ಕವಿತೆ
ಸಂಕ್ರಾಂತಿ ಬೆೇಕಿದೆ
ಹಸಿದು ಉಸಿರು ಹಿಡಿದು
ಬದುಕುತ ಅಳುವ
ಮಗುವಿಗೆ ಹಾಲುಣಿಸಲು
ಮಮತೆಯ
ಸಂಕ್ರಾಂತಿ ಬೇಕಿದೆ
ಧಾನ್ಯ ಭೊಗಸೆಯಲಿಟ್ಟು
ಬತ್ತಿದ ಹೊಟ್ಟೆ
ಬಡಬಾಗ್ನಿಯಲಿ
ಬೇಯುವ ಮನುಜಗೆ
ಮಾನವೀಯತೆಯ
ಸಂಕ್ರಾಂತಿ ಬೇಕಿದೆ
ಅಕಾಲ ವೃಷ್ಟಿಗೆ
ಎದೆಒಡ್ಡಿ ಕಾಳು
ಹೆಕ್ಕಲು ಕಣ್ಣೀರಿಕ್ಕುವ
ನೇತ್ರ ಇಂಗಿದ
ಮನುಕುಲಕೆ
ಬೇಕಿದೆ ಸಂಕ್ರಾಂತಿ
ಸಂಕ್ರಾಂತಿ ಬೇಕಿದೆ
ನೆಲಕಚ್ಚಿದ ನೆಗಿಲ
ಉಸಿರು ಹಸಿರಾಗಿಸಿ
ಗುಡಿಸಲುಗಳು
ಗುಡಿಯನುವ
ಹೃದಯತೆಯ ಸಂಕ್ರಾಂತಿ
ಸಂಕ್ರಾಂತಿ ಬೇಕಿದೆ
ಖಾದಿ ಖಾಕಿ ಕಾವಿಯತೊಟ್ಟು
ಕಪಟತೆಯ ಕೈಯಲ್ಲಿ
ಚೀಲ ತುಂಬುವ
ಭಕ್ಷಕರ ಆತ್ಮಸಾಕ್ಷಿಗೆ
ಸಂಕ್ರಾಂತಿ ಬೇಕಿದೆ
ಬಾಳುನೀಡುವ
ಭಾಗ್ಯದಾತೆಯ
ಬರಿಮೈಯಾಗಿಸಿ
ರಕ್ತ ಹೀರುವ
ರಾಕ್ಷಸರ ಸಂಹಾರಕ್ಕೆ
ಸಂಕ್ರಾಂತಿ ಬೇಕಿದೆ
ಅಪರಿಮಿತ ಬುದ್ಧಿ ಶಕ್ತಿಯ
ಅಡವಿಟ್ಟು ಆಮಿಷಕೆ
ಅಣು ರೇಣು ತೃಣ ಕಾಷ್ಟಗಳು
ಕ್ಷಣ ಮಾತ್ರದಲಿ
ಭಸ್ಮವೀಯುವ
ಕ್ರೊರತೆಗೆ
ಸಂಕ್ರಾಂತಿ ಬೇಕಿದೆ
ಮನದ ವ್ಯಾಪಾರಕೆ
ಮನುಜ ಕುಲ
ವಿಕ್ರಯಿಸುವ
ಅಮಾನುಶತೆಗೆ
ಬೇಕಿದೆ ಸಂಕ್ರಾಂತಿ
ಸಂಕ್ರಾಂತಿ ಬೇಕಿದೆ
ಬದುಕ ಬೇರೆನಿಪ
ನೆಲ ಜಲ
ಮರ ಗಿಡ ಪಶು ಪಕ್ಷಿಗಳ
ಕೊಗಿಗೆ ದನಿ ಎನಿಪ ಸಂಕ್ರಾಂತಿ
ಸಂಕ್ರಾಂತಿ ಬೇಕಿದೆ
ಮನುಜಕುಲಕೆ ಬೇಕಿದೆ
ಪ್ರೀತಿ ವಾತ್ಸಲ್ಯ
ಮಾನವೀಯತೆಯ
ಸಂಕ್ರಾಂತಿ
ಸಂಕ್ರಾಂತಿ ಬೇಕಿದೆ
*********************************************
ಶಾಂತಲಾ ಮಧು