಎರೆಹುಳವಾಗಿಯೇ ಇದ್ದೆ
ಗುಡ್ಡ ಕಲ್ಲುಮುಳ್ಳು ಯಾವ ಲೆಕ್ಕ?
ಹೂವಾಗಿ ಇದ್ದದ್ದು
ಇರುವೆಯಾಗಿ ಅವತರಿಸಿದ್ದು
ಹಕ್ಕಿಯಾಗಿ ಮೈದಳದಿದ್ದು
ಹಲ್ಲುಕಡ್ಡಿಯ ವೇಷ ಧರಿಸಿದ್ದು
ನಾ ನೀ ತಲುಪುವ ದಾರಿಗಳಷ್ಟೇ…
ಅಸಂಖ್ಯೆ ಅಂಗುಲಿಮಾಲರೆದುರು
ಹೂಇರುವೆಹಕ್ಕಿಹುಲ್ಲುಕಡ್ಡಿಎರೆಹುಳು
ನಂಗೆ ಬುದ್ಧ ಕಣೋ
*************************
ಕವಿತೆಯ ಕಸುವು ಅಂದರೆ ಇದು…