ಅಂಕಣ ಬರಹ
ರುದ್ರಭೂಮಿಯಲೇ
ಜ್ಞಾನೋದಯ
ಅಲ್ಲಮಪ್ರಭು ಭಾರತೀಯ ದಾರ್ಶನಿಕ ಚರಿತ್ರೆಯಲ್ಲಿ ಬಹಳ ದೊಡ್ಡ ಹೆಸರು. ಹನ್ನೆರಡನೆಯ ಶತಮಾನದ ಬಹುದೊಡ್ಡ ತಾತ್ವಿಕ ವಚನಕಾರ. ಇವನಷ್ಟು ನಿಖರ, ನೇರ ಮತ್ತು ಸ್ಪಷ್ಟವಾಗಿ ತಾತ್ವಿಕ ಸಂಘರ್ಷಕ್ಕೆ ನಿಲ್ಲುವ ಮತ್ತೊಬ್ಬನನ್ನು ಹುಡುಕಿದರೂ ವಚನಕಾರರಲ್ಲಿ ಸಿಕ್ಕುವುದು ಬಹಳ ಕಷ್ಟ ಮತ್ತು ವಿರಳ. ಸಾಮಾಜಿಕ ಸುಧಾರಣೆಯೇ ಪ್ರಮುಖ ಧ್ಯೇಯವಾಗಿ ನಡೆದ ಚಳುವಳಿಯ ಉಪೋತ್ಪನ್ನವಾಗಿ ಹುಟ್ಟಿದವು ವಚನಗಳು. ಕೊಂಡುಗೊಳಿ ಕೇಶಿರಾಜನಿಂದ ಕೊನೆ ಕೊನೆಯ ವಚನಕಾರನೆಂದು ಕರೆವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ಈ ವಚನ ಚಳುವಳಿಯ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ಹರಿದಿವೆ. ಇಂದಿನ ಸಮಾಜಿಕ ಸಾಮರಸ್ಯ-ಅಭಿವೃದ್ಧಿಗೆ ವಚನಕಾರರನ್ನು ಮಾದರಿಯೆಂದೇ ಭಾವಿಸಿರುವಾಗ, ವಚನಗಳ ಪ್ರಭಾವ ಕಾಲಾತೀತವಾಗಿ ನಿಂತಿರುವುದು, ವಚನಗಳ ಹೊಂದಿರುವ ಧ್ಯೇಯದ ತೀವ್ರತೆ ಮತ್ತು ತುರ್ತು ಎಷ್ಟು ಮಹತ್ತರವಾದುದು ಎಂದು ತಿಳಿಯುತ್ತದೆ. ಕಾಶ್ಮೀರದ ರಾಜನೂ ಕಲ್ಯಾಣಕ್ಕೆ ಬಂದು, ಕಾಯಕಕ್ಕೆ ತೊಡಗುವಲ್ಲಿ ಪ್ರೇರಣೆಯಾದವರೆಂದರೆ ಅವರ ಕಾಯಕ ನಿಷ್ಟೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳು ತಿಳಿಯುತ್ತದೆ.
ಅನುಭವ ಜನ್ಯ ಜ್ಞಾನ, ಭಾರತೀಯ ತತ್ವಶಾಸ್ತ್ರ ಪರಂಪರೆಯ ಆಳವಾದ ಅಧ್ಯಯನ, ಮತ್ತು ಆ ತತ್ವಗಳನ್ನು ಒಡೆದು ಆ ಜಾಗದಲ್ಲಿ ಮತ್ತೊಂದನ್ನು ಕಟ್ಟುವ ವಚನಕಾರರ ಕಾರ್ಯ ಮುಖ್ಯವಾದದ್ದು. ತಮ್ಮ ಕಾಲದಲ್ಲಿನಿಂತು ಹಿಂದಿನ ತತ್ವಗಳನ್ನು ಒರೆಗೆ ಹಚ್ಚಿ ಉತ್ತರ ಕಂಡುಕೊಳ್ಳುವ-ಉತ್ತರ ದೊರೆಯದಿದ್ದರೆ ಸಾರಸಗಟಾಗಿ ತಿರಸ್ಕರಿಸುವ ಅವರ ಕಾರ್ಯ ಎಲ್ಲ ಕಾಲಕ್ಕೂ ಮಾದರಿ. ಸಾಮಾಜಿಕವಾಗಿ ಬಸವಣ್ಣನನ್ನೂ, ಧಾರ್ಮಿಕವಾಗಿ ಚೆನ್ನ ಬಸವ್ಣನನ್ನೂ ನೋಡಿದಹಾಗೆ ವೀರಶೈವದ ತಾತ್ವಿಕ ದೊಡ್ಡ ಸಾಧ್ಯತೆಯನ್ನ ಕಂಡದ್ದು ಅಲ್ಲಮಪ್ರಭುವಿಲ್ಲಿ. ನಿಷ್ಟುರ, ವಿಡಂಬನೆ, ಸಂಕೀರ್ಣ ಭಾಷಾ ಪ್ರಯೋಗ, ವಿರುದ್ಧ ನೆಲೆಗಳ ಚಿತ್ರ ಸರನಿಯ ಪ್ರತಿಮೆಗಳು ಅಲ್ಲಮನ ವಿಶೇಷತೆಗಳು. ಅವನ ವಚನಗಳ ಅಧ್ಯಯನ ಇತರ ಭಾರತೀಯ ದರ್ಶನಗಳ ಅಧ್ಯಯನಕ್ಕೆ ದಾರಿ ಮಾಡಿ ಹೊಸ ಹೊಳಹುಗಳನ್ನ ನೀಡುತ್ತವೆ. “ಬೆಡಗು” ಅಲ್ಲಮನ ವಚನಗಳ ಶೈಲಿ ಎಂದೇ ಹೇಳಬಹುದು. ಅವಧೂತ ಪರಂಪರೆಯಲ್ಲಿ ಬೆಡಗಿಗೆ ಬಹುದೊಡ್ಡ ಶಕ್ತಿಯಿದೆ. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ಪದದಲ್ಲಿ ಹೇಳಿ, ಸಾವಿರ ಅರ್ಥಗಳು ಒಮ್ಮಿದ್ದೊಮ್ಮೆಗೆ ಹುಟ್ಟಿಬಿಡುವಂತೆ ಮಾಡುವ ಮಾತಿನ ಅತೀಉತ್ಕೃಷ್ಟ ಅಭಿವ್ಯಕ್ತಿಯದು. ಅನಿಮಿಷನಿಂದ ಇಷ್ಟಲಿಂಗ ದೊರೆಯುವವರೆಗೂ ಮಾಯೆಯ ಹೊಡೆತಕ್ಕೆ ಸಿಕ್ಕಿ ಮದ್ದಲೆ ಬಾರಿಸಿ ತೊಳಲಿದವನು ಅನಂತರ ಅದಕ್ಕೆ ವಿಮುಖವಾದ ಮೋಹಬಂಧ ಕಿತ್ತೆಸೆದು ಆಚೆಗೆ ನಿಂತು ಎಲ್ಲವನೂ ಜಾಗೃತ ಪ್ರಜ್ಞೆಯ ಮೂಲಕವೇ ನೋಡುವ ಕಣ್ಣು ಅಲ್ಲಮನದು. ಅವನ ವಚನಗಳ ಹಿಂದೆ ಜಾಗೃತಪ್ರಜ್ಞೆ ನಿರಂತರವಾಗಿ ಹರಿದಿರುವುದು ಇಂದಿಗೂ ತಿಳಿಯುತ್ತಿದೆ. ಈ ಪ್ರಜ್ಞಾನದಿಯ ಹರಿಯುವಿಕೆ ನಿರಂತರವಾಗಿ ಕೊನೆಗೆ ಭೋರ್ಗರೆತದ ನದಿಯಾಗಿ ನಿಂತದ್ದು ಅತಿಶಯೋಕ್ತಿಯಲ್ಲ. ಆ ಪ್ರಜ್ಞಾನದಿಯ ನೀರನ್ನು ಒಂದೆಡೆ ನಿಲ್ಲಿಸಿ ಎಲ್ಲರಿಗೂ ದೊರೆವಂತೆ ಶೋನ್ಯಸಿಂಹಾಸನದಲ್ಲಿ ನೆಲೆಯೂರುವಂತೆ ಮಾಡಿದ ಬಸವಣ್ಣನ ಕಾರ್ಯವೂ ಬಹುದೊಡ್ಡದು. ಅಲ್ಲಮನ ವಚನಗಳಲ್ಲಿ ಅಮೂರ್ತದ ದೈವದ ದಿಕ್ಕಿಗೆ ಕರೆಕೊಡುವ ದಾರಿ ಕಾಣುತ್ತದೆ. ಬಸವಣ್ಣ ಮೂರ್ತದಿಂದ ಅಮೂರ್ತಕ್ಕೆ ಕರೆಕೊಟ್ಟರೆ, ಅಲ್ಲಮ ಬಹಳ ನೇರ ನಡಿಗೆ ಅಮೂರ್ತದ ಕಡೆಗೆ ಕರೆ ಕೊಡುತ್ತಾನೆ. ಮೇಲ್ನೋಟಕ್ಕೆ ಇದು ವೈರುಧ್ಯ ಎನಿಸಿದರೂ ಯಾವುದೇ ಧರ್ಮದ ಮೂಲ ನೆಲೆಯೂ ಮೂರ್ತದಿಂದ ಅಮೂರ್ತಕ್ಕೆ ಚಲನೆಯೇ ಅಗಿರುತ್ತದೆ. ಕಾಲಾನಂತರ ಆಚರಣೆ ಮುಂದಾಗಿ ಅದರೊಡಲಿನ ತತ್ವ ಹಿಂದೆ ಸರಿದು, ಪ್ರಜ್ಞೆಯು ನಿಂತ ನೀರಾಗಿ ಹೋಗುತ್ತದೆ. ಧರ್ಮದ ಮೂಲ ಧ್ಯೇಯ ಜ್ಞಾನೋಪಾಸನೆ – ಜ್ಞಾನಸಂಪಾದನೆ. ಇವುಗಳು ಆದಾಗ ತನ್ನಿಂದ ತಾನೇ ಅಮೂರ್ತಕ್ಕೆ ಚೆಲಿಸುತ್ತದೆ. ಅಂತಹಾ ಚೆಲನೆಗೆ ಸಂಬಂಧಿಸಿದ ಅಲ್ಲಮನ ವಚನವೊಂದು ಅದ್ಭುತವಾಗಿದೆ.
ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು
ಆ ದೇಶದಲ್ಲಿ ಬರನಾಯಿತ್ತು!
ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು
ಅವರ ಸುಟ್ಟ ರುದ್ರಭೂಮಿಯಲಿ
ನಾ ನಿಮ್ಮನರಸುವೆ ಗುಹೇಶ್ವರ೧
ಮೊದಲ ಓದಿನಲ್ಲಿ ವಿಚಿತ್ರವೆಂಬಂತೆ ಕಂಡರೂ, ಇರದ ಒಳಗೆ ಬಹುದೊಡ್ಡ ಹಿಂದಿನ ಚಿಂತನೆಯನ್ನು ಒಡೆವ ಕ್ರಮವಿದೆ. ಇದು ಎರಡು ಪ್ರಮುಖ ಆಯಾಮಗಳಲ್ಲಿ ನಿರ್ವಚನಕ್ಕೆ ಒಳಪಡುತ್ತದೆ. ದೇಹದ ಮಟ್ಟದಲ್ಲಿ ಮತ್ತು ದೇಹವನ್ನು ನೆಚ್ಚಿಕೊಂಡು ಪ್ರಜ್ಞೆಯನ್ನು ಹಿಡಿತಕ್ಕೆ ತಂದುಕೊಳ್ಳುವ ತಂತ್ರಮಾರ್ಗಕ್ಕೆ ಏಕಕಾಲದಲ್ಲಿ ಅವುಗಳ ಕಾರ್ಯರೂಪದನ್ವಯ ಉತ್ತರ ಕೊಟ್ಟದ್ದಾಗಿದೆ. ದೇಹದ ಮಟ್ಟದಲ್ಲಿ ಈ ವಚನವು ‘ಉತ್ತರಾ ಪಥ’ ಎಂದರೆ ‘ತಲೆ’, ‘ಮೇಘವರ್ಷ’ವೆಂದರೆ ‘ಸುಧಾಧಾರಾ’ – ‘ಅಮೃತವರ್ಷಿಣಿ’ (ಜ್ಞಾನೋದಯವನ್ನ ಭಾರತೀಯ ತತ್ವಶಾಸ್ತ್ರಸಲ್ಲಿ ಗುರುತಿಸುವ ಪರಿಭಾಷೆ), ‘ದೇಶ’ಎಂದರೆ ‘ದೇಹ’, ‘ಪ್ರಾಣಿ’ಗಳು ಎಂದರೆ ‘ಪಂಚೇಂದ್ರಿಯ’ ಎನ್ನುವ ಅಂಶಗಳನ್ನು ತಿಳಿದರೆ, ದೇಹ ಮತ್ತು ಪಂಚೇಂದ್ರಿಯಗಳು ಲೋಲುಪತೆಯನ್ನು ಜ್ಞಾನೋದಯ ಕಾರಣದಿಂದ ಕಳೆದುಕೊಂಡರೆ, ಕಳೆದುಕೊಂಡು ಸುಮ್ಮನಾದರೆ, (ರಮಣರು ಇದನ್ನೇ ‘ಚುಮ್ಮಾಇರು’ ಎನ್ನುತ್ತಾರೆ) ಅಲ್ಲಿ ಸುಟ್ಟ ರುದ್ರಭೂಮಿಯು ನಿರ್ಮಾಣವಾಗುತ್ತದೆ. ಲೋಲುಪತೆ ಕಳೆದ ಅನಂತರ ಘಟಿಸುವ ಶೂನ್ಯಭಾವದಲ್ಲಿ ದೈವದ ಅಥವಾ ದೈವತ್ವದ ಸಾಕ್ಷಾತ್ಕಾರ ಸಾಧ್ಯವೆನ್ನುವುದು ಅಲ್ಲಮನ ಅಭಿಪ್ರಾಯ.
ಇದನ್ನೇ ಮತ್ತೊಂದು ಪ್ರಮುಖವಾದ ಆಯಾಮದಲ್ಲಿಯೂ ವಿವೇಚನೆ ಮಾಡಬಹುದು. ತಾಂತ್ರಿಕ ಪದ್ದತಿಗಳಲ್ಲಿ ‘ಪಂಚ ಮ ಕಾರ’ಕ್ಕೆ ಬಹಳ ಪ್ರಾಧಾನ್ಯತೆ. ಮದ್ಯ, ಮಾಂಸ, ಮಾನಿನಿ, ಮೈಥುನ ಮತ್ತು ಮಂತ್ರಗಳ ಸಹಾಯದಿಂದ ಜ್ಞಾನವನ್ನು ಪಡೆಯಬಹುದೆಂದು ದೊಡ್ಡ ಚಲನೆಯನ್ನೇ ಉತ್ತರದಲ್ಲಿ ನಡೆಯಿತು. ಇಂದ್ರಿಯಕ್ಕೆ ಏನು ಬೇಕೋ ಅದನ್ನು ಪೂರೈಸಿಯೇ ಮನುಷ್ಯ ಅಸ್ಥಿತ್ವವನ್ನು ಕಂಡುಕೊಳ್ಳಬಹುದೆಂಬ ಮಾತಿಗೆ ಪ್ರಚೋದನೆಯಾಗಿ ಜ್ಞಾನಕ್ಕಿಂತ ಇಂದ್ರಿಯ ಸುಖಕ್ಕೆ ಒಳಗಾಗಿ ಹೋದವರೇ ಆ ಕಡೆಗೆ ಹೆಚ್ಚಾಗಿ ವಾಲಿದರು. ಇದರಿಂದ ಸಮಾಜದಲ್ಲಿ ಉಂಟಾಗುವ ಪ್ರಜ್ಞೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಜ್ಞಾನೋದಯಕ್ಕೆ ಅಶಿಸಿದವರು ಹೆಚ್ಚಾಗುವುದನ್ನ ಅರಿತ ಅಲ್ಲಮ, ಕಾಶ್ಮೀರದಲ್ಲಿ ಈ ಚಿಂತನೆ ಪ್ರಾರಂಭವಾಗಿದ್ದಕ್ಕೆ ಇಲ್ಲಿ ಕಲ್ಯಾಪಟ್ಟಣದಲ್ಲಿ ಕುಳಿದು ಅದು ಸರಿಯಲ್ಲವೆಂದು ಕೊಟ್ಟ ಉತ್ತರವೆಂದೇ ಎನಿಸುತ್ತಿದೆ. ಇದೇ ಆಶಯವನ್ನು ಸ್ಪುರಿಸುವ ಮತ್ತೊಂದು ಅಲ್ಲಮನ ವಚನವನ್ನು ಗಮನಿಸಿ.
ಊರೊಳಗಣ ಘನ ಹೇರಡವಿಯೊಳಗೊಂದು
ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]
ಆರೈದು ನೀರೆರೆದು ಸಲುಹಲಿಕ್ಕೆ ಅದು ಸಾರಾಯದ ಫಲವಾಯಿತ್ತಲ್ಲಾ
ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ
ಬೇರಿಂದಲಾದ ಫಲವ ದಣಿದುಂಡವ ಊರಿಂದ ಹೊರಗಾದ
ಕಾಣಾ ಗುಹೇಶ್ವರ
ಈ ವಚನವು ಬಹಳ ಕುತೂಹಲಕರವಾದ ಕೆಲವು ಮಾಹಿತಿಗಳನ್ನು ಮೇಲೆ ಹೇಳಿದಷ್ಟೇ ನಿಖರವಾಗಿ ಬಿಟ್ಟುಕೊಡುತ್ತಿದೆ. ಇಲ್ಲಿನ ವಿಶೇಷತೆಯೇ ಎರಡು ಅರ್ಥಗಳನ್ನು ಸ್ಪುರಿಸುವ ಪದವಾದ ‘ಊರು’. ವಚನದ ಆರಂಬದಲ್ಲಿ ‘ಊರು’ ಪದವು ‘ದೇಹ’ವೆಂದು ಅರ್ಥವಾದರೆ, ಕೊನೆಯಲ್ಲಿ ಬರುವ ‘ಊರು’ ‘ತೊಡೆ’ ಎಂದು ಅರ್ಥವಾಗುತ್ತದೆ. ಇದೊಂದು ಇತ್ಯಾತ್ಮಕ ಚಲನೆಯ ಆಸೆಹೊತ್ತ ನೇತ್ಯಾತ್ಮಕ ಪ್ರತಿಮೆಗಳ ಸಹಜ ಸಂಘಟ್ಟಣೆಯಲ್ಲಿ ಮೂಡಿದ ಅರ್ಥ. ಇದರ ಅನುಸಂಧಾನವೂ ಬಹಳ ಕುತೂಹಲಕರವಾಗಿದೆ. ‘ಆರೈದು’ ಎಂಬ ಸಂಖ್ಯಾ ಪದವನ್ನು ಬಿಡಿಸಿದರೆ, ‘ಆರು’ ಷಟ್ ಚಕ್ರಗಳನ್ನು, ‘ಐದು’ ಪಂಚೇಂದ್ರಿಯಗಳನ್ನು ತಿಳಿಸುತ್ತಿದೆ. ಮುಖ್ಯವಾಗಿ ತಲೆಕೆಳಕಾದ ವೃಕ್ಷದ ಪ್ರತಿಮೆ ‘ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]’ ಬಂದಿದೆ. ಆ ಮರ ಕೊಡುವ ಫಲದ ಸ್ಥಾನ ಕೆಳಗಿದೆ. ಅದನ್ನರಿಸಿ ‘ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ’. ಮತ್ತೊಂದು ಉಲ್ಟಾ ಪ್ರತಿಮೆ ಕೊನೆಯಲ್ಲಿ ಕೊಡುತ್ತಾನೆ ‘ಬೇರಿಂದಲಾದ ಫಲ’. ಇದನ್ನು ಬಹಳ ಕಷ್ಟದಲ್ಲಿ ಸಾಧಿಸಿಕೊಳ್ಳಬೇಕಾದ ಸ್ಥಿತಿ. ಆ ಫಲವನ್ನು ‘ದಣಿದುಂಡವ’ವನು ‘ಊರಿಂದ ಹೊರಗಾದ’. ಈ ವಚನದಲ್ಲಿಯೂ ದೇಹ, ದೇಹದ ಲೋಲುಪತೆ ಮತ್ತು ಪ್ರಜ್ಞೆಯನ್ನು ಹಿಡಿದುಕೊಳ್ಳುವ ಸಾಧ್ಯತೆಯ ಬಗೆಗೆ ಮಾತನಾಡುತ್ತಿದ್ದಾನೆ. ‘ಸಿಕ್ಕಿದ’ ಮತ್ತು ‘ಹೊರಗಾದ’ ಎಂಬ ಎರಡು ಕ್ರಿಯಾಪದವನ್ನು ಗಮನಿಸಿ. ಭೂತದ ಕ್ರಿಯೆಯನ್ನು ಹೇಳುತ್ತ ವರ್ತಮಾನದ ನಡೆಯನ್ನು ಎಚ್ಚರಿಸುತ್ತಿದ್ದಾನೆ.
ಅಲ್ಲಮಪ್ರಭುವಿನ ನೇರ ಹಣಾಹಣಿ ತಂತ್ರಾಲೋಕದ ಕಡೆಗಿದೆ. ಮತ್ತದನ್ನು ನೆಚ್ಚಿಕೊಂಡು ನಡೆದವರಿಗೆ ಕೊಟ್ಟ ಪ್ರತಿಸ್ಪಂದನೆಯೂ ಅಗಿರಬಹುದು. ಮೆಲ್ನೋಟಕ್ಕೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಸಣ್ಣ ಸಣ್ಣ ಸಾಲನ್ನು ಹೊಂದಿರುವ ವಚನವೆಂದು ಕರೆಸಿಕೊಳ್ಳುವ ಪ್ರಕಾರವೊಂದು, ಹೇರಳವಾಗಿ ರಚನೆಯಾಗಿದ್ದ ಅತಿಹೆಚ್ಚು ಶಿಷ್ಟವಾದ ‘ಅನುಷ್ಟಪ್’ ಛಂಧಸ್ಸಿಗೆ ಮುಖಾಮುಖಿಯಾಗುವುದು ದೇಸಿ ಮತ್ತು ಮಾರ್ಗದ ಮುಖಾಮುಖಿಯಲ್ಲದೆ ಮತ್ತಿನ್ನೇನೂ ಅಲ್ಲ. ಸಂಕೀರ್ಣವಾಗಿಯೇ ಹೇಳುವುದಾದರೆ, ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಘಟಿಸಿದ ಸಾಹಿತ್ಯ ಚಳುವಳಿಯೊಂದರ ಉಪೋತ್ಪನ್ನವಾದ ವಚನ ರೂಪವೊಂದು ತನ್ನೆಲ್ಲಾ ತಾತ್ವಿಕ, ಶಾಸ್ತ್ರ ಮತ್ತು ಅನುಭವ ಜನ್ಯ ಜ್ಞಾನದಿಂದ ರೂಪುಗೊಂಡು – ಮತ್ತೊಂದು ಶಾಸ್ತ್ರೀಯ ಕಾವ್ಯರೂಪಕ್ಕೆ, ಅದರ ತಾತ್ವಿಕ ಮಾರ್ಗಕ್ಕೆ ಕೊಟ್ಟ ಸಂಘರ್ಷದ ಆಹ್ವಾನವೆಂದರೆ ಅತಿಶಯೋಕ್ತಿಯೇನಲ್ಲ.
ಶೂನ್ಯಸಂಪಾದನೆಗಳಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವ ಬಹುಮುಖ್ಯವಾದ ಘಟ್ಟವೊಂದಿದೆ. ಆ ಭಾಗವು ತನ್ನ ನಾಟಕೀಯತೆ, ತತ್ವ, ವೀರಶೈವ ಧರ್ಮದ ಮೂಲ ತತ್ವಗಳ ಶೋಧ, ಶರಣರ ನಡೆ ನುಡಿಯಲ್ಲಿನ ವಿಶೇಷತೆ ಮುಂತಾದ ಅಂಶಗಳ ಅಭಿವ್ಯಕ್ತಿಯಿಂದ ಅತೀಉತ್ಕೃಷ್ಟ ಭಾಗವಾಗಿ ಇಂದಿಗೂ ಓದುಗರ ಮನದಲ್ಲಿ ನೆಲೆ ನಿಂತಿದೆ. ಅಕ್ಕನನ್ನು ಪರೀಕ್ಷಿಸಿ, ಅವಳು ಆ ಪರೀಕ್ಷೆಯಲ್ಲಿ ಗೆದ್ದ ನಂತರ ಬಸವಣ್ಣನು ಮಡಿವಾಳತಂದೆ ಮತ್ತು ಅಲ್ಲಮರ ಸಮಕ್ಷಮದಲ್ಲಿ ಅಕ್ಕನನ್ನು, ಅವಳ ಸತ್ವವನ್ನು ಕೊಂಡಾಡುತ್ತಾನೆ. ಆ ಸಂದರ್ಭದ ವಚನವೊಂದಲ್ಲಿ ಅಲ್ಲಮನನ್ನು ಸಂಬೋಧಿಸಿ “ತಲೆವೆಳಗಾದ ಸ್ವಯಜ್ಞಾನಿ” ಎಂಬ ವಿಶೇಷಣವೊಂದನ್ನು ಆರೋಪಿಸುತ್ತಾರೆ. ಈ ವಿಶೇಷಣ ನಿಜವಾಗಿ ಸಾರ್ಥಕವಾಗಿರುವುದು ಮೇಲಿನ ವಚನದಲ್ಲಿ ಅಲ್ಲಮ ಕೊಟ್ಟಿರುವ “ಬೇರು ಮೇಲು ಕೊನೆ ಕೆಳಕಾಗಿ ಸಸಿ ಹುಟ್ಟಿತ್ತು” ಎಂಬ ಪ್ರತಿಮೆ ಮತ್ತು ಆ ಪ್ರತಿಮೆ ಮಾಡುತ್ತಿರುವ ಕಾರ್ಯದಿಂದ. ಒಟ್ಟಾರೆ ಭಾರತೀಯ ತತ್ವಶಾಸ್ತ್ರದಲ್ಲಿ ಯಾವುದೇ ಮರವನ್ನು ಯಾವುದೇ ದೊಡ್ಡ ದಾರ್ಶನಿಕನ ಜ್ಞಾನೋದಯದ ನೆಲೆಯಾಗಿ ಕಾಣುವಾಗ ಅಂತಹಾ ವೃಕ್ಷವನ್ನೇ ತಲೆಕೆಳಕಾಗಿ ಮಾಡಿ, ತತ್ವಗಳಾಚೆ ಬದುಕಿದೆ ಎಂಬುದನ್ನು ದಿಟ್ಟವಾಗಿ ಸಾರಿದ “ತಲೆವೆಳಗಾದ ಸ್ವಯಜ್ಞಾನಿ” ಅಲ್ಲಮ.
ಪರಾಮರ್ಶನ ಗ್ರಂಥಗಳು :
೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೨೨೭. ಪು ೧೫೬ (೨೦೧೬)
೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೯೬೪. ಪು ೨೨೭ (೨೦೧೬)
೩. ಎನ್ನ ಭಕ್ತಿ ಶಕ್ತಿಯು ನೀನೆ
ಎನ್ನ ಯುಕ್ತಿ ಶಕ್ತಿಯು ನೀನೆ
ಎನ್ನ ಮುಕ್ತಿ ಶಕ್ತಿಯು ನೀನೆ
ಎನ್ನ ಮಹಾಘನದ ನಿಲವಿನ ಪ್ರಭೆಯನ್ನುಟ್ಟು
ತಲೆವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕನ ನಿಲವ
ಮಡಿವಾಳನಿಂದಱಿದು ಬದುಕಿದೆನಯ್ಯಾ ಪ್ರಭುವೆ
ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ, ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. ವಚನ ಸಂಖ್ಯೆ ೧೦೭೫. ಪು ೪೬೭ ( ೧೯೯೮ ).
******************************************************
ಆರ್.ದಿಲೀಪ್ ಕುಮಾರ್
ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ವಿಭಿನ್ನ ದೃಷ್ಟಿಕೋನಗಳತ್ತ ಸೆಳೆಯುವ ಲೇಖನ. ಆಳವಾದ ಆದ್ಯಯನದ ಫಲಶ್ರುತಿ .