ಅಂಕಣ ಬರಹ
ಮರಿಕಪ್ಪೆ ಹಾರಿತು
ಬಾವಿಯ ಹೊರಗೆ
ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು.
ಆ ಮೋಟುಗೋಡೆಯ ಮಗ್ಗುಲಲ್ಲಿ ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು ನೆಲದಲ್ಲಿ ಕೂತು ಮಹಾರಾಣಿಯ ಆಜ್ಞೆಗೆ ಕಾಯಬೇಕು.
ಭಾರತಿ ನಾಟಕದ ಮುಂದಿನ ಅಂಕದ ನೆನಪಿನಲ್ಲಿ ಗೊಣಗುತ್ತಿದ್ದಳು.” ಹೇ, ನಾಳೆ ನಾನು ಮಹಾರಾಣಿ. ನೆಲದಲ್ಲಿ ಎಷ್ಟು ಮಣ್ಣು ನೋಡು.”
ರಸ್ತೆಯ ಮೇಲಿನ ಧೂಳು ಮಣ್ಣು ಹಾರಿ ಬಂದು ದಪ್ಪಗೆ ನೆಲದಲ್ಲಿ ಕೂತಿರುತ್ತಿತ್ತು. ನಾವು ಅದರಲ್ಲಿ ತೋರು ಬೆರಳಿನಿಂದ ಹೆಸರು ಬರೆಯುವುದೂ ಇತ್ತು. ಅಲ್ಲಿ ಆಟ ಆಡಿ ಹೋದ ಸಂಜೆ ಮನೆಯಲ್ಲಿ ಬಯ್ಗಳಿಗೆ ಏನೂ ಬರವಿಲ್ಲ. ಅಂಗಿಯೆಲ್ಲ ಕೆಂಪು.
“ನಿಮಗೆ ಆಡಲು ಬೇರೆ ಜಾಗ ಇಲ್ವಾ”. ಅವಳ ಅಮ್ಮ ಒಂದೇ ಸಮನೆ ಗೊಣಗುತ್ತಿದ್ದರು. ಪಾಪ,ಹಗಲಿಡೀ ಹೋಟೇಲಿನ ಕೆಲಸ. ಈಗಿನಂತೆ ಗ್ರೈಂಡರ್ , ಮಿಕ್ಸಿಗಳಿಲ್ಲ. ಚಚ್ಚೌಕ ತೆರೆದ ಚಾವಡಿಯ ಮನೆ. ಮನೆಗೆ ಹಿಂದಿನಿಂದ ಬಾಗಿಲು. ಎದುರು ಹೋಟೇಲ್. ಒಳಗಡೆ ಕಾಲಿಟ್ಟರೆ ಮೊದಲು ಕಾಣಿಸುವುದೇ ದೊಡ್ಡದಾದ ಅರೆಯುವ ಕಲ್ಲು. ಸಂಜೆ ಐದು ಗಂಟೆಯಿಂದ ರಾತ್ರಿ 8.30 ರತನಕವೂ ಆಕೆಯ ಕೈಗಳು ಅದರ ಮೇಲೆ ವೃತ್ತಾಕಾರದಲ್ಲಿ ತಿರುಗುತ್ತಲೇ ಇರುತ್ತದೆ. ಅರೆಯುತ್ತಲೇ ಬದುಕು ಆಕೆಯನ್ನೇ ಅರೆದಂತೆ.
ಅದನ್ನು ದಾಟಿದರೆ ಒಂದು ಕಬ್ಬಿಣದ ಒಲೆ. ಅದರ ಮೇಲೆ ಪಾತ್ರೆ. ಮುಂದುವರೆದರೆ ಉದ್ದದ ಎರಡು ಮೆಟ್ಟಲು, ನಂತರ ಅಡುಗೆ ಮನೆ.
ಹಗಲಿನ ವೇಳೆ ಆಕೆ ದೊಡ್ಡ ಉರಿಯ ಮೂರು ಒಲೆಗಳ ಎದುರು ನಿಂತು ದೋಸೆ, ಬನ್ಸ್, ಪೋಡಿ,ಚಹಾ..ಎಂದು ಉರಿಯುತ್ತಾ ಇರುತ್ತಾಳೆ. ಅದರ ಪಕ್ಕ ಒಂದು ಬಾಗಿಲು. ಒಳಗಡೆ ಎರಡು ಕೊಠಡಿ. ಸಂಜೆ ಬೆಂಕಿಯೊಂದಿಗಿನ ಅನುಸಂಧಾನ ಮುಗಿಸಿ ಕೊಳ್ಳಿಯನ್ನು ಗಂಡನ ಸುಪರ್ದಿಗೆ ಕೊಟ್ಟು ಒಳಗೋಡಿ ಬರುತ್ತಾಳೆ. ಆಗ ಹೆಚ್ಚಾಗಿ ನಮ್ಮ ಪ್ರವೇಶ. ಕೆಂಪು ಬಣ್ಣದ ಅಂಗಿಯೊಂದಿಗೆ. ಅದು ಯಾವ ಬಣ್ಣವಿದ್ರೂ ಆ ಸಮಯ ಕೆಂಪಾಗಿರುತ್ತದೆ. ಸೂರ್ಯಾಸ್ತದ ರವಿಯಂತೆ. ಕಳ್ಳರಂತೆ ಒಳಹೊಕ್ಕು ಅಲ್ಲಿ ನಮ್ಮ ಅಟ,ಚರ್ಚೆ ಮುಂದುವರಿಯುತ್ತಿತ್ತು.
” ಕೈ ಇಡು..ಅಟ್ಟಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿ ಹೋದ..”
ಅಂಗೈ ಅಂಗಾತವಾಗಿರಿಸಿ ಮುಚ್ಚಿ ತೆಗೆದು ಆಟ, ಕೆಲವೊಮ್ಮೆ ಕಣ್ಣಮುಚ್ಚಾಲೆ. ನಮ್ಮ ಅಂದಿನ ಖಳನಾಯಕನಾದ ಅವಳ ಅಣ್ಣನ ಪ್ರವೇಶದವರೆಗೂ ಮುಂದುವರಿಯುತ್ತಿರುತ್ತದೆ. ಅವನು ಬಂದು ಬಾಗಿಲ ಬಳಿ ನಿಂತು ಕಣ್ಣ ದೊಡ್ಡದು ಮಾಡುತ್ತಿದ್ದ.
” ಒಳಗೆ ಬರಲು ಯಾರು ಹೇಳಿದ್ದು? ನನ್ನ ಬೆದರಿಸುತ್ತಿದ್ದ. ನಾಯಿ ಉಂಟು. ಈಗ ನಾಯಿ ಬಿಡ್ತೇನೆ”.
ನಾನು ಹೆದರಿ ಕಳ್ಳಬೆಕ್ಕಿನಂತೆ ಅಲ್ಲಿಂದ ಪಲಾಯನ ಮಾಡುತ್ತಿದ್ದೆ. ಅವಳ ಅಮ್ಮನ ಸ್ವರ ನನ್ನ ಹಿಂಬಾಲಿಸುತ್ತಿತ್ತು.
” ನೋಡು ಅವರ ಅಂಗಿ ನೋಡು, ಅದರ ಬಣ್ಣ ನೋಡು..ಹೇಗಾಗಿದೆ. ಯಾರು ಒಗೆಯೋದು.”‘
ಶ್ರೀಮತಿಯ ಕಣ್ಣಿನಲ್ಲಿ ಕಾಣುವ ಮುಂದಿನ ದೃಶ್ಯಗಳು ನನ್ನ ಮನಸ್ಸಿನ ಮಂಟಪದಲ್ಲೂ ಕುಣಿದು ನಾನು ಮುರಿದ ಗೋಡೆಯ ಸಿಂಹಾಸನದಲ್ಲಿ ಕೂತು ಅಜ್ಞಾಪಿಸುತ್ತಿದ್ದೆ
‘ ಕೂತು ಆಟ ಬೇಡ. ನಿಂತೇ ಮಾತನಾಡಬೇಕು.’
ಆಟದ ನಾಟಕ ಮುಂದುವರಿಯುತ್ತಿತ್ತು. ಇಲ್ಲಿ ರಾಣಿ,ಸಖಿಯರು,ಅಂತಃಪುರ ಇರುತ್ತಿತ್ತು. ನಾವು ನಾಲ್ಕು ಜನ ಸಖಿಯರು. ಆದರೆ ಮೂವರೇ ಇದ್ದಾಗ ಆಟಕ್ಕೆ ಚ್ಯುತಿಬಾರದಂತೆ ಆ ಪಾತ್ರವನ್ನು ಕಲ್ಪಿಸಿಕೊಂಡು ಮಾತನಾಡುತ್ತಿದ್ದೆವು. ಒಮ್ಮೆ ರಾಜಕುಮಾರಿಯರ ವಸ್ತ್ರ ಸಂಹಿತೆ ಬಗ್ಗೆ ಮಾತಾಗಿ ನಾವು ಒಂದೇ ರೀತಿಯ ವಸ್ತ್ರ ತಲೆಯ ಮೇಲಿನಿಂದ ಇಳಿಬಿಡಬೇಕು ಎಂಬ ನಿರ್ಣಯಕ್ಕೆ ಬಂದೆವು. ನನ್ನ ಒಬ್ಬ ಗೆಳತಿಯ ಬಳಿ ಅವಳಮ್ಮನ ಹಳದಿಬಣ್ಣದ ನೈಲಾನ್ ಸೀರೆಯ ಉದ್ದದ ತುಂಡಿತ್ತು. ಅದು ಬಹಳ ಚೆಂದವೂ ಇತ್ತು. ಅದರ ಮೇಲೆ ವಿವಿಧ ಹೂವುಗಳ ಚಿತ್ತಾರ. ನನ್ನ ಬಳಿಯೂ ಅದೇ ಬಣ್ಣದ ಅಮ್ಮನ ಸೀರೆ ಇದೆಯೆಂದೆ. ಶ್ರೀಮತಿ ನನ್ನಲ್ಲೂ ಇದೆ ಎಂದಳು. ಮರುದಿನ ನಾಟಕಕ್ಕೆ ವೇಷ ಭೂಷಣ ತಯಾರು.
ಮರುದಿನ. ನಾವು ಮೂವರು ಗೆಳತಿಯರು ಸುಂದರವಾದ ಹಳದಿ ಬಣ್ಣದ ಪರದೆ ತಲೆಯ ಮೇಲಿನಿಂದ ಇಳಿಬಿಟ್ಟು ರಾಜಕುಮಾರಿಯರಾದೆವು. ಆದರೆ ಆಟದ ಅರ್ಧದಲ್ಲೇ ಗೆಳತಿಗೆ ಮನೆಯಿಂದ ಬುಲಾವ್. ಆಕೆ ಓಡಿದಳು.ಅವಳು ಹಿಂದಿನ ದಿನ ಹಳದಿ ಬಣ್ಣದ ತನ್ನ ಅಮ್ಮನ ಸೀರೆಯ ಸೆರಗು ಕತ್ತರಿಸಿ ತಂದಿದ್ದಳು!!. ಇದರ ಪರಿಣಾಮ, ಮುಂದಿನ ಕೆಲವು ದಿನಗಳ ಕಾಲ ಒಬ್ಬ ರಾಜಕುಮಾರಿಯ ಅನುಪಸ್ಥಿತಿಯಿಂದ ನಮ್ಮ ಗೋಡೆರಂಗದ ನಾಟಕ ರದ್ದಾಗಿತ್ತು. ಮಾತ್ರವಲ್ಲ ಅವರ ಮನೆಯ ಸುತ್ತ ಬಾರದಂತೆ ನಮಗೆ ನಿರ್ಬಂಧ ಹೇರಲಾಗಿತ್ತು.
ರಂಗದ ಹಕ್ಕಿಗಳ ರೆಕ್ಕೆ ಪುಕ್ಕ ಈ ಆಟಗಳು. ನಮ್ಮ ಶಾಲೆಯ ಹಿಂದುಗಡೆ ಅಶ್ವಥ್ಥಮರದ ಕಟ್ಟೆಯಿತ್ತು. ಅಲ್ಲಿ ನಮ್ಮ ಮನೆಯಾಟ. ನಮ್ಮ ತರಗತಿಯ ಗೆಳತಿಯರು ಸೇರಿ ಆಟವಾಡುತ್ತಿದ್ದೆವು. ಸುಂದರ ಪಾತ್ರಗಳು, ಆ ಪಾತ್ರಗಳ ನಡುವಿನ ಸಂಭಾಷಣೆ, ಮಾತು, ನಗು, ಅಳು, ಸಂಬಂಧ ಆ ಕಟ್ಟೆಯ ಮೇಲೆ ಒಳಗೊಳಗಿಂದಲೇ ಅರಳುತ್ತಿತ್ತು. ಅಲ್ಲಿ ಅದೆಷ್ಟು ವೇಗದಲ್ಲಿ ಪಾತ್ರಗಳೂ ಬದಲಾಗುತ್ತಿದ್ದವು. ಅಪ್ಪ ಅಮ್ಮ ಮಗ, ಮಗಳು. ಅಜ್ಜ ಅಜ್ಜಿ, ಡಾಕ್ಟರ್,ಕಂಪೌಂಡರ್,ಮನೆ ಕೆಲಸದಾಳು,ಟೀಚರ್,ಅಂಗಡಿ ಆಸ್ಪತ್ರೆ,ಹೋಟೆಲ್, ಎಲ್ಲವೂ ನಮ್ಮ ಮನೆಯಾಟದ ಪಾತ್ರಗಳು. ಅಪ್ಪನ ಬಳಿ ಅಮ್ಮನ ದೂರುಗಳು. ಅಪ್ಪ ಮಕ್ಕಳನ್ನು ಕರೆದು ವಿಚಾರಣೆ, ಪುಟ್ಟಪುಟ್ಟ ಬಾಟಲುಗಳಲ್ಲಿ ಔಷಧಿ, ಇಂಜೆಕ್ಷನ್ ಚುಚ್ಚುವ ದಾದಿ, ಅಳುವ ಮಗು,ಹೀಗೇ ಕಂಡದ್ದೆಲ್ಲಾ ಪಾತ್ರಗಳೇ.
ನಮ್ಮ ಶಾಲೆಯ ಹಿಂದುಗಡೆ ಖಾಲಿ ಜಾಗ. ಪುಟ್ಟ ಮೈದಾನ. ಅದರಾಚೆ ದೇವಾಲಯದ ಗದ್ದೆಗಳು. ಅಲ್ಲೇ ಜಾತ್ರೆಯ ಸಮಯದಲ್ಲಿ ಸರ್ಕಸ್, ಉಯ್ಯಾಲೆ,ಕುದುರೆ, ನಾಟಕ ಮೊದಲಾದವು ನಡೆಯುವುದು. ಜಾತ್ರೆಯ ನಂತರವೂ ಕೆಲದಿನ ಸರ್ಕಸ್ ನ ಮಂದಿ ಇರುತ್ತಿದ್ದರು. ನಾವು ನಮ್ಮ ಶಾಲೆಯ ಹಿಂಬದಿಗೆ ಹೋಗಿ ಅವರ ವೇಷ, ಪ್ರಾಣಿ, ಪಂಜರ ಮೊದಲಾದುವುಗಳನ್ನು ಅತ್ಯಂತ ಕುತೂಹಲದಲ್ಲಿ ನೋಡುವುದು. ಈ ಸರ್ಕಸ್ ನವರ ಬಳಿ ಸ್ಪಂಜಿನಿಂದ ತಯಾರಿಸಿದ ಬಣ್ಣದ ಗುಲಾಬಿ ಹೂಗಳು ಮಾರಾಟಕ್ಕಿದ್ದವು. ದೊಡ್ಡದು ಹಾಗೂ ಸಣ್ಣದು. ಒಂದು ಹೂವಿಗೆ ಒಂದು ರೂಪಾಯಿ. ನಮಗೆ ಅದರ ಬಹಳ ಆಸೆಯಾಗಿ ವ್ಯಾಮೋಹಕ್ಕೆ ತಿರುಗಿತ್ತು. ಆದರೆ ಹಣವೆಲ್ಲಿಂದ ಬರಬೇಕು? ಸಂಜೆ ನಮ್ಮ ಶಾಲೆಯ ಮೈದಾನದ ತುದಿಯಲ್ಲಿ ನಿಂತು ವಿಚಾರಿಸುತ್ತಿದ್ದೆವು. ನೀವು ಎಷ್ಟು ದಿನ ಇರುತ್ತೀರಿ? ಕೊನೆಗೂ ನಾವು 5-6 ಜನ ಸೇರಿ ಒಂದು ಗುಲಾಬಿ ಕೊಳ್ಳಲು ಹಣ ಸೇರಿಸಿದೆವು.ಅದನ್ನು ದಿನಕ್ಕೊಬ್ಬರು ಮನೆಗೆ ಕೊಂಡೊಯ್ಯುವುದು. ಬೆಳಗ್ಗೆ ಚೀಲದಲ್ಲಿ ಹಾಕಿ ಮತ್ತೆ ತರಬೇಕು.ನಾವು ಬಹಳ ಖುಷಿಯಲ್ಲಿ ನಮ್ಮ ಮೈದಾನದ ತುದಿಯಲ್ಲಿ ನಿಂತು ವ್ಯಾಪಾರ ಕುದುರಿದೆವು. ಗುಲಾಬಿ ಹೂ ನಮ್ಮೊಳಗೆ ಹೊಸ ಪಾತ್ರವಾಯಿತು.
ಎಲ್ಲದರ ನಡುವೆ ಪುಟ್ಟ ದೀಪವೊಂದು ಅಂತರಂಗದಲ್ಲಿ ಬೆಳಗುತ್ತ ಯಾವುದೋ ಸಂದೇಶ ರವಾನಿಸುತ್ತಲೇ ಇತ್ತು. ಹೌದು, ಬಣ್ಣ ಹಾಕಿ ಹೊಸ ವೇಷದಲ್ಲಿ ವೇದಿಕೆ ಏರಬೇಕು. ಅಲ್ಲಿ ಎದುರುಗಡೆ ಅದೆಷ್ಟು ಜನ ತುಂಬಿಕೊಂಡಿರಬೇಕು. ಅವರೆದುರು ನಾನು ವಸಂತಸೇನೆ, ಶಕಾರ, ಶಬರಿ, ದ್ರೌಪದಿ, ಅಜ್ಜಿ ಓದಿಸಿದ ಕಥೆಗಳ ನಾಯಕಿ. ಎಲ್ಲರೂ ನನ್ನೊಳಗೆ ಬರಬೇಕು. ಅವರನ್ನು ಜನರೆದುರು ಕರೆತಂದು ತೋರಿಸಬೇಕು. ಅಭಿನಯಿಸಬೇಕು.
ಆದರೆ ನನ್ನ ಒಳಗಿನ ಪಾತ್ರಗಳು, ಯಾರಾದರೂ ಕಣ್ಣರಳಿಸಿದರೂ ಅಜ್ಜಿಯ ಸೆರಗಿನ ಹಿಂದೆ ಮರೆಯಾಗುತ್ತಿದ್ದವು. ನಾಲ್ಕು ಜನ ನಿಂತರೆ ಎದುರು ಹೋಗಲಾಗದೆ ಕಾಲು ನಡುಗುತ್ತಿತ್ತು. ವೇದಿಕೆಯ ಮೆಟ್ಟಲಾದರೂ ಹತ್ತುವುದು ಆದೀತೇ? ನಾಲ್ಕನೆಯ ತರಗತಿಯಲ್ಲಿ ವಾರ್ಷಿಕೋತ್ಸವ ಸಮಯದ ಸೋಲು ಇದ್ದ ಸ್ವಲ್ಪ ಧೈರ್ಯವನ್ನೂ ಎತ್ತಿಕೊಂಡು ಓಡಿತ್ತು.
ಅಂದು ಅಜ್ಜಿಯ ಎದುರು ಒದ್ದೆ ಬೆಕ್ಕಿನಮರಿಯಂತೆ ಕೂತಿದ್ದೆ. ಸೂತ್ರಧಾರಿಣಿ ಎತ್ತಿ ಮಡಿಲಿಗೆ ಎಳೆದು ಕೊಂಡಿದ್ದಳು” ಸೋಲಿಗೆ ಹೆದರಬಾರದು ನನ್ನ ಮಗೂ”ಬಿಕ್ಕುವ ಬಿಕ್ಕಿಗೆ ತಲೆ ನೇವರಿಸುತ್ತಾ ಮುಲಾಮು ಆದಳು.
” ನೀನು ಯುದ್ದ ಭೂಮಿಗೆ ಹೋಗಲು ನಿನ್ನನ್ನು ನೀನೇ ತಯಾರು ಮಾಡಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು. ರಣಭೂಮಿಯನ್ನೇ ನೋಡಲಿಲ್ಲ ನೀನು. ದಂಡನಾಯಕಿ ಆಗುವುದು ಹೇಗೆ? ‘ಬರೀ ದಂಡ’ ಆಗಬಾರದು. ಸೋಲಿನ ರುಚಿ ಸವಿದ ಬಳಿಕದ ಗೆಲುವಿಗೆ ಸಂತಸ ಹೆಚ್ಚು”
ಆಗ ಏಳನೇ ತರಗತಿ. ಶಾಲೆಯಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳು. ಡಿಬೇಟ್, ಭಾಷಣ, ಪದ್ಯ,ವಿದ್ಯಾರ್ಥಿ ನಾಯಕ ಚುನಾವಣೆಗಳು,ಮಂತ್ರಿಮಂಡಲ ಹೀಗೆ ಗರಿಗೆದರಿ ಕುಣಿಯುವ ಚಟುಚಟಿಕೆಗಳು. ಅಚ್ಚರಿಯ ತಿರುವಿಗೆ ಮುಖ ತಿರುಗಿಸಿತ್ತು ಬದುಕು. ಆಗೆಲ್ಲ ಪ್ರತೀ ತಿಂಗಳ ಎರಡನೆಯ ಶನಿವಾರ ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ.
” ನೋಡು ಬರುವ ಕಾರ್ಯಕ್ರಮ ನಮ್ಮ ಕ್ಲಾಸಿನದ್ದು ಆಗಬೇಕು. ಅದು ಬಹಳ ಚೆಂದ ಇರಬೇಕು. ಡ್ಯಾನ್ಸ್ ಬೇರೆ ಕ್ಲಾಸಿನವರು ಮಾಡ್ತಾರೆ. ನಾವು ನಾಟಕ ಮಾಡಬೇಕು. 30 ನಿಮಿಷ. ನೀನೇ ಅದರ ಎಲ್ಲ ಜವಾಬ್ದಾರಿ ವಹಿಸಬೇಕು. ಗೊತ್ತಾಯ್ತಾ” ನಮ್ಮ ಕ್ಲಾಸ್ ಟೀಚರ್ ಅವರು ನನ್ನತ್ತ ನೋಡಿ ಹೇಳುತ್ತಲೇ ಇದ್ದರು.
. ನನಗೆ ಸಂತಸ,ಭಯ ಮಿಶ್ರಿತವಾದ ಭಾವ. ಪುಕುಪುಕು ಅನಿಸಿದರೂ ಮಾಡಲೇಬೇಕು ಎಂಬ ಹಠ. ಈ ಸಲ ಹೆದರಬಾರದು. ಅಜ್ಜಿಯನ್ನು ಗೋಗೆರೆದೆ. ಇದ್ದ ಕಥೆ ಪುಸ್ತಕ ರಾಶಿ ಹಾಕಿದೆ. ಹೊಸದರ ಸಂಭ್ರಮ. ಊಟ,ತಿಂಡಿಯೂ ರುಚಿಸದಂತೆ ನಾಟಕದ ನಶೆ ಆಟವಾಡುತ್ತಿತ್ತು.
ಯಾವ ನಾಟಕ ಮಾಡಬಹುದು, ಹೇಗೆ, ಎಷ್ಟು ಪಾತ್ರಗಳು ಯಕ್ಷಗಾನದ ವೇಷಗಳು, ಚಂದಮಾಮದ ಚಿತ್ರಗಳು,ಅಜ್ಜಿ ಕಟ್ಟಿಕೊಟ್ಟ ಪಾತ್ರಗಳು ಎಲ್ಲವೂ ಎದುರಾದಂತೆ. ನಾರಾಯಣ ಮಾಮ ಕೊಟ್ಟ ಹಳೆಯ ಪುಸ್ತಕದಲ್ಲಿ ಮೂರು ಕಥೆಗಳಿದ್ದವು. ಅಜ್ಜಿಯ ಬಳಿ ಓಡಿದೆ. “ಸರಿ. ಅದನ್ನು ಚೆಂದ ಮಾಡಿ ಪುಸ್ತಕದಲ್ಲಿ ಮಾತುಗಳಾಗಿ ಬರಿ” ಎಂದಳು. ಅದು ದೊಡ್ಡ ಸಂಗತಿಯಲ್ಲ. ಅಶ್ವಥ್ಥ ಕಟ್ಟೆಯ ಮೇಲೆ, ಮೋಟು ಗೋಡೆಯ ಮೇಲೆ ಚಾಲ್ತಿಗೆ ತಂದ ಕೆಲಸ ಈಗ ಅಕ್ಷರಕ್ಕೆ ತರಬೇಕು. ವಾಲಿವಧೆ ಕಥೆ ನಾಟಕವಾಯಿತು. ಪ್ರತಿ ಪಾತ್ರಗಳೂ ನನ್ನೊಳಗೆ ಕುಣಿಯುತ್ತಿದ್ದವು. ನಾಟಕ ಮೂಡಿದ ನನ್ನ ಅರ್ಧ ಹರಿದ ಪುಸ್ತಕವನ್ನು, ಮಗುವನ್ನು ಅಪ್ಪಿಕೊಂಡು ನಡೆದಂತೆ ಶಾಲೆಗೆ ಕೊಂಡೊಯ್ದೆ. ಟೀಚರ್ ಸಲಹೆಯಂತೆ ಪಾತ್ರಗಳಿಗೆ ಗೆಳತಿಯರನ್ನು ಆರಿಸಿದೆ. ನನ್ನ ಚೆಂದದ ಗೆಳತಿ ತಾರೆಯಾದಳು,ಮತ್ತೊಬ್ಬಳು ಸುಗ್ರೀವ, ಇನ್ನೊಬ್ಬಳು ರಾಮ,ಲಕ್ಷ್ಮಣ.. ನಾಟಕದ ಪ್ರೀತಿಯಿಂದ ಬಂದ ಉಳಿದ ಸಂಗಾತಿಗಳನ್ನೆಲ್ಲ ತ್ರೇತಾಯುಗಕ್ಕೆ ಕಳುಹಿಸಲಾಯಿತು. ನಾನು ನಿರ್ದೇಶಕಿ. ಎಲ್ಲರಿಗೂ ಹೇಳಿಕೊಡುವ ಟೀಚರ್!..ಎಂತಹ ಸಂಭ್ರಮ, ಪುಳಕ. ಮನೆಗೆ ಬಂದು ನಾನು ಕಂಡ ಯಕ್ಷಗಾನ ನೆನಪಿಸಿ ಆ ಅಭಿನಯ ಮನಸ್ಸಿನ ರಂಗಕ್ಕೆ ಕರೆತರುತ್ತಿದ್ದೆ. ಅವರ ನಡಿಗೆ, ವೇಷ, ಮುಖದ ಭಾವ, ಚಲನೆ, ಸ್ವರ. ನಾನು ಬೇರಾವುದೋ ಲೋಕಕ್ಕೆ ಸೇರ್ಪಡೆಗೊಂಡ ಅಮಲು. ನನ್ನ ಗೆಳತಿಯರೂ ಸಂಭ್ರಮಿಸುತ್ತಿದ್ದರು. ಆ ತಿಂಗಳು ನೃತ್ಯದಲ್ಲಿ ಭಾಗವಹಿಸುವ ಸಹಪಾಠಿಗಳೆದರು ಜಂಭ.” ನಾವು ನಾಟಕ ಮಾಡಲಿಕ್ಕುಂಟು. ನೀವು ಎಂತ ಡ್ಯಾನ್ಸ್. “
ಇನ್ನೇನು ಬಂದೇಬಿಟ್ಟಿತು. ಕೇವಲ ಮೂರು ದಿನವಿದೆ ಅನ್ನುವಾಗ ನಮ್ಮ ಟೀಚರ್ ಟ್ರಾಯಲ್ ನೋಡಿ ನನ್ನ ಕರೆದವರು,” ಚೆಂದ ಆಗ್ತಾ ಉಂಟು . ನಮ್ಮ ರಂಜೂಗೆ ಒಂದು ಪಾತ್ರ ಕೊಡು”
ರಂಜನ್ ನಮ್ಮ ಟೀಚರ್ ಮಗ. ಮೂರು ವರ್ಷದವನು. ಟೀಚರ್ ನನ್ನಲ್ಲಿ ಕೇಳುವುದು. ಹಾಗಿದ್ದರೆ ಇದನ್ನೂ ನಾನು ಮಾಡಲೇಬೇಕು. ಮನೆಗೆ ಬಂದೆ. ನಾಟಕವನ್ನು ಮತ್ತೆ ತಿರುವಿ ” ಅಂಗದ” ಮರಿಮಂಗ ಪುಟಕ್ಕನೆ ಜಿಗಿದ. ತಮ್ಮ ಸುಗ್ರೀವನ ಬಳಿ ಯುದ್ದಕ್ಕೆ ತೆರಳುವ ವಾಲಿಯನ್ನು ತಡೆದು ಪ್ರಶ್ನಿಸುವ ಕಂದ. ಟೀಚರ್ ಅಚ್ಚರಿಯಿಂದ
” ಹೇ ನಿಜವಾಗ್ಲೂ ರಂಜೂನನ್ನು ಸೇರಿಸ್ತೀಯಾ? ನಾನು ಸುಮ್ನೆ ಹೇಳಿದ್ದೆ. ಅಂವ ಎಂತ ಮಾಡ್ತಾನಾ.. ಅಲ್ಲಿ ಬಂದು ಕೂಗಿದ್ರೆ ಏನು ಮಾಡೋದು. ನಾಟಕ ಹಾಳಾಗುವುದಿಲ್ವಾ. ನಾಟಕದಲ್ಲಿ ಇತ್ತನಾ ಆ ಪಾತ್ರ. ಅಬ್ಬಬ್ಬ ನೀನೇ”
ಎಷ್ಟು ಸಂಶಯ, ಪ್ರಶ್ನೆಗಳು. ಎಲ್ಲದಕ್ಕೂ ಹ್ಞೂ ಹ್ಞೂ ಎಂದು ಹಾರುವ ನಡೆಯಲ್ಲಿ ಉತ್ತರಿಸುತ್ತ ರಂಗದ ಉತ್ಸಾಹದಲ್ಲಿದ್ದೆ. ಮೊದಲ ಸಲ ಗುರುಗಳ ಎದುರು, ಸಹಪಾಠಿಗಳ ಸಮ್ಮಖ ನನ್ನದೇ ಮುಂದಾಳತ್ದದಲ್ಲಿ ನಾಟಕ. ನಾನು ವಾಲಿ ಪಾತ್ರವನ್ನು ಎದೆಗಿಳಿಸಿ ಅಭಿನಯಕ್ಕೆ ಅನುವಾಗುತ್ತಲೇ ಇದ್ದೆ ರಾತ್ರೆ ಹಗಲೆನ್ನದೆ.
ವೇಷಭೂಷಣ,ರಂಗಪರಿಕರ ಎಲ್ಲವನ್ನೂ ಗೆಳತಿಯರು ಸೇರಿ ಜೋಡಿಸಿಯಾಯಿತು. ಮನೆಗೆ ಬಂದರೂ ನಡೆಯುವ ಶೈಲಿ, ಮಾತು ಎಲ್ಲವೂ ನನ್ನ ಕಲ್ಪನೆಯ ವಾಲಿಯ ಛಾಪು. ಅಂಗದನನ್ನು ಮುದ್ದುಮಾಡುವುದು,ಸಂತೈಸುವಿಕೆ,ತಾರೆಯನ್ನು ಸಮಾಧಾನಗೊಳಿಸುವುದು, ಸುಗ್ರೀವನ ಬಗ್ಗೆ ರೋಷ,ಕರುಣೆ, ರಾಮಭಕ್ತಿ ಎಲ್ಲವೂ ಪಾಕಗೊಂಡ ವಾಲಿ ತಯಾರಾಗಿದ್ದ.
ಆ ಶನಿವಾರ ಎಂದಿನಂತಿರಲಿಲ್ಲ. ಒಂದು ಕಡೆ ಭಯ,ಅಂಜಿಕೆ ಜೊತೆಜೊತೆಗೆ ಅದನ್ನು ಮೀರಿಸುವ ಹಠ, ಛಲ, ಆಸೆ. ರಂಗ ಪ್ರವೇಶಿಸುವ ಸಮಯದಲ್ಲೂ ನಮ್ಮ ಪ್ರಸ್ತುತಿ ಅತ್ಯಂತ ಸುಂದರವಾಗಿರಬೇಕು ಎನ್ನುವ ಹಂಬಲದ ಎದುರು ಊಟ ತಿಂಡಿಯೂ ಗೌಣವೇ.
ವಾಲಿ ರಂಗ ಪ್ರವೇಶಿಸಿದ್ದ. ಪಾತ್ರದ ಭಾವಗಳಿಗೆ ಬಿಂಬವಾಗಿ ತೆರೆದುಕೊಳ್ಳುತ್ತಿದ್ದ. ನಾನೆಂಬ ಅಂಜುಬುರುಕಿ ಅದೆಲ್ಲೋ ಕರಗಿ ಪಾತ್ರವೊಂದು ಮಾತ್ರ ರಂಗದಲ್ಲಿ ಆಡುತ್ತಿತ್ತು. ಅದೊಂದೇ ಸತ್ಯವೆಂಬಂತೆ. ವಾಲಿಯ ವಧೆಯೊಂದಿಗೆ ಕಲಾವಿದೆಯೊಬ್ಬಳು ಕಣ್ತೆರೆಯುವ ಜಾದೂ ನನ್ನೊಳಗೆ ನಡೆದಿತ್ತು.
ಗುರುಗಳ ಮೆಚ್ಚುಗೆ, ಸಂಗಾತಿಗಳ ಸಂತಸ, ಕಿರಿಯರ ಅಚ್ಚರಿಯ ನಡುವೆ ನನ್ನಜ್ಜಿಯ ದಂಡನಾಯಕಿ ಎದೆಯುಬ್ಬಿಸಿ ರಂಗದ ನಡುವೆ ನಿಂತಿದ್ದಳು.
ಮರಿಗಪ್ಪೆ ಬಾವಿಯೊಳಗಿಂದ ಕೊನೆಗೂ ಹೊರ ಜಿಗಿದು ಕುಪ್ಪಳಿಸಿತ್ತು!
**************************************************************
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ಸೋಲಿನ ರುಚಿ ಸವಿದ ಬಳಿಕದ ಗೆಲುವಿಗೆ ಸಂತಸ ಹೆಚ್ಚು”
ನಿಜ ಕಣೆ, ಅನುಭವಾಮೃತ