ಸಂಕ್ರಾಂತಿ ಕಾವ್ಯ ಸುಗ್ಗಿ
ಉತ್ತರಾಯಣಕ್ಕೆ ಹೊರಟ ಸೂರ್ಯ
ಅನಿತಾ ಪಿ. ಪೂಜಾರಿ ತಾಕೊಡೆ
ಆ ವಸಂತ ಕಳೆದು ಈ ವಸಂತದವರೆಗೆ
ಮೌನ ಧ್ಯಾನದ ತಪದೊಳಿದ್ದವಳು
ಕಳಚಿ ಬಂದಿಹಳು ತನ್ನ ತೋಳ ತೆಕ್ಕೆಯಲಿ
ಆತುಕೊಂಡಿದ್ದ ಹಳೆಯ ನೆನಪಿನೆಲೆಗಳನು
ಹಾಗೆ ಬಂದವಳೇ
ಚಿಗುರು ಬದುಕಿನ ಮಾಧುರ್ಯಕೆ ಮುನ್ನುಡಿ ಬರೆದು
ಮೊಗ್ಗಿನ ಮೋಹದಿ ಅರಳಿನೊಡವೆಯ ತೊಟ್ಟು
ನವೋಲ್ಲಾಸದ ವಸಂತದಿ ಮೈದಳೆದು ನಿಂತಿಹಳು ಪ್ರಕೃತಿ,
ತಿಳಿಹಸಿರಲಿ ಕೆಂಪು ಕುಸುರಿಯ ಸೀರೆಯನುಟ್ಟು
ಸಿಹಿಗಾಳಿಯ ತಂಪು ತಳಿರು ಹೂವುಗಳಿಂಪಲಿ
ಓಲಾಡಿ ನಲಿದಾಡಿ ವಿಹರಿಸಲೆಂದು
ಊರೂರಿಂದ ಅಲೆದಲೆದು ಬಂದಿಹವು
ಹೊಸಪುಕ್ಕ ಮೂಡಿದ ಹೊಸಭಾವದ ಹಕ್ಕಿ
ಕರಿಮೋಡ ದೂರ ಸರಿದು ಬೆಳ್ಮುಗಿಲು ಸನಿಹ ಒಲಿದು
ಹೊನ್ನ ಚೆನ್ನಿಗ ನಡೆವ ಪಥದಲಿ
ದೂರ ದೂರದವರೆಗೆ ನುಣ್ಣನೆ ಹಾಸಿ
ಅಣಿಯಾಗಿಹವಲ್ಲಿ ಸಡಗರದ ಮೆರವಣಿಗೆಗೆ
ಮುಂಜಾನೆ ಮಂಜು ಹುಲ್ಲೆಸಳ ಮೊನೆಯಲಿ ನಿಂದು
ಇನಿತಿನಿತು ಜಿನುಗಿ ಮಿರ ಮಿರನೆ ಮಿನುಗಿ
ಸಂಕ್ರಾಂತಿಯೋಲಗದ ಅಧಿಪತಿಯನು
ಇಣುಕಿ ನೋಡುತಿಹವು ಮುಗಿಲಿನಾಚೆಗೆ
ಮಕರ ಸಂಕ್ರಾಂತಿಯಿಂದ
ಸ್ವರ್ಗದ ಬಾಗಿಲು ತೆರೆದಿರುವುದೆಂದು
ಭೀಷ್ಮನೂ ತಾಳಿಹನಂತೆ ಜೀವದುಸಿರನು ಹಿಡಿದು
ಗಂಗಾದೇವಿಯು ಧರೆಗಿಳಿದು ಬಂದು
ಭಗೀರಥನ ಹಿಂದೆ ಹಿಂದೆ ನಡೆದು
ಸಾಗರವ ಸೇರಿದಳಂತೆ ಇದೇ ದಿನದಂದು
ಸಂಕ್ರಾಂತಿ ತನ್ನ ಹಬ್ಬವೆಂದು ಬೀಗಿಕೊಂಡು
ಜಪ ತಪ ಧ್ಯಾನ ಅನುಷ್ಠಾನಗಳ ವೈಭವದಲಿ
ಹೊರಟು ನಿಂತಿಹನು ಸೂರ್ಯ
ಉತ್ತರಾಯಣದ ಹಾದಿಯಲಿ
ತಿರುಗುವ ಗತಿಯಲಿ ತಿಲ ತಿಲದಷ್ಟು ಅಗಲವಾಗಲು
ನಿಶೆಯು ಕುಗ್ಗಿ ಉಷೆಯು ಹಿರಿಹಿಗ್ಗಿ ಬೆಳೆಯುತಿಹಳು
ಸಂಕ್ರಾಂತಿ ಮೇಳಕೆ ಇಳೆಯಲ್ಲೂ ಹರುಷ
ಬಳುಕುವ ಬಣ್ಣ ಬಣ್ಣದ ಪತಾಕೆಗಳು
ತಿಲ, ತುಪ್ಪ, ಬೆಲ್ಲ, ಕಪ್ಪು ಉದ್ದಿನ ಹುಗ್ಗಿಯ ಸುಗ್ಗಿ
‘ತೀಳ್ ಗೂಡ್ ಕಾವಾ ಗೋಡ್ ಗೋಡ್ ಬೋಲಾ’
ಮನಸು ಮನಸುಗಳ ಸಂಬಂಧ ಬೆಸೆಯುವ
ಮಂತ್ರಗಳು ಎಲ್ಲ
ಉತ್ತರಾಯಣಕ್ಕೆ ಹೊರಟ ಸೂರ್ಯ – ಮಕರ ಸಂಕ್ರಾಂತಿಯ ಈ ಶುಭ ಮಹೂರ್ಥದಲ್ಲಿ ಅನಿತಾರವರ ಕವನ ತುಂಬಾ ಒಳ್ಳೇದಾಗಿ ಮೂಡಿಬಂದಿದೆ
ಧನ್ಯವಾದ ಸರ್
ಶ್ರೀಮತಿ ಅನಿತಾ ಪಿ.ಪೂಜಾರಿ,ತಾಕೋಡೆಯವರ ಈ ಸಂಕ್ರಾಂತಿಯ ಕಾವ್ಯ ಸುಗ್ಗಿ “ತೀಳ್ ಗೂಡ್ ಕಾವಾ ಗೋಡ್ ಗೋಡ್ ಬೋಲಾ” ಮನಸು ಮನಸುಗಳ ಸಂಬಂಧ ಬೆಸೆಯುವ ಯಶಸ್ವೀ ಕಾವ್ಯವಾಗಲೆಂದು ನನ್ನ ಹಾರೈಕೆ…
ಧನ್ಯವಾದ ಸರ್
ಪ್ರಕೃತಿಯಲ್ಲಾಗುವ ಬದಲಾವಣೆಗಳು ಮತ್ತು ಅದರೊಂದಿಗೆ ಕಾಣಲು ಸಿಗುವ ಸೌಂದರ್ಯವನ್ನು ನಿಮ್ಮ ಕಲ್ಪನೆ ಮತ್ತು ಪೌರಾಣಿಕ ಕಥೆಯೊಂದಿಗೆ ಬೆರೆಸಿ ಬರೆದ ಈ ಕವನ ನನಗೆ ತುಂಬಾ ಮೆಚ್ಚುಗೆಯಾಯಿತು.
ಧನ್ಯವಾದ ಸರ್