ಅಂಕಣ ಬರಹ

ವಸಂತ ಬಂದ!

ರಂಗಕ್ಕೆ ರಂಗು ತಂದ!!

ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು.

ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ,

ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ.  ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ.

ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ.

ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ.‌ ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ.

 ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ.

 ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ

Amrapali Painting by Artist Nandika Dutt

ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು.

ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು.

ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ.

ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ.  ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ.

ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು.

ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ‌ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ

.

ಮೈದಾನದ ಪಶ್ಚಿಮಕ್ಕೆ‌ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು.  ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ  ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ  ಉದ್ದದ ಬಾಕ್ಸ್ ಕಾಣಿಸುತ್ತದೆ.  ದಾಟಿ ಹೋದರೆ ಪರೀಕ್ಷಾಕೊಠಡಿ,  ನಂತರ ಲೇಡಿ ಡಾಕ್ಟರ್ ರೂಮ್. 

ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ.

1,143 Village Hospital Photos - Free & Royalty-Free Stock Photos from  Dreamstime

 ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ.

ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು

ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು‌‌ ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು.

ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು.

ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!.

ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ‌ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!.

ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ.

ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ  ಮೋಹಿಸುವ ಮರುಳುತನ.

ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು.

ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು.  ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು.

*************************************************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

5 thoughts on “

  1. ಮನಮುಟ್ಟುವಂತೆ ಇದೆ ಬರಹ. ನಾನು ಎಂಟನೆ ತರಗತಿಯಲ್ಲಿ ನಾಟಕ ದ ಪಾತ್ರ ಮಾಡಿದ್ದೆ. ರಾಜಕುಮಾರಿ .ಅದು ನೆಮಪಾಯ್ತು.

    1. ಅಕ್ಕರೆ. ಗೆಳತಿಯರ ಒಳ್ಳೆಯ ಮಾತು ಬರಹಕ್ಕೆ ಗ್ಲುಕೋಸ್

  2. ಎಲ್ಲರೂ ದಾಟಿದ ಸಂಕವೇ ಇದು. ಮಾತಾಡಿದ್ದಕ್ಕಿಂತ ಮೌನವಾಡಿದ್ದೇ ಹೆಚ್ಚು. ತುಂಬಾ ಸಂಯಮದ, ಹೇಳದೇ ಹಲವನ್ನು ತೆರೆದಿಡುವ ಬರಹ.
    ಜಯವಾಗಲಿ!

  3. ಎಷ್ಟು ಚೆಂದದ ಬರಹ.ನಿನ್ನ ಬರಹಕ್ಕೆ ಚಿತ್ರಕ ಶಕ್ತಿಯಿದೆ…ಸಿರಿ

Leave a Reply

Back To Top