ಬಂದು ಹೋಗುವ ಮಳೆಯಲ್ಲಿ

ಕಥೆ

ಬಂದು ಹೋಗುವ ಮಳೆಯಲ್ಲಿ

ತೆಲುಗಿನಲ್ಲಿ: ಅಫ್ಸರ್


ಕನ್ನಡಕ್ಕೆ : ಚಂದಕಚರ್ಲ ರಮೇಶ ಬಾಬು

water dew on window

“ಈ ಶಿಥಿಲಗಳ ಬಣ್ಣಗಳು ನಿನ್ನ ಹಿಡಿತಕ್ಕೆ ತುಂಬಾ ಚೆನ್ನಾಗಿ ಬಂದಿವೆ. ಈ ಬಣ್ಣಾನ್ನ ಅಷ್ಟು ಖಚಿತವಾಗಿ ನಿನ್ನ ಕಾನ್ವಾಸ್ ಮೇಲೆ ಅದ್ಹೇಗೆ ತರ್ತೀಯೋ ಮಾರಾಯಾ ! ಏನ್ ಮಿಕ್ಸ್ ಮಾಡ್ತಿಯೋ ಗೊತ್ತಿಲ್ಲಾಗ್ಲೀ ! ಪ್ರತಿ ಚಿತ್ರದಲ್ಲೂ ಅವಕ್ಕೆ ಭಿನ್ನವಾದ ಮೈ ಬಣ್ಣ ಹೊಂದಿರುವ ಹೆಣ್ಣುಗಳು…. ಒಂದು ಮೋಡ…. ನನಗೆ ಗೊತ್ತಿದ್ದ ಹಾಗೆ ಹತ್ತು ವರ್ಷದಿಂದ ಇದೇ ಅಲ್ವಾ ನಿನ್ನ ಕಾನ್ವಾಸ್…..!”

ಕಾನ್ವಾಸಿನ ಕಡೆಗೆ ಮತ್ತೊಂದು ಸಲ ತೀಕ್ಷ್ಣವಾಗಿ ನೋಡ್ತಾ ಅಂದಳು ಆವಳು.

ಆ ಹತ್ತು ವರ್ಷದ ಟೈಮ್ ಲೈನ್ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು. ಹತ್ತು ವರ್ಷದ ಹಿಂದೇ ಅಲ್ವಾ, ಅಪ್ಪ ತೀರಿಹೋದ ಮೇಲೆ ಆ ಊರಿನಲ್ಲಿ ಇನ್ನು ತಮಗೆ ಏನೂ ಇಲ್ಲ ಅಂತ ಅನಿಸಿದ್ದು. ನಿರ್ವಾಹ ವಿಲ್ಲದೆ ಕೆಲಸದ ನೆವ ಮಾಡಿಕೊಂಡು ಹೈದರಾಬಾದಿಗೆ ತನ್ನನ್ನು ಅಮ್ಮನ ಜೊತೆಗೆ ಕರೆಸಿದ್ದಳು ಅವಳು.

ಈ ನಗರವನ್ನು ಪ್ರೀತಿಸಬೇಕೆಂದು ತುಂಬಾ ಸಲ ಅಂದುಕೊಂಡಿದ್ದ. ಹಾಗೆ ಅಂದುಕೊಂಡಿದ್ದ ಪ್ರತಿ ಸರ್ತಿಯೂ ಖಂಡಿತವಾಗಿ ದ್ವೇಷಿಸಲು ಯಾವುದೋ ಒಂದು ಕಾರಣವನ್ನು ನಾಟಕೀಯವಾಗಿ ಸೃಷ್ಟಿಸುತ್ತಿತ್ತು ಈ ನಗರ.

ಇನ್ನೇನು ಸ್ವಲ್ಪ ಸೆಟ್ಲ್ ಆಗುತ್ತಿದ್ದಾನೆ ಎನ್ನುವ ಹೊತ್ತಿಗೆ ಅಮ್ಮನನ್ನು ನುಂಗಿಬಿಟ್ಟಿತ್ತು ಈ ನಗರ.

ತನ್ನ ಅಶಕ್ತತೆಯನ್ನು ಈ ನಗರಕ್ಕೆ ಆಪಾದಿಸುತ್ತಿದ್ದೇನಾ ? ಏನೋ ! ಕಾರಣಗಳನ್ನು ಬಗೆದು ತೆಗೆಯಲಿಲ್ಲ ಎಂದೂ. ಹಿಂದೆಗಿಂತಲೂ ಬದುಕಿನ ಬಗ್ಗೆಯ ಹೆದರಿಕೆ ಜಾಸ್ತಿಯಾದದ್ದಂತೂ ನಿಜ. ತನ್ನ ಅಶಕ್ತತೆ ಸಹ ಸತ್ಯವೇ. ತನಗೆ ಗೊತ್ತಿರುವ ನಿಜ ಅದು. ಮುಂದಕ್ಕೆ ಒಂದು ಹೆಜ್ಜೆ ಹಾಕಬೇನಿಸಿದರೂ ಇಲ್ಲಿಯವರೆಗೂ ಸಲೀಸಾಗಿ ನಡೆದಿದ್ದ ಜೀವನ ಚೆಲ್ಲಾಪಿಲ್ಲಿಯಾಗುತ್ತದೇನೋ ಎನ್ನುವ ದಿಗಿಲು. ಅವಳ ಜೊತೆಗಿನ ಪ್ರೀತಿ, ಮದುವೆ ಸಹ ಅಷ್ಟೇ ! ಕೆಲವು ಸೋತ ಹೆಜ್ಜೆಗಳು. ಕೆಲಸದ ಮೇಲೂ ಜಾಸ್ತಿ ನಂಬಿಕೆ ಇಲ್ಲ. ಮುಂಬರುವ ಘಳಿಗೆಗಳ ಬಗ್ಗೆ ಅನಿಶ್ಚತತೆ. ಈ ಕ್ಷಣದಲ್ಲಿ ಬದುಕಲಾರದ ಅಸ್ಥಿರತೆ.

“ ಯಾಕಿಷ್ಟು ಹೆದರಿಕೆ ನಿನಗೆ ಪ್ರತಿಯೊಂದಕ್ಕೂ ? ಊರಲ್ಲಿರುವಾಗ ಇಷ್ಟು ಹೆದರಿಕೆ ಇರಲಿಲ್ಲ ಅಲ್ಲ ನಿನಗೆ ?” ಅಂತ ಕೊರಗುವ ಅಮ್ಮನಿಗೆ ನನ್ನಿಂದ ಉತ್ತರ ಸಿಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಗೊತ್ತಂತ ಕಾಣತ್ತೆ, ನನ್ನೊಳಗಿನ ನಾನು ಏನು ಅಂತ.

“ಈ ಶಿಥಿಲಗಳಡಿ ನೀನೇನೋ ಅಡಗಿಸ್ತಾ ಇದೀಯಾ”

ಅಲ್ಲಿಗೆ ಬಹುಶಃ ನಾಲನೇ ಸಲ ನನ್ನ ಆ ಕಾನ್ವಾಸ್ ನಲ್ಲಿ ಇಣುಕಿದ್ದಳು ಅವಳು.

ಕಾನ್ವಾಸಿಗೆ ಎಷ್ಟು ದೂರ ತಾನು ನಿಂತರೆ ಅದರಲ್ಲಿಯ ಚಿತ್ರ ಎಷ್ಟು ತನಗೆ ಹತ್ತಿರವಾಗಿ ಕಾಣುತ್ತದೋ ಅವಳಿಗೆ ಗೊತ್ತು. ಹಾಗೆ ನಿಂತಾಗ ಅವಳು ಚಿತ್ರದ ಒಂದು ಭಾಗವಾಗಿ ಹೋಗಿದ್ದಾಳೆ ಅನಿಸುತ್ತೆ. ಅದರಲ್ಲಿ ತಾನು ಬರೆಯಲು ಬಿಟ್ಟುಹೋದ ನೇರಳೆ ಬಣ್ಣದ ಯಾವುದೋ ಹೂವು ಆಗಿಂದಾಗಲೇ ಕಾನ್ವಾಸ್ ಮೇಲೆ ಅರಳಿದ ಅನುಭವವಾಗುತ್ತೆ.

“ ಉತ್ತರ ಏನು ಅಂತಾ ಯೋಚನೇನಾ ? ಅಥವಾ ಇನ್ನೊಂದು ಪೆಯಿಂಟಿಂಗ್ ಬಗ್ಗೆ ಆಗಲೇ ಕಲ್ಪನೆ ಶುರೂನಾ?”

ಹಾಗೇ ಒಂದು ನಗೆ ನಕ್ಕು ಸುಮ್ಮನಾಗಲು ಎಣಸಿದ ಅವನು. ಅವಳು ಒಪ್ಪುವುದಿಲ್ಲ.

“ ಹೌದು. ನಿನ್ನಷ್ಟು ಪರೀಕ್ಷಿಸಿ ಯಾರೂ ನೋಡುವುದಿಲ್ಲ. ಅದಕ್ಕೆ ನಿನಗೇ ಚೆನ್ನಾಗಿ ಗೊತ್ತು. “

“ ನಿಜ ಹೇಳ್ಬೇಕಾದ್ರೆ ನನಗೂ ಏನೂ ಗೊತ್ತಿಲ್ಲ. ನೋಡಿದ್ದು ಹೇಳ್ತಾ ಇದೀನಿ ಅಷ್ಟೇ. ಆದರೆ ನಿನ್ನ ಪ್ರತಿ ಪೆಯಿಂಟಿಂಗ್ ನ ಹಿಂದೆ ನನಗೆ ಕಾಣದೇ ಉಳಿದದ್ದು ತುಂಬಾ ಇದೆ ಅನಿಸತ್ತೆ. ಖಂಡಿತ ಇರಲಿಕ್ಕೂ ಸಾಕು “

“ ಇರುತ್ತದೇನೋ ಗೊತ್ತಿಲ್ಲ ! ನಂಗಾದರೂ ಏನು ಗೊತ್ತು . ಚಿತ್ರ ಬರದಾದಮೇಲೆ ನನ್ನ ಕೆಲಸ ಮುಗೀತು “

“ ನೀನು ಮತ್ತೊಂದು ಭಾಷೆಯಲ್ಲಿ ಅರ್ಥೈಸುವವರೆಗೂ ನನಗೆ ನಿನ್ನ ಬಣ್ಣ, ರೇಖೆಗಳು ಅರ್ಥವಾಗುವುದಿಲ್ಲ. ಈ ಚಿತ್ರನೋಡು ! ಇಲ್ಲಿಗೆ ಹತ್ತು ಸಲ ಹತ್ತು ಕಡೆಯಿಂದ ನೋಡಿದೀನಿ. ಆದರೆ ಅದರಲ್ಲಿ ನೀನೇನು ಅಂತ ತಿಳಿತಾನೇ ಇಲ್ಲ. “

“ ಬಣ್ನ, ರೇಖೆಗಳೇ ಅದರ ಭಾಷೆ. ಅದರ ಭಾಷೆಯಲ್ಲಿರುವ ಆ ಚಿತ್ರ ನಿನಗೆ ಅರ್ಥವಾಗಲಿಲ್ಲ ಅಂದರೆ ಅದು ಸೋತಹಾಗೆ . ಆದರೂ ಒಂದು ಮಾತು ಹೇಳು. ನಿನಗೆ ನಾನು ಯಾಕೆ ಸಿಗಬೇಕು ?”

“ ಏನೋ ಗೊತ್ತಿಲ್ಲ. ಸಿಕ್ಕಿದಷ್ಟು ಸಿಕ್ಕಲಿ ಅಂತ ಕಳೆದ ಹತ್ತು ವರ್ಷದಿಂದ ಅಂದುಕೊಳ್ತಾ ಇದೀನಿ. ಮೊದಲನೆ ಸಲ ನಿನ್ನ ಪೆಯಿಂಟಿಂಗ್ ಯಾವಾಗ ನೋಡಿದೆ ? ಆಗ ನಾನು ಹೇಗಿದ್ದೆ ? ಈಗ ಹೇಗಾಗಿದೀನಿ ? ಅಂತ ಆಲೋಚಿಸಿದರೆ ನಾನು ಅಂದು ನಾವು ಮೊದಲನೆ ಸಲ ಸಿಕ್ಕಾಗ ಹೇಗಿದ್ದೆನೋ ಈಗ್ಲೂ ಹಾಗೇ ಇದೀನಿ. ನಿನ್ನ ವಿಷಯ ಹಾಗಲ್ಲ. ನೀನು ಗೊತ್ತಾಗದೇ, ಗೊತ್ತಾದರೂ ಗೊತ್ತಾಗಿದೀಯ ಎನ್ನುವ ನಂಬಿಕೆ ಸಿಗದೇ….. “

ಹೀಗೆ ಸಮಯದ ಮೈಲುಗಲ್ಲುಗಳನ್ನು ನೆನಪಿಡಲಿಕ್ಕೆ ಹೇಗೆ ಸಾಧ್ಯ ಇವಳಿಗೆ ! ತನಗದು ಇಷ್ಟವೇ ಇಲ್ಲ. ನೆನಪುಗಳೆಂದರೆ ತುಂಬಾ ಭಯ.

“ ಹೇಳಕ್ಕೆ ಆಗಲ್ಲ. “

ಒಮ್ಮೊಮ್ಮೆ ಅವಳು ಅಂತಾಳೆ. “ ನೀನು ಫುಲ್ ಟೈಮ್ ಆರ್ಟಿಸ್ಟ್ ಆಗಬೇಕು. ಈ ಪತ್ರಿಕೆಯ ಕೆಲಸ, ಮಧ್ಯಾಹ್ನದ ನಿದ್ದೆಯಿಂದ ಎದ್ದು ತಯಾರಾಗಿ ಹೋಗೋದು, ಅಲ್ಲೇನೋ ಗೀಚೋದು, ಅದು ನಿನ್ನ ಜೀವನ ಅಲ್ಲ ಅಂತ ಅನಿಸುತ್ತೆ. ಅದರ ಜೊತೆಗೆ ದಿನಾ ಇರೋ ಕೆಲಸದ ಅಭದ್ರತೆ, ಅವರಿಗೆ ನಿನ್ನ ಕೆಲಸ ಹಿಡಿಸೋದು, ಇಲ್ಲದ್ದು…”

“ ಅದು ಮಾತ್ರ ಹೇಳ್ಬೇಡ. ಯಾರೂ ಇದನ್ನ ಫುಲ್ ಟೈಂ ಮಾಡೋಷ್ಟು ಭದ್ರತೆ ಇಲ್ಲ ಇಲ್ಲಿ. ಉಳಿದ ಕೊಸರೇ ಸಾಕು. “

ಕೆಲಸ ಅವಳಿಗಿಂತ ಹೆಚ್ಚೇನಲ್ಲ. ಆದರೆ, ಎಷ್ಟೋ ಇಷ್ಟವಾದ ತನ್ನನ್ನು ಬಿಟ್ಟುಕೊಂಡ ಹಾಗೆ, ಎಳ್ಳಷ್ಟೂ ಇಷ್ಟವಾಗದ ಕೆಲಸವನ್ನು ಆಕೆ ಬಿಡುವುದಿಲ್ಲ.

ಅವಳು ಬಂದಹಾಗೆ ಬಂದು ಹೋಗಿಬಿಟ್ಟಳು. ಐದಾರು ವರ್ಷಗಳ ಪ್ರೀತಿ…. ಎರಡು ವರ್ಷಗಳ ಮದುವೆ, ನಂತರದ ಅಗಲಿಕೆ… ಈ ಎರಡು ವರ್ಷಗಳಲ್ಲಿ  ಅದೆಷ್ಟು ಬೆಳವಣಿಗೆಗಳು….. ಯಾವ ಆತ್ರದಲ್ಲೋ ಅವಳು ಗರ್ಭಿಣಿ ಆಗಬಹುದೇನೋ ಎನ್ನುವ ಮತ್ತೊಂದು ಸಂದಿಗ್ಧ… ಅಗಲಿಕೆಗೆ ಅದೊಂದೇ ಕಾರಣವಲ್ಲ ಅಂತ ಇಬ್ಬರಿಗೂ ಗೊತ್ತಿತ್ತು.

ಮುಂಚಿತವಾಗಿ ನಿರ್ಧರಿಸಿದ ಹಾಗೆ ಇಬ್ಬರೂ ಮತ್ತೆ ಸಿಕ್ಕಾಗ ಮದುವೆ, ಮಕ್ಕಳ ಬಗ್ಗೆ ಮಾತನಾಡಿಕೊಳ್ಳಬಾರದು. ತಮ್ಮಿಬ್ಬರ ಜೀವನಗಳು ಕಳಚಿದ ಗಾಳಿಪಟಗಳ ತರ ಇರಬೇಕೆಂದೇನೂ ಇಲ್ಲ ಅಂತ ಮನದಟ್ಟಾದಾಗ, ಆ ವಿಷಯಗಳು ಹತ್ತಿರಬರಬೇಕಾಗಿಲ್ಲ. ಸ್ವಲ್ಪ ಹೊತ್ತು ಹಾಯಾಗಿ ಕಳೆಯಬೇಕು. ಮತ್ತೆ ಆ ಹಾಯಾದ ಸಮಯಕ್ಕಾಗಿ ಕಾಯಬೇಕು. ಅಷ್ಟೇ ! ಈಗಿನವರೆಗೆ ಹಾಗೇ ನಡೆದು ಬಂದಿದೆ.

ಅವಳಿರುವ ಆ ಸ್ವಲ್ಪ ಹೊತ್ತು ಹಾಯಾಗಿರುತ್ತದೆ. ಅವಳು ಹೋದ ಮೇಲೆ ಸಹ ಅವಳ ನಗೆ ಆ ರೂಮಿನಲ್ಲಿ ಹರಡಿರುವ ಹಾಗೆ ಅನಿಸುತ್ತೆ. ಅದು ಬೇಕು ತನಗೆ ! ಬಹುಶಃ ಅವಳಿಗೂ ಬೇಕೆನೋ ! ಅದಕ್ಕೆ, ತಾನು ಇಷ್ಟಪಟ್ಟು ಮಾಡಿಕೊಂಡ ಎರಡನೆಯ ಮದುವೆಯ ನಂತರವೂ ತನ್ನ ಸ್ನೇಹವನ್ನು ಬಿಟ್ಟುಕೊಂಡಿಲ್ಲ. ಅವಳು ತನ್ನ ಸ್ನೇಹವನ್ನು ಬಿಟ್ಟಿಕೊಂಡಿದ್ದರೆ….. ಕೆಲ ಆಲೋಚನೆಗಳನ್ನು ತಡಗಟ್ಟುವುದು ಅಸಾಧ್ಯ.

“ ಹೋಗ್ಬೇಡ “ ಅಂತ ಹೇಳಬೇಕು ಅನಿಸಿದರೂ ಇಲ್ಲಿಯವರೆಗೆ ತಾನು ಯಾರನ್ನೂ ಹಾಗೆ ನಿಲ್ಲಿಸಿರಲಿಲ್ಲ, ಬರುವವರನ್ನಾಗಲಿ, ಹೋಗುವವರನ್ನಾಗಲಿ. ಅವಳದೆಷ್ಟು ಸಲ ಬಂದಿದ್ದಾಳೋ, ಹೋಗಿದ್ದಾಳೋ ! ಸತ್ಯ ಹೇಳಬೇಕಾದರೆ, ಖಚಿತವಾದ ತನ್ನ ಮೌನವೇ ಅವಳು ಬಂದಾಗಲೆಲ್ಲಾ ಹೋಗಲಿಕ್ಕೆ ಕಾರಣವೇನೋ !

ತಾನು ಯಾಕೆ ಹೀಗೆ ? ಇಷ್ಟು ನೀರವತೆ ತನಗೇ ಕೆಲಸಲ ಹೆದರಿಕೆಯಾಗುತ್ತೆ.  ಅವಳನ್ನು ಪ್ರಥಮ ಬಾರಿಗೆ ಭೇಟಿಯಾದಾಗ ಅವಳಿಂದ ತಾನು ಏನು ಬಯಸಿದ್ದನೋ ನೆನಪಿಲ್ಲ.

ಅವಳು ಹೇಳಿದ ಹಾಗೆ “ ನಿತ್ಯ ಹೆದರಿಕೆಗಳು”. ನಿಜ. ಆದರೆ ಈ ನಗರಕ್ಕೆ ಬರುವ ಮುನ್ನವೇ, ಈ ಕೆಲಸಕ್ಕೆ ಸೇರುವ ಮುನ್ನವೇ ಈ ಹೆದರಿಕೆಗಳು ತನ್ನಲ್ಲಿದ್ದವೇನೋ ! ಅವು ಹೈದರಾಬಾದಿಗೆ ಬಂದಮೇಲೆ ಮತ್ತಷ್ಟು ಜಾಸ್ತಿಯಾಗಿವೆ. ಮುಖ್ಯವಾಗಿ ಮನುಷ್ಯರು, ಗೆಳೆತನ, ಪರಿಚಯಗಳ ಅಪನಂಬಿಕೆಗಳಲ್ಲಿ ಬೆಳೆದ ಹೆದರಿಕೆ. ಇವೆಲ್ಲವನ್ನೂ ಮೀರಿ ತನಗೆ ತಾನೇ ಸೃಷ್ಟಿಸಿಕೊಂಡ ಭಯವಲಯ.

ಒಮ್ಮೆ ದಿನಚರಿಯಲ್ಲಿ ತನ ಭಯಗಳ ಪಟ್ಟಿ ಮಾಡಿದ್ದ.

ಮೊದಲನೆಯದು, ಈ ಜೀವನ ತನಗೆ ಏನೂ ಕೊಡುವುದಿಲ್ಲವೆಂದು. ಕೊಟ್ಟಹಾಗೆ ಮಾಡಿ ತಂದೆಯನ್ನು ಕಸಿದಿತ್ತು. ಇನ್ನೇನು ವಾಸಿಯಾಗಿದೆ, ಹೆದರಿಕೆ ಇಲ್ಲ ಎನ್ನುವ ಭರವಸೆಯಲ್ಲಿ ಮನೆಗೆ ತಂದ ಮೂರನೆಯ ದಿನವೇ ಅಪ್ಪ ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ಹಾಗೇನೇ, ಪ್ರಾಣಕ್ಕಿಂತ ಹೆಚ್ಚಾದ ಅಮ್ಮ ಸಹ…. ಕಡೇ ಕ್ಷಣದವರೆಗೂ ಅಮ್ಮ ಇಲ್ಲದ ಜೀವನದ ಕಲ್ಪನೆಯೇ ಇದ್ದಿಲ್ಲ ತನಗೆ.

ಎರಡನೆಯದು. ಈ ಸ್ನೇಹ, ಬಂಧಗಳು ಇವೆಲ್ಲ ಹತ್ತಿರವಾದಷ್ಟೂ ದೂರವಾಗಿ ನೋವು ಕೊಡುತ್ತವೆ ಅಂತ. ತಾನು ಚಿಕ್ಕವನಾದಂದಿನಿಂದ ನೋಡಿದರೆ ತನ್ನ ಜೊತೆ ಎಷ್ಟು ಜನ ಉಳಿದಿದ್ದಾರೆ ? ಇನ್ನೇನು ತುಂಬಾ ಹತ್ತಿರವಾದರು ಎನ್ನುವವರೆಲ್ಲ ನಿರ್ದಯವಾಗಿ ದೂರವಾಗಿದಾರೆ. ಅನೇಕ ಕಾರಣಗಳು. ಕೆಲವರ ಸಾವುಗಳು, ಕೆಲವರು ವಿದೇಶಗಳಿಗೆ ಹೋಗಿದ್ದು ಮತ್ತೆ ಕೆಲವರಲ್ಲಿ ಅಕಾರಣ ವೈರತ್ವಗಳು.

ಇನ್ನು ಮೂರನೆಯದು. ಅದು ಅತಿ ದೊಡ್ಡ ಭಯ. ಅವಳು ಅದೆಷ್ಟು ಹತ್ತಿರ ಬರುತ್ತಾಳೋ, ಅಷ್ಟು ದೂರವಾಗುತ್ತಾಳೆ ಅಂತ. ಆ ಅಗಲಿಕೆಗೆ ತಾನು ಎಂದೂ ಸಿದ್ದನಿರುವುದಿಲ್ಲ ಎಂದು. ಒಂದು ಮಾತಲ್ಲಿ ಹೇಳಬೇಕಾದರೆ ತನ್ನಲ್ಲಿಯ ಇದ್ದೂ ಇಲ್ಲದ ಭಯಗಳಿಗೆಲ್ಲ ಮಕುಟಾಯಮಾನ ಅವಳು.

ಅವಳು ಪ್ರಥಮಬಾರಿಗೆ ತನ್ನ ಜೀವನದಲ್ಲಿ ಬಂದಾಗ …. ತನಗೆ ಆಗಷ್ಟೇ ಬಣ್ಣಗಳ ಗುಟ್ಟು ತಿಳಿಯುತ್ತಿತ್ತು. ಕವನ ಬರೆಯುವುದು ಬಿಟ್ಟು ಬಣ್ಣಗಳಲ್ಲಿ ಅಡಗುವುದು ಶುರುವಾಗಿತ್ತು. ಅದು ಯಾವಾಗ….. ಡಿಗ್ರೀ ಮಾಡುವಾಗ… ಅಲ್ವಾ … ಹೌದು. ನಿಜವಾಗ್ಲೂ ಅಡಗುವುದೇ.

ಆಗಿಂದಲೂ ಅವಳು ಹಾಗೇ ಇದಾಳೆ. ತಾನೇ ಹಾಗೇ ಇಲ್ಲ ಅಂತ ತನಗೆ ಗೊತ್ತು. ಅವಳಿಗೆ ಮುಚ್ಚು ಮರೆ ಇಲ್ಲ. ತಾನು ಹೇಳಬೇಕೆನ್ನುವುದನ್ನು ಮುಖದಮೇಲೆನೇ ಹೇಳಿಬಿಡುತ್ತಾಳೆ. ಅವಳ ಎದುರಲ್ಲಿ ತಾನು ಎರಡು ಭಿನ್ನ ಲೋಕಗಳಲ್ಲಿ ಓಡಾಡಿದ ಹಾಗೆ ಇರುತ್ತದೆ. ಅವಳಿಗೆ ಎಲ್ಲವನ್ನೂ ಹೇಳಿಬಿಡಬೇಕೆನಿಸುತ್ತದೆ. ಏನೂ ಹೇಳಲು ಇಲ್ಲದ ಜೀವನ ಅಂತಲೂ ಅನಿಸುತ್ತದೆ. ಕವನ ಬಿಟ್ಟದ್ದೇ ಮಾತಿನ ಮೇಲೆ ನಂಬಿಕೆಯೋ ಮತ್ತೊಂದೋ ಕಳೆದುಕೊಂಡಾಗ!

ಇನ್ನೂ ಆ ಮಾತುಗಳಲ್ಲಿ ತಾನೇನೂ ಹೇಳಲಿಕ್ಕೆ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಹಾಗೆ ಇರುತ್ತಾನೆ ತಾನು.

ಮತ್ತೆ ಇವತ್ತು ಬರುತ್ತಾಳೆ ಅವಳು.

ಈ ಒಬ್ಬಂಟಿ ಕೋಣೆಯನ್ನು ಅವಳಿಗೋಸ್ಕರ ಸ್ವಲ್ಪ ಸ್ವಚ್ಛ ಮಾಡಬೇಕೆಂದು ಅನಿಸುತ್ತೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ  ಪುಸ್ತಕಗಳು, ಹಾಸಿಗೆ ಮೇಲೆ ಹರಡಿಕೊಂಡಿದ್ದ ಹೊದಿಕೆ, ದಿಂಬುಗಳು, ಕಿಚೆನ್ ನಲ್ಲಿಯ ನಾತ. ಯಾಕೆ ತೂಗೊಂಡಿದಾನೋ ಗೊತ್ತಿಲ್ಲದ ಡ್ರೆಸಿಂಗ್ ಟೇಬಲ್ ಮೇಲಿನ ಧೂಳು ಎಲ್ಲಾ ಸ್ವಚ್ಛ ಮಾಡಿ, ತಾನೂ ಸ್ನಾನ ಮಾಡಿ ಕೂರಬೇಕೆಂದು ಅಂದುಕೊಳ್ಳೋದು…

ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾಳೆ ಅವಳು. ಅವಳು ಹೊತ್ತು ತರುವ ಪರಿಮಳ, ಮಿಂಚಿನಂತಿರುವ ನಗೆ, ಕೆಲ ಮಾತುಗಳು…. ತನಗೆ ಸದಾ ಬೇಕು. ಮತ್ತೆ ಕೆಲ ಸಮಯದಲ್ಲಿ ಬರುತ್ತಾಳೆ. ಅವೆಲ್ಲ ಅವಳ ಜೊತೆಯಾಗಿ ಬರುತ್ತವೆ. ಹೊರಟುಹೋಗುತ್ತವೆ. ನಂತರ ಬರೀ ತಾನೂ, ತನ್ನ ಬಣ್ಣಗಳ ಶಿಥಿಲಗಳು.

ಬೇಸಿಗೆಯ ರಜೆಯಲ್ಲಿ ಮೊದಲನೆಯ ಸಲ ಹಾಗೆ ಬಂದಿದ್ದಳು ಅವಳು !

ಆ ರಜೆಗಳಲ್ಲಿ ವಾನ್ ಗೋಗ್ ನ ಜೀವನ ಚರಿತ್ರೆ “ ಲಸ್ಟ್ ಫರ್ ಲೈಫ್ “ ಅವಳು ತಂದು ಕೊಟ್ಟದ್ದೇ ! ನಂತರ ಸಹ ಅವಳು ಯಾವುದೋ ಒಂದು ತಂದುಕೊಡುತ್ತಲೇ ಇದ್ದಾಳೆ. ಕೊಡುವುದು ಎಂದರೆ ಅವಳೇ ! ತಾನು ಇಲ್ಲಿಯವರೆಗೆ ಅವಳಿಗೆ ಏನನ್ನೂ ಕೊಟ್ಟಿಲ್ಲ. ಕೊನೆಗೆ ಅವಳ ಮದುವೆಯಲ್ಲಿ ಸಹ.

ಅವಳು ಸಹ ಏನೂ ಕೇಳಿದ್ದಿಲ್ಲ. ಕೆಲ ಪ್ರಶ್ನೆಗಳನ್ನು ಬಿಟ್ಟು !

ಅವಳು ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾಳೋ ತಾನು ಅವುಗಳಲ್ಲಿ ಎಷ್ಟಕ್ಕೆ ಉತ್ತರಿಸಿದ್ದಾನೋ ತನಗೆ ಚೆನ್ನಾಗಿ ನೆನಪು.

ಅವಳೂ, ತಾನೂ ಮತ್ತೆ ಮದುವೆಯ ನಂಟಿನಲ್ಲಿ ಒಂದಾಗುತ್ತೇವೆ ಅಂತ ಅಮ್ಮ ಮಾತ್ರ ಕಡೆಯ ತನಕ ಹಾದಿಕಾಯುತ್ತಲೇ ಇದ್ದಳು. “ ನೀವಿಬ್ಬರು ಜೊತೆಯಲ್ಲಿರುವಾಗ ನೀನು ತುಂಬಾ ಸಂತೋಷವಾಗಿ ಕಾಣುತ್ತೀ ಕಣೋ “ ಎನ್ನುತಿದ್ದಳು ಅಮ್ಮ. ಅದೇ ಮಾತು ಒಮ್ಮೆ ಅವಳೆದುರಲ್ಲಿ ಕೂಡ ಅಂದಿದ್ದಳು.

“ ನಿಜವಾಗ್ಲೂ ಜೊತೆಗೆ ಇದ್ದರೆ ಅಷ್ಟು ಸಂತೋಷವಾಗಿ ಇರೋದಿಲ್ವೇನೋ ಅಮ್ಮಾ “ ಅಂತ ಆಮೇಲೆ ತಾನು ಅಂದಾಗ ಅಮ್ಮ ಹೊಡೆಯಲು ಬಂದಿದ್ದಳು.

ಅವಳು ಹತ್ತು ವರ್ಷಗಳಿಂದ ಹಾಗೇ ಇದ್ದಾಳೆ ಕನಸಿನಲ್ಲಿ ಇದ್ದ ಹಾಗೆ. ಅವಳಿಗೂ ತನ್ನ ಹಾಗೇ ಹೆದರಿಕೆಗಳಿವೆಯೇನೋ ? ಗೊತ್ತಿಲ್ಲ. ಕೇಳಬೇಕೆಂದು ಸಹ ಅನಿಸಿರಲಿಲ್ಲ. ಕೇಳಲಿಕ್ಕೆ ಭಯವೊಂದೇ ಅಲ್ಲ. ಈ ನಮ್ಮ ಸ್ನೇಹದಲ್ಲಿದ್ದ ಯಾವುದೋ ಜಾದೂ ಮಾಯವಾಗುತ್ತದೆ ಅಂತ ಇಬ್ಬರಿಗೂ ಇರಬಹುದೇ ?

ಒಂದು ಸಂಜೆ, ಅವಳು ಬಂದು ಹೋದ ಮೇಲೆ- ದಿನಚರಿ ತೆಗೆದು ಏನೋ ಬರೆಯಬೇಕು ಅಂತ ಎಣಿಸಿದ್ದ. ಆದರೆ ಬರೆಯಲಿಲ್ಲ. ಬರೆಯಲಾಗಲಿಲ್ಲ. ದಿನಚರಿ ಆಚೆಗೆ ಬಿಸಾಡಿ, ಹಿಂದಕ್ಕೆ ಮಲಗಿ ಹಾಗೇ ಇದ್ದುಬಿಟ್ಟಿದ್ದ. ಆವತ್ತು ರಾತ್ರಿ ಕಾನ್ವಾಸ್ ಮೇಲೆ ಮತ್ತೊಂದು ಶಿಥಿಲ ದೃಶ್ಯವನ್ನು ಚಿತ್ರಿಸಿದ್ದ. ಕೆಲ ಶಿಥಿಲಗಳ ನಡುವಿನಿಂದ ಒಬ್ಬ ಹೆಣ್ಣು ಎಲ್ಲಿಗೋ ಹೋಗುತ್ತಿದ್ದಾಳೆ ಕುಸಿಯುತ್ತಿದ್ದ ಗೋಡೆಗಳ ಕಡೆಗೆ, ತನ್ನ ಮುಖ ಈ ಲೋಕಕ್ಕೆ ತೋರಿಸದೇ !

ಈ ಶಿಥಿಲಗಳ ಬಣ್ಣಗಳ ನಡುವೆ ಅವಳು ಹಚ್ಚಹಸುರಿನ ಸೀರೆಯಲ್ಲಿ…. ಆ ಎರಡು ಬಣ್ಣಗಳ ಕಾಂಟ್ರಾಸ್ಟ್ ಅವನನ್ನು ಯಾವಾಗಲೂ ಕಾಡುತ್ತಿರುತ್ತೆ.

ಆ ದಿನ ಅವಳು ಅವನಿಗೆ ಹೇಳದೇ ಗುಟ್ಟಾಗಿರಿಸಿದ ವಿಷಯ ಒಂದಿದೆ. ಹೇಳಬೇಕೆಂದು ತುಟಿಯವರೆಗೂ ಬಂದರೂ ಆ ಮಾತಿನ ಸುತ್ತ ನಡೆಯುವ ಚರ್ಚೆ ಅವಳಿಗೆ ಇಷ್ಟವಾಗದೇ ಸುಮ್ಮನಾಗಿದ್ದಳು.

“ ಮದುವೆಯ ಬಂಧನದಲ್ಲಿರುವ ಅನಿಶ್ಚಿತತೆಗಿಂತ, ಹೀಗೆ ಮುಂದುವರೆಯುತ್ತಿದ್ದ ಈ ಸಂಬಂಧ… ಯಾವ ಆಶೆ ಅಪೇಕ್ಷೆಗಳಿಲ್ಲದ ಈ ಸಂಬಂಧದಲ್ಲಿರುವ ಅನಿಶ್ಚಿತತೆಯೇ ಲೇಸು. ವೈವಾಹಿಕ ಬಂಧನದಲ್ಲಿನ ಕಟ್ಟಳೆ ನೀನು ಈಗ ಚಿತ್ರಿಸುತ್ತಿದ್ದ ಈ ಶಿಥಿಲಗಳ ಬಣ್ಣದ ಹಾಗೆ ಕಾಣುತ್ತೆ ನನಗೆ “

ಕೊನೆಯ ಸಲ ಆಸ್ಪತ್ರಿಗೆ ಕರೆದೊಯ್ಯುವಾಗ – ಅಮ್ಮ ಸಹ ಅದೇ ಹಸಿರು ಸೀರೆ ಉಟ್ಟಿದ್ದಳು. ಅಂದು ಅಮ್ಮನನ್ನು ಆಸ್ಪತ್ರಿಯಲ್ಲಿ ಬಿಟ್ಟು ತಾನು ಆಫೀಸಿಗೆ ಹೊರಡುವಾಗ ಅಮ್ಮ ತುಂಬಾ ಹಾಯಾಗಿ ನಕ್ಕಿದ್ದಳು. ತುಂಬಾ ಹಾಯಾಗಿ, ಸ್ಚೇಚ್ಛೆಯಾಗಿ ನಕ್ಕಿದ್ದಳು. ಅಮ್ಮ ಯಾವಾಗಲೂ ನಗೋದು ಹಾಗೇನೇ. ಆದರೆ ಅಂದಿನ ಆ ನಗೆಯನ್ನು ಬಿಟ್ಟು ಹೋಗಬೇಕೆಂದು ಅನಿಸಲಿಲ್ಲ.

ಅಮ್ಮನ ಹತ್ತಿರವೇ ಇರಬೇಕು ಎನಿಸಿತ್ತು. ಆಗಲೇ ಫೋನ್ “ ನೀನು ಬರುತ್ತಿದ್ದೀ ತಾನೇ ! ಇವತ್ತು ಡೆಡ್ ಲೈನ್ ಮಾರಾಯಾ ! ಮರೀಬೇಡ !” ಅಂತ. “ ಇಲ್ಲ…. “ ಅನ್ನ ಬೇಕಂತ ಬಾಯಿಯ ವರೆಗೂ ಬಂದಿತ್ತು. ಯಾಕೆ ಅನ್ನಲಿಲ್ಲವೋ ಗೊತ್ತಾಗಲಿಲ್ಲ.

ಅಂದು ಅಮ್ಮನ ಹತ್ತಿರ ಇರಬೇಕಾಗಿತ್ತು. … ಅವಳ ಕೊನೆಯ ಮಾತು ಕೇಳಿರ ಬಹುದಿತ್ತು. “ ಜಾಗ್ರತೆಯಾಗಿರಲು ಹೇಳಮ್ಮಾ ಅವನಿಗೆ “ ಎನ್ನುತ್ತ ನರ್ಸಿನ ಹತ್ತಿರ ಆಣೆ ಹಾಕಿಸಿ ಹೋಗಿಬಿಟ್ಟಿದ್ದಳು ಅಮ್ಮ ! ಆ ಮಾತು ತನಗೆ ಹೇಳುವಾಗ ನರ್ಸಿನ ಕಣ್ಣಲ್ಲಿ  ತೆಳುವಾದ ನೀರಿನ ಪೊರೆ.

ಅಂದಿನ ಸಂಜೆ ಅಮ್ಮ ಹೋಗಿಬಿಟ್ಟಿದ್ದಳು. ನಂತರ ತನಗೂ ಈ ಜಗತ್ತಿಗೂ ಸಂಬಂಧವೇ ಹೊರಟುಹೋಗಿತ್ತು. ಹೌದು. ಹೈದರಾಬಾದಿನ ಬದುಕಿಗೆ ಮುಂಚೆ ತನಗೆ ಭಯವು ಗೊತ್ತಿರಲಿಲ್ಲ.

“ ಒಬ್ಬನೇ ಆ ಹಾಳು ಗುಡ್ಡಗಾಡುಗಳ, ಕೋಟೆಗಳ ನಡುವೆ ಸುತ್ತುತ್ತಾ ಇರುತ್ತೀಯ ಹೊತ್ತಾದಮೇಲೂ ! ಯಾಕೆ ಹಾಯಾಗಿ ಮನೆ ಹತ್ತಿರ ಇರಬಾರದೇ “

ಅಮ್ಮನ ಎಚ್ಚರಿಕೆಯ ಮಾತು ಸದಾ ಕೇಳಿಸುತ್ತಲೇ ಇರುತ್ತದೆ…

ಎತ್ತರದ ಆ ಕೋಟೆಗೋಡೆಗಳೇ ತನಗೆ ದೊಡ್ಡ ಅಬ್ಸೆಷನ್…. ಆ ಗೋಡೆಗಳ ನಡುವಿನ ಬೆಟ್ಟಗಳು ಸಹ…. ಒಂದು ಸಂಜೆ ಅಲ್ಲಿಂದ ವಾಪಸ್ ಬರುವಾಗ ತುಂಬಾ ತಡವಾಗಿತ್ತು. ಕತ್ತಲೆಯಾಗಿತ್ತು. ಕೋಟೆಯೊಳಗಿನ ಯಾವುದೋ ಗುಡ್ಡದ ಮೇಲೆ ಕೂತು ಮೈಮರೆತಿದ್ದ. ಎಚ್ಚರಿಕೆ ಬಂದು ಸುತ್ತಲೂ ನೋಡುವಾಗ ಕತ್ತಲೆಯಾಗಿತ್ತು. ಸಲ್ಪ ಭಯವಾಯಿತು. ಬೇಗಬೇಗ ಮೆಟ್ಟಿಲು ಇಳಿಯುತ್ತಿದ್ದ. ಅಲ್ಲಿಯ ಮೆಟ್ಟಿಲು ತುಂಬಾ ಅಗಲ. ಬೀಳುತ್ತೇನೆನ್ನುವ ಹೆದರಿಕೆ ಇಲ್ಲ. ಆದರೇ ಕೆಲ ಮೆಟ್ಟಿಲು ನುಣ್ಣಗಿದ್ದವು. ಆ ಕತ್ತಲಲ್ಲಿ ಬೆಳದಿಂಗಳು ಅವುಗಳ ಮೇಲೆ ಬಿದ್ದು ಒದ್ದೆಯಿಂದ ಹೊಳೆಯುತ್ತಿದ್ದವು. ಬೇಗ ಮನೆಗೆ ಸೇರಬೇಕೆನ್ನುವ ಆತರದಲ್ಲಿ ಕೊನೆಯ ಮೆಟ್ಟಿಲ ಹತ್ತಿರ ಬಿದ್ದುಬಿಟ್ಟಿದ್ದ. ಅಷ್ಟೇನೂ ಪೆಟ್ಟಾಗಿರಲಿಲ್ಲ. ಆದರೆ ತನಗಿಂತ ಜಾಸ್ತಿ ಅಮ್ಮನಿಗೆ ಹೆದರಿಕೆಯಾಗಿತ್ತು. ತನ್ನ ಮುಂದಿನ ಜೀವನದ ಸಂಕೇತವೆನಿಸಿತ್ತು ಅವಳಿಗೆ.

“ ನೀನೊಬ್ಬನೇ ಎಲ್ಲಿಗೂ ಹೋಗಬೇಡ. ನಿನಗೆ ಮೈಮೇಲೆ ಜ್ಞಾನವಿರುವುದಿಲ್ಲ. ನಿನಗೆ ಭಯ, ಜಾಗ್ರತೆ ಹೇಗೆ ಕಲಿಸಬೇಕೋ ನನಗೆ ಗೊತ್ತಾಗುತ್ತಿಲ್ಲ “ ಎನ್ನುತ್ತಾ ಕಣ್ಣಲ್ಲಿ ನೀರು ಹಾಕಿದ್ದಳು ಅಮ್ಮ. 

ಆಗ ಅನಿಸಿತ್ತು, ಅಪ್ಪ ಇದ್ದಿದ್ದರೆ ಮತ್ತೊಂದು ತರ ಇರುತ್ತಿತ್ತಾ ?

ತಾನೂ ಅಪ್ಪನ ತರಾನೇ ! ತಾನು ಸಹ ಅಪ್ಪನ ತರ ಎಲ್ಲರನ್ನೂ ಅಗಲಿ, ಸಾವಿನ ಜೊತೆ ಹೋಗಿ ಬಿಡುತ್ತೇನೇನೋ ಎನ್ನುವ ಪ್ರಶ್ನೆ ಅಮ್ಮನ್ನ ಸದಾ ಕಾಡಿರಲಕ್ಕೂ ಸಾಕು. ಆದರೆ ಅಮ್ಮ ತನ್ನ ಭಯವನ್ನು ಎಂದೂ ಅಷ್ಟು ಸುಲಭವಾಗಿ ಹೊರಹಾಕಿದವಳಲ್ಲ. ಮಗನಿಗೆ ಧೈರ್ಯ ಮಾತ್ರ ಗೊತ್ತಾಗಬೇಕು ಎನ್ನುವ ತವಕದಿಂದ- ಅಪ್ಪ ಇಲ್ಲ ಎನ್ನುವ ಭಾವನೆಯೇ ಬರದ ಹಾಗೆ ತನ್ನನ್ನು ತನ್ನ ಕಣ್ರೆಪ್ಪೆಯ ತರ ನೋಡಿಕೊಂಡಿದ್ದಳು. ಅಪ್ಪನ ಅಕಾಲ ಮರಣದ ನಂತರ ಆ ಕೊರತೆಯನ್ನು ತುಂಬಲು ಅಮ್ಮ ತನ್ನ ಮೇಲೆ ಇಲ್ಲದ ಮಮಕಾರ ಬೆಳೆಸಿಕೊಂಡಿದ್ದಳೇನೋ ಅಂತ ತನಗೆ ಅನಿಸುತ್ತಿತ್ತು.

ಹಾಗಿದ್ದ ಅಮ್ಮ…. ಬಹುಶಃ ತಾನು ಹೊರಗೆ ಚೆನ್ನಾಗಿದ್ದ ಹಾಗೆ ಕಾಣುತ್ತಾ ಆ ಕೊರತೆಯ ಬಗ್ಗೆ ತನ್ನೊಳಗೇ ಶಿಥಿಲವಾಗುತ್ತಾ ಇದ್ದಳೇನೋ ! ಕೊನೇ ದಿನಗಳಲ್ಲಿ ಅವಳಲ್ಲಿ ಸ್ವಲ್ಪ ನಿತ್ರಾಣ, ಸ್ವಲ್ಪ ಸ್ತಬ್ದತೆ ಬಂದಿದ್ದವು.

ಮೊದಲನೆಯ ಸಲ ಮಾರಾಟವಾದ ತನ್ನ ಬಣ್ಣದ ಚಿತ್ರದ ಸಂಪಾದನೆ ಕೊಡುವಾಗ ಅಮ್ಮನ ಕಣ್ಣಿನಲ್ಲಿ ಕಂಡ ಹೊಳಪು ತಾನೆಂದೂ ಮರೆಯುವುದಿಲ್ಲ.

ಆ ಕ್ಷಣ ತನಗನಿಸಿತ್ತು, ಈ ತರದ ಮಿಂಚುಗಳು ಇನ್ನೂ ನೋಡಬೇಕು ಅವಳ ಕಣ್ಣಲ್ಲಿ ಅಂತ ! ಆದರೇ ಜೊತೆಗೆ ಯಾವುದೋ ದಿಗಿಲು ಆವರಿಸಿತ್ತು. ಯಾವುದೋ ಪರಿಸ್ಥಿತಿ ಸಂಭವಿಸಿ, ತನ್ನ ಈ ಚಿತ್ರಗಳು ಸಹ ತನ್ನನ್ನು ಬಿಟ್ಟು ಹೋಗುತ್ತವೆ ಎಂದು. ತನ್ನ ಹತ್ತಿರ ಯಾರೂ, ಏನೂ ಉಳಿಯುವುದಿಲ್ಲ ಅಂತ ಅನಿಸಿತ್ತು. ಎಲ್ಲರೂ ಹೋಗಬೇಕಾದವರೇ ದೂರ ದೂರ ಬಹು ದೂರ !

ಈಗ ಇವಳ ಬಗ್ಗೆ ಸಹ ಅದೇ ಹೆದರಿಕೆ ! ಸ್ವಲ್ಪ ಹತ್ತಿರವಾದರೂ ದೂರವಾಗುತ್ತಾಳೇನೋ ಎನ್ನುವ ಹೆದರಿಕೆ , ಅಭದ್ರತಾ ಭಾವ ! ಹತ್ತಿರವಾದವರು ಯಾವ ಕಾರಣಕ್ಕಾದರೂ ದೂರವಾದಾಗ ಆಗುವ ಶೂನ್ಯ ! ಅದು ದೊಡ್ಡ ಹೆದರಿಕೆ !

ಕನಸಿನ ಯಾವುದೋ ದೃಶ್ಯವನ್ನು ಹಿಡಿದು ನೇತಾಡುತ್ತಿದ್ದ ಅಂದು ! ಅದೇ ಕೋಟೆ… ಸಣ್ಣನ ತುಂತುರು. ಕಲ್ಲು ಬಂಡೆಗಳ ಮೇಲೆ ಮಳೆಹನಿ ಬಿದ್ದಾಗಿನ ಬಣ್ಣ ತುಂಬಾ ಸುಂದರ. ಆ ಬಣ್ಣವನ್ನು ತಾನು ಕಾನ್ವಾಸ್ ಮೇಲೆ ಹಿಡಿದಿಡಬೇಕು ! ಆ ಹನಿಗಳ ನಡುವಿನಿಂದ ಒಂದು ನೆರಳು….. ಅವಳು !

ಅದೇ ಕನಸು. ಅವೇ ಬಣ್ಣ ಬೇಕು ತನಗೆ.

ಅವಳು ಬಂದು ಹೋಗುತ್ತಾ…. ಕನಸಿನಲ್ಲಲ್ಲ… ಕನಸಿನಲ್ಲಂತೆಯೇ ತಿಂಗಳಲ್ಲಿ ಯಾವತ್ತೋ ಒಮ್ಮೆ ಬರುತ್ತಾಳೆ. ಅವಳು ಬಂದ ದಿನ ತನ್ನ ಜೀವನದಲ್ಲಿ ಆ ದಿನಕ್ಕೆ ಒಂದು ಮಿಂಚು… ಒಂದು ಹೊಳಪು… ಒಂದು ಚಲನೆ.

ತಾನು ಯಾವತ್ತೂ ಕೇಳಿರಲಿಲ್ಲ. ಇದಕ್ಕಿಂತ ಇನ್ನೇನು ಬೇಕು ಅಂತ !

ತಾನು ಏನಾದರು ಕೇಳುತ್ತಾನೇನೋ ಎನ್ನುವ ಕಾತರ ಅವಳಿಗಿಲ್ಲ. ಅವಳು ಮತ್ತೆ ಮದುವೆಯಾಗಿದಾಳೋ, ಮಕ್ಕಳಾಗಿವೆಯೋ, ಏನು ಮಾಡುತ್ತಿದ್ದಾಳೋ ಏನೂ ಮಾಡುತ್ತಾ ಇಲ್ಲವೋ ತನಗೇನೂ ತಿಳಿಯದು. ಯಾವತ್ತೂ ಕೇಳಿದ್ದಿಲ್ಲ.

ಅವಳು ಬರುತ್ತಾಳೆ. ಸ್ವಲ್ಪ ಹೊತ್ತು ಇರುತ್ತಾಳೆ. ಕೆಲ ಮಾತುಗಳು. ತುಂಬಾ ಹೊತ್ತಿನ ನಿಶಬ್ದ. ಸಾಧ್ಯವಾದರೆ ಒಂದು ಚಹಾ !

ಮಂಚದಿಂದ ಎದ್ದು, ಕನ್ನಡಿಯ ಮುಂದೆ ನಿಂತ.

ಕನ್ನಡಿಯಲ್ಲಿ ಅವಳು—ಕಂಡೂ ಕಾಣದ ನೆರಳು .

ಅವಳು ಮಾತ್ರ ನಿಜ ಅಂತಲ್ವಾ ತನ್ನ ನಂಬಿಕೆ… ಅಲ್ಲವಾ ?

****************************************************************************************

2 thoughts on “ಬಂದು ಹೋಗುವ ಮಳೆಯಲ್ಲಿ

  1. ‘ ಬಂದು ಹೋಗುವ ಮಳೆಯಲ್ಲಿ’ ಕತೆಯಲ್ಲಿ ಮಾನವೀಯ ಸಂಬಂಧಗಳ ಅತಿ ನಾಜೂಕು ( fragile) ಸ್ವರೂಪದ ದರ್ಶನವಿದೆ.ಇದರಿಂದಾಗಿ, ಕತಾನಾಯಕ ಸದಾ emotional insecurity ( ಭಾವನಾತ್ಮಕ ಅಭದ್ರತೆ) ಯನ್ನು ತೀವ್ರವಾಗಿ ಅನುಭವಿಸುತ್ತಾನೆ. ‘ ಅದಕ್ಕೆ ಕಾರಣಗಳೂ ಇವೆ. ಹೈದರಾಬಾದ್ ಶಹರಿಗೆ ಬಂದ‌ ಮೇಲೆ ಸಂಭವಿಸಿದ ತಂದೆಯ ಅಕಾಲಿಕ ಮರಣ ಹಾಗೂ ತನ್ನ ಮೇಲೆ ಮಮತೆಯ ಮಳೆಗರೆವ ತಾಯಿಯ ಆಕಸ್ಮಿಕ ನಿನ್ನ, ಈ ಎಲ್ಲ ಘಟನೆಗಳಿಂದಾಗಿ , ಅವನಲ್ಲಿ ಶಹರಿನ ಬಗ್ಗೆ ಕಹಿ ಭಾವನೆ ಹಾಗೂ ತಾತ್ಸಾರ ಮೂಡುತ್ತದೆ.
    ಇಂತಹ ದುಗುಡ ಅವನನ್ನು ಆವರಿಸಿದಾಗ, ‘ ಅವಳ’ ಜೊತೆ ಕಳೆಯುವ ಸಮಯ ಅವನಿಗೆ ಮುದ ನೀಡುತ್ತದೆ. ಯಾವ ಷರತ್ತುಗಳು ಇಲ್ಲದ ಮುಕ್ತ ಸಂಬಂಧವದು.
    ಅವನಿಂದ ಯಾವ ಕಮಿಟ್ಮೆಂಟ್ ಸಾಧ್ಯವಿಲ್ಲ.
    ‘ ಅವಳು’ ಅವನ ಜೊತೆ ಸ್ವಲ್ಪ ಸಮಯ ಇರುತ್ತಿದ್ದದ್ದು ನಿಜವೋ ಅಥವಾ ಅವನ ಗಾಢವಾದ ಕಲ್ಪನೆಯ ಪರಿಣಾಮವೋ? ಎಂಬ ಸಂದಿಗ್ಧ ಕತೆಯ ಕೊನೆಯವರೆಗೆ ಸಾಗಿ, ಕತೆಯ ನಿಗೂಢತೆಯನ್ನು ಹಿಡಿದಿಡುತ್ತದೆ.
    ತೆಲುಗು ಮೂಲ ಕತೆಯನ್ನು ರಮೇಶ್ ಬಾಬು ಅವರು ಸಮರ್ಥವಾಗಿ ಕನ್ನಡೀಕರಿಸಿ, ಕತೆಗೆ ಹೊಸ ಚೈತನ್ಯ ನೀಡಿದ್ದಾರೆ. ಹಾರ್ದಿಕ ಅಭಿನಂದನೆಗಳು

Leave a Reply

Back To Top