ಅಂಕಣ ಬರಹ

ಅರಿವಿನ ನಾವೆಯ ಮೇಲೆ

ಸುಖ ಪಯಣ…

yellow flower on gray surface

Every human being lives in a perpetual state of insuffiency. No matter who you are or what you have achieved, you still want a little more than what you have right now…

-Sadhguru (Inner Engineering)

ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ ಮೂಲೆಹಿಡಿದುಬಿಡುತ್ತಿದ್ದೆವು ಅನಿಸುತ್ತದೆ. ನನಗಂತೂ ಬಲೇ ಸೋಜಿಗವೆನಿಸಿಬಿಡುತ್ತದೆ ಒಮ್ಮೊಮ್ಮೆ. ಅರೆ ನನಗ್ಯಾಕೆ ಸುಮ್ಮನಿರಲಾಗುವುದಿಲ್ಲ ನನ್ನ ಪಾಡಿಗೆ. ಎಲ್ಲರೂ ಮನೆ, ಗಂಡ , ಮಕ್ಕಳು, ನೌಕರಿ, ಸಂಬಳ, ಚಂದದ ಬಟ್ಟೆ, ಮದುವೆ ದಿಬ್ಬಣ…. ಅಂತೆಲ್ಲ ಖುಷಿ ಎನ್ನುವುದು ಕಾಲು ಮುರಿದುಕೊಂಡು ಅವರ ಕಾಲ ಬುಡದಲ್ಲೇ ಬಿದ್ದಿದೆ ಎನ್ನುವಷ್ಟು ನೆಮ್ಮದಿಯಾಗಿರುವಾಗ ನಾವಾದರೂ ಹೀಗೆಲ್ಲ ಮನಸಿನ ಹುಚ್ಚಿಗೆ ಬಲಿಯಾಗಿ ಕಣ್ತುಂಬ ನಿದ್ದೆ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುತ್ತೇವಲ್ಲ ಏಕೆ… ಒಂದು ಕವಿತೆಯೋ, ಒಂದು ಕತೆಯೋ ಅಥವಾ ಒಂದು ಸಣ್ಣ ಬರಹದ ತುಣುಕೋ ಈ ಬೆರಳುಗಳ ಕುಟ್ಟುವಿಕೆಯಿಂದ ಹುಟ್ಟಿಬಿಟ್ಟರೆ ಸಿಗುವ ಸಂತೋಷ ಇದೆಯಲ್ಲ ಇನ್ಯಾವುದರಲ್ಲೂ ಅದು ಸಿಗಲಾರದು ಎನಿಸಿಬಿಡುತ್ತದೆ.

“ಈ ಓದು ಬರಹ ಅಂತೆಲ್ಲ ಏನೇನೋ ಮಾಡೋದು ಬಿಟ್ಟು ಮನೆ, ಮಕ್ಕಳು, ಸಂಸಾರ ಅಂತ ಜವಾಬ್ದಾರಿಯಿಂದ ಬದುಕೋದನ್ನ ಕಲಿ…” ಎನ್ನುವ ಈ ಮಾತನ್ನ ನನ್ನಮ್ಮ ಅದೆಷ್ಟು ಬಾರಿ ಹೇಳಿದ್ದಾರೋ… “ಅಲ್ಲ ನಿಮ್ಗೆ ಟೈಮ್ ಎಲ್ಲಿಂದ ಸಿಗುತ್ತೆ ಇದನ್ನೆಲ್ಲ ಮಾಡೋಕೆ… ಮೋಸ್ಟ್ಲಿ ನೀವು ಮನೇಲಿ ಬರಿ ಬರೆಯೋದೆ ಕೆಲ್ಸ ಮಾಡ್ತೀರೇನೋ ಅಲ್ವ… ನಮ್ಗಂತು ಹಾಗಲ್ಲಪ್ಪಾ… ಮನೆಗ್ಹೋದ್ರೆ ಎಪ್ಪತ್ತಾರು ಕೆಲ್ಸ… ಇಂಥವೆಲ್ಲ ಮಾಡೋಕೆ ಟೈಮೇ ಸಿಗಲ್ಲ ಗೊತ್ತಾ…” ಅಂತೆಲ್ಲ ಮಾತಾಡುವ ಗೆಳೆಯರು, ಸಹೋದ್ಯೋಗಿಗಳು… ಇವೆಲ್ಲ ಸುಳ್ಳೂ ಅಲ್ಲ. ಹಾಗಂತ ಪೂರ್ಣ ಸತ್ಯವೂ ಅಲ್ಲ. ಎಲ್ಲರ ತೃಪ್ತಿಗೂ ಕಾರಣ ಒಂದೇ ಆಗಿರಲು ಸಾಧ್ಯವಿಲ್ಲ. ಹಕ್ಕಿಗೆ ಹಾರಾಟದಲ್ಲಿ ಖುಷಿ, ಮೀನಿಗೆ ಈಜಾಟದಲ್ಲಿ ಖುಷಿ. ಹಾರುವುದು ಹಕ್ಕಿಗೆ ಸಹಜ ಕ್ರಿಯೆ, ಈಜುವುದು ಮೀನಿಗೆ ಸಹಜ ಕ್ರಿಯೆ. ಹಾಗಯೇ ತನ್ನ ಮೆದುಳು ಮತ್ತು ಬುದ್ಧಿಶಕ್ತಿಯಿಂದ ಭಿನ್ನವಾಗಿ ನಿಲ್ಲುವ ಮನುಷ್ಯನಿಗೆ ಹಲವಾರು ಆಸಕ್ತಿ ಮತ್ತು ಅಭಿರುಚಿಗಳು. ಅಂತೆಯೇ ಅವನ ತೃಪ್ತಿಯ ಕಾರಣಗಳೂ ಸಹ. ನನಗೂ ಒಂದು ಬರೆಹ ಹುಟ್ಟಿದ ಕ್ಷಣ ಸಿಗುವ ಆನಂದ ಮತ್ಯಾವುದರಲ್ಲೂ ಸಿಗುವುದಿಲ್ಲ. ಇನ್ನು ಸಮಯದ ವಿಚಾರಕ್ಕೆ ಬಂದರೆ ಒಂದು ದಿನದಲ್ಲಿ ನಿರಂತರ ಕೆಲವು ಘಂಟೆಗಳು ಒಟ್ಟಾಗಿ ಸಿಗುವುದಿಲ್ಲ. ಆದರೆ ಸಿಗುವ ಸಣ್ಣ ಸಣ್ಣ ಸಮಯವನ್ನು ಪೋಣಿಸಿಟ್ಟುಕೊಂಡು ಪ್ರೀತಿಯಿಂದ ಬರಹ ಕಟ್ಟುವುದೂ ಒಂದು ಸವಾಲು. ಆದರೆ ಅದೊಂದು ಸುಖವಾದ ಸವಾಲು. ಪ್ರತಿ ಬಾರಿಯೂ ಆ ಸವಾಲನ್ನು ಗೆದ್ದು ಬರೆಯುವಾಗ ಸಿಗುವ ಖುಷಿ ಅನನ್ಯ. ಹಾಗಾಗಿ ಸಮಯ ಸಿಗುವುದಿಲ್ಲ, ಸಮಯವಿಲ್ಲ ನನಗೆ ಎನ್ನುವುದು ಸಮಸ್ಯೆಯಾಗಿ ಇದುವರೆಗೂ ಕಾಡಿಯೇ ಇಲ್ಲ.

ಹಾಡು ಹಸೆ ಸಂಗೀತ ನೃತ್ಯದಂತೆ ಬರೆಹವೂ ಒಂದು ಆಸಕ್ತಿಕರ ಕ್ಷೇತ್ರ. ಮತ್ತದು ಬಹಳವೇ ಪರಿಣಾಮಕಾರಿ ಕ್ಷೇತ್ರವೂ ಹೌದು. ಬರೆಹ ಎನ್ನುವುದು ನಮ್ಮೊಳಗಿನ ಗ್ರಹಿಕೆಯನ್ನು ಹೊರ ಬರುವಂತೆ ಮಾಡುತ್ತದೆ. ಅದು ಮತ್ತೊಬ್ಬರ ಮನದ ಭಾವಕ್ಕೆ ಸಂತೈಕೆಯಾಗಿಯೂ, ಅವರ ಮನದ ಮಾತಿಗೆ ದನಿಯಾಗಿಯೂ ಸಮಾಧಾನ ಕೊಡುತ್ತದೆ. ಓದು ನಮ್ಮನ್ನು ಪ್ರಬುದ್ಧ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ, ನಮ್ಮ ಅಹಂಕಾರವನ್ನು ಕಳೆಯುತ್ತದೆ. ಭಾವಗಳ ಹೊರಹೊಮ್ಮುವಿಕೆಗೆ ಮಾಧ್ಯಮವಾಗುವ ಬರೆಹ ನಮ್ಮ ದುಗುಡದ ಮೋಡಗಳನ್ನು ಕರಗಿಸಿ ತಿಳಿ ನೀಲ ಆಗಸವನ್ನಾಗಿ ಮಾರ್ಪಾಟು ಮಾಡುತ್ತದೆ. ಬರಹ ನನ್ನ ಜೀವನದ ಭಾಗವಾದ ಮೇಲೆ, ನನ್ನ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆಯನ್ನು ಗಮನಿಸುವಾಗ, ಹಾದು ಬರಹ ನಮ್ಮನ್ನು ಗಟ್ಟಿಯಾಗಿಸುತ್ತದೆ. ಎಂತಹ ಸಮಸ್ಯೆ ಬಂದರೂ ಧೈರ್ಯ ಮತ್ತು ತಿಳುವಳಿಕೆಯಿಂದ ಎದುರಿಸುವ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ.   ಬರೀ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಂಡ ಅದೆಷ್ಟೋ ಜನ ಇದ್ದಾರೆ. ಆದರೆ ಬರೆಹಗಾರನಿಗೆ ಮಾತ್ರ ಎರಡೆರಡು ಉಪಯೋಗ. ಒಂದು ಓದಿದ್ದು, ಮತ್ತೊಂದು ಬರೆದದ್ದು. ಯಾವ ಕಲೆಯೇ ಆಗಿರಲಿ ತನಗೆ ಬೇಕಾದವರಿಂದ ತನ್ನ ಕ್ಷೇತ್ರಕ್ಕೆ ಬೇಕಾದ ಸೇವೆಯನ್ನು ಪಡೆಯುತ್ತದೆ. ಬರೆಹ ಕಲಿತವರೆಲ್ಲ, ಬರೆಯುವ ಶಕ್ತಿ, ಸಾಮರ್ಥ್ಯವಿದ್ದವರೆಲ್ಲ ಬರೆಯುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಸಾರಿ ಬರೆಹವೇ ಬರೆಹಗಾರನ ಕೈಲಿರುವುದಿಲ್ಲ. ಆದರೆ ಅದರ ಮೇಲೆ ತನ್ನ ಹಕ್ಕು ಚಲಾಯಿಸಲು ಹೊರಡುವುದು ಯಾರಿಗೇ ಇರಲಿ ಹರಿವಿಗೆ ವಿರುದ್ಧವಾಗಿ ಈಜುವ ಹಾಗೆ ದುಸ್ಸಾಹಸವೇ ಸರಿ.

ಶಿಕ್ಷಕನನ್ನು ಚಿರಂತನ ವಿದ್ಯಾರ್ಥಿ ಎನ್ನುವ ಹಾಗೆ ಬರೆಹಗಾರ ಚಿರಂತನ ಓದುಗನಾಗಿರಬೇಕಾಗಿರುತ್ತದೆ. ಬರೆಹಗಾರ ಇತಿಹಾಸಕಾರನೂ ಆಗುತ್ತಾನೆ, ಕಾಲಜ್ಞಾನಿಯೂ ಆಗುತ್ತಾನೆ. ಅದಕ್ಕೇ ಅವನಿಗೆ ಎಷ್ಟೊಂದು ಮಾನ್ಯತೆ!

ಮಾನ್ಯತೆಗಾಗಿ ಬರೆಯ ಹೊರಟರೆ ಬಹಳ ಬೇಗ ಎದುಸಿರು ಹೆಚ್ಚಿ, ಸುಸ್ತಾಗಿಬಿಡುತ್ತದೇನೋ. ಆದರೆ ಎಷ್ಟೇ ಅದು ಬೇಡ ಎನ್ನುವ ಪ್ರಜ್ಞಾವಂತಿಕೆ ಇದ್ದರೂ ಅದನ್ನು ಮೀರಿ ನಿರ್ಲಿಪ್ತತೆಯನ್ನು ಸಾಧಿಸಿಕೊಳ್ಳುವುದು ಬಹಳ ಕಷ್ಟ. ಅದು ನಮ್ಮನ್ನು ನಾವು ಮೀರುವುದು. ಆದರೆ ಅದು ಯಾರೇ ಆಗಿರಲಿ, ನಮ್ಮಲ್ಲಿ ಎಷ್ಟೇ ಇರಲಿ, ಏನೇ ಇರಲಿ, ಇದ್ದುದರಲ್ಲಿ ತೃಪ್ತಿ ಪಡದಿರುವ ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮಲ್ಲಿ ತಲ್ಲಣದ ಸುಳಿ ಸೃಷ್ಟಿಸಿ ತೃಪ್ತಿಯನ್ನು ಕಿತ್ತುಕೊಳ್ಳುತ್ತದೆ. ಸಾಧನೆಗಳು, ಪ್ರಶಸ್ತಿಗಳು, ಕೀರೀಟ ಏರಿ ನಿಂತ ತುರಾಯಿಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅತೃಪ್ತಿಯೂ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಅದರೊಂದಿಗೆ ಸಹಜವಾಗಿ ಬರುವ ಒತ್ತಡಕ್ಕೂ ಈಡಾಗಲೇ ಬೇಕು ಸಹ. ಇನ್ನಿದು ಸಾಕು ಎಂದು ಬುದ್ದಿ ಹೇಳಿದರೂ ನಮ್ಮ ಅತೃಪ್ತಿ ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ.

two flying brown birds on mid-air painting

ಆದರೆ ಹಕ್ಕಿಗೆ ಹಾರುವಿಕೆ, ಮೀನಿಗೆ ಈಜುವಿಕೆ ಸಹಜವಾದಷ್ಟೇ ಬರಹಗಾರನಿಗೂ ಬರಹ ಸಹಜವಾಗಬೇಕು. ಹಾರುತ್ತದೆ ಎಂದು ಹಕ್ಕಿಗಾಗಲಿ, ಈಜುತ್ತದೆ ಎಂದು ಮೀನಿಗಾಗಲೀ ಯಾರಾದರೂ ಪ್ರಶಸ್ತಿ ಕೊಡುತ್ತಾರಾ?! ಹಾಗೇ ಬರೆಹಗಾರನಿಗೆ ಬರೆಹ ಸಹಜವಾಗಬೇಕು. ಮನುಷ್ಯ ತನ್ನ ಬುದ್ಧಿ ಮತ್ತು ದೇಹವನ್ನು ಅದರ ಸಹಜ ಶಕ್ತಿಯನ್ನು ಮೀರಿ ಪಳಗಿಸಿ ಬಳಸಬಲ್ಲ. ಅದಕ್ಕೆ ಒಂದು ಅಭಿನಂದನೆ ಸಲ್ಲಲೇ ಬೇಕು ಅವನಿಗೆ. ಆದರೆ ಅದು ಅವನ ಬಲಹೀನತೆಯಾಗಬಾರದು.

ಅತೃಪ್ತಿಯನ್ನು ಒಂದು ಹಂತದಲ್ಲಿಟ್ಟು ನಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವುದರಲ್ಲಿ ನಿಜವಾದ ಬುದ್ಧಿವಂತಿಕೆ ಇದೆ. ಅದಕ್ಕೆ ದಾಸರಾಗುವುದರಲ್ಲಿ ಅಲ್ಲ. ಅದೂ ಒಂದರ್ಥದಲ್ಲಿ ಸಾಧನೆಯೇ.

G s shivarudrappa ( ಜಿ.ಎಸ್. ಶಿವರುದ್ರಪ್ಪ ) | Bookbrahma.com

“ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?”

-ಜಿ.ಎಸ್.ಶಿವರುದ್ರಪ್ಪ

ಎನ್ನುವ ಜಿಎಸ್ಸೆಸ್ ರ “ಎದೆ ತುಂಬಿ ಹಾಡಿದೆನು” ಕವಿತೆಯ ಈ ಸಾಲುಗಳು ಯಾವಾಗಲೂ ನೆನೆದಾಗಲೊಮ್ಮೆ ಕಣ್ಮುಂದೆ ತೇಲಿ ಬರುತ್ತವೆ. ಅರಿವಿನ ನಾವೆಗೆ ಹತ್ತಿಸಿ ಸುಖವಾದ ಪ್ರಯಾಣಕ್ಕೆ ಹೊರಡಿಸುತ್ತವೆ.

**********************************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Leave a Reply

Back To Top