ಗಜಲ್
ಎ. ಹೇಮಗಂಗಾ
ಪ್ರಾಣದಂತೆ ಪ್ರೀತಿಸಿದವನ ಪ್ರೀತಿ ಶೂನ್ಯವಾದ ಕಾರಣ ತಿಳಿಯಲಿಲ್ಲ
ನಗೆ ಹೂ ಅರಳಿಸಿದವನ ಮೊಗ ಬಿಗುವಾದ ಕಾರಣ ತಿಳಿಯಲಿಲ್ಲ
ಹಗಲಿರುಳ ಒಡನಾಟದಲಿ ಕಾಲ ಸರಿದುದೇ ಅರಿವಿಗೆ ಬರಲಿಲ್ಲ
ವಿಳಂಬದ ಭೇಟಿಗಳಿಗೆ ನೂರು ನೆಪ ಹೇಳಿದ ಕಾರಣ ತಿಳಿಯಲಿಲ್ಲ
ಕಾಡಿಸಿ ರಮಿಸಿದ ರಸಘಳಿಗೆಗಳ ಮರೆವುದಾದರೂ ಹೇಗೆ
ಇದ್ದರೂ ಇಲ್ಲದಂತೆ ಜೊತೆಯಾಗಿ ನಡೆದ ಕಾರಣ ತಿಳಿಯಲಿಲ್ಲ
ಉಕ್ಕಿನಂಥ ತೆಕ್ಕೆಯಲಿ ಬಂಧಿಸಿ ಸುಖದಿ ನರಳಿಸಿ ನಲಿಸಿದವನು
ಹತ್ತಿರವಿದ್ದೂ ಸೋಕದಂತೆ ಜಾಗ್ರತನಾದ ಕಾರಣ ತಿಳಿಯಲಿಲ್ಲ
ಕಣ್ಣಲ್ಲಿ ಕಣ್ಣ ಕೀಲಿಸಿ ಮುತ್ತಿನ ಮೊಹರ ಒತ್ತಿದುದೆಷ್ಟು ಬಾರಿ?
ದಿಟ್ಟಿ ಎತ್ತಲೋ ನೆಟ್ಟು ಉಪೇಕ್ಷೆ ತೋರಿದ ಕಾರಣ ತಿಳಿಯಲಿಲ್ಲ
ಅವನೊಲವೇ ಉಚ್ಛ್ವಾಸ ನಿಶ್ವಾಸಕೆ ಪ್ರಾಣವಾಯುವಾಗಿತ್ತು
ಪ್ರಶ್ನೆಗಳ ಬಲೆಯಲ್ಲಿ ಉಸಿರುಗಟ್ಟಿಸಿದ ಕಾರಣ ತಿಳಿಯಲಿಲ್ಲ
ಭರವಸೆಯ ಬೆಳಕು ಹೇಮ ಳಿಗೆ ಶಾಶ್ವತ ಮರೆಯಾಯಿತು
ಮಣ್ಣ ಸೇರಿದವಳ ಅರೆಕ್ಷಣವೂ ನೋಡದ ಕಾರಣ ತಿಳಿಯಲಿಲ್ಲ
**************************