ಬದಲಾಗುತ್ತ ಹೋದ ಅವಳ ದೇವರು

ಬದಲಾಗುತ್ತ ಹೋದ 

ಅವಳ ದೇವರು 

ಎಂ. ಆರ್. ಅನಸೂಯ

What is Abstract Art ? Meaning and Definition of Art Informel | Widewalls

ಅವಳು ಏಳೆಂಟು ವರ್ಷದವಳಿದ್ದಾಗ  ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ.

ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ  ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ.  ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ

ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ  ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ  ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ  ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ  ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ  ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ  ಧನ್ಯತಾ ಭಾವದ ಅಮೃತ  ಘಳಿಗೆಗಾಗಿ.

ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ.

ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ

“ಎಲ್ಲೊ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ”

ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು

 ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ  ಅಚಲ  ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ  ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ

“ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು

ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು”

ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು

“ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ

ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ   ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ  ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ  ಒಲಿಯುವವನಲ್ಲ ಈಗ ಆವಳ ದೇವರು

ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ

ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ  ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ 

******************************

Leave a Reply

Back To Top