ಅಂಕಣ ಬರಹ

ಶಾಲಾರಂಗದೊಳಗೊಂದು

ಕೋಲಾಟ

Kolata - An Indian Folk Dance - FolkDanceWorld.Com

ಠಣ್…ಠಣ್… ಠಣ್..

ಗಂಟೆಯ ಸದ್ದು ಒಂಭತ್ತು ಸಾರಿ  ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ.

  ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹೌದು ಅದು ನಮ್ಮ ಶಾಲೆ.  ನಮ್ಮ ಹಳ್ಳಿಯ ಶಾಲೆ.  ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, ತೆರೆದ ಎದೆ ಮತ್ತು ಅಕ್ಕ ಪಕ್ಕದ ಭುಜಗಳಂತೆ,  ಮುರ ಕಲ್ಲಿನ ಗೋಡೆಯ, ಹೆಂಚಿನ ಮಾಡಿನ ಶಾಲೆಯ ಕಟ್ಟಡ ನೆಲೆ ಕಂಡಿದೆ 

ಈ ಧ್ವಜಸ್ವಂಭದ ಎದುರು ವಾರಕ್ಕೆ ಎರಡು ಸಲ

ಡ್ರಿಲ್ ಮಾಡುವುದು, ಸೋಮವಾರ ಹಾಗೂ ಶುಕ್ರವಾರ. ಆಗ ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯ. ಒಂದು ಗಂಟೆ ಬಾರಿಸಿದ ಕೂಡಲೇ

ಶಾಲೆಯ ಮಡಿಲಿಂದ ಹೊರಕ್ಕೆ ಜಂಪ್ ಮಾಡಿ ಮಕ್ಕಳು  ಓಡುವುದು. ಸಾಲಾಗಿ ತರಗತಿ, ವಿಭಾಗದ ಪ್ರಕಾರ ಸಾಲು ಜೋಡಿಸಲ್ಪಡುತ್ತದೆ.

  ಹುಡುಗಿಯರಿಗೆ ನೀಲಿ ಸ್ಕರ್ಟ್ ಬಿಳಿ ಅಂಗಿ. ಹುಡುಗರಿಗೆ ನೀಲಿ ಚಡ್ಡಿ ಬಿಳಿ ಅಂಗಿ. ತಪ್ಪಿದರೆ  ಬಿಸಿಲಲ್ಲಿ ನಿಲ್ಲುವ ಶಿಕ್ಷೆ ಮಾತ್ರವಲ್ಲ ಜೊತೆಗೆ  ಕೈಗೆ ಬಿಸಿ ಬಿಸಿ ಪೆಟ್ಟು ಹಾಗೂ ಬಸ್ಕಿ ಇಪ್ಪತ್ತೈದು. ಅದೆಷ್ಟೋ ಸಲ ಯುನಿಫಾರ್ಮ್ ಮರೆತು ಬಣ್ಣದ ಫ್ರಾಕ್,ಉದ್ದಲಂಗ ಹಾಕಿ ಬಂದು ಶಂಕಿಬಾಯಿ ಟೀಚರ್ ಹತ್ತಿರ ಪೆಟ್ಟು ತಿಂದದ್ದು, ಚುರ್ ಚುರ್ ಎನ್ನುವ ಚೂಪು ನೆನಪು.

ಆ ಧ್ವಜಸ್ತಂಭ ನೋಡಿದಾಗೆಲ್ಲ ಚಿತ್ತದಲ್ಲಿ ಅದರ ಎದುರು ಸಾಲಾಗಿ ಒಂದೇ ಬಗೆಯ ದಿರಿಸು ತೊಟ್ಟ ವಿಧ್ಯಾರ್ಥಿಗಳ ಚಿತ್ರವೇ ತುಂಬಿಕೊಳ್ಳುವುದು. ಅದೆಷ್ಟು ಅಂದ- ಚೆಂದ. ಒಬ್ಬರು ಬಟ್ಟೆಯ ಬಣ್ಣ ಬೇರೆಯಾದರೂ ಬಿಳಿ ಅಂಗಿಗೆ ಶಾಹಿ ಕಲೆಯಾದಂತೆ, ನೂರು ಸರಿಗಳ ನಡುವೆ ತಪ್ಪೊಂದು ಎದ್ದು ನಿಂತಂತೆ  ಕಾಣಿತ್ತಿತ್ತು. ನಮ್ಮ ಶಂಕಿ ಟೀಚರ್, ಶೇಖರ ಮಾಸ್ಟ್ರು ಧ್ವಜಸ್ತಂಭದ ಬಳಿಯಿಂದಲೇ ಅಂತಹ ಅಂಗಿಗಳ ಲೆಕ್ಕ ಹಾಕಿ ಬಿಡುತ್ತಿದ್ದರು‌.  ನಮ್ಮ ಅ ಡ್ರಿಲ್ ಗೆ ಅನುಪಮ ಸೌಂದರ್ಯವಿತ್ತು. ಬೆಳಗ್ಗಿನ ಬಿಸಿಲೂ ಹೆಗಲು,ಕೆನ್ನೆ,ತಲೆ ಸವರಿ ಸಣ್ಣಗೆ ಬೆವರುತ್ತಿದ್ದೆವು. ಜೊತೆಜೊತೆಗೆ ನಡೆಸುತ್ತಿದ್ದ ಕವಾಯತ್.

ಇರಲಿ. ಇಲ್ಲಿಂದ ಮುಂದೆ ಬಂದರೆ ನಮಗೆ ಕಾಣಿಸುವುದು ಬೆಳಗ್ಗೆ ಯಾವಾಗಲೂ ನಮಗಿಂತಲೂ ಬೇಗ ಬರುತ್ತಿದ್ದ ಗೌರಿ ಟೀಚರ್ . ಇವರು ಬೆಳ್ಳನೆ ಉದ್ದಕ್ಕಿದ್ದು  ಸೀರೆ  ಸ್ವಲ್ಪ ಮೇಲೆ ಉಡುತ್ತಿದ್ದರು. ಉರೂಟು ಕಣ್ಣು, ಬೈತಲೆ ತೆಗೆದು ಎಣ್ಣೆ ಹಾಕಿ ಬಾಚಿದ  ದಪ್ಪ ಮೋಟು ಜಡೆ,.ಕೈಯಲ್ಲಿ ಎರಡು ಪುಸ್ತಕದ ಜೊತೆ ಒಂದು ಸಪೂರ ಕೋಲು. ಆದರೆ ಅವರ ಕೋಲಿಂದ  ಪೆಟ್ಟು ತಿಂದವರು ಬಹಳ ಕಡಿಮೆ. ಇವರು ನಮ್ಮ ಇಷ್ಟದ ಟೀಚರ್. ಅವರದ್ದು ಮೂಲೆಯ ಕ್ಲಾಸ್. ಅಲ್ಲಿ ಕೊಂಚ ಸಪೂರ ಜಗಲಿ.

ಶಾಲೆಯ ವರಾಂಡಾದ ಎದುರು ಹೂವಿನ ಹಾಗೂ ಬಣ್ಣದೆಲೆಗಳ ಕ್ರೋಟಾನ್ ಗಿಡಗಳು.

 ವಾರಕ್ಕೆ ಒಂದು  ದಿನ  ಗಿಡಗಳ ಬಳಿ  ಬೆಳೆದ ಕಳೆ ಕೀಳುವ, ಕಸ ಹೆಕ್ಕುವ ಕೆಲಸ ಮಕ್ಕಳಿಗೆ ಅಂದರೆ ನಮಗೆ. ನಾವು ಕುಕ್ಕರುಗಾಲಲ್ಲಿ,ಮೊಣಕಾಲೂರಿ, ಬಗ್ಗಿ  ಬೇಡದ ಹುಲ್ಲು ಕೀಳುತ್ತಿದ್ದೆವು. ಕೆಲಸಕ್ಕಿಂತ ಮಾತೇ ಹೆಚ್ಚು.  ಟೀಚರ್ ಬಂದು ” ಎಂತ ಪಂಚಾತಿಗೆ ಕೂತು ಕೊಂಡದ್ದಾ. ಬೇಗಬೇಗ” ಎಂದು ಗದರಿಸಿದಾಗ    ಕಪ್ಪೆ ಹಾರಿದಂತೆ ಹಾರಿ ಹಾರಿ ದೂರವಾಗುತ್ತಿದ್ದೆವು. ಟೀಚರ್ ಬೆನ್ನು ಹಾಕಿದೊಡನೆ ಮತ್ತೆ ನಮ್ಮ ಮಾತು. ಗಂಡು ಹೆಣ್ಣು ಭೇದವಿಲ್ಲ. ಅದೂ ನಮ್ಮಲ್ಲಿ ಕ್ಲಾಸ್ ಲೀಡರ್ ಹುಡುಗಿಯರಾದರೆ ನಮಗೆ ಹುಡುಗರತ್ರ  ಕೆಲಸ ಮಾಡಿಸುವುದೇ ಬಹಳ ಖುಷಿ!. ಜಗಳವಾದರೆ ಮರು ಕ್ಷಣದಲ್ಲಿ ಕೈ ಕೈ ಹಿಡಿದು ಜಿಗಿದೋಡುವ ಕಲೆ ಕಲಿತದ್ದೇ ಹೀಗೆ. ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುವ, ಟೀಂವರ್ಕ್ ನಲ್ಲಿ ಹೊಂದಿ ನಡೆಯುವ, ಎಲ್ಲಾ ಕೆಲಸಗಳನ್ನು ಗೌರವಿಸುವ,  ರೀತಿ ಕಲಿಸಿತು. ನಾಟಕದಲ್ಲೂ ಅಷ್ಟೇ, ಪಾತ್ರಗಳು ಹೊಂದಿ ನಡೆದರೇ ಛಂದವೂ ಚಂದವೂ. ರಂಗಸ್ಥಳದಲ್ಲಿ ಪಾತ್ರಪೋಷಣೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ಚೌಕಿಯಲ್ಲಿ ಬೆರೆಸುವ ಬಣ್ಣಗಳು, ನಟ ನಟಿಯರ ನಡುವಿನ ಕೆಮಿಸ್ಟ್ರಿ.

ಆಗೆಲ್ಲ ಇಡೀ ಊರಿನ ಮಕ್ಕಳೆಲ್ಲ ಈ ಶಾಲೆಯಲ್ಲೇ ಓದುವುದು. ಒಂದು ಮನೆಯ ಹುಡುಗಿ ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಊರಿನಿಂದ ಹೊರ ಹೋಗುತ್ತಿದ್ದ ನೆನಪು. ನಮಗೆ ಅವಳು ಅಸ್ಪೃಶ್ಯ ಳು. ಆದರೆ ನಮ್ಮ ಮಾತುಕತೆಯ ಕೇಂದ್ರ ಆಕೆಯಾಗಿರುತ್ತಿದ್ದಳು. ಇಂಗ್ಲೀಷಿನಲ್ಲೇ ಎಲ್ಲ ಪಾಠವಂತೆ!. ಅದು ನಮಗೆ ವಿಸ್ಮಯ, ಅದ್ಭುತ.

“ಒಂದನೇ ಕ್ಲಾಸಿನಲ್ಲಿ ABC’D ಕಲಿಸ್ತಾರಂತೆ, ಇಂಗ್ಲೀಷ್ ಮಾತನಾಡುದಂತೆ, ವಿಜ್ಞಾನ, ಗಣಿತ,ಸಮಾಜ ಎಲ್ಲವೂ ಇಂಗ್ಲೀಷ್.  ಅಲ್ಲಿ ಹೋದವರು ಮಾತನಾಡುವುದು ಹೇಗೆ ಗೊತ್ತುಂಟಾ..ಟುಸ್ ಟುಸ್ ವಾಸ್ ಶ್ ಸು !!”

ಎಂದು ಚಿತ್ರ ವಿಚಿತ್ರವಾಗಿ ಬಾಯಿಯ ಚಲನೆ ಹೊಂದಿಸಿ ಮಾತಾಡಿ ಅಣಕಿಸಿ ಹೊಟ್ಟೆ ಬಿರಿಯೆ ನಗುತ್ತಿದ್ದೆವು.

ನಮ್ಮ‌ಸಂಜೆಯ ಮನೆಯಾಟದಲ್ಲಿ ಒಂದು ಪಾತ್ರ ಅದೇ ಆಗಿರುತ್ತಿತ್ತು.  ಆಗಿನ ಊರ ಶ್ರೀಮಂತರ ಮನೆಯ ಮಕ್ಕಳೂ  ಸರಕಾರಿ ಶಾಲೆಯಲ್ಲೇ ಓದುವುದು. ಈ ಕಳೆ ಕೀಳುವ ಕೆಲಸಕ್ಕೆ ಒಂದಷ್ಟು ಬಡ್ತಿ ದೊರಕಿದ ನಂತರ ನಾವು ಆ ಮಕ್ಕಳ ಬಳಿ ಹೋಗಿ ” ಹೇ ಸಂದೀಪ ಸರಿ ಕಿತ್ತು ತೆಗೆ ಹುಲ್ಲು. ರಾಜೇಶ ಕಡ್ಡಿ, ಪೇಪರ್ ಹೆಕ್ಕು” ಎಂದು ಅವರಿಂದ ಚೂರು ಹೆಚ್ಚು ಕೆಲಸ ಮಾಡಿಸುವ ಖುಷಿ ಹೆಕ್ಕಿದ್ದೂ ಇದೆ. ಮುಗ್ದ ಮನಸ್ಸಿನ ದ್ವೇಷರಹಿತ ಕಾರ್ಯವದು.

ಇಲ್ಲಿ ನೋಡಿ!  ಓಡಿಕೊಂಡು ಬಂದಂತೆ ಬರುತ್ತಿದ್ದಾರಲ್ವಾ!, ಅವರೇ ಸುಮನ ಟೀಚರ್. ತುಸು ಸಿಟ್ಟಿನ ಮುಖ.  ಇವರು ಐದನೆಯ ಕ್ಲಾಸಿಗೆ ಇಂಗ್ಲೀಷ್ ಪಾಠ ಮಾಡುವುದು. ನಮಗೆ ಇವರೆಂದರೆ ಬಹಳ ಭಯ. ಅವರ ಬಳಿ ಒಂದು ಹಳದಿ ಬಣ್ಣದ ಸೀರೆಯಿದೆ. ಅದನ್ನು ಉಟ್ಟು ಬಂದ ದಿನ ಅವರಿಗೆ ಹೆಚ್ಚು ಕೋಪ ಬರುತ್ತದೆ ಎಂಬುದು ನಮ್ಮಗಟ್ಟಿ ನಂಬಿಕೆ. ನಾವು ಬೆಳಗ್ಗೆ ಅವರು ಬರುವುದನ್ನೇ ಒಂದಷ್ಟು ಭಯದಿಂದ ಕಾಯುತ್ತಿದ್ದೆವು. ಒಬ್ಬರಿಗೆ ಅದೇ ಕೆಲಸ ವಹಿಸಿಕೊಟ್ಟಿದ್ದೆವು. ದೂರದಿಂದ ಅವರು ಓಡಿ ಬರುವಾಗ ಹಳದಿ ಬಣ್ಣ ಕಂಡರೆ ನಮ್ಮ ಭಯ ವಿಪರೀತ ಹೆಚ್ಚಿ ಕೂಡಲೇ ಗುಪ್ತ ಸಮಾಲೋಚನೆ ಆರಂಭಿಸುತ್ತಿದ್ದೆವು. ಯಾವ ಪಾಠದ ಪ್ರಶ್ನೆ ಕೇಳಬಹುದು. ಎಣ್ಣೆ ತಾಕಿದರೆ ಪೆಟ್ಟು ಹೆಚ್ಚು ನೋವಾಗುವುದಿಲ್ಲವಂತೆ.  ಅಂಗೈಗಳನ್ನು ಎಣ್ಣೆ ಹಾಕಿದ ತಲೆಗೆ ತಿಕ್ಕಿ ತಿಕ್ಕಿ ಪರೀಕ್ಷಿಸುವುದು.  ಕೆಲವು ಹುಡುಗಿಯರ ತಲೆತುಂಬ ಎಣ್ಣೆ. ನಮ್ಮ ಕ್ಲಾಸಿನಲ್ಲಿ ಮಮತಾ ಎಂಬ ಹುಡುಗಿಯ ತಲೆ ಕೂದಲಲ್ಲಿ ಬಹಳ ಎಣ್ಣೆ. ನಾವೆಲ್ಲ ಅವಳ ತಲೆಗೆ ನಮ್ಮ ಅಂಗೈ ತಿಕ್ಕಿ ಪೆಟ್ಟು ತಿನ್ನಲು ಮಾನಸಿಕವಾಗಿ ಸಿದ್ದಗೊಳ್ಳುತ್ತಿದ್ದೆವು. ಜೊತೆಗೆ ಪುಸ್ತಕ ತೆಗೆದು ವೇಗವಾಗಿ ಓದುವ ತಾಲೀಮು. 

ಹೀಗೆ ಬನ್ನಿ! ಇಲ್ಲಿದ್ದಾರೆ ನಮ್ಮ ಶಂಕಿ ಟೀಚರ್. ಅವರಲ್ಲಿ ಪೆಟ್ಟಿನ ಖಾರವೂ ಇದೆ, ಜೊತೆಗೆ ಪ್ರೀತಿಯ ಸಿಹಿಯೂ ಉಂಟು. ಅಗಲಹಣೆಯ ಮುಖ, ವಾತ್ಸಲ್ಯ ಅವರ ಕಣ್ಣಿನಲ್ಲಿ ಒಸರುತ್ತದೆ. ಸ್ವಲ್ಪ ವಯಸ್ಸಾಗಿದೆ. ದೊಡ್ಡ ಸೂಡಿ ಕಟ್ಟಿ ಹೂ ಮುಡಿದು ಬರುತ್ತಿದ್ದರು. ನಾವು ಅವರಿಗಾಗಿ ಹೂವಿನ ಮಾಲೆ ತರುವಲ್ಲಿ ಪೈಪೋಟಿ ನಡೆಸುತ್ತಿದ್ದೆವು. ನನ್ನ ಪಕ್ಕ ಕೂತುಕೊಳ್ಳುವ ಶಾಲಿನಿ ಮನೆಯಲ್ಲಿ ರಾಶಿ ಅಬ್ಬಲಿಗೆ. ಹಾಗೆ ಅವಳಿಗೆ ನಾನೆಂದರೆ ಮೆಚ್ಚು. ಆಗಾಗ ಮನೆಯಿಂದ ಚಿಕ್ಕ ಮಾಲೆ ಪಾಟೀ ಚೀಲದೊಳಗೆ ಹಾಕಿ ನನಗೆ ತಂದು ಕೊಡುತ್ತಿದ್ದಳು. ಕೆಲವಷ್ಟು ಸಲ ನನ್ನಜ್ಜಿ ಜಾಜಿ ಮಲ್ಲಿಗೆ ದಂಡೆಯನ್ನು ಕೊಡುತ್ತಿದ್ದಳು.  ಶಾಲಿನಿ “ನೀನು ಮುಡಿ” ಎನ್ನುತ್ತಿದ್ದಳು. ಅವಳಿಗೆ ನನ್ನ ಉದ್ದದ ಎರಡು ಜಡೆ ಕಂಡರೆ ಇಷ್ಟ. ಆದರೆ ನಾನು ಕ್ಲಾಸಿನ ಹೊರಗೆ ಬಾಗಿಲ ಬಳಿ ಕೈಯಲ್ಲಿ ಹೂವನ್ನು ಹಿಡಿದು ಬಲು ಆಸೆಯಿಂದ ಶಂಕಿ ಟೀಚರ್ ಗೆ ಕೊಡಲು ಕಾಯುತ್ತಿದ್ದೆ.

ನಮ್ಮ ಶಾಲೆಗೆ ಒಂದು ದಿನಪತ್ರಿಕೆಯೂ ಬರುತ್ತಿತ್ತು. ಅದನ್ನು ದಿನಕೊಬ್ಬರಂತೆ ಓದಿ ಮುಖ್ಯ ವಿಷಯಗಳನ್ನು ಬೋರ್ಡಿನಲ್ಲಿ ಕ್ರಮಪ್ರಕಾರ ಬರೆಯಬೇಕಿತ್ತು. ನಾವೆಲ್ಲ ಆಕಾಶವಾಣಿಯ ವಾರ್ತಾವಾಚಕರಿಗಿಂತಲೂ ಹೆಚ್ಚಿನ ಚೆಂದದಲ್ಲಿ ನಮ್ಮದೇ  ಶೈಲಿಯಲ್ಲಿ ಓದುವುದು, ಕೆಲವೊಮ್ಮೆ ಹಿಂದಿನಿಂದ ಬಂದ ಟೀಚರ್ ಕೈಯಲ್ಲಿ ಪೆಟ್ಟು ತಿಂದು ನಮ್ಮ ಬೆಂಚ್ ಗೆ ಓಡುವುದೂ ಆಗಾಗ ಚಾಲ್ತಿಯಲ್ಲಿದ್ದ  ವಿಷಯ.

ಆಗ ನಾಲ್ಕನೆಯ ಎ ತರಗತಿಗೆ ರಾಘವ ಮೇಷ್ಟ್ರು , ಅವರು ಆಗಾಗ ಮಧ್ಯಾಹ್ನ ಎರಡೂ ತರಗತಿ ಸೇರಿಸಿ ಪಾಠ ಮಾಡುತ್ತಿದ್ದರು. ಜೊತೆಗೆ ಹಾಡು ಹಾಡುವಂತೆ ಪ್ರತಿಯೊಬ್ಬರಿಗೂ ತಾಕೀತು. ನನಗೆ ಅಂಜಿಕೆ,ನಾಚಿಕೆ. ಆದರೆ ಅಜ್ಜಿ ಹೇಳಿದ್ದಾಳೆ ದಂಡನಾಯಕಿಯಾಗಬೇಕು. ಆಗ ಒಂದು ಹಾಡು ಕಂಠಪಾಠ. ನನ್ನ ಕೆಲವು ಗೆಳತಿಯರೂ ಒಂದೊಂದು ಹಾಡು ಹಾಡುತ್ತಿದ್ದರು. ಈ ಒಂದೊಂದು ಹಾಡು ಎಂದರೆ ನಮಗೆ ಆ ವರ್ಷ ಪೂರ್ತಿಯಾಗಿ ಅದನ್ನು ಉಪಯೋಗಿಸಿ ಮುಂದಿನ ತರಗತಿಯಲ್ಲೂ ಹಾಡಲು ಹೇಳಿದರೆ ಅದೇ ಪದ್ಯ ಅಷ್ಟೇ  ಚೆಂದದಲ್ಲಿ  ಹಾಡುತ್ತಿದ್ದೆವು. ನನ್ನದು ಧರ್ಮಸೆರೆ ಚಿತ್ರದ ” ಕಂದಾ ಓ ನನ್ನ ಕಂದ..” ಎಂಬ ಹಾಡು. ನನಗೆ ಆ ಹಾಡಿನ ಮೇಲೆ ಎಂತಹ ಅಭಿಮಾನವೆಂದರೆ ಅಷ್ಟು ಉತ್ತಮವಾದ ಹಾಡು ಬೇರೊಂದಿಲ್ಲ. ನಾನು ಎದ್ದ ತಕ್ಷಣ ಎಲ್ಲ ಗಂಡು,ಹೆಣ್ಣೂ ಮಕ್ಕಳೂ “ಕಂದಾ..” ಎಂಬ ಆಲಾಪ ಶುರು ಮಾಡುತ್ತಿದ್ದರು. ಆದರೆ ಇದು ನನ್ನ ಒಬ್ಬಳದೇ ಸಮಸ್ಯೆಯಲ್ಲ. ಎಲ್ಲರ ಒಳಗೂ ಒಂದೊಂದು ಹಾಡಿನ ಮುದ್ರಿಕೆ ಅಚ್ಚಾಗಿ ಬಿಟ್ಟಿತ್ತು.

 ನನಗೆ ನನ್ನ ಈ  ಹಾಡಿನ ವೃತ್ತದಿಂದ ಮೇಲೆದ್ದು ಹೊಸತೊಂದು ಹಾಡು ಹಾಡಬೇಕು  ಎಂಬ ಯೋಚನೆ, ಹಠದಿಂದ  ಬೇರೆ ಹಾಡನ್ನೂ ಕಲಿತಿದ್ದೆ. ಅದನ್ನು ಹಾಡಿ ಭೇಷ್ ಎನಿಸಿಕೊಳ್ಳಬೇಕು. ಈ ಹುಡುಗರ ” ಕಂದಾಆಆಅ” ಎಂಬ ಲೇವಡಿಯಿಂದ ಬಚಾವಾಗಬೇಕು. ನನಗೆ ಸಿಕ‌್ಕಿತು ಹೊಸ ಹಾಡು. ಹಾಡಲೂ ತಯಾರಾದೆ. ಹೊಸ ಹಾಡು. ಹಾಡಿನ ಸರದಿ ಆರಂಭ ಆಗುತ್ತಿದ್ದಂತೆ ಮನಸ್ಸಿನೊಳಗೆ ವೇಗವಾಗಿ,ನಿಧಾನವಾಗಿ ಶ್ರುತಿಬದ್ದವಾಗಿ ಹಾಡಿ ಅನುವಾದೆ. ಹೊಸದರ  ಪುಳಕ. ನನ್ನ ಹೆಸರು ಬಂದಾಗ‌ ಎದ್ದು ಮನದೊಳಗೆ ಮತ್ತೆ ಹೊಸ ಹಾಡು ಉರು ಹೊಡೆಯುತ್ತ ಎದುರು ಹೋದೆ. ಏಕ ಚಿತ್ತದಲ್ಲಿ ನಿಂತು  ಶುರು ಮಾಡಿದರೆ  ಕಂಠದಿಂದ ಮೈಕೊಡವಿ ಎದ್ದು  ಹೊರಬಂದದ್ದು “ಕಂದಾ..ಓ ನನ್ನ..”  ಇಂತಹ ಒಂದೆರಡು ಪ್ರಯತ್ಮ ಮತ್ತೆ ಮಾಡಿ ಕೊನೆಗೆ ನನ್ನ  ಈ ಹಾಡಿನೊಂದಿಗೆ ಜೊತೆಯಾಗಿ ಇರುವ ಸಂಕಲ್ಪವನ್ನೇ ಗಟ್ಟಿ ಮಾಡಿದ್ದೆ. ಈಗಲೂ ನಮ್ಮ ಕ್ಲಾಸಿನ ಸಹಪಾಠಿ ಗಳು ಸಿಕ್ಕರೆ ಅವರು ಹಾಡುತ್ತಿದ್ದ ಹಾಡು ನೆನಪಾಗುತ್ತದೆ. ಅದು ಉಳಿದವರಿಗೂ ಕಂಠಪಾಠ. ಬೆಲ್ಲದ ಸವಿ.

ನಮ್ಮ ಶಾಲೆಯಲ್ಲಿ ಆಗ ಫ್ಯಾನ್ ಗಳು ಇರಲಿಲ್ಲ. ಹಾಗಾಗಿ  ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ತರಗತಿ ಸೆಖೆ. ಅದು ನಮಗೇನೂ ಆಗ ಭಾದೆ ಎಣಿಸುತ್ತಿರಲಿಲ್ಲ.  ಮಾಸ್ಟರ್ರು ಮಾತ್ರ ಕೆಲವು ಸಲ ಶಾಲೆಯ ಹೊರಗೆ ಹಿಂಬದಿಯ  ದೇಗುಲದ ತೋಪಿನಲ್ಲಿ ಪಾಠ ಮಾಡುತ್ತಿದ್ದರು.ಅಲ್ಲಿ ಹಳೆಯ ಹುಣಿಸೆ, ಮಾವು, ದೇವದಾರು ಮರಗಳಿದ್ದವು. ನಮಗದು ಬಹಳ ಮೋಜಿನ ತರಗತಿ.

“ಸರ್, ಸಾರ್..ಇವತ್ತು ಕ್ಲಾಸ್ ಹೊರಗೆ ಮಾಡುವ. ಸಾರ್..ಅಲ್ಲಿ ಪಾಠ ಮಾಡಿ”

 ನಮ್ಮದು ಗೋಗರೆತ.

ಅವರು ” ಆಯಿತು” ಎಂದದ್ದೇ ತಡ ಹುಡುಗರು ಅವರು ಕುಳಿತುಕೊಳ್ಳುವ ಕುರ್ಚಿ ಎತ್ತಿ ಹಿಡಿದು ಓಡುತ್ತಿದ್ದರು. ನಾವು ಬೇಗ ಓಡಿ ಮೊದಲು ಹುಣಿಸೆ ಹಣ್ಣು ಬಿದ್ದಿದೆಯಾ ಎಂದು ಹುಡುಕಾಡಿ ಹೆಕ್ಕುತ್ತಿದ್ದೆವು. ಸಿಕ್ಕಿದರೆ ಸ್ವಲ್ಪ ಪಾಟಿ ಚೀಲದಲ್ಲಿ ಅಡಗಿಸಿ, ನಂತರ ಸಿಗದವರಿಗೆ ತೋರಿಸಿ  ಹಂಚಿ ತಿನ್ನುವ ಗಮ್ಮತ್ತು. ನಮ್ಮ‌ ಮೇಸ್ಟರಿಗೆ ಮಾತ್ರ ಕುರ್ಚಿ. ನಾವು ಅಲ್ಲಿ ನೆಲದಲ್ಲಿ ಕೂತು ಪಾಠ ಕೇಳಿಸಿಕೊಳ್ಳುವುದು. ಶಾಲೆಯ ಗೋಡೆಗಳ ನಡುವಿನ ತರಗತಿಗಿಂತ ಈ ಹೊರಾಂಗಣ ತರಗತಿ  ನಮಗೆ ಅತ್ಯಂತ ಖುಷಿ ನೀಡುತ್ತಿತ್ತು.  ಒಳ್ಳೆಯ ಗಾಳಿ, ಹದ ತೂಕಡಿಕೆ. ಹೆಚ್ಚಾಗಿ ಇಲ್ಲಿ ನೀತಿಪಾಠ. ಗಾದೆ ಮಾತುಗಳು. ನಮಗದು ಕಂಠಪಾಠ ಆಗಬೇಕು. ಟೀಚರ್ ಅರ್ಧ ಹೇಳಿದರೆ ನಾವು ಕೋರಸ್ ನಲ್ಲಿ ಪೂರ್ಣ ಗೊಳಿಸುತ್ತಿದ್ದೆವು.

” ಊರಿಗೆ ಅರಸನಾದರೂ..”

” ತಾಯಿಗೆ ಮಗ”

” ಕೈ ಕೆಸರಾದರೆ..”

” ಬಾಯಿ ಮೊಸರೂ..”

” ಗಿಡವಾಗಿ ಬಗ್ಗದು”

” ಮರವಾಗಿ ಬಗ್ಗಿತೇ..”

ಹೀಗೆ ನಮ್ಮ ಗುರುಗಳ ಗಾದೆ ಮಾತಿನ ‌ಆಟದಂತಹ ಪಾಠವು  ಲಾಸ್ಯಪೂರ್ಣವಾಗಿ ಸಾಗುತ್ತಿತ್ತು

 ಆಗ ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಯ ವಾರ್ಷಿಕೋತ್ಸವದ ಸಂಭ್ರಮ. ವಾರ್ಷಿಕೋತ್ಸವ ಪ್ರತೀ ವರ್ಷ ಆಗುತ್ತಿರಲಿಲ್ಲ. ಆ ವರ್ಷ ನಮಗೆ ಬಹಳ ಸಂತಸ. ಪ್ರತೀ ತರಗತಿಗೂ ಒಂದೊಂದು ಬಗೆಯ ನೃತ್ಯವನ್ನು ಸಂಯೋಜಿಸಿದ್ದರು.ಟೀಚರ್ ಅದನ್ನು ನಮಗೆ ಹೇಳಿ ಕೊಡುತ್ತಿದ್ದರು.

ನಮ್ಮ ತರಗತಿಗೆ ಕೋಲಾಟ ನಿಗದಿಯಾಯಿತು. ನನಗೋ ಟಮ್ಕಿ ಹಿಡಿದು ಝೈಂಝೈಂ  ನೃತ್ಯ ಮಾಡುವುದು ಬಹು ಇಷ್ಟವಿತ್ತು. ಆದರೆ ಅದು ಇನ್ನೊಂದು ತರಗತಿಯವರಿಗೆ ಹೋಗಿತ್ತು. ಸಂಜೆ ರಿಹರ್ಸಲ್ ಆರಂಭಿಸುವ ಮುನ್ನ ನಾನು ಕಳ್ಳಿ ಯಂತೆ  ಆ ಟಮ್ಕಿಗಳನ್ನು ಇಟ್ಟಲ್ಲಿ ಹೋಗಿ ಸಣ್ಣಗೆ ಅದನ್ನು ಬಡಿದು ರೋಮಾಂಚಿತಳಾಗುತ್ತಿದ್ದೆ. 

ನಮ್ಮ ತರಗತಿಯಿಂದ ಕೋಲಾಟಕ್ಕೆ ನಾನೂ ಆಯ್ಕೆ ಆಗಿದ್ದೆ. ಶಂಕಿ ಟೀಚರ್ ಹಾಡು ಹಾಕಿ ಹೆಜ್ಜೆಗಳನ್ನು ಹೇಳಿಕೊಡುತ್ತಿದ್ದರು. ಹಿಂದೆ ಮುಂದೆ ಕಾಲು ಆಡಿಸಿ ಹೆಜ್ಜೆ, ಆಚೆ ಈಚೆ ದೇಹ ತಿರುಗಿಸಬೇಕು. ಅದಕ್ಕೆ ತಕ್ಕಂತೆ ಕೈಗಳಲ್ಲಿರುವ ಕೋಲುಗಳನ್ನು  ಆಡಿಸುತ್ತ ಸಂಖ್ಯಾಶಾಸ್ತ್ರದ ಸಮಸ್ಯೆ ಇಟ್ಟಂತೆ ಕೂಡಿಸು,ಗುಣಿಸು ಚಿಹ್ನೆಯಲ್ಲಿ  ಒಮ್ಮೆ ಆಕಾಶಕ್ಕೆ ಮತ್ತೊಮ್ಮೆ ಭೂಮಿಗೆ ಕೋಲು ತೋರಿಸುತ್ತ ಬಡಿದು, ಪಕ್ಷದವರ ಕೋಲಿಗೆ ಹೊಡೆದು,ಕೂತು ಎದ್ದು ಶಬ್ದ ಬರಿಸುವುದು..ವೃತ್ತ, ಪರಿಭ್ರಮಣದಂತಹ ಓಟ.

ಅಬ್ಬಾ.ನನಗಂತೂ ಇದು ಕ್ಲಾಸಿನಲ್ಲಿ ಟೀಚರ್ ಕೊಡುವ ಲೆಕ್ಕಕ್ಕಿಂತ ಕಠಿಣ ಎನಿಸಿತು.  ಎದೆಯೊಳಗೆ ಮೂಟೆ ಮೂಟೆ ಹೆದರಿಕೆ ಸರಿದಾಡುತ್ತಿತ್ತು. ಒಂದಷ್ಟು ತರಬೇತಿಯ ನಂತರ ಉಳಿದ ಗೆಳತಿಯರು ಆರಾಮವಾಗಿ ಹೆಜ್ಜೆ ಹಾಕುತ್ತ ಕೋಲು ಬಡಿಯುತ್ತ ದೇಹ ತಿರುತಿರುಗಿಸಿ ಲಾಲಿತ್ಯದಿಂದ ನೃತ್ಯ ಮಾಡುತ್ತಿದ್ದರೆ ನಾನು ಕಷ್ಟದ ಪರೀಕ್ಷೆಗೆ ಅಸಹಾಯಕತೆ ಯಲ್ಲಿ ಬಳಲುತ್ತಿದ್ದೆ.  ನಮ್ಮ ಟೀಚರ್ ಬಹಳ ಶಿಸ್ತಿನವರು. ನನಗೆ ಹೇಗೋ ಹೇಗೋ ಹೇಳಿಕೊಟ್ಟು ಸರಿ ಮಾಡುತಿದ್ದರು. ಆದರೂ ನಡುನಡುವೆ ಲೆಕ್ಕ ತಪ್ಪುತ್ತಿತ್ತು. ಜೊತೆಗೆ ಶಂಕಿ ಟೀಚರ್ ಎಚ್ಚರಿಕೆ ಕೊಡುತ್ತಿದ್ದರು

 “ಸ್ಕೂಲ್ ಡೇ ದಿನ ಜಾಗ್ರತೆ. ಹೆಜ್ಜೆ ಯಾರೂ ತಪ್ಪಬಾರದು. ಒಬ್ಬರ ಹೆಜ್ಜೆ ತಪ್ಪಿ ಹೋದರೆ ಎಲ್ಲರ ಹೆಜ್ಜೆಯೂ ತಪ್ಪಿ ಕೋಲಾಟವೇ ಹಾಳಾಗುತ್ತದೆ.” 

ಮಾತಿನ ಕೊನೆಗೆ ದೃಷ್ಟಿ ನನ್ನ ಮೇಲೇ ಸ್ಥಿರಗೊಳ್ಳುತ್ತಿತ್ತು. ಅಬ್ಬ ಎಂತಹ ಕಠಿಣ ಪರೀಕ್ಷೆ. ಆ ದಿನ ಬಂತು. ಎದೆಯೊಳಗೆ ಆತೀ ವೇಗದಲ್ಲಿ ರೈಲು ಓಡುತ್ತಿತ್ತು. ನಮಗೆ ಮುಂಡಾಸು,ಜಾನಪದೀಯ ದಿರಿಸು ತೊಡಿಸಲಾಯಿತು. ವೇದಿಕೆಯ ಹಿಂಭಾಗದಲ್ಲಿ ನಮ್ಮನ್ನು ಸಾಲಾಗಿ ನಿಲ್ಲಿಸಿದ್ದಾರೆ.  ಇನ್ನೇನು ನಮ್ಮ ನೃತ್ಯ ಆರಂಭ. ನಮ್ಮ ಟೀಚರ್ ಸಾಲಿನಲ್ಲಿ ಒಬ್ಬೊಬ್ಬರನ್ನೇ  ವೇದಿಕೆಗೆ ಕಳುಹಿಸುತ್ತಿದ್ದರು. ಪ್ರವೇಶದ  ಬಳಿ ಬರುವಾಗ ನನ್ನ ಪಾದಗಳು ಒಮ್ಮೆಲೆ ನೆಲಕ್ಕೆ ಅಂಟಿಕೊಂಡವು. ನಾನು ಆ ಕತ್ತಲಿನಲ್ಲಿ ಹೊರಗೆ ನೋಡಿದೆ. ಅದೋ! ಎಷ್ಟೊಂದು ಜನ ಎದುರುಗಡೆ ಕೂತಿದ್ದಾರೆ. ಅವರೆದುರು ನಾನು..ಕೋಲಾಟ,. ಆಗದು. ನಿಶ್ಯಕ್ತಿ ದೇಹವನ್ನೆಲ್ಲ ಆವರಿಸಿತು. ಹೊಟ್ಟೆಯೊಳಗೆ ನಡುಕ. ಟೀಚರ್ ನನ್ನನ್ನು ಮುಂದೆ ದೂಡಿದರೆ ನನ್ನ ದೇಹವು ಇದ್ದಲ್ಲೇ ಕಲ್ಲಾಗಿದೆ. ಮುಂದೆ ಒಂದಿಷ್ಟೂ ಚಲಿಸದು.

“ಹೋಗು” 

ನಾನು ದೀನಳಾಗಿ ಅವರನ್ನು ನೋಡಿ ಕೆಳಗೆ ನೋಡತೊಡಗಿದೆ.  ಏನೂ ನೆನಪಾಗುತ್ತಿಲ್ಲ. ಟೀಚರ್ ನನ್ನ ಮುಖ ಎತ್ತಿ ನಯವಾಗಿ, ಮತ್ತೆ ಕಣ್ಣು ದೊಡ್ದದಾಗಿಸಿ  ಕಳುಹಿಸಲು ನೋಡಿದರು. ಉಹುಂ. ಇಲ್ಲ. ಢುಂ.. ಎಂದು ಬೆನ್ನಿಗೊಂದು ಗುದ್ದು ಬಿತ್ತು. ನನಗೆ ಕಣ್ಣು ತುಂಬಿ ಬರುತ್ತಿತ್ತು. ನೃತ್ಯ ಮಾಡಬೇಕು ಎಂಬುವುದು  ನನ್ನ ದೊಡ್ಡ ಆಸೆಯೂ ಆಗಿತ್ತು. ಆದರೆ   ವೇದಿಕೆಗೆ ಹೋದರೆ ಸತ್ತೇ ಹೋದೆನು ಎಂಬಂತಹ ರಾಕ್ಷಸ ಭಯ.

 “ನನ್ನಿಂದಾಗದು, ನನಗೆ ಸಾಧ್ಯವಿಲ್ಲ”

.‌ಭಯ, ದುಃಖ ಹೆಚ್ಚಿದಂತೆ ಬಿಕ್ಕಳಿಸಲು ಆರಂಭಿಸಿದೆ. ಟೀಚರ್ ಸೋತಂತೆ ನನ್ನನ್ನು ಬದಿಗೆ ನೂಕಿ ಉಳಿದವರನ್ನು ಒಳಗೆ ಕಳುಹಿಸಿದರು. 

ಒಂದೆಡೆ ದೊಡ್ಡ ಸೋಲಿನ ನೋವು, ವೇದಿಕೆ ಹತ್ತಲಾಗದ ನಿರಾಸೆ, ಮತ್ತೊಂದೆಡೆ ಪೆಟ್ಟಿನ ಉರಿ. ಜೊತೆಗೆ ಅಜ್ಜಿಯನ್ನು ಎದುರಿಸಬೇಕಾದ ಅನಿವಾರ್ಯತೆ. ನಾನು ಹಿಮ್ಮುಖ ಹೆಜ್ಜೆ ಸರಿಸುತ್ತ ಆ ಕತ್ತಲಿನ ಗೋಡೆಗೊರಗಿ ನಿಂತು ಕಣ್ಣೀರಿಡುತ್ತ, ಬಿಕ್ಕಳಿಸುತ್ತಲೇ ಇದ್ದೆ.

ನನ್ನ ಸುತ್ತ ಕೇವಲ ಕತ್ತಲು. ಅನತಿ ದೂರದ ವೇದಿಕೆಯಲ್ಲಿ ಬಣ್ಣಬಣ್ಣದ ಬೆಳಕು.. ನನ್ನ ಸಂಭ್ರಮವೆಲ್ಲ ಕತ್ತಲಿನ ಬಸಿರಿಗೆ ಅರ್ಘ್ಯವಾಗಿತ್ತು. ಯಾರೂ ನನ್ನ ನೋಡಬಾರದು. ಅಂಜಿಕೆಯ ಬೆಳೆ ಬೆಳೆದು ಆ ಗೋಡೆಯನ್ನೇ ದೂಡುವಂತೆ ಕತ್ತಲಿನ ತೆಕ್ಕೆಗೆ ಬಿದ್ದಿದ್ದೆ. ಮನಸ್ಸು ರಂಗದ ವಾತ್ಸಲ್ಯದಿಂದ ವಂಚಿತಳಾಗಿ ಪೆಟ್ಟು ತಿಂದ ಕೂಸು. ಆ ಮಡಿಲ ಸಿಹಿ ಬೇಕು. ಅದರೆ ಬಳಿ ಹೋಗದಷ್ಟು ಹೆದರಿಕೆ. ಸೋಲಿನ ಭಯ.  ಅದು ನನ್ನ ವ್ಯಕ್ತಿತ್ವದಲ್ಲೇ ಬೆರೆತಿತ್ತು. ರಂಗಮಂಟಪದ ಹೊರಗಿನ ಕತ್ತಲು ನನ್ನ ಒಳಗೆ ಇಳಿಯುತ್ತಿತ್ತು.

ಕೋಲಾಟದ ಮೊದಲ ರಂಗ ಪ್ರಯತ್ನದಲ್ಲಿಯೇ ನನ್ನ ಕೋಲು ಮುರಿದಿತ್ತು

Kolata dance for Kannada Rajyotsava 2012 - YouTube

****************************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

One thought on “

Leave a Reply

Back To Top