ಕವಿತೆ
ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್
ಸ್ಮಿತಾ ಭಟ್
ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಿರುವಂತೆ ಭಾಸವಾಯಿತು. ಈ ನಡುವೆ ನಾನು ಗಮನಿಸಿಯೇ ಇರಲಿಲ್ಲ. ಭಾವದೊಳಗೆ ನಡೆದ ನೋವಿನ ಸಂಗತಿಗಳು ಸಂಪೂರ್ಣ ದಿನಚರಿಯನ್ನು ಅದಲು-ಬದಲು ಮಾಡಿತ್ತು. ಕೆಟ್ಟ ಗಡಿಯಾರ ಮತ್ತು ತಿರುಗಿಸಿ ಇರದ ಕ್ಯಾಲೆಂಡರ್ ಮನೆಯ ಗೋಡೆಯ ಮೇಲೆ ಯಾವತ್ತೂ ಇರಬಾರದು. ಅದು ಇದೆ ಅಂತಾದರೆ ಆ ಮನೆಯ ದಿನಚರಿ ಸರಿ ಇಲ್ಲ ಅಂತಲೇ ಅರ್ಥ. ಎನ್ನುವ ಅಪ್ಪನ ಮಾತು ತಕ್ಷಣ ನೆನಪಾಯಿತು. ನನ್ನ ಭಾವ ಕೂಡಾ ಅದಕ್ಕೆ ಪುಷ್ಟಿ ಕೊಡುತ್ತಿತ್ತು. ಎದ್ದು ಹೋಗಿ ಕ್ಯಾಲೆಂಡರನ್ನು ತಿರುವಿಹಾಕಿದೆ. ಇನ್ನು ಮೂರೇ ದಿನ ಇರುವುದು ಈ ಕ್ಯಾಲೆಂಡರಿನ ಅಸ್ತಿತ್ವ ಮುಗಿಯಲು. ಅಯ್ಯೋ ಪಾಪ ಅನ್ನಿಸಿ ಕ್ಯಾಲೆಂಡರ್ ಅನ್ನು ಸವರುತ್ತಾ ಕುಳಿತೆ.
ಎಷ್ಟೊಂದು ನೋವುಗಳನ್ನು ಹೊತ್ತು ತಂದಿದ್ದೆ ನೀನು.
ಸಾವು-ನೋವು,ರೋಗ,ಪ್ರವಾಹ, ಒಂದಾ ಎರಡಾ, ಮನುಕುಲಕ್ಕೆ ಅತಿ ತ್ರಾಸದಾಯಕವಾದ ವರ್ಷ ಅನ್ನಬಹುದು. ನೀನು ಕೊಟ್ಟ ನೋವಿನಿಂದ ನಿನ್ನ ಕಾಲ ಇತಿಹಾಸದಲ್ಲಿ ಕಹಿ ಭಾವದಿಂದ ನೆನಪಿರುವಂತಹ ವರ್ಷವಾಗುತ್ತದೆ ಅಂದೆ. ಅದೇ ಕ್ಷಣದಲ್ಲಿ ನನ್ನ ತಪ್ಪು ಮಾತಿನ ಅರಿವಾಯಿತು ನಡೆದ ಘಟನೆಗಳಿಗೆ ಕ್ಯಾಲೆಂಡರನ್ನು ದೂಷಿಸುತ್ತಿದ್ದೇನಲ್ಲ ಎಂದು. ನಡೆದ ತಪ್ಪುಗಳಿಗೆ ಯಾರನ್ನಾದರೂ ಹೊಣೆ ಮಾಡುವುದು ಮನುಷ್ಯನ ಸಹಜ ಗುಣ ಅನ್ನಿಸಿ ನಗು ಬಂತು.
ಮತ್ತಲ್ಲೇ ತೂಗುಹಾಕಿ ಇನ್ನೆರಡು ದಿನ ಆರಾಮವಾಗಿ ಇರು ಕಾಲ ಎಲ್ಲರದ್ದು ಮುಗಿಯುತ್ತದೆ. ಹಾಗೆ ನಿನ್ನದೂ..
ಆದರೆ ಎಷ್ಟು ವಿಚಿತ್ರ ನೋಡು ನೀನು ಕಾಲ ಮುಗಿದ ಮೇಲೆ ಮತ್ತೆ ಇದೇ ರೂಪದಲ್ಲಿ ಬರುತ್ತೀಯ. ಯಾವ ವ್ಯತ್ಯಾಸವೂ ಇಲ್ಲದೇ. ಅದೇ ದಿನಾಂಕ, ಅದೇ ವಾರ, ಅದೇ ತಿಂಗಳು, ಅದೇ ಹಬ್ಬ ಹರಿದಿನಗಳನ್ನು ಹೊತ್ತು. ಕೇವಲ ಒಂದು ಸಂಖ್ಯೆಯನ್ನು ಬದಲಿಸಿಕೊಂಡು.
ನಿನಗದು ಕರಾರುವಾಕ್ಕಾಗಿ ಗೊತ್ತಿದೆ. ಯಾರ ಕೈ ಚಳಕದೊಳಗೆ ಸಿಕ್ಕು ಹಣಿಸಿಕೊಂಡರೂ, ನಿನ್ನ ನಿಯಮಕ್ಕೇ ಬಂದು ನಿನಗೆ ರೂಪ ಕೊಡುತ್ತಾರೆ.
ಮನುಷ್ಯನಂತೆ ಬೇರೆ ಬೇರೆ ದೇಹಗಳಿಗೆ ಹೊಕ್ಕು ಸಂಭ್ರಮಿಸುವ ನೋಯುವ ನಿಯಮವೂ ಇಲ್ಲ. ಆತ್ಮವು ಮಾತ್ಮತ್ತೆ ಅದದೇ ದೇಹದೊಳಗೆ ಹೊಕ್ಕು ನಗುವದೆಷ್ಟು ಸೋಜಿಗ ಅನ್ನಿಸುತ್ತದೆ.
ಪ್ರತಿ ಮನೆಯಲ್ಲಿ ಅತ್ಯಂತ ಗೌರವದ ಸ್ಥಾನವೂ, ಮೂಲೆಗುಂಪು ಮಾಡುವ ನೋವು ಅನುಭವಿಸುವೆ.
ಹೆಚ್ಚು ಕಡಿಮೆ ಮನುಷ್ಯನದು ಹಾಗೆ ಅಲ್ವಾ?
ನಿನ್ನ ಹೊಸ ಹುಟ್ಟನ್ನು ತಂದು ಸಂಭ್ರಮಿಸುತ್ತಾರೆ, ಮತ್ತೆ ನಿನ್ನ ಎಸೆಯುತ್ತಾರೆ.
ಬಹುಶಹ ಕಾಲಚಕ್ರ ಎನ್ನುವುದು ಇದೇ ಇರಬೇಕು.ಎಲ್ಲಿಂದಲೋ ಬಂದು, ಹೊಸತೊಂದು ಏನೂ ಸೇರಿಕೊಳ್ಳುವುದಿಲ್ಲ.
ಇದೇ ಪರಿಧಿಯೊಳಗೆ ರೂಪಾಂತರವಾಗುತ್ತ
ನಾವು ನೋಡುವ ರೀತಿಯಲ್ಲಿ ನಮಗೆ ಗೋಚರಿಸುತ್ತದೆ.
ಹಾಗೆ ನಮ್ಮ ಸಂತೋಷ ಕೂಡ ಹೊರಗೆಲ್ಲೂ ಇರುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ನಾವು ಗ್ರಹಿಸಬೇಕು ಮತ್ತದಕ್ಕೆ ಪುನಹಃ ಪುನಹಃ ಹೊಸ ರೂಪವನ್ನು ಕೊಡಬೇಕು ಅಷ್ಟೇ. ಕ್ಯಾಲೆಂಡರ್ ನಂತೆ.
ಕಾಲದ ಜೊತೆಗೆ ಸಾಗುವಾಗ ನೀನೊಂದು ಅದ್ಭುತ ಸಂಗತಿ ಮತ್ತು ಸಂಗಾತಿಯಂತೂ ಹೌದು. ನಿನ್ನ ಬೀಳ್ಕೊಡುತ್ತಿಲ್ಲ ಮತ್ತೆ ಸ್ವಾಗತಿಸುತ್ತಿದ್ದೇನೆ ಎಂದೆ. ಸದ್ದು ಮಾಡುವುದು ನಿಲ್ಲಿಸಿ ನಕ್ಕಂತೆ ಭಾಸವಾಯಿತು
***********************************
ಸೂಪರ್್ ಕ್ಯಾಲೆಂಡರಂತೆಯೇ ಮನಯಷ್ಯನ ಅಸ್ತಿತ್ವ ವೂ ಕೂಡ….ವರ್ಷ ಗಳು ಕಳೆದಹಾಗೆ ಅದೇ ತರ ಇನ್ನೊಂದನ್ನು ತಂದು ಅದೇ ಜಾಗದಲ್ಲಿ ಕೂರಿಸಬಹುದು ಆದರೆ ಮನುಷ್ಯನ ದೇಹ???? ನಿಜಕ್ಕೂ ಹೌದು ಸ್ಮೀತಕ್ಕ
ಕ್ಯಾಲೆಂಡರನಲ್ಲಿ ಮನುಷ್ಯನ ಅಸ್ತಿತ್ವ, ಮತ್ತದರಲ್ಲಿ ಆಧ್ಯಾತ್ಮ ಚಿಂತನೆ. ಕಾವ್ಯಮಯವಾದ ಬರಹ. ಮನಕ್ಕೆ ಹಿತವೆನಿಸಿತು.