ಕವಿತೆ
ಮಿಂಚು ನಾದದಲೆಯ ಮೇಲೆ
ನೂತನ ದೋಶೆಟ್ಟಿ
ನಗುವ ಹೂಗಳು ಹಲವು
ಬೇಲಿಗುಂಟ ಬೆಳೆದಿವೆ
ಕೈಚಾಚುವ ಆಸೆ ಮಾತ್ರ ಇಲ್ಲ
ಕಣ್ಣು ಮಿಟುಕಿಸಿದ ನಕ್ಷತ್ರದ ಮೋಹ
ಏಕೆಂದು ಹೇಳಲಿ?
ಹಗಲು ಕಾಣುವ ಹೂಗಳ
ಅಂದ ಚಂದ ಕಂಪು
ಯಾವುದೂ ಕಂಪಿಸಲೇ ಇಲ್ಲ
ರಾತ್ರಿ ನಕ್ಕ ತಾರೆಗೆ
ಒಲವೇ ಧಾರೆ ಎರೆದೆ
ಹೊಳಪಿಗೊ ಚೆಲುವಿಗೊ ಹೇಳಲಾರೆ
ಅಂತರಂಗವ ಆವರಿಸಿದ ಬೆಳಕು
ಮೂಲೆ ಮೂಲೆಯಲಿ ಮಿನುಗುತಿದೆ
ಮಿಂಚುನಾದದಲೆಯ ಮೇಲೆ
ಒಲುಮೆ ಹಾಯಿ ನಡೆಸಿದೆ
ಸೊಗಸ ಸಂಗ ಸಾಕು ಇನ್ನು
ಪ್ರೀತಿ ತೊರೆಯು ಹರಿಯಲಿ
ಬಾಳಿನಾಟದಂಕದಲ್ಲಿ
ಬಣ್ಣ ಮೂಡಿ ಬರಲಿ
**********************************