ಕವಿತೆ
ಕ್ಷೌರಿಕ
ಮಾಲತಿ ಶಶಿಧರ್
ಪಾಪ ಕ್ಷೌರಿಕ ಕವಿಯಂತಲ್ಲ
ಕವಿ ಬರೆದ ಸಾಲುಗಳ ತಿದ್ದಬಹುದು
ಬೇಡವೆನಿಸಿದರೆ ಅಳಿಸಿಬಿಡಬಹುದು
ಪಾಪ ಕ್ಷೌರಿಕ ಗೋಡೆ ತುಂಬಾ
ವಿಧ ವಿಧ ಹೇರ್ ಕಟ್ಗಳ ಚಿತ್ರ
ಅಂಟಿಸಿ ಕೇಳಿದ ಹಾಗೆ ಕೆರೆಯಬೇಕು
ಒಮ್ಮೆ ಕತ್ತರಿ ಕಚಕ್ ಎಂದರೆ
ಅಲ್ಲಿಗೇ ಮುಗಿಯಿತು
ಕವಿತೆ ಬರೆವ ನನ್ನ ಬೆರಳಿಗಿಂತಲೂ
ನನ್ನ ಕೂದಲು ಬಹಳಾ ವಿಧೇಯಿ
ಪದಗಳು ಸಿಗದೆ ಬೆರಳು ಪರದಾಟ
ನಡೆಸ ಬಹುದೇನೋ ಆದರೆ
ಕೂದಲು ಎಳೆದತ್ತ ಸುಮ್ಮನೆ
ಹೋರಡುತ್ತದೆ
ಬಾಚಣಿಗೆಯಾಗಲಿ ಬ್ಲೆಡ್ ಆಗಲಿ
ಅದಕ್ಕೆ ಪೆನ್ನಿಗೆ ಬೆರಳು ಕೊಡುವಷ್ಟು
ಸುಲಭವಾಗಿ ಅವನ ಕೈಗೆ
ತಲೆ ಕೊಡುವುದಿಲ್ಲ
ಕೊಡಲೇ ಬೇಕಾದಾಗ
ನಡುಗುತ್ತಲೇ ಕೊಡುತ್ತೇನೆ
ಅದೂ ಎರಡೂ ಕಂಗಳ
ಬಿಗಿಯಾಗಿ ಮುಚ್ಚುತ್ತಾ…
******************************