ಸಂಕ್ರಾಂತಿ ಕಾವ್ಯ ಸುಗ್ಗಿ
ಸರಳ ಸೂತ್ರ
ಎಸ್ ನಾಗಶ್ರೀ
ಆರುತಿಂಗಳಾದರೂ ಬಳಸದ್ದನ್ನು
ಬಿಸಾಡುವುದು ಕ್ಷೇಮವೆಂದರು
ಒಪ್ಪಿದೆ
ಬಟ್ಟೆಬರೆಯೆಲ್ಲಾ ಹರಡಿ
ಹತ್ತಾರು ಚೂಡಿ, ಸೀರೆ, ರವಿಕೆ
ಫಳಗುಟ್ಟುವ ಕಿವಿಯೋಲೆ
ಜಾಮೂನ್ ಬಟ್ಟಲು
ಲೆಕ್ಕವಿರದಷ್ಟು ಲೋಟ, ತಟ್ಟೆ
ಓದಲಾಗದ ಪುಸ್ತಕ
ರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದ
ಪೆನ್ನು
ಖಾಲಿ ಹಾಳೆಯ ಪುಸ್ತಕ
ಡೈರಿಗಳನು
ತಿರುಗಾಮುರುಗಾ ನೋಡಿ
ಪೇರಿಸಿಟ್ಟೆ
ಗುಜರಿಗೆ ಹಾಕಿ
ನೂರಿನ್ನೂರು ಎಣಿಸುವುದೆಷ್ಟರ ಮಾತು?
ಬಡವರಿಗೆ ಕೊಡಬೇಕು
ಹಬ್ಬದ ಸಂಜೆ ಅವರುಟ್ಟು ತೊಟ್ಟು
ಸಂಭ್ರಮಿಸಬೇಕು
ಕನಸುಗಳ ಮುಗುಚಿ ಹಾಕಿ
ಮಲಗಿದ್ದು ಗೊತ್ತು
ಈ ನೆನಪುಗಳು ಜೀವ ತಿನ್ನುತ್ತವೆ
ಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆ
ತಲೆ ಮೇಲೆ ಭಾರ ಗಂಟೊಂದನು
ನಜ್ಜುಗುಜ್ಜಾದ ತಟ್ಟೆಯಲ್ಲೇ
ಅನ್ನವುಣ್ಣುವ ಅಪ್ಪ
ಹರಿದ ಸೀರೆಯುಡುವ ಅಜ್ಜಿ
ಬೇಯಿಸುವ ಪಾತ್ರೆಯೂ ಇಲ್ಲದೆ
ಬೀದಿಗೆ ಬಿದ್ದ
ಗೃಹಭಂಗದ ನಂಜಮ್ಮ
ಹೀಗೆ ಯಾವುದೋ ನೆನಪುಗಳು
ಗೀಟುಗಳೆಳೆದು
ಕಾಟಕೊಡುತ್ತವೆ
ತಂತಿಯ ಮೇಲಿನ ಬಟ್ಟೆಗಳಂತೆ
ಫಟಫಟಿಸುತ್ತದೆ ಮನಸು
ವರಾಂಡದ ಮೂಲೆಯಲ್ಲಿ
ಗಂಟಾಗಿ ಕೂತ ಸಾಮಾನುಗಳನ್ನು
ಮತ್ತೆ ಬಿಚ್ಚಿ ಜೋಡಿಸುತ್ತೇನೆ
ಎರಡು ಸೀರೆ
ನಾಲ್ಕಾರು ಡಬ್ಬ
ಆಚೆ ಹಾಕುವುದಕ್ಕೆ
ಇಡೀ ದಿನ ಬೇಕೆ
ಎಂದವರನ್ನು
ಕಣ್ಣಲ್ಲೇ ಸುಟ್ಟು
ಅಡುಗೆಗಿಡುತ್ತೇನೆ
ಹುರಿಯುವಾಗ, ಹೆಚ್ಚುವಾಗ
ತೊಳೆದು ಹರಡುವಾಗ
ಸರಳ ಬದುಕಿನ ಸೂತ್ರ
ಕಡಿಮೆ ವಸ್ತುಗಳಲ್ಲಿದೆ
ಎಂದವರ ಮಾತು ಮಥಿಸುತ್ತಾ
ಗಹನ ಚಿಂತನೆಗಿಳಿಯುತ್ತೇನೆ
ಮತ್ತೆ ಮರೆಯುತ್ತೇನೆ
ಮರೆವೊಂದೇ ಸರಳವೆನಿಸಿ
ನಕ್ಕುಬಿಡುತ್ತೇನೆ
Wow.ಎಷ್ಟೊಂದು ಸರಳವೂ, ಗಹನವೂ..ಬಹಳ ಹಿಡಿಸಿತು