ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ

ಲಲಿತ ಪ್ರಬಂಧ

ಸಲಾಮನ ಗಾಡಿಯೂ…

ಸಂಕ್ರಾಂತಿ ಹಬ್ಬವೂ…

ಟಿ.ಎಸ್.ಶ್ರವಣಕುಮಾರಿ

ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ ಎಷ್ಟು ಕಾರಿದ್ದವೆಂದರೆ ಓಡಾಡುತ್ತಿದ್ದ ಕಾರು ಇಂತವರದೇ ಎಂದು ಹೇಳುವಷ್ಟು! ಸೈಕಲ್ಲುಗಳು ಸ್ಕೂಟರಿನ ಸ್ಥಾನಮಾನವನ್ನು ಪಡೆದಿದ್ದವು. ಅಲ್ಲಿಲ್ಲಿ ಸುವೇಗಾದಂತಹ ಮೊಪೆಡ್ ಗಳು ‘ನಾವೂ ಇದ್ದೀವಿ’ ಎಂದು ಮುಖದೋರುತ್ತಿದ್ದವು. ಇಷ್ಟೆಲ್ಲಾ ಪರಟಾವಣೆ ಏತಕ್ಕೆಂದರೆ ನಾವೆಲ್ಲಾ ನಟರಾಜ ಸರ್ವೀಸಿನವರೇ ಆದರೂ, ನಮ್ಮಮ್ಮ ಮಾತ್ರ ಎಲ್ಲಿಗೆ ಹೋಗುವಾಗಲೂ ಅವರಿಗೆ ಕುದುರೆಗಾಡಿಯೇ ಬೇಕಿತ್ತು. ನಾವ್ಯಾರಾದರೂ ಅಮೀರ್ ಅಹ್ಮದ್ ಸರ್ಕಲ್ಲಿನವರೆಗೆ ಹೋಗಿ ತಂದು ಕೊಡಬೇಕಿತ್ತು. ಅಲ್ಲಿ ನಿಲ್ಲುತ್ತಿದ್ದ ಗಾಡಿಗಳಲ್ಲಿ ಮೊದಲ ಆಯ್ಕೆ ಸಲಾಮನ ಗಾಡಿ… ಕುದುರೆಯೆಂದರೆ ಸದಾ ಕಣ್ಮುಂದೆ ಬರುವ ಮಿರುಗುತ್ತಿದ್ದ ಕಂದು ಬಣ್ಣದ ಕುದುರೆ; ಹಸಿರು ಬಣ್ಣದ ಗಾಡಿಗೆ ಕೆಂಪಂಚಿನ ಮೇಲೆ ಚಿತ್ತಾರದ ಹೂಗಳು; ಗಾಡಿಯೊಳಗೆ ಹುಲ್ಲಿನ ಮೇಲೆ ಹಾಸಿದ್ದ ಗೋಣಿ ತಾಟು; ಅದರ ಮೇಲೊಂದು ಪುಟ್ಟ ಜಮಖಾನ ನಮ್ಮ ಸಲಾಮನ ರಥ. ಸಲಾಂ ನಮ್ಮಮ್ಮನ ಪರಮ ಶಿಷ್ಯರಲ್ಲೊಬ್ಬನಾಗಿದ್ದ.

ಸರಿ; ಈಗ ನಮ್ಮ ಸಂಕ್ರಾಂತಿಗೆ ಮತ್ತೆ ಬರೋಣ. ಎಳ್ಳು, ಸಕ್ಕರೆ ಅಚ್ಚನ್ನು ತಯಾರಿಸಿಕೊಂಡಾದ ಮೇಲೆ ಮತ್ತೆ ಸಲಾಮನ ಗಾಡಿಯ ವಿಷಯಕ್ಕೆ ಬರೋಣ. ಹೆಂಗಸರಿಗಂತೂ ಈ ಹಬ್ಬ ಬಂದರೆ ಅದೆಷ್ಟು ಸಂಭ್ರಮವೋ.. ಹೊಸವರ್ಷ ಆರಂಭವಾಗುವಾಗಲೆ ಮನೆಗೆ ತರುವ ತಿಂಗಳ ದಿನಸಿ ಸಾಮಾನಿನ ಪಟ್ಟಿಯಲ್ಲಿ ಸಕ್ಕರೆ, ಬೆಲ್ಲ, ಹುರಿಗಡಲೆ, ಕಡಲೇ ಬೀಜ, ಕೊಬ್ಬರಿ ಮತ್ತು ಎಳ್ಳು ತಮ್ಮ ಹೆಸರನ್ನು ಬರೆಸಿಕೊಂಡು ಬಿಡುತ್ತಿದ್ದವು. ಜನವರಿ ಹದಿನಾಲ್ಕರಂದು ಇಲ್ಲವೇ ಹದಿನೈದರಂದು ಬರುವ ಸಂಕ್ರಾತಿ ಹಬ್ಬಕ್ಕೆ ಎರಡು ವಾರ ಮೊದಲೇ ಭರದಿಂದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಆಗೆಲ್ಲಾ ಈಗಿನಷ್ಟು ಬೆಳ್ಳಗಿರುವ ಬೆಲ್ಲ ಸಿಗುತ್ತಿರಲಿಲ್ಲ. ಇರುವುದರಲ್ಲಿ ಬೆಳ್ಳಗಿರುವ ಬೆಲ್ಲವನ್ನು ಹುಡುಕಿಕೊಂಡು ಹೋಗಿ ತರಬೇಕಿತ್ತು. ಹೆಚ್ಚುವುದಕ್ಕೆ ಅಚ್ಚು ಬೆಲ್ಲವೇ ಸರಿ; ಹಿಡಿತಕ್ಕೂ ಸಿಗುತ್ತಿತ್ತು; ಹೆಚ್ಚು ಪುಡಿಯೂ ಆಗುತ್ತಿರಲಿಲ್ಲ. ಕೆಲವರು ಬೆಳ್ಳಗೆ ಕಾಣಬೇಕೆಂದು (ಅಥವಾ ಆ ರುಚಿಯೇ ಅವರಿಗೆ ಇಷ್ಟವಾಗುತ್ತಿತ್ತೇನೋ) ಬೆಲ್ಲದ ಬದಲು ಸಕ್ಕರೆಯ ಪಾಕವನ್ನು ತಟ್ಟೆಗೆ ಹೊಯ್ದು, ಕತ್ತರಿಸಿ ಎಳ್ಳಿನ ಮಿಶ್ರಣಕ್ಕೆ ಬೆರಸುತ್ತಿದ್ದರು. ಕೊಬ್ಬರಿ ವಿಪರೀತ ಗಟ್ಟಿ ಇರಬಾರದು; ಹೆಚ್ಚಲು ಅನುವಾಗುವಂತೆ ಸ್ವಲ್ಪ ಮೆತ್ತಗಿರಬೇಕು; ಬೆಳ್ಳಗಿರಬೇಕು; ಮುಗ್ಗುಲು ವಾಸನೆಯಾಗಲೀ, ಕೆಂಬಣ್ಣವಾಗಲೀ ಸಂಪೂರ್ಣವಾಗಿ ವರ್ಜ್ಯ. ಹೆಚ್ಚಿದ ನಂತರ ಬೆಲ್ಲ, ಕೊಬ್ಬರಿ ಎರಡೂ ಗರಿಗರಿಯಾಗುವ ಹಾಗೆ ಐದಾರು ದಿನ ಬಿಸಿಲಲ್ಲಿ ಒಣಗಬೇಕು. ಕಡಲೇ ಬೀಜವನ್ನು ಹುರಿಯುವುದೂ ಒಂದು ನಾಜೂಕಿನ ವಿಷಯವೇ. ಮಂದ ಉರಿಯಲ್ಲಿ ಬಿಡದೇ ಕೈಯಾಡುತ್ತಾ ಹುರಿಯಬೇಕು. ಇಲ್ಲವಾದರೆ ಸೀಯುವ ಕಾಳುಗಳು ಅಧಿಕ. ಸೀಯದಂತೆ ಕಾಪಾಡಲು ಕೆಲವರು ಮರಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡು ಅದರ ಜೊತೆಯಲ್ಲಿ ಕಡಲೇಬೀಜವನ್ನು ಹಾಕಿ ಹುರಿದು ಜರಡಿಯಾಡಿ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಹುರಿದದ್ದು ಒಂದೇ ಸಮನಾಗಿ ಹದವಾಗಿ ಬಾದಾಮಿಯ ಬಣ್ಣಕ್ಕೆ ಬರುತ್ತಿತ್ತು; ರುಚಿಯೂ ಉತ್ಕೃಷ್ಟವಾಗಿರುತ್ತಿತ್ತು. ನಮ್ಮ ಮನೆಯ ಬಳಿಯಿದ್ದ ಅಯ್ಯಂಗಾರರ ಮನೆಯಲ್ಲಿ ಕಾಫಿ ಬೀಜ ಹುರಿಯುವ ಒಲೆ ಇತ್ತು. ಒಂದು ಇಜ್ಜಿಲು ಒಲೆಯ ಮೇಲೆ ಅಡ್ಡಡ್ಡವಾಗಿ ಸಿಲೆಂಡರಿನಾಕಾರದ ಒಂದು ಮುಚ್ಚುಳವಿರುವ, ಹಿಡಿಕೆಯಿರುವ ಡಬ್ಬಿ; ಅದು ಒಲೆಯ ಕೆಂಡದ ಮೇಲೆ ಒಂದು ಅಂತರದಲ್ಲಿ ಕೂರುವಂತ ವ್ಯವಸ್ಥೆ. ಅದರೊಳಗೆ ಕಡಲೆಬೀಜವನ್ನು ತುಂಬಿ ಒಲೆಯ ಮೇಲಿಟ್ಟು ಹಿಡಿಕೆಯನ್ನು ತಿರುಗಿಸುತ್ತಿದ್ದರೆ ಆ ಡಬ್ಬಿ ಸುತ್ತುತ್ತಾ ಒಂದೇ ಹದದಲ್ಲಿ ಶಾಖವನ್ನು ಪಡೆದುಕೊಂಡು ಹದವಾಗಿ ಹುರಿದುಕೊಳ್ಳುತ್ತಿತ್ತು. ಇಂತಹ ಯಾವುದಾದರೂ ಒಂದು ರೀತಿಯಲ್ಲಿ ಕಡಲೇಕಾಯನ್ನು ಹುರಿದ ನಂತರ ಅದನ್ನು ಶುಭ್ರವಾದ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡು, ಅದರ ಮೇಲೆ ಮರದ ಮಣೆಯನ್ನು ಇಟ್ಟು ಉಜ್ಜಿದರೆ ಕಾಳುಗಳು ಸಿಪ್ಪೆಯನ್ನು ಬಿಟ್ಟುಕೊಂಡು ಬೇಳೆಗಳಾಗಿ ಒಡೆದುಕೊಳ್ಳುತ್ತಿದ್ದವು. ಆಮೇಲೆ ಅದನ್ನು ಮರದಲ್ಲಿ ಕೇರಿ, ಸಿಪ್ಪೆಯನ್ನೂ ನೂಕನ್ನೂ ತೆಗೆದು ಕೆಟ್ಟುಹೋದ, ಚೂರುಚೂರಾದ, ಸೀದುಹೋದ ಕಾಳುಗಳನ್ನೆಲ್ಲಾ ಆರಿಸಿ ತೆಗೆದು ಹಸನು ಮಾಡಬೇಕಿತ್ತು. ಈ ಕೆಲಸಕ್ಕೆ ನಾವು ಮಕ್ಕಳೆಲ್ಲಾ ಅತ್ಯಂತ ಉತ್ಸುಕರಾಗಿ ಸಹಾಯ ಮಾಡುತ್ತಿದ್ದೆವು. ಒಡೆದ, ಸ್ವಲ್ಪ ಸೀದ ಕಾಳುಗಳೆಲ್ಲಾ ನಮ್ಮ ಹೊಟ್ಟೆಗೇ ತಾನೆ! ಹಾಗಾಗಿ ಅಲ್ಪ ಸ್ವಲ್ಪ ಮುಕ್ಕಾದ ಕಾಳುಗಳಿಗೂ ಎಳ್ಳಿನೊಂದಿಗೆ ಬೆರೆಯುವ ಸೌಭಾಗ್ಯವಿರುತ್ತಿರಲಿಲ್ಲ. ಹುರಿಗಡಲೆಯಾದರೂ ಅಷ್ಟೇ ಹುರಿಯುವ ಕೆಲಸವೊಂದು ಇರುತ್ತಿರಲಿಲ್ಲ. ಹೀಗೆ ಆರಿಸುವಾಗ ಇನ್ನೂ ಸಿಪ್ಪೆಯಿಟ್ಟುಕೊಂಡ ಕಾಳುಗಳು, ಒಡೆದವು, ಕಡೆಗೆ ಸ್ವಲ್ಪ ಸೀಳಿಕೊಂಡವು ಕೂಡಾ ನಮ್ಮ ನೈವೇದ್ಯಕ್ಕೇ! ಆರಿಸುವಾಗ ಎಂಜಲು ಮಾಡಿಕೊಂಡು ತಿನ್ನಬಾರದು; ಎಲ್ಲವನ್ನೂ ಒಂದು ತಟ್ಟೆಗೋ, ಬಟ್ಟಲಿಗೋ ಹಾಕಿಕೊಂಡು ನಂತರ ತಿನ್ನಬಹುದು ಎನ್ನುವ ಅಮ್ಮನ ನಿಬಂಧನೆಗೆ, ಯಾವ ಪ್ರತಿರೋಧವೂ ಇಲ್ಲದೆ ಒಪ್ಪಿಕೊಂಡು ನಮಗೆ ಸಾಕೆನಿಸುವಷ್ಟು ಸರಕು ಸಿಕ್ಕ ತಕ್ಷಣ ಕೆಲಸ ಸಾಕಾಯಿತೆಂದು ಎದ್ದೋಡುತ್ತಿದ್ದೆವು. ಎಷ್ಟನ್ನು ಮಾಡಿಕೊಟ್ಟಿದ್ದರೆ ಅಷ್ಟೇ ಅಮ್ಮನ ಪುಣ್ಯ!

ಎಳ್ಳನ್ನು ಶುದ್ಧಮಾಡುವುದೂ ಎರಡು ದಿನದ ಕೆಲಸವೇ. ಹಿಂದಿನ ದಿನವೇ ಎಳ್ಳನ್ನು ನೀರಿನಲ್ಲಿ ನೆನೆಯಿಟ್ಟು, ಮಾರನೆಯ ದಿನ ಬೆಳಗಿನ ಕೆಲಸವನ್ನೆಲ್ಲ ಮುಗಿಸಿಕೊಂಡು ಒಂದು ಶುಭ್ರವಾದ ಗೋಣಿಯ ಮೇಲೆ ನೆಂದ ಎಳ್ಳನ್ನು ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಳ್ಳುತ್ತಾ ಅದು ಬೆಳ್ಳಗಾಗುವ ತನಕ ಉಜ್ಜುತ್ತಿದ್ದರು. ಎಳ್ಳು ಎಷ್ಟು ಬೆಳ್ಳಗಾಗಿದೆ ಎನ್ನುವುದರ ಮೇಲೆ ಉಜ್ಜುವವರ ಕಲಾನೈಪುಣ್ಯ ನಿರ್ಧಾರವಾಗುತ್ತಿತ್ತು. ಎಷ್ಟೋ ಜನರು ಕರಿಎಳ್ಳನ್ನು ಉಜ್ಜಿ ಬೆಳ್ಳಗೆ ಮಾಡಿರುವುದನ್ನೂ ನೋಡಿದ್ದೇನೆ. ಹೀಗೆ ಉಜ್ಜಿದ ಎಳ್ಳಿನ ಸಿಪ್ಪೆಯನ್ನೆಲ್ಲಾ ಕೇರಿ ಆರಿಸಿ ನಂತರ ಮಂದ ಉರಿಯ ಮೇಲೆ ಬಾಣಲೆಯ ಮೇಲೆ ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಂಡು, ಹೊಸ ಪೊರಕೆ ಕಡ್ಡಿಯನ್ನು ಮಧ್ಯಭಾಗಕ್ಕೆ ಕಟ್ಟಿಕೊಂಡು, ಕಡ್ಡಿಯ ಕಡೆಯ ಭಾಗದಿಂದ ಅದನ್ನು ಘಮ್ಮೆನ್ನುವ ಹಾಗೆ, ಹದವಾಗಿ ಹುರಿಯುತ್ತಿದ್ದರು. ಹೀಗೆ ವಾರ, ಹತ್ತು ದಿನದ ಶ್ರಮದ ನಂತರ ಸಂಕ್ರಾಂತಿ ಎಳ್ಳು ತಯಾರಾಗುತ್ತಿತ್ತು. ಯಾರ ಮನೆಯ ಎಳ್ಳು ಬಂದರೂ ಅದರ ಬಣ್ಣ, ರುಚಿ, ವಾಸನೆಗಳ ಮೌಲ್ಯಮಾಪನವಾಗಿ ಅವರ ಪರಿಶ್ರಮವು ವಿಮರ್ಶೆಗೆ ಒಳಗಾಗುತ್ತಿತ್ತು! ಪೂರ್ತಿ ತಯಾರಾಗಿರುವ ಮಿಶ್ರಣ, ಇಲ್ಲವೇ ಅಭಿರುಚಿಗೆ ತಕ್ಕಂತೆ ಬೆರೆಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳು ಸಿಗುತ್ತಿರುವ ಈ ದಿನಗಳಲ್ಲಿ ಅಂದಿನ ಕಷ್ಟವೂ ಇಲ್ಲ; ಸಂಭ್ರಮವೂ ಇಲ್ಲ ಬಿಡಿ.

ಇನ್ನು ಸಕ್ಕರೆ ಅಚ್ಚನ್ನ ತಯಾರಿಸುವುದಂತೂ ಒಂದು ದೊಡ್ಡ ಕಲೆಯೇ. ಪರಿಶ್ರಮವೂ ಬಹಳ. ಹಳಕುಹಳಕಾದ ಸಕ್ಕರೆಯನ್ನು ಅದು ಮುಳುಗುವಷ್ಟೇ ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಕುದಿಸಿ, ಕುದಿಯುತ್ತಿರುವಾಗ ಒಮ್ಮೆ ಹಾಲು ಹಾಕಿ ಅದನ್ನು ಬೆಳ್ಳಗಿರುವ ಪಂಚೆಯ ಬಟ್ಟೆಯಲ್ಲಿ ಶೋಧಿಸಿಕೊಂಡು, ನಂತರ ಇನ್ನೊಮ್ಮೆ ಮೊಸರು ಹಾಕಿ ಕುದಿಸಿ ಶೋಧಿಸಿದ ಮೇಲೆ ಪಾಕ ಎಷ್ಟು ಬೆಳ್ಳಗಾಯಿತೆಂಬುದರ ಮೇಲೆ ಇನ್ನೊಮ್ಮೆ ಕುದಿಸಿ ಶುಚಿಮಾಡಬೇಕೇ ಎನ್ನುವುದು ನಿರ್ಧಾರವಾಗುತ್ತಿತ್ತು. ಅಟ್ಟದ ಮೇಲಿಟ್ಟಿದ್ದ ಮರದ ಅಚ್ಚುಗಳನ್ನು ಹಿಂದಿನ ದಿನವೇ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡುತ್ತಿದ್ದರು. ಇನ್ನು ಅಚ್ಚು ಹಾಕುವ ಕಾರ್ಯಕ್ರಮಕ್ಕಂತೂ ಕನಿಷ್ಟ ಇಬ್ಬರಾದರೂ ಬೇಕೇ ಬೇಕು. ನಾಲ್ಕೈದು ಜನ ಸೇರಿದರೆ ಕೆಲಸ ಸುಲುಭ. ಹಾಗಾಗಿ ಅಕ್ಕಪಕ್ಕದವರೆಲ್ಲಾ ಸೇರಿಕೊಂಡು ಸಂತೋಷವಾಗಿ, ಸಹಕಾರಿ ಮನೋಭಾವದಿಂದ ಮಾಡುತ್ತಿದ್ದುದೇ ಹೆಚ್ಚು. ಶುದ್ಧವಾದ ಪಾಕವನ್ನು ಒಂದೋ ಎರಡೋ ಸೌಟನ್ನು ಒಂದು ತಪ್ಪ ತಳದ ಪಾತ್ರೆಗೆ ಹಾಕಿಕೊಂಡು ಪುಟ್ಟ ಇಜ್ಜಿಲ ಒಲೆಯ ಮೇಲೋ, ಇಲ್ಲವೇ ಬತ್ತಿಯ ಸೀಮೆಣ್ಣೆಯ ಸ್ಟೌವ್ ಮೇಲೋ ಬಿಸಿ ಮಾಡುತ್ತಾ, ಆಗಾಗ ಪಾಕದ ಹದ ನೋಡುತ್ತಾ, ಪಾಕ ಸೌಟಿನಿಂದ ಪಾತ್ರೆಯವರೆಗೆ ಒಂದು ನೂಲಿನಂತೆ ನಿಂತರೆ ಅದು ಪಾಕದ ಸರಿಯಾದ ಹದ. ತಕ್ಷಣ ಅದನ್ನು ಕಂಚಿನ ಬೋಗುಣಿಗೆ ಸುರಿದುಕೊಂಡು ಸಿದ್ಧಮಾಡಿಟ್ಟುಕೊಂಡಿದ್ದ ಇನ್ನೊಂದು ಒಬ್ಬೆ ಪಾಕವನ್ನು ಒಲೆಯ ಮೇಲಿಟ್ಟು, ಬೋಗುಣಿಯಲ್ಲಿದ್ದ ಪಾಕವನ್ನು ಸೌಟಿನಿಂದ ತಿಕ್ಕುತ್ತಾ ಅದು ಮಂದ ಬಿಳಿಛಾಯೆಗೆ ತಿರುಗಿದೊಡನೆ, ನೀರಿನಿಂದ ಹೊರತೆಗೆದು ಮಲ್ ಪಂಚೆಯ ಬಟ್ಟೆಯಲ್ಲಿ ಒರೆಸಿ ಜೋಡಿಸಿ ದಾರ ಕಟ್ಟಿಯೋ, ರಬ್ಬರ್ ಬ್ಯಾಂಡ್ ಹಾಕಿಕೊಂಡೋ ತಯಾರಾಗಿ ಮಣೆಯ ಮೇಲೆ ಕುಳಿತಿರುತ್ತಿದ್ದ ಅಚ್ಚಿನ ಬಾಯಿಗೆ ನಾಜೂಕಾಗಿ ಸುತ್ತಲೂ ಚೆಲ್ಲದಂತೆ, ಹಾಗೆ ಸುರಿಯುವಾಗ ಪಾಕ ಪೂರ್ತಿಯಾಗಿ ಒಳಸೇರುವಂತೆ ಕುಟ್ಟಿ ಕುಟ್ಟಿ ಅದು ತುಂಬುವಷ್ಟು ಪಾಕವನ್ನು ತುಂಬಿಸುವುದು ಜಾಣತನದ ಕಲೆಯೇ. ಅದು ಒಣಗಿದ ಮೇಲೆ ಮೇಲಿನ ಹೆಚ್ಚಿನ ಭಾಗವನ್ನು ಹೆರೆದು, ಅದರ ಕಟ್ಟನ್ನು ಬಿಚ್ಚಿ ನಾಜೂಕಾಗಿ ಹಿಡಿದುಕೊಂಡು, ಎಚ್ಚರಿಕೆಯಿಂದ ಅಚ್ಚಿನಿಂದ ಬಿಡಿಸಿ ತಟ್ಟೆಯ ಮೇಲಿರಿಸಿದರೆ ಅಲ್ಲಿಗೆ ಅದರ ಕೆಲಸ ಸಂಪೂರ್ಣ. ಕೆಲವೊಮ್ಮೆ ಕೋಳಿಯ ಕಾಲೋ, ಬಸವನ ಮೂತಿಯೋ, ಮೀನಿನ ಬಾಲವೋ ಮುರಿದು ಕೈಗೆ ಬರುತ್ತಿತ್ತು. ಆಗ ತಕ್ಷಣವೇ ತಿಕ್ಕುತ್ತಿದ್ದ ಬಿಸಿ ಪಾಕದಲ್ಲಿ ಅದರ ಅಂಟಿಕೊಳ್ಳಬೇಕಿರುವ ಭಾಗವನ್ನು ಸ್ವಲ್ಪ ಅದ್ದಿ ಇನ್ನೊಂದು ಭಾಗಕ್ಕೆ ಅಂಟಿಸಿ, ಹಾಗೆಯೇ ಇಟ್ಟುಕೊಂಡಿದ್ದು, ಸ್ವಲ್ಪ ಅಂಟಿಕೊಂಡ ನಂತರ ತಟ್ಟೆಯ ಮೇಲೆ ಕೆಲಕಾಲ ಮಲಗಿಸಿದರೆ ಶಸ್ತ್ರಕ್ರಿಯೆಯಾದ ರೋಗಿ ಆರೋಗ್ಯವಂತನಾಗಿ ಏಳುವಂತೆ, ಸ್ವಲ್ಪ ಕಾಲದ ನಂತರ ಎದ್ದು ನಿಲ್ಲಲು ಶಕ್ತವಾಗುತ್ತಿದ್ದವು. ಈ ಶಸ್ತ್ರಕ್ರಿಯೆ ವಿಫಲವಾದರೆ ಕೋಳಿ, ಮೀನು, ಮಂಟಪ, ಜಿಂಕೆಗಳೆಲ್ಲಾ ಸುತ್ತಲೂ ಬಕಗಳಂತೆ ಕಾಯುತ್ತಿದ್ದ ಮಕ್ಕಳ ಬಾಯಿ ಪಾಲಾಗುತ್ತಿದ್ದವು! ಮಣೆಯ ಮೇಲೆ ಅಲ್ಪ ಸ್ವಲ್ಪ ಚೆಲ್ಲಿದ್ದ ಪಾಕ ಮತ್ತು ಮಕ್ಕಳ ಬಾಯಿಗೆ ಬೀಳದೆ ಉಳಿದುಕೊಂಡಿದ್ದ ತುಂಡುಗಳು ಬಣ್ಣವನ್ನು ಬೆರೆಸಿಕೊಂಡು ಮತ್ತೊಮ್ಮೆ ಜನ್ಮ ತಾಳುತ್ತಿದ್ದವು. ಒಂದೇ ಅಚ್ಚಿನಲ್ಲಿ ಎರಡು ಮೂರು ಬಣ್ಣದ ಪಾಕವನ್ನು ಸುರಿದು ಬಣ್ಣ ಬಣ್ಣವಾದ ಸಕ್ಕರೆಗೊಂಬೆಗಳನ್ನು ಮಾಡುವ ಪ್ರವೀಣರೂ ಇದ್ದರು!

ಇದೇ ಸಕ್ಕರೆ ಪಾಕವನ್ನು ಉಪಯೋಗಿಸಿಕೊಂಡು ಬಾಣಲೆಗೆ ಎಳ್ಳನ್ನೋ, ಸೀಮೇ ಅಕ್ಕಿಯನ್ನೋ ಸ್ವಲ್ಪ ಹಾಕಿಕೊಂಡು, ಸ್ವಲ್ಪ ಸ್ವಲ್ಪವಾಗಿ ಅದಕ್ಕೆ ಸಕ್ಕರೆ ಪಾಕವನ್ನು ಹಾಕಿಕೊಳ್ಳುತ್ತಾ ಎಳ್ಳನ್ನು ಹುರಿಯುವ ಹಾಗೆ ನಿಧಾನವಾಗಿ ಹುರಿಯುತ್ತಾ ಕುಸುರೆಳ್ಳನ್ನೂ ಕೆಲವರು ಮಾಡುತ್ತಿದ್ದರು. ಹಾಗೆಯೇ ಇದೇ ಪಾಕವನ್ನು ಚೆನ್ನಾಗಿ ಉಜ್ಜಿ ಬೆಣ್ಣೆಯ ಉಂಡೆಯಂತೆ ಮಾಡಿಕೊಂಡು ಅದರಲ್ಲಿ ಮಣಿಗಳನ್ನು ಮಾಡಿ, ಅದನ್ನು ರಸ್ತು ಗುಂಡಿನೊಡನೆ ಪೋಣಿಸಿ, ಸರವನ್ನು ಮಾಡುತ್ತಿದ್ದರು. ಸಂಜೆ ಅದನ್ನು ಎಳೆಯ ಮಕ್ಕಳ ಕೊರಳಿಗೆ ಹಾಕಿ, ಕಬ್ಬಿನ ತುಂಡು, ಬೋರೆ ಹಣ್ಣು (ಎಲಚಿ ಹಣ್ಣು) ಮತ್ತು ಕಾಸನ್ನು ಸೇರಿನ ತುಂಬಾ ತುಂಬಿಸಿ ಅದನ್ನು ಮಕ್ಕಳ ತಲೆಯ ಮೇಲೆ ಎರೆದು ಆರತಿ ಮಾಡುವ ಪದ್ಧತಿಯೂ ಕೆಲವರಲ್ಲಿ ಇತ್ತು. ಇಡೀ ಸೇರಿಗೆಲ್ಲಾ ಒಂದೆರಡು ರೂಪಾಯಿನಷ್ಟು ಚಿಲ್ಲರೆ ಕಾಸುಗಳಿದ್ದರೂ ಅದು ಬೀಳುವುದೇ ತಡ ಎಲ್ಲರೂ ಅದನ್ನು ಬಾಚಿಕೊಂಡು ಸಂಭ್ರಮಿಸುತ್ತಿದ್ದುದೇ ಒಂದು ಚಂದ!

ಈಗ ಮತ್ತೆ ನಮ್ಮ ಸಲಾಮನ ವಿಚಾರಕ್ಕೆ ಬರೋಣ. ಎಳ್ಳು, ಸಕ್ಕರೆ ಅಚ್ಚು ಮಾಡಿದರಷ್ಟೇ ಆಗಲಿಲ್ಲ; ಅದನ್ನು ಮಾಡುವುದೇ ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಬಂಧು, ಬಳಗ, ನೆಂಟರಿಷ್ಟರು, ಸ್ನೇಹಿತರ ಮನೆಗೆ ಹೋಗಿ ಬೀರುವುದಕ್ಕೆ. ಅಕ್ಕಪಕ್ಕದ ಮನೆಗಳಿಗೇನೋ ಹೋಗಿ ಬೀರಿ ಬರಬಹುದು. ದೂರದೂರದ ಮನೆಗಳಿಗೆ ನಡೆದುಕೊಂಡು ಹೋಗುವುದಾದರೆ ಅದೇ ಸಂಜೆಯಲ್ಲಿ ಎಲ್ಲರ ಮನೆಗೂ ಹೋಗಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಆದಿನ ನಮಗೆ ಸಲಾಮನ ಗಾಡಿಯ ರಥಯಾತ್ರೆ! ನಮ್ಮಮ್ಮ ಎಲ್ಲಿಗೆ ಹೋಗಬೇಕಾದರೂ ಹೆಚ್ಚಾಗಿ ಅವನ ಗಾಡಿಯಲ್ಲೇ ಹೋಗುತ್ತಿದ್ದುದರಿಂದ, ಅವನಿಗೆ ನಮ್ಮ ಬಂಧು, ಬಳಗ, ಗುರುತು ಪರಿಚಯದವರೆಲ್ಲರ ಮನೆಯೂ ಗೊತ್ತಿತ್ತು. ಆದಿನ ಮದ್ಯಾನ್ಹ ನಾಲ್ಕು ಗಂಟೆಯ ಒಳಗಾಗಿ ಬರುವಂತೆ ಅಮ್ಮ ಅವನಿಗೆ ಮೊದಲೇ ಹೇಳಿಟ್ಟಿರುತ್ತಿದ್ದರು. ಅಂತೆಯೇ ಅವನು ಬಂದಾಗ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಒಂದು ಇಪ್ಪತ್ತೈದು, ಮೂವತ್ತು ಮನೆಗಳನ್ನು ಹೇಳುತ್ತಿದ್ದರು. ಆರು ವರ್ಷದ ನಾನು, ನಾಲ್ಕು ವರ್ಷದ ನನ್ನ ತಂಗಿ ಇಬ್ಬರನ್ನೇ ಅವನ ಜವಾಬ್ದಾರಿಯ ಮೇಲೆ ಆರಾಮಾಗಿ ಕಳಿಸುತ್ತಿದ್ದರು. ನಮ್ಮ ಮೊದಲ ಗಮ್ಯ ಸ್ಥಾನ ದುರ್ಗಿಗುಡಿ ಬಡಾವಣೆಯಲ್ಲಿದ್ದ ನಮ್ಮಣ್ಣನ ಮನೆ. ಅಲ್ಲಿ ನಮ್ಮ ವಾರಿಗೆಯ ಅವರ ಮಕ್ಕಳಿಬ್ಬರು ನಮ್ಮ ಜೊತೆಗೂಡುತ್ತಿದ್ದರು. ನಾವು ನಾಲ್ಕು ಜನ ಮಕ್ಕಳನ್ನು ಪ್ರತಿಯೊಂದು ಮನೆಗೂ ಕರೆದೊಯ್ಯುತ್ತಿದ್ದ. ಮಕ್ಕಳ ಜೊತೆಗೆ ಅವನೂ ಒಬ್ಬ ಚಿಕ್ಕ ಹುಡುಗನೇ ಆಗಿರುತ್ತಿದ್ದ. ನಮ್ಮೊಂದಿಗೆ ನಗು, ಹರಟೆ, ಸಂತೋಷ ಇವುಗಳಲ್ಲಿ ನಮ್ಮ ಅವನ ನಡುವೆ ಯಾವ ಗೋಡೆಯೂ ಏಳುತ್ತಿರಲಿಲ್ಲ. ನಮ್ಮ ನಾಲ್ಕು ಜನರ ಮಧ್ಯೆ ಯಾರು ಹಿಂದೆ ಕೂರಬೇಕು, ಯಾರು ಮುಂದೆ ಕೂರಬೇಕು ಎಂದು ಆಗಾಗ ಏಳುವ ಜಗಳವನ್ನು ಹೇಗೋ ಪುಸಲಾಯಿಸಿ ಪರಿಹರಿಸುತ್ತಿದ್ದ. ನಾಲ್ಕು ಕಪಿಗಳನ್ನು ಕಟ್ಟಿಕೊಂಡು ಊರು ಸುತ್ತೂ ತಿರುಗುವುದರಲ್ಲಿ ಅವನಿಗೆ ಅದೇನು ಸಂತೋಷ ಸಿಗುತ್ತಿತ್ತೋ ದೇವರೇ ಬಲ್ಲ! ಪ್ರತಿಯೊಂದು ಮನೆಯ ಮುಂದೆ ಇಳಿಸುವಾಗಲೂ “ಬೇಗ ಬೇಗ ಬನ್ನಿ; ಇನ್ನೂ ತುಂಬಾ ಕಡೆ ಹೋಗ್ಬೇಕು” ಎಂದು ಬಾಯಲ್ಲಿ ಆಡುತ್ತಿದ್ದರೂ, ನಾವು ಎಳ್ಳು ಬೀರಿ, ಅವರ ಮನೆಯಲ್ಲಿ ಏನಾದರೂ ತಿನ್ನಲೋ, ಕುಡಿಯಲೋ ಕೊಟ್ಟರೆ ಅದನ್ನೂ ಪೂರೈಸಿಕೊಂಡು ಬರುವ ತನಕ ಕಾದಿದ್ದು, ಮುಂದಿನ ಮನೆಗೆ ಕರೆದೊಯ್ಯುತ್ತಿದ್ದ. ಕೆಲವೊಮ್ಮೆ ಅವರ ಮನೆಯಲ್ಲಿ ತಿನ್ನದೆ ಗಾಡಿಗೆ ತೆಗೆದುಕೊಂಡು ಬಂದರೆ ಅವನೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೆವು. ಅಮ್ಮ ಆರೂವರೆಯ ಒಳಗೆ ಮನೆಗೆ ವಾಪಸ್ಸು ಬರಬೇಕೆಂದು ಹೇಳಿದ್ದರೂ, ಹೀಗೆ ನಾವು ಇಡೀ ಶಿವಮೊಗ್ಗದ ಪರ್ಯಟನೆಯನ್ನು ಮಾಡಿಕೊಂಡು ರಾತ್ರಿ ಎಂಟುಗಂಟೆಯ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದೆವು. ಸಲಾಂ ಜೊತೆಯಲ್ಲಿರುತ್ತಿದ್ದುದರಿಂದ ಅಮ್ಮನಿಗೆ ಭಯವೇನೂ ಇರಲಿಲ್ಲ. ನಾಲ್ಕು ಗಂಟೆ ಕಾಲ ಅಷ್ಟು ಮನೆಗಳಿಗೆ ಕರೆದುಕೊಂಡು ಹೋಗಿ, ಕಾದು, ಜವಾಬ್ದಾರಿಯಿಂದ ವಾಪಸ್ಸು ಕರೆದುಕೊಂಡು ಬರುತ್ತಿದ್ದ ಸಲಾಮನಿಗೆ ಸಿಗುತ್ತಿದ್ದದ್ದು ಐ…ದು… ರೂಪಾಯಿ ಮತ್ತು ಸಾಕಷ್ಟು ಎಳ್ಳು, ಕಬ್ಬು, ಬಾಳೆಹಣ್ಣು ಮತ್ತೇನಾದರೂ ಆದಿನದ ವಿಶೇಷ ಜೊತೆಗೆ ನಮ್ಮ ಸಂತೋಷದ ವಿದಾಯ… ಅವನೂ ಸಂತೋಷದಿಂದಲೇ ಹೋಗುತ್ತಿದ್ದ.

ಹೀಗೆ ಸುಮಾರು ಎಂಟು ಹತ್ತು ವರ್ಷಗಳು ನಾವು ಪ್ರತಿ ವರ್ಷದ ಸಂಕ್ರಾಂತಿಯಂದು ಈ ರಥಯಾತ್ರೆಯ ಸೌಭಾಗ್ಯವನ್ನು ಅನುಭವಿಸಿದ್ದೇವೆ. ನಾವು ಬೆಳೆಯುತ್ತಾ ಇದ್ದ ಹಾಗೆ ನಮ್ಮ ಮಾತಿನ ವಿಷಯಗಳು ಬೆಳೆಯುತ್ತಾ ಇರುತ್ತಿದ್ದವು. ಅವನ ಮನೆಯ ಬಗ್ಗೆ, ಕುದುರೆಯ ಬಗ್ಗೆ, ಮಕ್ಕಳ ಬಗ್ಗೆ, ಅವರ ರೀತಿ ರಿವಾಜುಗಳ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತಿದ್ದ. ಯಾವುದೋ ಹೊಸ ಪ್ರಪಂಚದ ವಿಷಯಗಳಂತೆ ಅವುಗಳನ್ನು ಕೇಳುತ್ತಿದ್ದೆವು. ಗಾಡಿಯೇರುವಾಗ ಯಾವ ನಗುಮುಖವಿರುತ್ತಿತ್ತೋ, ಗಾಡಿಯಿಂದ ಇಳಿಯುವಾಗಲೂ ಅದೇ ನಗು, ಸಂತಸ ಎಲ್ಲರ ಮುಖದಲ್ಲೂ ಇರುತ್ತಿತ್ತು. ಅವನ ಗಾಡಿಯಲ್ಲಿ ನಾಲ್ಕು ಹೆಣ್ಣು ಮಕ್ಕಳನ್ನು ಕಳಿಸುವ ಅಮ್ಮನ ನಂಬಿಕೆ ಎಷ್ಟಿತ್ತೋ, ಅದನ್ನು ಯಾವತ್ತಿಗೂ ಉಳಿಸಿಕೊಂಡ ಅವನ ನಿಯತ್ತು, ನಿಷ್ಠೆಗಳೂ ಅಷ್ಟೇ ಇತ್ತು! ಅವನ ಬಗ್ಗೆ ಆಡಲು ಒಂದು ಅಡ್ಡ ಮಾತೂ ನನ್ನ ಬಳಿ ಇಲ್ಲ…

ನಾವು ಹೈಸ್ಕೂಲು ಮುಗಿಸುವ ವೇಳೆಗೆ ಶಿವಮೊಗ್ಗದಲ್ಲಿ ಮೂರು ಮಾರ್ಗದಲ್ಲಿ ಸಿಟಿ ಬಸ್ ಸಂಚಾರ ಆರಂಭವಾಗಿತ್ತು. ಅಲ್ಲಿಲ್ಲಿ ಆಟೋಗಳೂ ಶಬ್ದ ಮಾಡತೊಡಗಿದವು. ಆದಾಯ ಕಮ್ಮಿಯಾಗಿ ನಿಧಾನವಾಗಿ ಸ್ಟ್ಯಾಂಡಿನಲ್ಲಿರುತ್ತಿದ್ದ ಕುದುರೆಗಾಡಿಗಳೂ ಮರೆಯಾಗತೊಡಗಿದವು. ಹಾಗೆಯೇ ಸಲಾಮನ ಗಾಡಿಯೂ ಒಂದು ದಿನ ಮರೆಯಾಯಿತು. ಅಲ್ಲಿಗೆ, ನಾವು ಮನೆಮನೆಗೆ ಹೋಗಿ ಎಳ್ಳು ಬೀರುತ್ತಿದ್ದ ಕಾರ್ಯಕ್ರಮವೂ ನಿಂತು ಹೋಗಿ, ಕೇವಲ ಅಕ್ಕ ಪಕ್ಕದ ಮನೆಗಳಿಗೆ ಮಾತ್ರ ಹೋಗಿ ಕೊಟ್ಟು ಬರುವಂತಾಯಿತು. ಈಗ ನೀವೇ ಹೇಳಿ… ನಮ್ಮ ಸಂಕ್ರಾಂತಿಗೂ, ಸಲಾಂ ಗಾಡಿಗೂ ಅವಿನಾಭಾವದ ಸಂಬಂಧವಿರಲಿಲ್ಲವೇ?!

********************************

One thought on “ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ

  1. ಸಲಾಮಿನ ಗಾಡಿಗೂ ಸಂಕ್ರಾಂತಿಯ ವಿಶೇಷ ಎಳ್ಳು ಬೆಲ್ಲಕ್ಕೂ ಇದ್ದ ನೆಂಟಸ್ತಿಕೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ.

Leave a Reply

Back To Top