ಸಂಕ್ರಾಂತಿ ಕಾವ್ಯ ಸುಗ್ಗಿ
ಸಂ-ಕ್ರಾಂತಿ!
ಚೈತ್ರ ಶಿವಯೋಗಿಮಠ
ಆಂತರ್ಯದಲ್ಲಿ ಭುಗಿಲೆದ್ದಿದ್ದರೂ
ಅಸಮಾಧಾನ, ಅಶಾಂತಿ
ಶಮನ ಮಾಡಲಿ ಅದೆಲ್ಲವ
ಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ!
ಮನದೊಳಗೆ ನಡೆದಿದ್ದರೂ
ಭಾವನೆಗಳ ಸಂಘರ್ಷ-ಕ್ರಾಂತಿ
ರಮಿಸಿ ತುಂಬಲಿ ಸಿಹಿ ಹರುಷವ
ಕಬ್ಬಿನ ಜಲ್ಲೆಯ ಸಂಕ್ರಾಂತಿ!
ಒಲವು ಮರೆತು, ಒಳಗೆ
ತುಂಬಿದ್ದರೂ ಸಿರಿತನದ ಭ್ರಾಂತಿ..
ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣ
ಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ!
ಮನವು ಮುದುಡಿ, ಭಾವ ಕದಡಿ
ಹಾರಿ ಹೋಗಿದ್ದರೂ ಮನದ ಜಂತಿ
ಅರಳಿಸಿ ಮನವ, ತುಂಬಲಿ ಸ್ಥೈರ್ಯವ
ಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!!
ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿ
ಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿ
ದಣಿದು ನಲುಗಿರುವ, ಮನವೆಂಬ
ರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ ಸಂಕ್ರಾಂತಿ!
ತಿದ್ದಿ ತೀಡಿದರೂ ಕಲಿಯದ ಮನಸಿಗೆ,
ಅದೆಷ್ಟು ಬಿಗಿದರೂ ಹಿಡಿತವ ಒಲ್ಲೆಯೆನ್ನುವ ಖೋಡಿ.
ಸರಿ ದಾರಿಗೆ ತರಲಿ ಮನವೆಂಬ ಮರ್ಕಟನ
ಸೂರ್ಯ ಪಥವ ಬದಲಿಸುವ ಸಂಕ್ರಾಂತಿ
ಎಳ್ಳು ಬೆಲ್ಲ ತಿಂದು, ಕಬ್ಬಿನ ಜಲ್ಲೆಯ ಜಗಿದು
ಬೇಯಿಸಿದ ಅವರೆ-ನೆಲಗಡಲೆ ಅಗಿದು
ಪಾಯಸ ಹೋಳಿಗೆಗಳ ಉಂಡು
ಬೇಡುವ, ಪ್ರಶಾಂತತೆಯು ಮನವ ತುಂಬಲೆಂದು!