ಕವಿತೆ
ಏಕತಾರಿಯ ಸಂಚಾರಿ ಸ್ವರಗಳು
ಕಾತ್ಯಾಯಿನಿ ಕುಂಜಿಬೆಟ್ಟು
ನನ್ನ ಹೃದಯ ಒಡೆದು ಎರಡು ದಾರಿಗಳಾಗಿವೆ
ನೀನು ನನ್ನ ಒಳಗಿದ್ದರೂ ನಿನ್ನ ಹೃದಯ ಹೊರ ನೋಡುತ್ತಿದೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ
ನಾನು ನಡೆಯುವೆ ಒಳದಾರಿಯಲ್ಲಿ
ನನ್ನ ಒಳಗೆ
ನನ್ನ ಕನಸುಗಳು ನನ್ನ ಒಳಗಿವೆ
ಅಲ್ಲಿ ವಿಶಾಲ ಬಯಲು ಇದೆ
ಆಗಸದ ಸೂರಿದೆ
ಆತ್ಮ ಹಕ್ಕಿಯ ರೆಕ್ಕೆಗಳು
ನನ್ನನ್ನು ಹತ್ತಿಸಿಕೊಂಡು
ಸ್ವೇಚ್ಚೆ ಸ್ವಾತಂತ್ರ್ಯದ ಗಾಳಿಯಲ್ಲಿ
ಹೊತ್ತು ಹಾರಾಡಲು ಕಾಯುತ್ತಿವೆ
ಅಲ್ಲಿದೆ ಬಿಡುಗಡೆ
ಮರವಿಲ್ಲದೆಯೆ ಅರಳಿದ ನಕ್ಷತ್ರ ಹೂವುಗಳ ಚೆಲ್ಲಾಪಿಲ್ಲಿ ರಾಶಿ
ಆಧಾರವಿಲ್ಲದೆಯೆ ನಿಂತು ತೂಗುವ ಚಂದ್ರ
ರೆಕ್ಕೆಯಿಲ್ಲದೆಯೇ ಓಲಾಡುವ ಮೋಡಗಳು
ಮತ್ತು
ಕಣ್ಣು ಇಲ್ಲದೆಯೆ ನೋಡುವ
ಕಿವಿ ಇಲ್ಲದೆಯೆ ಕೇಳುವ
ಮೂಗಿಲ್ಲದೆಯೆ ಆಗ್ರಾಣಿಸುವ
ಬಾಯಿಯಿಲ್ಲದೆಯೆ ಹಾಡುವ
ಚಮ ೯ವಿಲ್ಲದೆಯೆ ಮುಟ್ಟುವ
ದೇಹವಿಲ್ಲದೆಯೆ ತುತ್ತ ತುದಿಯ
ಆನಂದಕೇರುವ
ಆ ನಾನು…
* * * * *
ಕಟ್ಟ ಕಡೆಯ ಪ್ರೀತಿಯ ಚೂರು ತುಣುಕು ಮಾತ್ರ ಉಳಿದಿದೆ…
ತಕೊ ನಿನಗೆ.
ಇನ್ನು ನನ್ನಲ್ಲಿ ನನ್ನದು ಏನೂ ಉಳಿದಿಲ್ಲ
ಬೀದಿಗೆ ಬಿದ್ದಿರುವೆ..
ಕಂಡ ಕಂಡವರ ಮುಂದೆ
ಪ್ರೀತಿಯ ಭತ್ತಕ್ಕೆ ಸೆರಗೊಡ್ಡುವ
ಬಾಗಿನದ ಆಸೆ ಸಾಸಿವೆಯಷ್ಟೂ ಇಲ್ಲ ಆತ್ಮಕ್ಕೆ
ಶಾರದೆ ಇದ್ದಾಳೆ ನನ್ನ ದೇಹ ಮನೆಯ ಒಳಗೆ
ಹೃದಯ ಮಂಟಪದಲ್ಲಿ
ಪ್ರೀತಿಯ ಹಸಿವಲ್ಲಿ
ಆತ್ಮ ಅತ್ತಾಗೆಲ್ಲ ಅಪ್ಪಿ ಮುದ್ದಿಡುತ್ತಾಳೆ
ಮಡಿಲ ಜೋಲಿಯಲಿ ತೂಗಿ
ಮಮತೆಯ ಲಾಲಿ ಹಾಡುತ್ತಾಳೆ
ಆತ್ಮ ಏಕಾಂಗಿತನದಲ್ಲಿ ಕೆಸರ ಮೀನoತೆ ಬಾಯ್ಬಿಟ್ಟಾಗೆಲ್ಲ
ನೀರ ಹಾಳೆಯಲ್ಲಿ ಕೈ ಹಿಡಿದು ಬರೆಸುತ್ತಾಳೆ
ಬರೆಯುತ್ತ ಬರೆಯುತ್ತಲೇ ಒಂದು ಕಟ್ಟ ಕಡೆಯ ದಿನ ಕಟ್ಟ ಕಡೆಯ ಕ್ಷಣ
ಅವಳ ಹೃದಯದ ಒಳಗೇ
ನನ್ನನ್ನು ಶಾಶ್ವತವಾಗಿ ಸೇರಿಸಿಕೊಳ್ಳುತ್ತಾಳೆ
ಹೊರಗೆ ಬಿಟ್ಟು ಬಿಟ್ಟರೆ
ಈ ಆತ್ಮ ಬೀಡಾಡಿ ಬೀದಿಗರು ವಾಗುತ್ತದೆ ಪ್ರೀತಿಯ ಹಸಿವಲ್ಲಿ
ಎ೦ಬ ಅರಿವಲ್ಲಿ ತನ್ನ ಹೃದಯಕ್ಕೆ ಚಿಲಕ ಹಾಕುತ್ತಾಳೆ
ನಾನು ತಿದ್ದುತ್ತಲೇ ಇರುತ್ತೇನೆ
ಅವಳು ಬರೆದ ಅಕ್ಷರಗಳ ಮೇಲೆ
ಕಾಲ ದೇಶ ಭಾಷೆಗಳ ಅರಿವಿಲ್ಲದೆಯೇ… ಒಳಗೆ.