ಸಂಕ್ರಾಂತಿ ಕಾವ್ಯ ಸುಗ್ಗಿ
ನಂದಿನಿ ಹೆದ್ದುರ್ಗ
ನನ್ನದೆಯ ಗಾಯಗಳಾವೂ ನನ್ನವಲ್ಲ..
ನೀನದರ ಒಡೆಯ..
ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂ
ನಿನ್ನವೇ ಕೊಡುಗೆ..
ನೊಂದು ನೋಯಿಸಿದ್ದಾದ ಮೇಲೆ
ಒಂದು ಅಂತರದಲಿ ನೀ ನಿಂತು ನೋಡುವೆ.
ಈ ಕ್ರೂರ ಮೌನದೊಳಗೆ
ಎಷ್ಟೊಂದು ಪ್ರಶ್ನೆಗಳು..
ಬಗೆದು ತೋರಬಹುದೇ ಒಲವ ಈ ಬಗೆಯನ್ನು?
ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?
ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?
ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!!
ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯ
ಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರು
ಎರಡು ಹೂವೆಸಳು,ಬೆಳುದಿಂಗಳು,
ಎದೆಯ ಆಲಾಪಕ್ಕೂ
ಬಿಡುವಿಲ್ಲ ನಿನಗೆ
ಶೂನ್ಯ ಹುಟ್ಟಿಸಿದ್ದೂ ನೀನೇ.
ಕೋಲಾಹಲಕ್ಕೆ ಕಾರಣವೂ ನೀನೇ
ನಾನು ಅಮಾವಾಸ್ಯೆ ಇರುಳು…
ನೀನು ನಡುರಾತ್ರಿ ಎರಗುವ ನೋವು
ಒಲವೂ ಅಲೌಕಿಕ…!!!
ದಯಮಾಡಿ ನಿನ್ನ ಬರಡು ದೇವರಿಗೆ ತಿಳಿಹೇಳು.
__—————————–