2020 ರ ಜೀವನ ಕಥನ

ಲೇಖನ

2020 ರ ಜೀವನ ಕಥನ

ಸರಿತಾ ಮಧು

ನಮ್ಮ ಮಕ್ಕಳು ಮಕ್ಕಳಲ್ಲ

ಕ್ರಿಕೆಟ್ ಆಟದಲ್ಲಿ 20- 20 ಆರಂಭವಾದಾಗ ಆಟದ ಗತಿಯೇ ಬದಲಾಗಿ  ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ನಮಗೂ ಹಾಗೆಯೇ ಸಿಹಿ ಕಹಿ ಗಳೆರಡೂ ಬೆರೆತು ಬಂದಿದೆ ಎನ್ನುವಷ್ಟರಲ್ಲಿ 2020 ಅನಿರೀಕ್ಷಿತ ತಿರುವು ನೀಡಿತ್ತಲ್ಲದೇ, ಬಹುದೊಡ್ಡ ಸವಾಲು ಹಾಕಿದ್ದು ಸುಳ್ಳಲ್ಲ.

ಆರಂಭಿಕ ದಿನಗಳಲ್ಲಿ ಕೊರೊನಾ ಅಟ್ಟಹಾಸ ಬಹುತೇಕ ಜನರ ಪಾಲಿಗೆ ಕರಾಳವಾಗಿತ್ತು. ಅಕ್ಷರಶಃ ಜೀವನ ಸಂಕಷ್ಟಗಳನ್ನು ಇಂಚುಇಂಚಾಗಿ ಎದುರಿಸಬೇಕಾಯಿತು. ಪರದೇಶದ ಅಗೋಚರ ವೈರಾಣುವಿಗೆ ಇಡೀ ದೇಶದ ಆರ್ಥಿಕತೆ ತೊಡರುಗಾಲು ಹಾಕಿದ್ದು ನಮ್ಮ ಕಣ್ಣು ಕಟ್ಟಿದೆ.

ಹಿಂದೆಯೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಧೈರ್ಯದಿಂದ ಮುನ್ನುಗ್ಗಿದ ಪ್ರತಿಯೊಬ್ಬರೂ ಕೊರೊನಾ ಅಟ್ಟಹಾಸಕ್ಕೆ ಹಿಮ್ಮೆಟ್ಟುವಂತಾಗಿತ್ತು.

ಕಳೆದುಕೊಂಡ ಅಪ್ರತಿಮ ಚೇತನಗಳು ನಮ್ಮ ಕಣ್ಣಾಲಿಗಳ ತೋಯಿಸಿದ್ದರೂ , ಮನದ ಮುಂದಣ ಕತ್ತಲೆಗೆ ಹೊಸಬೆಳಕಿನ ಹಾದಿತೋರುತ ಮತ್ತೊಂದು ಘಟ್ಟದ ನಿರೀಕ್ಷೆ ಇದೆ.

   ನಿರೀಕ್ಷೆಗಳೆಂದೂ ಧನಾತ್ಮಕವಾಗಿರಲಿ ಎನ್ನುವ ಧೋರಣೆ ನನ್ನದು. ಕಳೆದ ವರ್ಷ ಹಣವಂತರ ಪಾಲಿಗೆ ಹಾಗೂ ಇಲ್ಲದವರ ಪಾಲಿಗೂ ವಿಭಿನ್ನವಾಗಿತ್ತು.

 ದೇಶದ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಒಟ್ಟಿಗೆ ಇರುವ ಅವಕಾಶ ಒದಗಿಸಿದ್ದು ಮಾತ್ರವಲ್ಲ , ಉಳ್ಳವರಿಗಂತೂ ಬಯಸಿದ ಭೋಜನ ಸವಿಯುವ ಸುಸಂದರ್ಭ . ಯಾವಾಗಲೂ ಹಣದ ಹಿಂದೆ ಸವಾರಿ ಮಾಡಿದ್ದವರಿಗೆ ಒಂದು ಬ್ರೇಕ್ ಸಿಕ್ಕಂತಾಯಿತು. ಸಂತಸ ಪಟ್ಟರು, ಮಕ್ಕಳೊಟ್ಟಿಗೆ ಮನೆಯ ಎಲ್ಲ ಸದಸ್ಯರ ನಡುವೆ  ಮೌಲ್ಯಯುತ ಸಮಯ ಕಳೆದರು. ಅವರಿಗೆ ಜೀವನ ಕಷ್ಟವೆನಿಸಲಿಲ್ಲ ಕಾರಣ ಸಂಪಾದಿಸಿದ ಹಣವಿತ್ತು .ಆದರೂ ಕೊರೋನಾ ಅವರಿಗೂ ಕಾಡದೇ ಇರಲಿಲ್ಲ. ಹಣದಿಂದ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಅರಿವು ನೀಡಿತ್ತು. ಆದರೆ ದಿನದ ದುಡಿಮೆ ನಂಬಿದ ಅದೆಷ್ಟೋ ಕುಟುಂಬಗಳ ಪಾಡು ಹೇಳತೀರದು. ನಗರಗಳಿಗೆ ವಲಸೆ ಹೋದ ಸಾವಿರಾರು ಕುಟುಂಬಗಳು ನೂರಾರು ಮೈಲುಗಳು ನಡೆದು ಸ್ವಂತ ಊರುಗಳಿಗೆ ಹೊರಟರು. ನಗರದಲ್ಲಿ ಕೆಲಸವೂ ಇಲ್ಲ , ಊಟವೂ ಇಲ್ಲ. ಊರನ್ನಾದರೂ ತಲುಪಿದರೆ ಎಲ್ಲಾ ಸರಿಯಾಗಿಬಿಡಬಹುದು ಎಂಬ ನಿರೀಕ್ಷೆ ಧನಾತ್ಮಕವಾಗಿಯೇ ಇತ್ತು. ಆದರೆ ನಮ್ಮ ಹಳ್ಳಿಯ ಮಂದಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬೇರೆಬೇರೆ ನಗರಗಳಿಂದ ಬಂದವರಿಗೆ ಊರೊಳಗೆ ನಿರ್ಬಂಧ ಹೇರಲಾಗಿತ್ತು. ಊರಿನ ಪ್ರವೇಶ ದ್ವಾರದಲ್ಲಿ ಮುಳ್ಳು ಬೇಲಿ ಹಾಕಿ ಕಾವಲು ನಿಂತರು. ಅತ್ತ ನಗರದಿಂದಲೂ ಇತ್ತ ತಮ್ಮ ಹುಟ್ಟೂರಿನಿಂದಲೂ ನಿರ್ಲಕ್ಷಿತರಾಗಿದ್ದು ಯಕಃಶ್ಚಿತ್ ಒಂದು ವೈರಾಣುವಿನ ಭಯಕ್ಕೆ.

    ಮನುಷ್ಯ ಸಹಜವಾಗಿ ಜೀವಸಂಕುಲದಲ್ಲಿ ಬುದ್ದಿವಂತ ಪ್ರಾಣಿ. ಸಹಸ್ರಾರು ವರ್ಷಗಳ ಕಾಲ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಪ್ರತೀಕಾರದಂತೆ ಕಂಡಿದ್ದು ಈ ವರ್ಷ. ಮನುಷ್ಯನ ಅಟ್ಟಹಾಸವನ್ನು ಮೆಟ್ಟಿನಿಂತು ಸಹಜ ಜೀವನ ಶೈಲಿಗೆ ಸರಿಯುವಂತೆ ಮಾಡಿದ್ದು ಈ ವರ್ಷ. ಕೆಲಸ ಕಳೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾದ ಜನರೇ ನಮ್ಮಲ್ಲಿ ಹೆಚ್ಚು. ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ ಜನತೆಗೆ ಮತ್ತೊಮ್ಮೆ ಲಾಕ್ ಡೌನ್ ಎಂದರೆ ಕಂಗೆಡುವಂತೆ ಮಾಡುವುದು.

ಮಾರ್ಚ್ ತಿಂಗಳಲ್ಲಿ ಶಾಲೆಯಿಂದ ಹೊರಗೆ ಬಂದ ಮಕ್ಕಳು ಆನ್ಲೈನ್ ತರಗತಿಗೆ ಸೇರಲು ಪರದಾಡುವಂತಾಯಿತು. ಪರೀಕ್ಷೆ ಬರೆಯದೇ ಪಾಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಂತಸ ನೀಡಿತ್ತು. ನಗರದ ಮಕ್ಕಳಿಗೆ ಇರುವ ಅನುಕೂಲ ಗ್ರಾಮೀಣ ಮಕ್ಕಳಿಗೆ ಇಲ್ಲದ ಕಾರಣ ಆನ್ಲೈನ್ ತರಗತಿಗಳು ಯಶಸ್ವಿ ಯಾಗಲಿಲ್ಲ. ಅನೇಕ ಏಳು ಬೀಳುಗಳ ನಡುವೆ ಶಿಕ್ಷಣ ವ್ಯವಸ್ಥೆ ನಡೆದದ್ದು ಈ ವರ್ಷದ ಕೊಡುಗೆ. ಅನೇಕ ಸವಾಲುಗಳ ನಡುವೆಯೂ SSLC ಪರೀಕ್ಷೆ ನಡೆಸಿದ್ದು ಮೆಚ್ಚುಗೆ ಪಡೆಯಿತು.

 ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಸ್ಚಚ್ಚತಾ ಸಿಬ್ಬಂದಿ ಹೀಗೆ  ಅನೇಕ ಇಲಾಖೆಯವರು ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದರು , ಇಂಥ ಅಮೂಲ್ಯ ವ್ಯಕ್ತಿತ್ವಗಳಿಗೆ ಈ ಮೂಲಕ ನಮ್ಮೆಲ್ಲರ ಹೆಮ್ಮೆಯ ನಮನಗಳು. ಹೋರಾಟದ ಬದುಕಿಗೆ ಯಾರೂ ಜಗ್ಗಲಿಲ್ಲ. ಆದರೂ ಸಾವಿನ ಹೊಡೆತ ಜರ್ಜರಿತಗೊಳಿಸಿದ್ದು ನಮ್ಮ ಜನರನ್ನು. ಆತ್ಮೀಯರನ್ನು ಕಳೆದುಕೊಂಡು ಸಮೀಪಕ್ಕೆ ಹೋಗಲಾರದ, ಅಂತ್ಯಕ್ರಿಯೆ ಮಾಡಲೂ ಸಂಕಷ್ಟ ತಂದ ಪರಿಸ್ಥಿತಿ ನಿಜಕ್ಕೂ ಮನಸ್ಸಿಗೆ ಸಂಕಟವನ್ನು ಉಂಟುಮಾಡಿದರೆ ಅದು ಅನಿವಾರ್ಯವಾಗಿತ್ತು. ಕುಟುಂಬದವರನ್ನು ಕಳೆದುಕೊಂಡು ನರಳಿದವರಿಗೆ ಈ ಮೂಲಕ ನಮ್ಮೆಲ್ಲರ ಸಾಂತ್ವನ ನೀಡುವ ಅವಕಾಶವಿದು.

ನೋವುಗಳುಂಡರೂ ಒಂದೆಡೆ ಸ್ಥಗಿತಗೊಳ್ಳುವ ಬದುಕು ನಮ್ಮದಲ್ಲ. ವರುಷ ಕಳೆದು ಮತ್ತೊಂದು ವರುಷ ಸಿದ್ಧವಾಗಿದೆ. ಕ್ಯಾಲೆಂಡರ್ ಬದಲಾಯಿಸುವ ಮುನ್ನ ಹಿನ್ನೋಟಕ್ಕೆ ಅವಕಾಶ ಇದೆ.

ಸಿಂಹ ಕೂಡ ತಾನು ನಡೆದ ದಾರಿಯನ್ನೊಮ್ಮೆ ಅವಲೋಕಿಸುವಂತೆ ನಾವೆಲ್ಲರೂ ಕಳೆದ ಪ್ರತಿಯೊಂದು ಕ್ಷಣಗಳನ್ನು ಮೆಲುಕು ಹಾಕೋಣ.

   ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯತಾ ಭಾವದಿಂದ ಸ್ಮರಿಸುವ,

ಅಗಲಿದ ಎಲ್ಲಾ ಚೇತನಗಳಿಗೂ ನಮನ ಸಲ್ಲಿಸುವ ಮೂಲಕ ಹೊಸ ಹೆಜ್ಜೆ ಇಡೋಣ.

ಹಿಂದೂ ದೇಶವಾದ ನಮಗೆ ಇದು ಕೇವಲ ಕ್ಯಾಲೆಂಡರ್ ಹೊಸವರ್ಷ ಎಂಬುದು ನನ್ನ ಭಾವ. ಆಡಳಿತ ವ್ಯವಸ್ಥೆ ಒಪ್ಪಿಕೊಂಡ ಈ ಕ್ರಮಕ್ಕೆ ಯಾರೂ ಹೊರತಲ್ಲ.

ಕೇವಲ ದಿನಗಳೆರಡು ಬಾಕಿಯಿದೆ 2021 ರ ಆರಂಭಕ್ಕೆ. ಕಳೆದ ಕಹಿ ಕ್ಷಣಗಳ ಮರೆತು ಹೊಸ ಬದುಕಿಗೆ ಸ್ವಾಗತ ಬಯಸುವ. ನಿರೀಕ್ಷೆ ಸದಾ ಒಳ್ಳೆಯದೇ ಇರಲಿ.

2 thoughts on “2020 ರ ಜೀವನ ಕಥನ

  1. ತಮ್ಮ ಲೇಖನ ಅಮೂಲಾಗ್ರವಾಗಿ ಚೆನ್ನಾಗಿದೆ ಮೇಡಂ. ಶುಭಾಶಯಗಳು

Leave a Reply

Back To Top