“ನಮ್ಮ ಪಯಣ”

ಪುಸ್ತಕ ಸಂಗಾತಿ

“ನಮ್ಮ ಪಯಣ”

ಮಕ್ಕಳ ಮೂಲಕ ಇತಿಹಾಸ ಸೃಷ್ಠಿ.

          ಒಬ್ಬ ಸಮರ್ಥ ಶಿಕ್ಷಕ ಅಕ್ಷರಗಳನ್ನು ಮಾತ್ರ ಕಲಿಸಲಾರ. ತಾನಿರುವ ಊರಿನ ಶಾಲೆಯ ಮತ್ತು ಸಮುದಾಯದ ಇತಿಹಾಸವನ್ನೂ ಸೃಷ್ಠಿಸಬಲ್ಲ ಎಂಬುದಕ್ಕೆ ಶಿಕ್ಷಕ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ಸಂಪಾದಿಸಿದ “ನಮ್ಮ ಪಯಣ” ಎಂಬ ಕೃತಿಯೇ ಸಾಕ್ಷಿಯಾಗಿದೆ.

       ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ ಮತ್ತು ಜೋಯಡಾ ತಾಲೂಕುಗಳ ಹಚ್ಚಹಸಿರಿನ ದಟ್ಟ ಕಾನನದ ಮಧ್ಯದಲ್ಲಿ ತಮ್ಮ ದನ-ಕರುಗಳನ್ನು ಸಾಕುತ್ತಾ ಬದುಕು ಸಾಗಿಸುತ್ತಿರುವ ಗೌಳಿಗರು ಆಧುನಿಕ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಅವರು ಎಂಬತ್ತು ತೊಂಬತ್ತು ವರ್ಷಗಳಿಂದ ಮಹಾರಾಷ್ಟçದ ಪಶ್ಚಿಮ ಘಟ್ಟಗಳ ದುರ್ಗಮ ಕಾಡುಗಳ ಮೂಲಕ ವಲಸೆ ಬಂದಿದ್ದಾರೆ. ಈ ನಿರ್ಲಕ್ಷಿತ ಸಮುದಾಯದವರು ಪಟ್ಟ ಪರಿಶ್ರಮ, ವ್ಯಥೆ, ಸಂಕೋಲೆಗಳನ್ನು ಆ ಗೌಳಿಗರ ಮಕ್ಕಳಿಂದಲೇ ಅವರ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿ ಮತ್ತು ಮರುಸೃಷ್ಠಿಸಿ ಅವರ ವಲಸೆಯ ಸಂದರ್ಭದಲ್ಲಾದ ಅನುಭವಗಳನ್ನು ಸಂಗ್ರಹಿಸಿದ್ದು ನಿಜವಾಗಲೂ ಅಭೂತಪೂರ್ವ ಕಾರ್ಯವಾಗಿದೆ.

   ಉತ್ತರ ಕನ್ನಡ ಜಿಲ್ಲೆಯ (ಶಿರಸಿ ಶೈ.ಜಿ)   ಯಲ್ಲಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದ ಶಿಕ್ಷಕ ಶ್ರೀ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ‘ಇಂಡಿಯಾ ಫೌಂಡೇಷನ್ ಫಾರ್ ದಿ ರ‍್ಟ್÷್ಸ ಬೆಂಗಳೂರು’ ಇವರ ಕಲಾಂತರ್ಗತ ಕಲಿಕೆ ಯೋಜನೆಯೊಂದಿಗೆ ಗೌಳಿಗರ ವಲಸೆಯ ಅನುಭವ ಕಥೆಗಳನ್ನು ದಾಖಲೀಕರಣ ಮಾಡಿದ್ದಾರೆ. ಎನ್.ಸಿ.ಎಫ್ ನ ಆಶಯವನ್ನೂ ಈಡೇರಿಸುವ ಮೂಲಕ ಆ ಸಮುದಾಯಕ್ಕೇ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

      ‘ನಮ್ಮ ಪಯಣ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಸಂದರ್ಶನ ರೂಪದ ಕಥೆಗಳಿವೆ. ಇವೆಲ್ಲವುಗಳನ್ನು ಅವರ ಶಾಲಾ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರು, ಸಾಹಿತಿಗಳ ಮಾರ್ಗದರ್ಶನದಲ್ಲಿ  ತಮ್ಮ ಹಿರಿಯರನ್ನು ಸಂದರ್ಶಿಸಿ ಕೆಲ ಪ್ರಶ್ನೆಗಳನ್ನು ಕೇಳುತ್ತ ಗೌಳಿಗರ ಇತಿಹಾಸದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಅವರೇ ಅನ್ವೇಷಿಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಮಾಹಿತಿಯನ್ನು ಕಲೆ ಹಾಕುವುದಕ್ಕಿಂತ ಅನ್ವೇಷಣೆಗೆ ಮತ್ತು ಸೃಜನಾತ್ಮಕತೆಗೆ ಮಹತ್ವ ಕಲ್ಪಿಸಲಾಗಿದೆ.

      ಶತಾಯುಷಿ ಆರ್ಯವೇದ ವೈದ್ಯ ವಿಠ್ಠು ಯಮ್ಕರ್ ಅವರ ಚಾಕಚಕ್ಯತೆ, ‘ಕಣ್ಣೀರಧಾರೆಯ ಕಥೆ-ವ್ಯಥೆ’ ಯಲ್ಲಿ ಅಜ್ಜಿ ನಕಲಿ ನಿನ್ನು ಮಲಗೊಂಡೆ ಬಡತನದಲ್ಲಿ ಬಿದರಕ್ಕಿ ಉಂಡು, ಅತ್ತೆಯ ಕ್ರೂರತನದಿಂದ ವಿಚ್ಛೇದನ ಪಡೆದು ಮರು ಮದುವೆಯಾಗಿ ಈಗ ಗಂಡನಿಲ್ಲದೆ ಒಂಟಿ ಜೀವನವನ್ನು ಇಳಿವಯಸ್ಸಿನಲ್ಲಿ ಸಾಗಿಸುತ್ತಿದ್ದಾರೆ. ಇವರು ಹೇಳುವ ಕಥೆ ಓದುಗರ ಕಣ್ಣಲ್ಲಿ ನೀರು ತರಿಸದಿರಲಾರದು. ‘ಸಂಸಾರ ಭಾರ ಹೊತ್ತ ಗಟ್ಟಿಗಿತ್ತಿ’ ಯಲ್ಲಿ ಸಾವುಬಾಯಿ ಪಟಕಾರೆ ಹೆಣ್ಣುಮಕ್ಕಳ ಆಗಿನ ಸ್ಥಿತಿಗತಿಗಳನ್ನು ತೆರೆದಿಟ್ಟಿದ್ದಾರೆ. ನೆಲೆಯಿಲ್ಲದೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಟ ಸಾಮಾನ್ಯವಾಗಿ ಕಂಡುಬರುತ್ತದೆ. ಅವರ ವಿಶಿಷ್ಟ ಆಚರಣೆಗಳಾದ ದಸರಾ, ಸಿಲಂಗಾನ್, ರಾಖನ್ ಹಬ್ಬಗಳ ಆಚರಣೆ ಕಾಡು-ಮೇಡುಗಳಲ್ಲಿ ಕಾಡು ಪ್ರಾಣಿಗಳೊಂದಿಗೆ ಕಾದಾಡಿದ ವಿಭಿನ್ನ ಅನುಭವಗಳು ಅವರ ಧೈರ್ಯ, ಸಾಹಸ ಪ್ರವೃತ್ತಿಯನ್ನು ಈ ಕೃತಿ ತೆರೆದಿಡುತ್ತದೆ.   ಒಂದು ಜನಾಂಗದ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳ ಬಗೆಗೂ ಈ  ಕೃತಿ ತೆರೆದಿಡುತ್ತದೆ. ಮುಗ್ಧ ಗೌಳಿಗರ ಪ್ರಾಮಾಣಿಕತೆ, ನಂಬಿಕೆ, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಮರಗಳನ್ನು ದೇವರಂತೆ ಪೂಜಿಸುವ ಅವರ ವಿಶಿಷ್ಠ ಗುಣಗಳನ್ನು  ಈ ಕೃತಿ ಇತರ ಸಮಾಜಕ್ಕೆ ತರ‍್ಪಡಿಸುತ್ತದೆ. ಕೃತಿಯಲ್ಲಿ ಅಲ್ಲಲ್ಲಿ ಗೌಳಿಗರ ಭಾಷೆಯ ಕೆಲವು ಪದಗಳನ್ನು ಬಳಸಿಕೊಳ್ಳಲಾಗಿದೆ.

     ಆಯ್.ಎಫ್.ಎ ಕಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿಯವರು ಕೃತಿ ಕುರಿತು. “ಜನಾಂಗದ ಕಥೆಗಳು , ವಯಕ್ತಿಕ ನೋವುಗಳು, ಲಿಂಗ ತಾರತಮ್ಯಗಳು ಮತ್ತು ಕೀಳರಿಮೆಗಳನ್ನು ವಿವಿಧ ಸ್ತರಗಳಲ್ಲಿ ಚಿಕ್ಕವರು ದೊಡ್ಡವರಿಗಾಗಿ ಇಲ್ಲಿ ಬರೆದಿದ್ದಾರೆ. ಸಾಂಸ್ಕೃತಿಕ ಪಲ್ಲಟಗಳಿಗೆ ಇಲ್ಲಿನ ಬರಹಗಳು ಮುಖಾಮುಖಿಯಾಗಿ ನಿಲ್ಲುತ್ತವೆ. ಕನ್ನಡದ ಸೊಗಡು ಇದೆ ಅಲ್ಲಾ? ಮಕ್ಕಳ ಕಲಿಕೆ ಸರ್ವತೋಮುಖವಾಗಲಿಲ್ಲವೇ? ಪಠ್ಯಪುಸ್ತಕಗಳು ನೀಡದ ಅನುಭವಗಳನ್ನು ಈ ಬರಹಗಳು ಕಟ್ಟಿಕೊಟ್ಟಿಲ್ಲವೇ? ಗಂಗಾಧರ ಅವರಂಥ ಶಿಕ್ಷಕರನ್ನು ಸರಕಾರಿ ಶಾಲೆಯಲ್ಲಿ ಭೇಟಿಯಾಗುವುದೇ ಒಂದು ಸಂತಸದ ಸಂಗತಿ.” ಎಂದು ಬರೆದಿದ್ದಾರೆ.

   ಈ ಕೃತಿಯ ಬಿಡುಗಡೆಗೂ ಗೌಳಿ ಸಮುದಾಯದ ಮತ್ತು ಇತರರು ಸಾವಿರಾರು ಜನಸಂಖ್ಯೆಯಲ್ಲಿ ನೆರೆದಿದ್ದು ದಾಖಲೆಯೂ ಆಗಿದೆ. ಇಂತಹ ಎಲೆಮರೆಯಲ್ಲಿ ನಡೆಯುವ ಕಾರ್ಯವನ್ನು ಗುರುತಿಸುವ ಕಾರ್ಯವಾಗಬೇಕಿದೆ.

           ಇನ್ನು ಕಥನಗಳಿಗೆ ತಕ್ಕಂತೆ ಸುಂದರವಾದ ರೇಖಾಚಿತ್ರಗಳನ್ನು ಯುವ ಕಲಾವಿದ ಜ್ಞಾನೇಶ್ವರ ರಚಿಸಿಕೊಟ್ಟಿದ್ದಾರೆ.  ಮುಖಪುಟವಂತೂ ಬಹು ಆಕರ್ಷಣೀಯವಾಗಿದೆ. ನೀವೊಮ್ಮೆ ಓದಲೇಬೇಕು.

         ಜಾಗತಿಕ ಮಟ್ಟದಲ್ಲಿ ನಡೆಯುವ ವಲಸಿಗರ ಕಥೆಗಳಂತೆ ಗೌಳಿಗರ ವಲಸೆಯ ಅನುಭವವನ್ನು ಕಟ್ಟಿಕೊಡುತ್ತವೆ. ಹಾಗಾಗಿ ಇದೊಂದು ದಾಖಲಾರ್ಹವಾದ ಕೃತಿಯಾಗಿದೆ. ಆಯ್.ಎಫ್.ಎ ಬೆಂಗಳೂರು ಅವರ ಕಲಾಂತರ್ಗತ ಕಲಿಕೆ ನಮ್ಮ ಬೋಧನೆಯನ್ನು ಲವಲವಿಕೆಯಿಂದಿರುವAತೆ ಮಾಡುತ್ತದೆ. ವಿದ್ಯಾರ್ಥಿಗಳ, ಶಿಕ್ಷಕರ ಈ ಕಾರ್ಯಕ್ಕೆ ಅವರಿಗೊಂದು ಸಲಾಂ ಹೇಳೋಣ. ಗಂಗಾಧರ ಸರ್ – ಮೊ.ಸಂಖ್ಯೆ- ೯೯೦೨೮೯೩೫೩೨.

                “ನಮ್ಮ ಪಯಣ” ಗೌಳಿಗರ ವಲಸೆಯ ಅನುಭವ ಕಥೆಗಳು.

                 ಸಂಪಾದಕರು : ಗಂಗಪ್ಪ ಎಸ್.ಎಲ್ (ಗಂಗಾಧರ)

                ಪುಟಗಳು : ೧೦೦.

                 ಬೆಲೆ: ೮೦ ರೂಪಾಯಿ.  

******************************************************

ನಾಗರಾಜ ಎಂ ಹುಡೇದ

2 thoughts on ““ನಮ್ಮ ಪಯಣ”

Leave a Reply

Back To Top