ಕವಿತೆ
ದೇವರುಮಾರಾಟಕ್ಕಿದ್ದಾರೆ…
ಡಾ. ಪ್ರೇಮಲತ ಬಿ.
ಭಗ್ನದಂತ ಚತುರ್ಮುಖ ಗಣಪನು
ಪಿಳ್ಳಂಗೋವಿಯ ಘನಶ್ಯಾಮನು
ರತಿಕೇಳಿಯ ದೇವ ದೇವತೆಗಳು
ಮಾರಾಟಕ್ಕಿದ್ದಾರೆ ಬನ್ನಿ
ಬಂಗಾರ ಬಣ್ಣದ ಚಿತ್ತಾರಗಳಲಿ
ಶಾಸ್ತ್ರ ಸಂಪ್ರದಾಯಗಳ ಮಡಿಕೆಗಳಲಿ
ರೇಶ್ಮೆ ಪತ್ತಲದ ನವಿರು ಮೆತ್ತೆಯಲಿ
ಜೋಪಾನ ಸುತ್ತಿಟ್ಟಿದ್ದೇವೆ ಇಲ್ಲಿ
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ಚಾಮರವ ಬೀಸಿ, ನೃತ್ಯದಿ ಒಲಿಸಿ
ಪಂಚಕಜ್ಜಾಯಗಳ ತಿನ್ನಿಸಿ
ಮಡಿಲಲಿಟ್ಟು ಸಲಹಿದರು ಸೇವೆಗೈದು
ತಪ್ಪಿಲ್ಲ ಆಪಾದನೆ, ದೋಷಾರೋಪಣೆ
ಒಂದು ಕಣ್ಣಿಗೆ ಸುಣ್ಣ ಮತ್ತೊಂದಕ್ಕೆ ಬೆಣ್ಣೆ
ದೇವಸ್ಥಾನದ ಪ್ರವೇಶಕ್ಕೂ ನಿರಾಕರಣೆ
ಪುರುಷರ ಪ್ರತಿ ತಪ್ಪಿಗೂ ಕಾರಣ ಹೆಣ್ಣೆ?
ನೀಡು ನೀನಾದರೂ ವಿವರಣೆ..
ಕಣ್ಣು ಮುಚ್ಚಿ, ಕೊಳಲನೂದಿ, ಸರಸವಾಡುತ್ತ
ತಾರತಮ್ಯಗಳನೆಲ್ಲನೋಡುತ್ತ ಮೌನದಿ
ಅಲಂಕಾರಮೂರ್ತಿಯಾದವರ ಹೊತ್ತೊಯ್ಯ ಬನ್ನಿ
ದೇವರು ಮಾರಾಟಕ್ಕಿದ್ದಾರೆ ಇಲ್ಲಿ…
****************************