ಕವಿತೆ
ಸಂ ‘ಕ್ರಾಂತಿ’
ತೇಜಾವತಿ ಹೆ್ಚ್.ಡಿ.
ಪುರಾಣದ ನೋಟದಲಿ,ವಿಜ್ಞಾನವು ಇಣುಕಿ
ಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದ
ನವ ಬದುಕಿನ ಸಂ’ಕ್ರಾಂತಿ’
ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದ
ಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ
ಧರೆ ಪರಿಭ್ರಮಿಸುವ ಗಳಿಗೆ
ದಿನ ರಾತ್ರಿ
ಹಗಲು ಇರುಳು
ಬೆಳಗು ಕತ್ತಲು
ಹೀಗೆ ಮಾಸ ಅಯನಗಳ ವರ್ತನೆ
ಉತ್ತರಾಯಣ ತಿರುಗಿ ಸಂಕ್ರಮಣ ಮೂಡಿ
ಬೆಳೆಯ ತಲೆಯ ಇಳೆಗೆ ಬಾಗಿಸುತ
ಸೂರ್ಯರಶ್ಮಿ ಹೊಳಪು ನವಭಾವದ ಕಂಪು
ಎಲ್ಲವುಗಳಂತಲ್ಲ ಈ ಹಬ್ಬ!
ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದ
ಜಾನುವಾರುಗಳ ಅಲಂಕರಿಸಿ,ಪೂಜಿಸಿ
ಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿ
ಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ
ಹಾಡು ಪಾಡು
ಎಳ್ಳು ಬೆಲ್ಲ ಹಂಚುವ
ನವೀನ ಪುರಾತನ ಮೌಲ್ಯಿಕರಿಸುವ ಪೃಥ್ವಿ
ರಾಶಿ ರಾಶಿ ಹೊಳಪು
ಮಿರಿಮಿರಿ ಮಿಂಚುವ ಭೂಸೆರಗು
ತರತರ ಹೊಳೆವ ಹಸಿರು ಬಣ್ಣದೈಸಿರಿ ಸಂಕ್ರಾಂತಿ ಮೆರಗು
ಈಗೀಗ
ಮಾರ್ಗಶಿರ ಮಾರುದ್ದ ಮರೆತು
ಎಳ್ಳು-ಬೆಲ್ಲ ದಾರಿಲಿ ಉಳಿದು
ಮಿರಿ ಮಿರಿ ಮಿಂಚುವ ಕಣ್ಣಿಗೆ
ಕಾಡಿಗೆ ಜೋಳ ಪಿಸುನಕ್ಕು
ಹಸಿರು ಬಸಿರಾಗದೇ
ಪ್ರೇಮ ಕಳೆಕಟ್ಟುತ್ತಿದೆ ಭಾವನೆಗಳ ಬರಿದಾಗಿ
ಅವನಿಯೂ ಅಷ್ಟೇ ಹೂ ಗಂಧ ಸಾಂಬ್ರಾಣಿಗಳ ಕರಕಲು ಮೆತ್ತಿಕೊಂಡಿದೆ
ಕೊನೆಗೆ ನನ್ನವನ ಆಸೆ
ಸಂಕ್ರಾಂತಿಯ ಸಂಸ್ಕೃತಿ ಮೂಡಿ
ಸಂಪ್ರದಾಯ ಪ್ರೀತಿಯೊಂದಿಗೆ ಹೂರಣ ಹಬ್ಬಲಿ ವಿಶ್ವಾಸ-ಕೃತಜ್ಞತೆ
ಜೊತೆಯಾಗಿ ಸಂ’ಕ್ರಾಂತಿ’ ನಡೆದುಹೋಗಲಿ
ಸಂಕ್ರಾಂತಿ ಅಂಥದ್ದೇ ಆಗಿರಲಿ,
ಬಣ್ಣ ಹೇಗಾದರೂ ಸರಿ
ಸೆರಗು ಹಸಿರಾಗಲಿ
ಹಸಿರು ಉಸಿರಾಗಲಿ