ಗಜಲ್
ಸಿದ್ಧರಾಮ ಕೂಡ್ಲಿಗಿ
ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ
ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ
ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ
ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ
ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ
ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ
ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು
ಆಗಸದಷ್ಟು ಚೆಲುವಿನ ಅರಿತಷ್ಟೂ ಆಳದ ವಿಸ್ಮಯ ಭಾವಗಳ ಪಡೆದವಳು ನೀನಲ್ಲವೆ
ಸಿದ್ಧನಿಗೆ ಪ್ರೇಮದ ಹೃದಯವಾದರೂ ಎಲ್ಲಿತ್ತು ಅದು ಖಾಲಿ ಮಧುಬಟ್ಟಲಾಗಿತ್ತು
ಒಲವೆಂಬ ಮತ್ತನೇರಿಸಿ ಪ್ರತಿ ಕನಸಿನಲೂ ನೂರು ನವಿಲುಗಳ ಕುಣಿಸಿದವಳು ನೀನಲ್ಲವೆ
***********************************************