“ಧ್ಯಾನಸ್ಥ ಕವಿತೆಗಳು”

ಪುಸ್ತಕ ಸಂಗಾತಿ

“ಧ್ಯಾನಸ್ಥ ಕವಿತೆಗಳು”

 “ಥಟ್ ಎಂದು ಬರೆದು ರಸೀದಿಯಲ್ಲ ಕವಿತೆ” ಶೀರ್ಷಿಕೆಯ ಕಾರಣಕ್ಕಾಗಿಯೇ ಸೆಳೆವ ಕವನ ಸಂಕಲನವಿದು. ರಸೀದಿ ಎನ್ನುವುದು ಯಾವುದೇ ವಸ್ತು ವಿಲೇವಾರಿಯಾಗಿದ್ದಕ್ಕೆ ನೀಡುವ ಸಾಕ್ಷö್ಯ. ಮತ್ತದು ವ್ಯವಹಾರದ ನಂಬಿಕೆ ಮತ್ತು ಅಪನಂಬಿಕೆಯನ್ನು ಬಿಂಬಿಸುತ್ತದೆ. ನಂಬಿಕಸ್ಥ ನಡವಳಿಕೆ ಎನ್ನುವ ಹೊತ್ತಿನಲ್ಲಿಯೇ ಅಪನಂಬಿಕೆಯ ಜಾಡು ಕೂಡ ಇದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತಿರುತ್ತದೆ. ಆದರೆ ಕವಿತೆಗಳು ಹಾಗಲ್ಲ ಎನ್ನುವ ನಂಬಿಕೆ ಸುಮಿತ್ ಮೇತ್ರಿಯದು. ಮತ್ತು ಇಲ್ಲಿನ ಕವಿತೆಗಳದ್ದು ಕೂಡ ಹೀಗಾಗಿಯೇ ಇವು ಎದೆಗಿಳಿಯುತ್ತವೆ. ಕಂಡದ್ದನ್ನು ಪ್ರಾಮಾಣಿಕವಾಗಿ ಇಷ್ಟೇ ನನಗೆ ಹೊಳೆದದ್ದು ಎನ್ನುತ್ತ ಮುಗ್ಧವಾಗಿ ನೋಡುತ್ತವೆ. ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತವೆ. ನೋವುಗಳ ಹಿಡಿ ಹಿಡಿದು ಅನಾವರಣಗೊಳಿಸುತ್ತವೆ. ಮತ್ತೆ ಮತ್ತೆ ನಾನು ಹೇಳಲಿಕ್ಕೆ ಹೊರಟದ್ದು ಇದ್ದಲ್ಲ ಎನ್ನುತ್ತ ಗೋಜಲಿಗೆ ಬೀಳಿಸುತ್ತವೆ. ಹೀಗಾಗಿಯೆ ಇವರ ಕವಿತೆ ನಿರುದ್ಯೋಗಿ ದೇವರಂತೆ, ಉಲ್ಟಾ ಹೊಡೆಯುವ ವ್ಯಾಕರಣದ ಹಾಗೆ ಕಾಣಿಸುತ್ತದೆ. ಅಂತೆಯೇ,

“ಕವಿತೆಗಳಿಗೆ ಮಾರುಕಟ್ಟೆ ಇಲ್ಲ” ಸ್ವಾಮಿ

 ಹೆಣ್ಣು ಕೊಡುವ ಮಾತಂತು ಬಿಡಿ

 ಹೊಟ್ಟೆ ತುಂಬುವುದಿಲ್ಲ”    ( ನಿರುದ್ಯೋಗಿ ದೇವರು)

“ಸತ್ತವರಿಗೆ ಮಾತ್ರ ಬದುಕುವ ಅರ್ಹತೆ ಇಲ್ಲಿ

ಜಾತಿಗಳಿಗಾಗಿ ಕೊಲೆಯಾಗುತ್ತದೆ

ಕ್ಷಮಿಸಿ,

ಜಾತಿಗಳು ಕೊಲೆಯಾಗುವುದಿಲ್ಲ

ಮತಗಳಾಗುತ್ತವೆ” ಎನ್ನುವ ಕಟು ವಾಸ್ತವªನ್ನು ನಿರಾತಂಕವಾಗಿ ದಾಖಲಿಸುತ್ತವೆ.

ಇಲ್ಲಿನ ಕವಿತೆಗಳಿಗೆ ಸ್ಪಷ್ಟವಾದ ಧ್ವನಿಯಿದೆ. ಅವು ನೋವುಗಳನ್ನು ಗುನುಗುತ್ತ ಸುಮ್ಮನೆ ಕೂರುವುದಿಲ್ಲ. ಕಾರಣಗಳನ್ನು ನೇರವಾಗಿ ಪ್ರಶ್ನಿಸುತ್ತವೆ. ಉತ್ತರ ಹುಡುಕುವ ಸಲುವಾಗಿ ನಿರಂತರ ಶ್ರಮಿಸುತ್ತವೆ. ನಿಮಗಾದರೂ ನಾಚಿಕೆಯಾಗಬೇಕಿತ್ತು ಎನ್ನುತ್ತವೆ. ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಹೆಕ್ಕಿ ತರುತ್ತವೆ.

ಯಾರಲ್ಲಿ?

ಬಾಯಾರಿದ ಪಾರಿವಾಳದ ಕತ್ತು ಹಿಸುಕಿ

ಕೊಲ್ಲುವವರು. (ಬಿಸಿಲು ತೊಟ್ಟವರು)

ಹಸಿವು ಯಾರಪ್ಪನ ಮನಿದು

ತುಂಡು ರೊಟ್ಟಿ ಕೊಡು,

ಹಸಿವು ಇಲ್ಲದೆ ಹೋಗಿದ್ದರೆ ಹುಟ್ಟುತ್ತಿತ್ತೆ ಕವಿತೆ? (ತುಂಡು ರೊಟ್ಟಿಯ ಕವಿತೆ)

ಇನ್ನು ಇಲ್ಲಿ ಹಲವಾರು ಪ್ರೇಮದ ಸಾಲುಗಳಿವೆ. ಅವು ಯಾವುದು ದೈಹಿಕ ವಾಂಛೆಯ ಬಡಬಡಿಕೆಗಳಲ್ಲ.

ಪ್ರೇಮವನ್ನು ದೈವತ್ವಕ್ಕೇರಿಸುವ ಅದು ಶರೀರದ ಆಚೆಗಿನದ್ದು ಎನ್ನುವ

ಸಾಲುಗಳು ಮತ್ತೆ ಮತ್ತೆ ಹಿಡಿದು ನಿಲ್ಲಿಸುತ್ತವೆ

“ಕ್ಷಮಿಸು ಭಗವಂತ

ಅವಳಷ್ಟು ನಿನ್ನನ್ನು ಪ್ರೀತಿಸಲಾರೆ” (ಕ್ಷಮಿಸು ಭಗವಂತ)

ಎನ್ನುವ ನಿಷ್ಕಾರಣ ಒಲವಿನ ಪ್ರೇಮದ ಜೊತೆಯಲ್ಲಿಯೆ

“ರಾಧೆ ನನ್ನ ನೆನಪಿಗಾಗಿ ನವಿಲು

ಗರಿಯೊಂದನಿಟ್ಟುಕೋ

ನಿನಗೆ ಬೇಸರವಾದಾಗ ಮನದ ಮಿದುವಾಗಿ

ನಿನಗೆ ಚೈತನ್ಯ ತಂದೇನು” ಎನ್ನುವ ಕೃಷ್ಣನ ನಿವ್ಯಾಜ್ಯ ಪ್ರೀತಿಯ ಘಮಲು ಇದೆ (ಆತ್ಮಸಖ)

“ಕಾದ ಚಲುವೆಗೊಂದು ಕವಿತೆ” “ಪ್ರಿಯಕರನ ಉನ್ಮತ್ತತೆ” “ಬೆರಗು” ಮತ್ತು ಇತರೆ ಕವಿತೆಗಳು ಪ್ರೇಮದ ರೂಹನ್ನು ಕಟ್ಟಿಕೊಡುತ್ತವೆ. ಇಲ್ಲಿ ಗಾಲಿಬ್ ಇದ್ದಾನೆ, ಸಾಕಿ ಇದ್ದಾಳೆ, ಧುತ್ತೆಂದು ಎದುರಾಗುವ ರೂಪಕಗಳು ಘಕ್ಕನೆ ನಿಲ್ಲಿಸುವ ತಿರುಗುಗಳು ಈ ಕವಿತೆಗಳನ್ನು ಓದಲು ಪ್ರೇರೇಪಿಸುತ್ತವೆ.  ಬಹಳಷ್ಟು ಒಳ್ಳೆಯ ಕವಿತೆಗಳು ಓದಿಗೆ ದಕ್ಕುತ್ತವೆ. ಕವಿತೆಯ ಜಾಡನ್ನು ತಮ್ಮದಾಗಿಸಿಕೊಂಡ ಸುಮಿತ್ ಮೊದಲ ಸಂಕಲನದಲ್ಲಿಯೆ ತಮ್ಮ ಗಟ್ಟಿಯಾದ ಹೆಜ್ಜೆಯೊಂದನ್ನು ಊರಿದ್ದಾರೆ.

“ಸೋಲಿನ ಬಗ್ಗೆ ಭಯಪಡಬೇಡ

ಅಂತ ಹೇಳಾಗಿದೆ ಗಾಲಿಬ್

ಗಣಿತದ ಆರಂಭ ಸೊನ್ನೆಯಿಂದಲೇ

ಅಲ್ವಾ” ಎನ್ನುವ ಭರವಸೆಯೊಂದಿಗೆ ಆರಂಭವಾಗಿರುವ ಇವರ ಈ ಕಾವ್ಯಯಾನ ಕಾಜಾಣ ಪ್ರಕಾಶನದಿಂದ ಬೆಳಕು ಕಂಡಿದೆ. ಕೇಶವ ಮಳಗಿ ಅರ್ಥವತ್ತಾದ ಮುನ್ನುಡಿ, ಕೆ.ವಿ ತಿರುಮಲೇಶರ ಬೆನ್ನುಡಿ ಈ ಹೊತ್ತಿಗೆಯ ಮೌಲ್ಯ ಹೆಚ್ಚಿಸಿದೆ.

******************************

ದೀಪ್ತಿ ಭದ್ರಾವತಿ

One thought on ““ಧ್ಯಾನಸ್ಥ ಕವಿತೆಗಳು”

  1. ಒಳನೋಟಗಳನ್ನು ಚೆನ್ನಾಗಿ ಗ್ರಹಿಸಿ ಬರೆದಿರುವೆ ದೀಪ್ತಿ

Leave a Reply

Back To Top