ಸಂಕ್ರಾಂತಿಕಾವ್ಯ ಸುಗ್ಗಿ
ಉರಿಯುವ ಬದಲು ಬೆಳಗಬೇಕು
ಸಂಗೀತ ರವಿರಾಜ್
ಸಮಾಜ ಅಭಯದ ಮುಖವಾಡ ಹಾಕಿ
ನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….
ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆ
ಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ?
ಮಲ ತೆಗೆಯಲು ಒಂದು
ಮನುಷ್ಯ ವರ್ಗವ ಸೃಷ್ಠಿಸಿ
ಅದಕ್ಕೊಂದು ಜಾತಿಯ ಹೆಸರು ಕೊಟ್ಟ
ಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿ
ದೇವ ಸ್ವರೂಪ ತೋಟಿಗಳ
ಒಳತೋಟಿಯ ಅರಿವಾಗಿ
ಒಂದು ತೊಟ್ಟು ಕಣ್ಣೀರು ಹಾಕಿದರೆ
ಈ ಜನ್ಮ ಸಾರ್ಥಕ.
ಜಗದಲ್ಲಿ ಜಲಗಾರ ಜಾಡಮಾಲಿಯ
ಒಡಲ ಬೇಗುದಿಯ ಉರಿಗೆ
ತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!
ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆ
ಶೋಚನೀಯ ಸ್ಥಿತಿಯ ಗತಿಗಳು
ಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ , ವಾಸಿಸುವಲ್ಲಿ
ಜಲಗಾರನೆ ಜ್ವಲಂತ ಉದಾಹರಣೆಯಿಲ್ಲಿ
ಸೂಟುಗಳ ಜೇಬಿನಲ್ಲಿ ಇವರ ಕನಸುಗಳೆಲ್ಲ ಬಿಕರಿಗಿವೆ!
ಕೊಳ್ಳುವರಿಲ್ಲ ಕೇಳುವರಿಲ್ಲ
ಅಲ್ಲಿಗೆ ಕನಸುಗಳು ಕಮರಿವೆ
ಈ ಕುಲದ ದೀಪಗಳ ಬೆಳಕು ಪಸರಿಸಲು
ನಾವೆಲ್ಲ ದೀಪದಂತೆ ಉರಿಯುವುದಲ್ಲ ಬೆಳಗಬೇಕು !
ಕನಿಷ್ಠ ಸಂಪಾದನೆಯ ಕೆಲಸಗಳಿಗೆ
ಜಾತಿ ವರ್ಗಗಳ ನಿರ್ಮಿಸಿಟ್ಟ
ಮಗದೊಂದು ಮನುಷ್ಯ ವರ್ಗಕ್ಕೆ ಸಹಮತವಿಲ್ಲ.
“ಉರಿಯುವ ಬದಲು …ಬೆಳಗಬೇಕು…”
ಎಂತಹಾ ಹ್ರದಯಸ್ಪರ್ಶಿ ಕವನದ ಶೀರ್ಷಿಕೆ…
ಕವಯಿತ್ರಿ ಶ್ರೀಮತಿ ಸಂಗೀತಾ ಗುರುರಾಜ್ ರವರ ಈ ಕವನ ಪ್ರಚಲಿತ ವಿದ್ಯಮಾನಕ್ಕೊಂದು ಸವಾಲಾಗಿದೆ.
ಅಭಿನಂದನೆಗಳು….
ವರ್ತಮಾನಕ್ಕೆ ಮುಖಾಮುಖಿಯಾದ ಕವಿತೆ.
ಕವಿ ಮನದ ಕಾಣ್ಕೆ ದೊಡ್ಡದು…