ಸಂಕ್ರಾಂತಿ ಕಾವ್ಯ ಸುಗ್ಗಿ
ಹೊಸ ಹಾಡು
ವಸುಂಧರಾ ಕದಲೂರು
ಇಂದಿನ ಹೊಸತು
ನಾಳೆ ಹಳತಾಗಬೇಕು
ಮತ್ತೆ ನಾಳೆಯೂ ಹೊಸತು
ದಿನವಾಗಬೇಕು.
ಕ್ಷಣ ಕಳೆದು ಸಮಯ
ಉರುಳುತಿರಬೇಕು
ಬೇರೆ ಗಳಿಗೆ ನಮಗಾಗಿ
ಮರಳಿ ಬರಬೇಕು.
ಬೆಳಕು ಮತ್ತೆ ಮತ್ತೆ
ಉದಯಿಸುತಾ ತಾ
ಹೇಳುವುದು ಏನನ್ನು?
ನಿನ್ನೆಯೂ
ಬಂದಿದ್ದೆನೆಂಬ ಬೇಸರವನ್ನೇ?!
ಇರುಳ ಕತ್ತಲಲಿ ಮತ್ತೆ
ಮುಳುಗುವ ಭಯವನ್ನೇ..?!
ಅನುಕರಿಸು ದಿನಪನನು
ಅನುಸರಿಸು ಇಳೆಯ
ಪರಿಭ್ರಮಣೆಯನು.
ಆಗು ನೀ ನವ ನಾವೀನ್ಯ
ಚೈತನ್ಯ ದೀವಿಗೆ.
ಅಲೆಯಾಗು ಸೆಲೆಯಾಗು
ಭೋರ್ಗರೆದು ಮೊರೆದು
ಮಗುವಾಗಿ ಶರಣಾಗು
ಕಡಲ ದೇವಿಗೆ.
ನೀನಾಗದಿರು ಎಂದೆಂದಿಗೂ
ಚಿತ್ತ ಚಾಂಚಲ್ಯ
ಚಕ್ರವ್ಯೂಹದಲಿ ಸಿಲುಕಿ
ತೊಳಲುವ ಬಂಧಿಯಾದ
ಖೈದಿಯಂತೆ;
ಚಿಂತಿಸೊಮ್ಮೆ ಮನದೆರೆದು
ನೀ ಆಗು ನಿಗೂಢ ವ್ಯೂಹ
ಕಳಿಚಿ ಅನಂತದೆಡೆಗೆ ಹಾರುವ
ಪತಂಗದಂತೆ.
ಒಳ್ಳೆಯ ಕವಿತೆ ವಸುಂಧರಾ