ಇನ್ವಿಕ್ಟಸ್ ಮತ್ತು ಮಂಡೇಲಾ

ಲೇಖನ

ಇನ್ವಿಕ್ಟಸ್ ಮತ್ತು ಮಂಡೇಲಾ

ರಶ್ಮಿ ಹೆಗಡೆ ಮುಂಬೈ

ಕೆಲವರ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳು,ಸಾಧಕರ ಜೀವನಗಾಥೆಗಳು,ಕೆಲವು ಪುಸ್ತಕಗಳು,ಇನ್ನು ಕೆಲವು ಕಾವ್ಯಗಳು ನಮಗೆ ಗುರುವಾಗಿ,ಆದರ್ಶದ ಚಿಲುಮೆಗಳಾಗಿ ಜೀವನದುದ್ದಕ್ಕೂ ಪ್ರೇರೇಪಿಸುತ್ತವೆ. ಕೆಲವು ಕಾವ್ಯಗಳಂತೂ ಉತ್ಕೃಷ್ಟತೆಯ ಎಲ್ಲೆಯನ್ನು ಮೀರಿ ಬೆಳೆಯುತ್ತವೆ. ಬದುಕಿನ ಅಂಕುಡೊಂಕಿನ ದಾರಿಯಲ್ಲಿ  ಹಾದಿ ತಪ್ಪದಂತೆ ಮುನ್ನಡೆಸಿ,ಸಂಕಟದ ಸಮಯದಲ್ಲಿ ಧೈರ್ಯ,ನೆಮ್ಮದಿ ನೀಡಿ ಚಿಕಿತ್ಸೆಯ ರೂಪದಲ್ಲಿ ಕಾಪಾಡುತ್ತವೆ. ಉತ್ಕೃಷ್ಟವಾದ ಸಾಹಿತ್ಯ ಹಾಗೂ ಪುಸ್ತಕಗಳು ಮನುಷ್ಯನ ಯೋಚನಾಲಹರಿಯನ್ನೇ ಬದಲಿಸಬಲ್ಲದು. ಶಬ್ದಗಳು ಖಡ್ಗಕ್ಕಿಂತ ಹರಿತವಾದದ್ದು ಎನ್ನುವುದು ಸತ್ಯ. ಹೀಗೆಯೇ ಒಂದು ಪುಸ್ತಕ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.

ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ನೀಡಿದ ಗೀತೋಪದೇಶ ಆತನಿಗೆ ಶಕ್ತಿಯಾಗಿ ಯುದ್ಧದಲ್ಲಿ ಜಯಶಾಲಿಯನ್ನಾಗಿ ಮಾಡಿತ್ತು. ಅದೇ ಭಗವತ್ಗೀತೆ ಕಲಿಯುಗದಲ್ಲಿ ಮಹಾತ್ಮಾ ಗಾಂಧೀಜಿ,ಅನಿಬೆಸಂಟ್ ,ಸ್ವಾಮಿ ವಿವೇಕಾನಂದರಂಥ ಮಹಾನ್ ವ್ಯಕ್ತಿಗಳಿಗೆ ಸಾಧನೆಯತ್ತ ದಾರಿತೋರಿದ್ದು ತಿಳಿದ ವಿಷಯ. ಕನ್ನಡದ ಭಗವತ್ಗೀತೆ ಎಂದು ಕರೆಯಲ್ಪಡುವ ಡಿ ವಿ ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ವಂತೂ ಅದೆಷ್ಟು ಜನರ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದು ಹೇಳತೀರದು.

ಹೀಗೆಯೇ ಒಂದು ಕಾವ್ಯ ನೆಲ್ಸನ್ ಮಂಡೇಲಾ ಅವರ ಜೀವನಕ್ಕೆ ದಾರಿದೀಪವಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ,ಬಹುಜಾತಿ ಸಮಾನತೆಯ ಬಗ್ಗೆ ಸ್ವತಃ ಶಿಕ್ಷಣ ನೀಡಿದವರು ಮಂಡೇಲಾ. ಅವರು ತಮ್ಮ ಜೀವನದ ಕಾಲುಭಾಗಕ್ಕಿಂತ ಹೆಚ್ಚು ಸಮಯವನ್ನು,ಅಂದರೆ ಸತತವಾಗಿ ಇಪ್ಪತ್ತೇಳು ವರ್ಷ ವಿವಿಧ ಜೈಲುಗಳಲ್ಲಿಯೇ ಕಳೆದರು.

1961ರಲ್ಲಿ ವರ್ಣಭೇದ ಚಳುವಳಿ ಅಡಿಯಲ್ಲಿ ಮೊದಲಬಾರಿಗೆ ಬಂಧಿತರಾದ ಮಂಡೇಲಾರನ್ನು ಖುಲಾಸೆಗೊಳಿಸಿದ್ದರೂ,ಅಕ್ರಮವಾಗಿ ದೇಶತೊರೆದರೆಂಬ ಕಾರಣಕ್ಕೆ ದೋಷಿಯನ್ನಾಗಿಸಿ 1962ರಲ್ಲಿ ಮತ್ತೆ ಬಂಧಿಸಿ ಕೇಪ್ ಟೌನ್ ಹಾಗೂ ಟೇಬಲ್ ಮೊಂಟೆನಿನ ಸಮೀಪದ “ರಾಬಿನ್ ದ್ವೀಪ ಕಾರಾಗೃಹ”ದಲ್ಲಿ ಇರಿಸಲಾಯಿತು. ಹಾಸಿಗೆಯಂಥ  ಕನಿಷ್ಠ ಸೌಲಭ್ಯಗಳೂ ಇರದ ಚಿಕ್ಕದಾದ,ಸದಾ ಒದ್ದೆಯಾಗಿರುತ್ತಿದ್ದ ಕೋಣೆ. ಜೈಲಿನ ಬಿಳಿವರ್ಣೀಯ ಅಧಿಕಾರಿಗಳಿಂದ ಸತತವಾದ ದೈಹಿಕ ಹಾಗೂ ಮಾನಸಿಕ ಕಿರುಕುಳ,ಮಲಗಲು ಒಣ ಹುಲ್ಲಿನ ಚಾಪೆ. ಕೈದಿಗಳ ಮೇಲೆ ಒತ್ತಡ ಹೇರಿ ಗಣಿ ಕೆಲಸಮಾಡಿಸಿ, ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಆ ಕಾರಾಗೃಹದಲ್ಲಿ ಅವರು ಕಳೆದಿದ್ದು ಸತತವಾಗಿ ಹದಿನೆಂಟು ವರ್ಷಗಳು. ಆರು ತಿಂಗಳಿಗೊಮ್ಮೆ ಮಾತ್ರ ಪತ್ರ ವ್ಯವಹಾರ ನಡೆಸುವುದಷ್ಟೇ ಅಲ್ಲದೆ, ವರ್ಷಕ್ಕೆ ಒಂದೇ ದಿನ,ಅದೂ ಸಹ ಅರ್ಧ ಘಂಟೆ ಮಾತ್ರ ಆಪ್ತರನ್ನು ಭೇಟಿಯಾಗುವ ಅವಕಾಶವಿತ್ತು. ಅಷ್ಟಾದರೂ ಅವರು ಧೃತಿಗೆಡಲಿಲ್ಲ. ಜೈಲಿನಲ್ಲಿಯೇ ಸಹ ಖೈದಿಗಳಲ್ಲೂ ಸ್ಫೂರ್ತಿ ತುಂಬಿ ನಾಗರಿಕ ಅಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಇದು ದಕ್ಷಿಣ ಆಫ್ರಿಕಾದ ಅಧಿಕಾರಿಗಳನ್ನು ರಾಬಿನ್ ದ್ವೀಪದ ಪರಿಸ್ಥಿತಿಯನ್ನು ತೀವ್ರವಾಗಿ ಸುಧಾರಿಸುವಂತೆ ಒತ್ತಾಯಿಸಿತು. ಇದೇ ಕಾರಣಕ್ಕೆ ಅವರನ್ನು “ಪೋಲ್ಸ್ ಮೂರ್” ಜೈಲಿಗೆ, ಸ್ಥಳಾಂತರಿಸಿ ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಗೃಹಬಂಧನದಲ್ಲಿಟ್ಟರು.

ಜೈಲಿನಲ್ಲಿದ್ದಾಗಲೇ ಅಂಚೆ ತರಬೇತಿ ಮೂಲಕ ಆಕ್ಸ್ಫರ್ಡ್ ನ ವೋಲ್ಸಿಹಾಲ್ ನಿಂದ ಎಲ್ ಎಲ್ ಬಿ ಪದವಿ ಪಡೆದರು.

ಇಪ್ಪತ್ತೇಳು ವರ್ಷಗಳ ಸಮಯ ಹೊತ್ತುರಿಯುತ್ತಿದ್ದ ಹೋರಾಟದ ಕಿಚ್ಚನ್ನು ಮನಸಿನಲ್ಲಿ ಆರಲು ಬಿಡದೆ,ಕಾಪಾಡಿಕೊಂಡು ಹೋಗುವುದು ಸುಲಭವಲ್ಲ. ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದು ಒಂದು ಕವಿತೆ  ಎಂದರೆ ಅತಿಶಯೋಕ್ತಿಯಾಗದು.

ಜೈಲಿನಲ್ಲಿದ್ದಷ್ಟು ವರ್ಷ ಅವರ ಜೊತೆಯಾಗಿ,ಗುರುವಾಗಿ,ಸ್ಪೂರ್ತಿಯಾಗಿ ನಿಂತಿದ್ದು ಹದಿನೆಂಟನೇ ಶತಮಾನದ ಕವಿಯಾಗಿದ್ದ “ವಿಲಿಯಂ ಅರ್ನೆಸ್ಟ್ ಹೆನ್ಲೇ” ಅವರ ಕವನ ‘ಇನ್ವಿಕ್ಟಸ್’. ಲ್ಯಾಟಿನ್ ಭಾಷೆಯಲ್ಲಿ ಇದರರ್ಥ “ಅಜೇಯ”ಎಂದು.

 ನೆಲ್ಸನ್ ಮಂಡೇಲಾರ ಜೀವನ ಚರಿತ್ರೆ ಆಧಾರಿತ ಸಿನಿಮಾಕ್ಕೂ ಸಹ ‘ಇನ್ವಿಕ್ಟಸ್’ ಎಂದೇ ಹೆಸರಿಡಲಾಗಿತ್ತು. 

ಕೆಲವೇ ಸಾಲುಗಳುಳ್ಳ ಈ ಕವನ ಅವರ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ತಮ್ಮ ಸಹಖೈದಿಗಳೆದುರೂ ಆ ಕವನವನ್ನು ವಾಚಿಸುತ್ತಿದ್ದ ಮಂಡೇಲಾ, ಕ್ರಮೇಣವಾಗಿ ಅವರಲ್ಲಿಯೂ ಆ ಕವಿತೆಯ ಮೂಲಕ ಹೊಸ ಸ್ಪೂರ್ತಿಯನ್ನು ತುಂಬಿದ್ದರು. ಜೈಲಿನ ಕಠಿಣ ಸಮಯದಲ್ಲೂ ಹೋರಾಟದ ಕಿಚ್ಚು ಆರದಂತೆ ಕಾಪಾಡಿಕೊಂಡು ಬಂದಿದ್ದು ಅದೇ ಪದ್ಯ.

ಇನ್ವಿಕ್ಟಸ್ ಕವನದ ಕೊನೆಯ ಈ ಎರೆಡು ಸಾಲುಗಳು ಆತನಿಗೆ ಅತ್ಯಂತ ಪ್ರಭಾವ ಬೀರಿದ್ದವು.

“ನನ್ನ ಅದೃಷ್ಟದ ಮುಖ್ಯಸ್ಥ ನಾನು, ನನ್ನ ಆತ್ಮದ ನಾಯಕನು ನಾನು” ಎಂದು. “ಈ ಕವಿತೆಯು ನಾನು ವೈಯಕ್ತಿಕವಾಗಿ,ಪ್ರಪಂಚದಾದ್ಯಂತದ ಅನೇಕರೊಂದಿಗೆ ವ್ಯವಹರಿಸಿ,ಪಾಲಿಸಿದ ಅನುಭವ ಹಾಗೂ ಪದಗಳ ಸಂಗ್ರಹ”ಎಂದಿದ್ದರು. ಹೋರಾಡುವ ಧೈರ್ಯ ಸೋತು ಮಲಗುತ್ತಿದೆ ಎನಿಸಿದಾಗಲೆಲ್ಲ ಎಚ್ಚರಿಸಿ,ಧೈರ್ಯ ತುಂಬಿದ್ದು ಈ ಕವಿತೆ.

ಒಂದು ಬರಹ ಒಬ್ಬ ವ್ಯಕ್ತಿ,,ಸಮಾಜ ಹಾಗೂ ದೇಶದ ಮೇಲೆ ಅದೆಷ್ಟು ಪರಿಣಾಮ ಬೀರಬಲ್ಲದೆಂಬುದಕ್ಕೆ ಇದೇ ಸಾಕ್ಷಿ.

ಮಂಡೇಲಾ ಮುಂದೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದು ಇತಿಹಾಸ.

ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರ್ಣ ಭೇದ ನೀತಿಯ ವಿರುದ್ಧ ದನಿಯೆತ್ತಿದವರು. ಆ ಚಳುವಳಿಯನ್ನು ಅಲ್ಲಿ ಮುಂದುವರೆಸಿದ ಮಂಡೇಲಾರಿಗೆ ಆದರ್ಷವಾದವರೇ ಗಾಂಧೀಜಿ. ಇಪ್ಪತ್ತೇಳು ವರ್ಷದ ಕಾರಾಗೃಹ ಶಿಕ್ಷೆ ಮುಗಿಸಿಬಂದ ಮಂಡೇಲಾ ನಗುತ್ತಾ ಹೇಳಿದ್ದೇನು ಗೊತ್ತೇ? ” ಇಪ್ಪತ್ತೇಳು ವರ್ಷದ ಸುದೀರ್ಘ ರಜೆ ಇನ್ನು ಮುಗಿಯಿತು “ಎಂದು.

ಭಾರತ ರತ್ನ,ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ,ನೊಬೆಲ್ ಶಾಂತಿ ಪುರಸ್ಕಾರಗಳಂತಹ ಅನೇಕ ಗೌರವಕ್ಕೆ ಪಾತ್ರರಾದ ಮಂಡೇಲಾ 2013 ರಂದು ತಮ್ಮ ಜೀವನ ಯಾತ್ರೆ ಮುಗಿಸಿ ಇಹಲೋಕಕ್ಕೆ ಪಯಣಿಸಿದರು.

ಪುಸ್ತಕಗಳು ಅತ್ಯಂತ ಶಾಂತವಾದ ಸಲಹೆಗಾರರಷ್ಟೇ ಅಲ್ಲ,ಅವು ಸ್ಥಿರವಾದ ಸ್ನೇಹಿತರು ಕೂಡ. ಜೀವನದ ಎಲ್ಲಾ ಸಂಬಂಧಗಳು ನಮ್ಮಿಂದ ದೂರವಾದಾಗ ಸದಾ ಜೊತೆಗಿರುವ ಆತ್ಮೀಯ ಬಂಧುವೆಂದರೆ ಅದು ಪುಸ್ತಕ ಮಾತ್ರ. ಹಾಗೆಯೇ ನಾಲ್ಕೇ ಸಾಲುಗಳುಳ್ಳ ಒಂದು ಕವಿತೆ ಸಾವಿರ ಅನುಭವದ ವ್ಯಕ್ತಿಗೂ ಮೀರಿ ಪ್ರಭಾವ ಬೀರಬಲ್ಲದು.

************************************************************

Leave a Reply

Back To Top