ಅಂಕಣ ಬರಹ

ಕಬ್ಬಿಗರ ಅಬ್ಬಿ

ಸೌಂದರ್ಯ ಲಹರಿ

ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು.  ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ ಬಂದ ಅಪ್ಸರೆಯ ಮೋಹಕ ಹೆಜ್ಜೆಗಳ ಲಯ ಅದಕ್ಕೆ!.

ಬರೆದೇ ಬಿಟ್ಟರು!

ಪಾತರಗಿತ್ತಿ ಪಕ್ಕ

ನೋಡಿದೇನ ಅಕ್ಕ.

ಹಸಿರು ಹಚ್ಚಿ ಚುಚ್ಚಿ

ಮೇಲಕ್ಕರಿಸಿಣ ಹಚ್ಚಿ;

ಹೊನ್ನ ಚಿಕ್ಕಿ ಚಿಕ್ಕಿ;

ಇಟ್ಟು ಬೆಳ್ಳಿ ಅಕ್ಕಿ.

ಈ ಕವನದತ್ತ ಚಿತ್ತ ಹರಿಸುವ ಮುನ್ನ, ಸೃಷ್ಟಿಯಲ್ಲಿ ಕಾಣ ಸಿಗುವ  ಪ್ರತಿಯೊಂದು ರೂಪದ ಹಿಂದಿನ ಸ್ವರೂಪದತ್ತ ದೃಷ್ಟಿ ಹರಿಸಿದರೆ ನಮಗೆ ಒಂದು ಅನೂಹ್ಯ ಸಾಮ್ಯತೆ ಕಾಣ ಸಿಗುತ್ತೆ.

ಅದೇ ಸಿಮ್ಮೆಟ್ರಿ ( Symmetry).

ನಿಮಗಿಷ್ಟವಾದ ಸಿನೆಮಾ ನಟಿ ಅಥವಾ ನಟನ ಮುಖ ಯಾಕೆ ಚಂದ. ಮುಖದ ಎಡ ಭಾಗ ಮತ್ತು ಬಲ ಭಾಗ ಒಂದಕ್ಕೊಂದು ಮಿರರ್ ಇಮೇಜ್ ಅಲ್ವಾ. ಎಡ ಬಲದಲ್ಲಿ ಕಣ್ಣುಗಳು, ಹುಬ್ಬುಗಳು  ಕಪೋಲಗಳು, ಕಿವಿಗಳು ಮೂಗಿನಲ್ಲೂ ಎರಡು ಹೊಳ್ಳೆಗಳು! ಹೀಗೆ ಸೃಷ್ಟಿಯ ಅದ್ಭುತ ಅಡಗಿದೆ ಮುಖಾರವಿಂದದ ಸಿಮ್ಮೆಟ್ರಿಯಲ್ಲಿ. ಈ ಸುಂದರ ಸಮರೂಪೀ ಚಿತ್ರಗಳು ಪರಸ್ಪರ ಕಣ್ಣು ಮಿಟುಕಿಸಿ “ಲವ್ ಅಟ್ ಫಸ್ಟ್ ಸೈಟ್” ಎಂಬ ಪ್ರೇಮ ಕಥೆ ಆರಂಭ.

ಜಗದ ಸೌಂದರ್ಯದ ಹಿಂದೆ ಈ ಸಮರೂಪತ್ವ ಅಥವಾ ಸಿಮ್ಮೆಟ್ರೀ ಇದೆ. ಇದೊಂದು ಪ್ರಕೃತಿ ತತ್ವ. ನಾವು ನೀವು ಬಯಸಿ ರೂಪಿಸಿದ್ದಲ್ಲ.

ದಾಸವಾಳ ಹೂವನ್ನು ಗಮನಿಸಿ. ಅದರ ದಳಗಳು ಒಂದರಂತೆ ಇನ್ನೊಂದು, ಒಂದು ಶಂಕುವಿಗೆ ಅಂಟಿಕೊಂಡಂತೆ ಹೊರಗಿಣುಕುತ್ತವೆ. ಅದರ ತೊಟ್ಟನ್ನು ಹಿಡಿದು ಸ್ವಲ್ಪ ಸ್ವಲ್ಪವೇ ದಳದಿಂದ ದಳಕ್ಕೆ ತಿರುಗಿಸಿದರೆ,  ಹೂವು ಒಂದೇ ಥರ ಕಾಣಿಸುತ್ತೆ.  ಇದೂ ಒಂದು ಸಿಮ್ಮಟ್ರೀ.

ಅದೂ ಬೇಡ ಅಂದರೆ ಯಾವುದೇ ಗಿಡ ಬಳ್ಳಿಯ ಎಲೆಯನ್ನು ಗಮನಿಸಿ. ಎಲೆ ಮಧ್ಯದಲ್ಲಿ ಒಂದು ನಾರು ಅದು ಜೋಡಿಸಿ ಹಿಡಿದು ಇಕ್ಕೆಲಗಳಲ್ಲಿ ಎಡ ಬಲದ ಎಲೆ!. ಅದೂ ಸಿಮ್ಮೆಟ್ರೀ!.

ದೇವದಾರು ಮರದ ಗೆಲ್ಲುಗಳು, ತೆಂಗಿನ ಮರದ ಮಡಲುಗಳು, ಎಷ್ಟೊಂದು ಸಿಮ್ಮೆಟ್ರಿಯಿಂದ ಸ್ವಾಲಂಕಾರ ಭೂಷಣೆಯರು ಅಲ್ಲವೇ.

ನಾವು ನಿಂತ ಭೂಮಿ, ಆಕಾಶಕಾಯಗಳು ಸಾಧಾರಣವಾಗಿ ಗೋಲಾಕಾರ. ಅದು ಅತ್ಯಂತ ಹೆಚ್ಚು ಸಿಮ್ಮೆಟ್ರಿಕ್ ಅವಸ್ಥೆ. ಚಂದಮಾಮ ಹುಣ್ಣಿಮೆಯ ದಿನ ಎಷ್ಟು ಚಂದ ಕಾಣಿಸುತ್ತಾನೆ, ವೃತ್ತಾಕಾರದ ಬೆಳ್ಳಿ ತಟ್ಟೆಯ ಹಾಗೆ!

ನೀವು ಸಸ್ಯದ ತುಣುಕನ್ನು ಮೈಕ್ರೋಸ್ಕೋಪ್ ನಲ್ಲಿ ಇಟ್ಟು ನೋಡಿದರೆ ಷಟ್ಕೋನಾಕೃತಿಯ  ಜೀವಕೋಶಗಳು ಸಿಮ್ಮೆಟ್ರಿಕ್ ಆಗಿ ಒಂದಕ್ಕೊಂದು ಹೆಗಲು ಜೋಡಿಸಿ ಸಾಲುಗಟ್ಟಿ ನಿಂತ ದೃಶ್ಯ ಕಾಣಿಸುತ್ತೆ.

ಸಸ್ಯ ಮತ್ತು ಪ್ರಾಣಿಲೋಕದಿಂದ ಹೊರಬಂದರೆ, ಅದೋ, ಆ ಕಪ್ಪು ಕಲ್ಲು ಇದೆಯಲ್ಲ, ಅದನ್ನು ಒಡೆದೊಡೆದು ಅತ್ಯಂತ ಸಣ್ಣ, ಮೂಲ ಕಣವಾಗಿಸಿದರೆ ಅದು ಸ್ಪಟಿಕ ರೂಪಿಯಾಗಿರುತ್ತೆ. ಆ ಸ್ಫಟಿಕದ ಏಕಕಣ ಕೋಶ ಚಚ್ಚೌಕವೋ ಆಯತ ಘನವೋ, ಇತ್ಯಾದಿ ಹಲವು ರೀತಿಯ ಸಿಮ್ಮೆಟ್ರಿಕ್ ಆಕಾರ ಪಡೆದಿರುತ್ತವೆ.

ಅದರ ಮೂಲೆಗಳಲ್ಲಿ ಮತ್ತು ಒಳಗೆ ನಾವು ಗೋಲಾಕಾರ ಎಂದು ನಂಬಿದ ಪರಮಾಣುಗಳು ಕುಳಿತಿರುತ್ತವೆ. ಪರಮಾಣುಗಳೂ ಸಮರೂಪೀ ಗೋಲಕಗಳೇ!.

ನಾವು ಉಸಿರಾಡುವ ಆಕ್ಸೀಜನ್, ಕುಡಿಯುವ H2O ನೀರು, ಈ ಎಲ್ಲಾ ಮಾಲೆಕ್ಯೂಲ್ ಗಳೂ ತಮ್ಮದೇ ಆದ ಸಿಮ್ಮೆಟ್ರಿಯಿಂದಾಗಿ, ಸ್ವಭಾವವನ್ನೂ ಪಡೆದ ಅಂದಗಾತಿಯರು.

ನಮ್ಮ ಮಿಲ್ಕೀ ವೇ ನಕ್ಷತ್ರ ಮಂಡಲದ ಚಿತ್ರ ನೋಡಿದರೆ ಅದರಲ್ಲೂ ಒಂದು ಸಿಮ್ಮೆಟ್ರಿ. ನಮ್ಮನ್ನು ಬಹಳಷ್ಟು ಕಾಡಿದ ಕರೋನಾ ವೈರಸ್ ನ ಚಿತ್ರವನ್ನು ಗಮನಿಸಿ, ಅದೂ ಸಿಮ್ಮೆಟ್ರಿಕ್ ಆದ ಗೋಲಕದ ಮೇಲ್ಮೈಯಲ್ಲಿ ವ್ಯವಸ್ತಿತ ದೂರದಲ್ಲಿ ಹತ್ತು ಹಲವು ಕಡ್ಡಿಗಳನ್ನು ಚುಚ್ಚಿದಂತೆ ಕಾಣಿಸುತ್ತೆ.

ಈ ಸಿಮ್ಮೆಟ್ರಿಯಿಂದಾಗಿ ಆಕಾರಕ್ಕೆ ಸೌಂದರ್ಯವಲ್ಲದೇ ಅದರದ್ದೇ ಆದ ಸ್ಥಿರತೆ ಸಿಗುತ್ತೆ. ಚಿಟ್ಟೆಯ,ಹಕ್ಕಿಗಳ ದೇಹದ ಇಕ್ಕೆಲಗಳ ರೆಕ್ಕೆಗಳು ಅವುಗಳಿಗೆ ಹಾರಾಡುವಾಗ ಏರೋಡೈನಮಿಕ್ ಸ್ಥಿರತೆ ಕೊಡುತ್ತವೆ. ವಿಮಾನದ ಒಂದು ರೆಕ್ಕೆ ಮುರಿದರೆ ವಿಮಾನ ಕೆಳಗೆ ಬಿತ್ತು ಎಂದೇ ಲೆಕ್ಕ.

ಕಟ್ಟಡಗಳು ಚಚ್ಚೌಕವೋ ಪಿರಮಿಡ್ ಥರವೋ, ಗುಂಬಜ್ ಆಗಿಯೋ ನಿರ್ಮಿಸಲು ಕಾರಣವೇ  ಸಿಮ್ಮಟ್ರಿಯ ಚಂದದ ಜತೆ ಜತೆಗೇ ಸಿಗುವ ದೃಡತೆ, ಸ್ಥಿರತೆ. ಮನುಷ್ಯ, ಪ್ರಾಣಿಗಳ ದೇಹದ ಸಂರಚನೆಯಲ್ಲಿ ಕಾಣುವ ಸಿಮ್ಮೆಟ್ರಿ, ಆಯಾ ಪ್ರಾಣಿಯ ಜೀವನ ಶೈಲಿಗೆ ಅನುಗುಣವಾದ ಚಲನೆಗೆ ಮತ್ತು ಅಸ್ತಿತ್ವಕ್ಕೆ ಸ್ಥಿರತೆ ದೊರಕಲೆಂದೇ.

ಈ ಎಲ್ಲಾ ಪ್ರಕೃತಿ ಸಿದ್ಧ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸುವ ಸೂತ್ರ ಆ ವ್ಯವಸ್ಥೆಯ ಒಳಗಿನಿಂದಲೇ ಅದಕ್ಕೆ ಆ ರೂಪ ಕೊಡುತ್ತದೆ!. ದಾಸವಾಳ ಹೂವಿನ ಮೊಗ್ಗು ಅರಳಿ ಹೂವಾಗುತ್ತೆ ತಾನೇ!. ಯಾರೋ ತಮ್ಮ ಇಚ್ಛೆಗನುಸಾರ ದಾಸವಾಳದ ದಳಗಳನ್ನು ಒಂದಕ್ಕೊಂದು ಅಂಟಿಸಿದ್ದರಿಂದಾಗಿ,ಆ ಹೂ ಅರಳಿಲ್ಲ ಎಂಬುದು ಮುಖ್ಯ. ಅಂತಃಸತ್ವದ ಬಲದಿಂದ, ಅಂತಃಸೂತ್ರದ ಮಾರ್ಗದರ್ಶನದಿಂದ ಈ ರೂಪದ ಸಿಮ್ಮೆಟ್ರಿ, ಜತೆಜತೆಗೇ ಅದರ  ಸೌಂದರ್ಯ ಪ್ರಕಟವಾಗಿದೆ.

ಒಂದು ಶಾಂತವಾದ ಕೊಳದ ಮಧ್ಯಕ್ಕೆ ಒಂದು ಕಲ್ಲೆಸೆದರೆ, ವೃತ್ತಾಕಾರದ ಅಲೆಗಳು ಬಿದ್ದ ಕಲ್ಲಿನ ಬಿಂದುವನ್ನು ಕೇಂದ್ರವಾಗಿಸಿ ಒಂದರ ಹಿಂದೆ ಒಂದರಂತೆ ಕೊಳದ ದಡದತ್ತ ಸರಿಯುತ್ತವೆ. ಈ ಅಲೆಗಳಲ್ಲಿಯೂ ಸಿಮ್ಮೆಟ್ರಿ ಇದೆ. ಅಲೆಗಳ ನಡೆಯಲ್ಲಿ ಲಯವೂ ಇದೆ. ಹಾಗಾಗಿ, ಯಾವುದೇ ಸಿಮ್ಮೆಟ್ರಿಯ ಜತೆಗೆ, ಲಹರಿಯಿದೆ, ಲಯವೂ ಇದೆ.

ಈಗ ಕವಿತೆಗೆ ಬರೋಣ!

ಕವಿತೆಯ ಸಾಲುಗಳ ರೂಪ  ಮತ್ತು ಅರ್ಥ ಕಟ್ಟುವ ಸ್ವರೂಪವೇ ಛಂದಸ್ಸು!. ಅದಕ್ಕೂ ಹತ್ತು ಹಲವು ಸಿಮ್ಮೆಟ್ರಿಗಳಿವೆ. ಪ್ರಕೃತಿಯ ಚಿತ್ತಾರಗಳ ಸಿಮ್ಮಟ್ರಿ ಹೇಗೆ  ಒಳಗಿನಿಂದಲೇ ಪ್ರಕಟವಾಗುತ್ತದೆಯೋ ಹಾಗೆಯೇ ಕವಿತೆಯ ಛಂದವನ್ನು, ಚಂದವನ್ನು ಮತ್ತು ಅರ್ಥ ವಾಸ್ತುವನ್ನು ಕವಿತೆಯ ಅಂತರಂಗದ ಬೀಜವೇ ನಿರ್ಧರಿಸುತ್ತದೆ. ಅದಕ್ಕೇ ಇರಬೇಕು, ಕವಿಯನ್ನೂ ಬ್ರಹ್ಮನಿಗೆ ಹೋಲಿಸಿದ್ದು.

ಕವಿತೆಯ ಛಂದದ ಜತೆಗೂ ಲಹರಿಯಿದೆ. ಲಯವಿದೆ. ಆ ಲಯಕ್ಕೆ ಓದುಗನ ತನ್ಮಯ ಮನಸ್ಸನ್ನು ವಿಲಯನ ಮಾಡುವ ಕಸುವಿದೆ. ಬೇಂದ್ರೆ ಅವರ “ಪಾತರಗಿತ್ತಿ ಪಕ್ಕ” ಕವನದಲ್ಲಿ ಈ ಅಂತರಂಗಜನ್ಯ ಸಿಮ್ಮೆಟ್ರಿ ಮತ್ತು ಸೌಂದರ್ಯ ಲಹರಿ ಎರಡೂ ಎಷ್ಟು ಚೆಂದ!.

ಹಾಗಿದ್ದರೆ ಈ ಛಂದದ ಗರ್ಭಕೋಶ ಯಾವುದು. ಅದರ ನೈಸರ್ಗಿಕ ಮತ್ತು ವ್ಯಾಕರಣಾತ್ಮಕ ವ್ಯಾಪ್ತಿ ಏನು?. ಮನುಷ್ಯ ಹೊರಗಿನಿಂದ ಲೇಪಿಸುವ ಛಂದ ಮುಖ್ಯವೇ ಅಥವಾ ಪ್ರಕೃತಿ,ಜನಪದ ಜನ್ಯ ಛಂದವಿಲ್ಲದ ಚಂದ ಮುಖ್ಯವೇ?

ಈ ಪ್ರಶ್ನೆ ಹಾಕುವ ಕವಿತೆ, ಪೂರ್ಣಿಮಾ ಸುರೇಶ್ ಬರೆದ “ಛಂದವಿಲ್ಲದ ಚೆಂದ” ಕವಿತೆ. ಅಕ್ಷರರೂಪಿಯಾಗಿ ಹೀಗಿದೆ ನೋಡಿ.

ಛಂದವಿಲ್ಲದ ಚೆಂದ

*        *         *

ನಾವು ಪ್ರಶ್ನೆಗಳ ಪ್ರಕಾರ ಗಣಿತ

ಗುಣಿತ ಕಲಿತವರು

ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ

ಕಂಡವರು

ಅಡುಗೆ‌ ಮನೆಯ ಕುಕ್ಕರ್

ಕೂಗಿದ ಸದ್ದಿಗೇ ಗಲಿಬಿಲಿ;

ಅಂತರಂಗದಲ್ಲಿ

ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು

ಅಲ್ಲೇ ಮೂಲೆಯಲ್ಲಿ!

ಅಂಗಳದ ರಂಗೋಲಿಗೂ

ಜ್ಯಾಮಿತಿಯ

ಚುಕ್ಕಿ- ಗೆರೆಗಳು;

ಚಿತ್ತಾರದ ಹುಮ್ಮಸ್ಸಿಗೆ

ಕಂಠಪಾಠ ಆಗಲೇಬೇಕು

ಸೂತ್ರ- ಪ್ರಮೇಯಗಳು

ಸಂಭ್ರಮಗಳನ್ನ ಸಿದ್ಧಸೂತ್ರ,

ಪ್ರಮೇಯಗಳಲ್ಲಿ ಕಟ್ಟಿಹಾಕಿದ

ಸೂತ್ರ ಕಗ್ಗಂಟುಗಳು

ಆಗ ಗೆರೆಗಳು  ಬೆರಳ

ತುದಿಯಿಂದ ಇಳಿದು..

ಆದರೂ ಆಗೊಮ್ಮೆ ಈಗೊಮ್ಮೆ

ನುರಿತ ಬೆರಳುಗಳ

ಸಂದಿನಲ್ಲಿಳಿವ ವಕ್ರರೇಖೆಗಳು

ಬಣ್ಣಗೆಡಿಸಿಕೊಂಡಾಗ

“ಸುಮ್ಮನಿರಿ ಅಕ್ಕ,

ಇದೇನುಮಹಾ..

ಇಲ್ಲಿ ಕೊಡಿ”

ಹುಡಿಯನ್ನ ಬೆರಳುಗಳ ಕುಡಿಗಳು

ಸೆಳೆದು

ಸರಸರ ಎಳೆಯುತ್ತಾಳೆ…

ಬರೆಯೋ – ಗೆರೆಯೋ,

ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ ..

ಸಲೀಸಾಗಿ ಬರೆದು 

ರಂಗೋಲಿಯಂತೆಯೇ ಅವಳೂ

ನಿರಾಳ ನಗುವಾಗ..

ಇವಳ ಆಯಾಮಗಳ ತೆರೆಯದ

ಆಯಾಮಗಳಲ್ಲಿ ಅರಳುವ

ಛಂದವಿಲ್ಲದ ಚೆಂದ

*        *        *

ಛಂದವಿಲ್ಲದ ಚೆಂದ ಅನ್ನುವಲ್ಲಿ ಛಂದ ಎಂದರೇನು?. ಅದು ಕಾವ್ಯದ ಅಂತರಾಳದಿಂದ ಸ್ವಯಂಭೂ ಆಗಿ ಸಂಭವಿಸಿದ, ಸಂಭವಿಸುತ್ತಲೇ ಇರುವ ನೈಸರ್ಗಿಕ ಕ್ರಿಯೆಯೇ? ಅಥವಾ ಬಾಹ್ಯಸ್ತರದಿಂದ ಅಂಕಣದ ಅಂಚುಗಳಿಗೆ ರೂಪ ಕಟ್ಟುವ ಛಂದವೇ?.

“ನಾವು ಪ್ರಶ್ನೆಗಳ ಪ್ರಕಾರ ಗಣಿತ

ಗುಣಿತ ಕಲಿತವರು

ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ

ಕಂಡವರು”

‘ಗಣಿತ ಗುಣಿತ ಕಲಿತವರು’ ಎಂಬುದನ್ನು ಗಮನಿಸಬೇಕು. ಇದು ಕಲಿತ ಛಂದ. ಸ್ವಯಂ ಭೂ ಛಂದವಲ್ಲ.

 ಹೀಗೆ ಕಲಿಸುವ ಕಲೆಸುವ, ಪಾಕ ಬರಿಸುವ, ತರ್ಕ ಶಾಸ್ತ್ರೀಯ, ಬಾಹ್ಯಜಗತ್ತಿನ ಕಾರ್ಯ ಕಾರಣ ಸಂಬಂಧಗಳ ಪದಬಂಧಕ್ಕೆ ಸಿಲುಕಿದ ಅಂತರ್ಮನ, ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿಯಾಗುತ್ತೆ.

“ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ!”

ಈ ಸಾಲುಗಳಲ್ಲಿ ‘ಅಂತರಂಗದ ಒಳದನಿ’ ಅಂತ ಬಳಸಿರುವುದು ಗಮನಾರ್ಹ. ಅದು ಅಂತರಾಳದ ನ್ಯಾಚುರಲ್ ಛಂದ.

ಕವಿತೆಯುದ್ದಕ್ಕೂ ನಡೆಯುವ ತುಲನೆ, ಬಾಹ್ಯಜನ್ಯ ಛಂದದ ಲಿಪ್ ಸ್ಟಿಕ್ ಮತ್ತು ಎದೆಯೊಳಗಿನ ಪ್ರೀತಿಯ ಛಂದದ ಚೆಂದ ಗಳ ನಡುವೆ.

“ನುರಿತ ಬೆರಳುಗಳ

ಸಂದಿನಲ್ಲಿಳಿವ ವಕ್ರರೇಖೆಗಳು

ಬಣ್ಣಗೆಡಿಸಿಕೊಂಡಾಗ

“ಸುಮ್ಮನಿರಿ ಅಕ್ಕ,

ಇದೇನುಮಹಾ..

ಇಲ್ಲಿ ಕೊಡಿ”

ಹುಡಿಯನ್ನ ಬೆರಳುಗಳ ಕುಡಿಗಳು

ಸೆಳೆದು

ಸರಸರ ಎಳೆಯುತ್ತಾಳೆ.”

 ಗೆರೆಗಳ  ಮೂಲಕ, ಸಂಭ್ರಮಗಳನ್ನ ಸಿದ್ಧಸೂತ್ರ,

ಪ್ರಮೇಯಗಳಲ್ಲಿ ಕಟ್ಟಿಹಾಕಿದ

ಸೂತ್ರ ಕಗ್ಗಂಟುಗಳು, ಶಿಷ್ಟ ಪದ್ಧತಿಯ ಕಂಠಪಾಠ ಮಾಡಿದ ‘ನುರಿತ’ ಬೆರಳುಗಳು ರಂಗವಲ್ಲಿ ಬರೆಯುವಾಗ ರೇಖೆಗಳಿಗೆ ಭಾವ ಬರದೇ ಇದ್ದಾಗ ಆ ಜನಪದೀಯ ಹುಡುಗಿ ಸರಸರನೆ ರಂಗೋಲಿ ಬರೆಯುತ್ತಾಳೆ. ಆಕೆಗೆ,  ಬರೆಯೋ – ಗೆರೆಯೋ,

ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ  ಯಾವುದರ ಕಂಠಪಾಠವೂ ಇಲ್ಲ. ( ಕಂಠಪಾಠ ಎಂಬ ಪದ ಎಷ್ಟು ಮೆಕ್ಯಾನಿಕಲ್ ಎಂಬ ಭಾವ ಅಲ್ಲವೇ).

ಹಾಗೆ ಆ ಕಾಡು ಹುಡುಗಿ ಸಲೀಸಾಗಿ ಬರೆದು,  

“ರಂಗೋಲಿಯಂತೆಯೇ ಅವಳೂ

ನಿರಾಳ ನಗುವಾಗ..

ಇವಳ ಆಯಾಮಗಳ ತೆರೆಯದ

ಆಯಾಮಗಳಲ್ಲಿ ಅರಳುವ

ಛಂದವಿಲ್ಲದ ಚೆಂದ”

ರಂಗವಲ್ಲಿಯ ಪೂರ್ವನಿರ್ಧಾರಿತ ಶಿಷ್ಟ ಜ್ಞಾನದ ಗೆರೆಗಳು, ಮತ್ತು ಅಂತರಂಗದಿಂದ ಮೂಡಿ ಆವಿರ್ಭವಿಸಿ ತನ್ನಿಂದ ತಾನೇ ಬರೆಯಲ್ಪಟ್ಟ ರಂಗೋಲಿಯ ನಡುವೆ ಇದು ಸ್ಪರ್ಧೆಯಲ್ಲ. ಮೊದಲನೆಯದ್ದು  ಸೂತ್ರ ಕಗ್ಗಂಟುಗಳಲ್ಲಿ ಬಂದಿಯಾದರೆ, ಎರಡನೆಯದ್ದು ಛಂದವಿಲ್ಲದ ಚಂದವಾಗಿ, ಬಂಧನವಿಲ್ಲದ ಬಾಂಧವ್ಯವಾಗಿ, ಸರಸರನೆ ಬೆರಳುಗಳು ಸರಿದು ಮೂಡುವ ಸಿಮ್ಮೆಟ್ರಿಯಾಗಿ ಮೂಡಿ

“ರಂಗೋಲಿಯಂತೆ ಅವಳೂ ನಿರಾಳವಾಗಿ ನಗುತ್ತಾಳೆ! “

ನಾನು ಈ ಮೊದಲು ಉದಾಹರಣೆಯಾಗಿ ಹೇಳಿದ ಪ್ರಕೃತಿಯ ಒಳಕೇಂದ್ರದಿಂದ ಹೊರಮುಖಿಯಾಗಿ ಆಯಾಮದ ಪರಿಧಿಯ ಹಂಗಿಲ್ಲದೆ ಹರಿದು ಮೂಡುವ ಸಿಮ್ಮೆಟ್ರಿಗೆ ಛಂದವಿಲ್ಲದ ಚೆಂದವಿದೆ. ಅದಕ್ಕೆ ಮನುಷ್ಯನಿರ್ಮಿತ ಛಂದಸ್ಸಿನ ಅಗತ್ಯವಿಲ್ಲ. ಅಲ್ಲವೇ

************************************************************

ಮಹಾದೇವಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

23 thoughts on “

  1. ಧನ್ಯವಾದಗಳು. ಚಂದದ ಬರಹಕ್ಕೆ ಛಂವಿಲ್ಲದ ಚೆಂದ ಜೋಡಿಸಿದಿರಿ

    1. ಪೂರ್ಣಿಮಾ ಅವರೇ
      ನಿಮ್ಮ ಕವಿತೆ ನಡೆಸಿದ ಹಾಗೆ ನಡೆದೆ!

  2. “ಛಂದವಿಲ್ಲದ ಚೆಂದ” ಗಟ್ಟಿ ಕಾವ್ಯದ ಕರ್ತೃ ಪೂರ್ಣಿಮಾ ಸುರೇಶ್ ಅವರಿಗೆ…ಶರಣು..
    ಪ್ರತಿ ಸಾಲೂ ಎಂಥ ಅಲೌಕಿಕ ದರ್ಶನ.. ಇಂಥ ಸ್ಟ್ರಾಂಗ್ ಕಾವ್ಯಕ್ಕೆ ವ್ಯಾಖ್ಯೆ ಬರೆಯಲು ಮಹಾದೇವ್ ಅವರಂತವರಿಗೆ ಮಾತ್ರ ಸಾಧ್ಯ ಅನ್ನುವುದು ಸರ್ವವಿದಿತ. Symmetry ಒಂದು wonderful ಬ್ರಹ್ಮ ಸೃಷ್ಟಿ.. abstract ನಲ್ಲಿ ಕವಿತೆ ಕೂಡ ಈ ವಿಷಯದ ಬಗ್ಗೆ ಮಾತಾಡುತ್ತವೆ.. ಆದರೆ ಈ ಬಗ್ಗೆ, ಮಹಾದೇವ್ ಅವರಿಗೆ symmetry ಸಂಬಂಧ ಹೊಳೆದದ್ದು ಮತ್ತು ಕವಿತೆ ಅದಕ್ಕೆ ಅವಕಾಶ ಒದಗಿಸಿದ್ದು ಇವೆಲ್ಲವೂ ನಮ್ಮಂಥ ಓದುಗರ ಧನ್ಯತೆಗೆ ಕಾರಣ.. ನಮಗೆ ಈ ವಿಶಿಷ್ಟ ವ್ಯಾಖ್ಯೆ ಓದಲು ಅನುವು ಮಾಡಿ ಕೊಟ್ಟಿದ್ದೀರಿ.
    I liked this line very much..
    ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ…
    ಪೂರ್ಣಿಮಾ ಮತ್ತು ಮಹಾದೇವ್ ಅವರಿಗೆ ಧನ್ಯವಾದಗಳು.

    1. ಧನ್ಯವಾದಗಳು ವಿಜಯ್ ಅವರಿಗೆ. ಪುಟ್ಟ ಸಂತಸವೊಂದು ಘಳಿರೆಂದಂತೆ

    2. ವಿಜಯ್, ಕವಿತೆಯ ಬಗ್ಗೆ ನಿಮ್ಮ ಒಳನೋಟ ಖಂಡಿತಾ ಸರಿ.
      ನಾನು ಕವಿತೆಯ ಸುತ್ತ ಅಲೆದಾಡಿದ್ದೇನೆ ಅಷ್ಟೇ.

  3. ವಾಹ ಮಹಾದೇವ ಅವರೆ symmetry ಮತ್ತು nature. ಯನ್ನು ಇಷ್ಟು ಚೆನ್ನಾಗಿಜೋಡಿಸಿದ್ದು ನಿಮ್ಮ ಶೈ ಲಿಯೆ ಭಾರಿ ಇದೆ. ಪ್ರತಿ ಲೈನು ಚೆನ್ನಾಗಿಗಿ ಮೂಡಿದದೆ. ಅಭಿನಂದನೆ ಗಳು ಹಾಗು ಧನ್ಯವಾದಗಳು

    1. ಸಂಪತ್ ಸುಳಿಭಾವಿ ಅವರೇ, ನಿಮ್ಮ ಸೃಜನಶೀಲ ಮನಸ್ಸಿಗೆ ಈ ಸಿಮ್ಮೆಟ್ರಿ ಮತ್ತು ಛಂದವಿಲ್ಲದ ಚೆಂದ ಇಷ್ಟವಾದದ್ದು ತುಂಬಾ ಖುಷಿ.

      ನಮಿಪೆ

  4. ಆ ಮಹಾದೇವ ಒಬ್ಬನೇ ಈ ಜಗದಲ್ಲಿ ಸಿಮೆಟ್ರಿ, ಸಮರೂಪದ ಸೌಂದರ್ಯವನ್ನು ಮೀರಿದ “ಸತ್ಯಂ ಶಿವಂ ಸುಂದರಂ” ತೋರುವವನು! ಅರ್ಧನಾರೀಶ್ವರ ಮಾತ್ರ ಸಿಮೆಟ್ರಿಯನ್ನು ಮೀರಿದವನು! ಸಿಮೆಟ್ರಿಯನ್ನು ಮೀರಿದ ಮಹಾದೇವ ಕಾಣಿಸಿದ ಸಿಮೆಟ್ರಿಯ ಸೌಂದರ್ಯ ಅನುಪಮವಾಗಿದೆ!!

    ತುಂಬಾ ಚೆನ್ನಾಗಿದೆ ಕಾನತ್ತಿಲ ಅವರೇ ಲೇಖನ!

    1. ದೇವು ಹನಹಳ್ಳಿ ಅವರೇ
      ವ್ಯಕ್ತ ಮತ್ತು ಅವ್ಯಕ್ತ, ಸೀಮಿತ ಮತ್ತು ಅಸೀಮಾನಂತದ ನಡುವೆ ತೂಗಿದ ತೊಟ್ಟಿಲಿನಂತಹಾ ಸಾಲುಗಳನ್ನು ಬರೆದಿರಿ!.
      ನಿಮ್ಮ ಪ್ರೀತಿಗೆ ಧನ್ಯ.

  5. ಛಂದವಿಲ್ಲದ ಚೆಂದ ,ನಿಜವಾದ ಛಂದವೆಲ್ಲಿದೆಯೆಂದು ಮನಸ್ಸನ್ನು ಅನ್ವೇಷಣೆಗೆ ಹಚ್ಚುವ ಚಂಧ ಕವಿತೆ.ಇನ್ನು ಬೆಳಿಗ್ಹೆ ರಂಗೋಲಿಯನ್ನು ಹಾಕುವಾಗಲೆಲ್ಲ ಜಾಮಿತಿಯ ಸೂತ್ರಗಳನ್ನು ಚುಕ್ಕೆಗಳನ್ನು ನೆನಪಿಸುತ್ತದೆ.
    ಈ ಕವಿತೆಯ ಚಂದಕ್ಕೆ ಸರ್ವಾಭರಣ ತೊಡಿಸಿದಂತಿದೆ ಮಹದೇವರ ವಿಮರ್ಶೆ.ಕವಿತೆಯ ವಿಮರ್ಶೆಗೆ ಕೊಡಗಿದರೆ ಮಹದೇವರು ಎಲ್ಲ ಶಾಸ್ತ್ರಗಳನ್ನು ಜಾಲಾಡಿ ಅನ್ವಯಗಳನ್ನು ತರುತ್ತಾರೆ.ಇದು ಅವರ ವಿಶಾಲವಾದ ಜ್ಞಾನಭಂಡಾರ ಸೂಚಿಸುತ್ತದೆ.ಇಲ್ಲಿ ಕೂಡ ಸಸ್ಯಶಾಸ್ತ್ರದ,ಕೋಶ,ಪರಮಾಣು,ಪ್ರಕೃತಿಯಲ್ಲಿಯ ಹೂವು ,ಎಲೆ,ಕಲ್ಲಿನ ಅಣು ಕಾಣಿಸ್ಕೊಂಡಿವೆ.ಪ್ರಕೃತಿ ,ಜನಪದ ದನ್ಯ ಛಂದವಿಲ್ಲದ ಚಂದವೇ ನಿಜವಾದ ಚಂದವೆಂಬುದು ಒಪ್ಪಿತ.
    ಕವಿಯತ್ರಿ ಹಾಗೂ ವಿಮರ್ಶಕರಿಗೆ ಅನಂತಾನಂತ ಧನ್ಯವಾದಗಳು.

    1. ನಿಮ್ಮ ಮಾತುಗಳಿಗೆ ಸ್ಪಾಂಟೇನಿಯಸ್ ಆಗಿ ಚಿಮ್ಮುವ ಕಾರಂಜಿಯ ಸಿಮ್ಮೆಟ್ರಿ ಇದೆ.
      ಅನೇಕ ಧನ್ಯವಾದಗಳು ಮೀರಾ ಮ್ಯಾಡಂ.

    2. ಮೀರಾ ಅವರಿಗೆ ಪ್ರೀತಿಯ ಧನ್ಯವಾದಗಳು. ರವಿ ಕಾಣದನ್ನು ಕವಿ ಕಂಡ..ಆದರೆ ಕವಿಗಿಂತಲೂ ಸ್ಪಷ್ಟ ಚಿತ್ರ,ಚಿತ್ತಾರ ,ನೋಟ ಕಾಣಿಸುವವರು ವಿಮರ್ಶಕರು+ ಅಲ್ವಾ

  6. ಮಹದೇವರೇ, ನಿಮ್ಮ ವಿಶ್ಲೇಷಣಗೆ ವಿಷಯ ತಂತಾನೇ ಸಿಕ್ಕುತ್ತಾ ಅಥವಾ ನೀವು ವಿಷಯವನ್ನು ಆರಿಸಿ ಕವಿತೆಯನ್ನು ಹುಡುಕುತ್ತಾ ಹೋಗುತ್ತೀರಾ ಗೊತ್ತಾಗುವುದಿಲ್ಲ. ನಿಮ್ಮ ವೈಜ್ಞಾನಿಕ ನಿಶಿತ ದೃಷ್ಟಿ ಸಾಹಿತ್ಯಕ್ಕೂ ಹರಿದು ಪ್ರಕೃತಿಯ ಅನೇಕ ಆಯಾಮಗಳನ್ನು ವಿಜ್ಞಾನದ ವ್ಯಾಪ್ತಿಗೆ ತಂದು ಅದರ ಅನ್ವಯವನ್ನು ಸಾಹಿತ್ಯಕ್ಕೆ ಮಾಡುವುದು ನಿಮಗೇ ಸರಿ. ಒಮ್ಮೊಮ್ಮೆ ಕವಿತೆ ಬರೆದವರೇ ಇದು ಹೀಗೆ ಹೌದೇ ಎನ್ನುವ ಮಟ್ಟಿಗೆ ಇರುತ್ತದೆ ನಿಮ್ಮ ವಿಶ್ಲೇಷಣೆ. ಇಂದಿನ ವಿಶ್ಲೇಷಣೆ ಇದಕ್ಕೆ ಹೊರತಲ್ಲ. ನೀವು ಸಿಮೆಟ್ರಿಯ ವಿವರಣೆ ಕೊಡುತ್ತಾ ಹೋದಾಗ ಅದರಲ್ಲಿ ಕಳೆದು ಹೋದ ನಾವು ಒಮ್ಮೆಗೆ ನೀವು ಕವಿತೆಯನ್ನು ಕೈಗೆತ್ತಿ ಕೊಂಡಾಗ ಅದರ ಅನ್ವಯದ ಜಾಣ್ಮೆ ಒಂದು ನದಿಯ ಬಳುಕಿಗಿಂತ ಬೇರೇ ಎನಿಸುವುದಿಲ್ಲ. ಆ ತಿರುವಿನ ನಂತರ ಕವಿತೆಯ ರೂಪೇ ಬೇರೇ ಯಾಗುವುದು ಕಾಣುತ್ತದೆ.
    ಪೂರ್ಣಿಮಾ ಸುರೇಶರ ಕವಿತೆಯಲ್ಲಿಯ ನಿಸರ್ಗ ತಂತಾನೇ ಜನಪದಿಗಳಿಗೆ ಕೊಡುವ ಸಿಮ್ಮೆಟ್ರಿಯನ್ನು ನೀವು ತುಂಬಾ ಚಂದದಲ್ಲಿ ಹೊರಗೆ ತಂದಿದ್ದೀರಿ. ಒಮ್ಮೊಮ್ಮೆ ನನಗನಿಸುತ್ತದೆ ಒಂದು ಗಿಡದ ಮೇಲೆ ಕೂತು ಕುರಿ ಅಥವಾ ಎಮ್ಮೆ ಕಾಯುತ್ತ ಹಾಡುವ ಹುಡುಗನ ಕೊರಳಿನಿಂದ ಹೊರಡುವ ಮುಕ್ತ ಗಾನವನ್ನು ನಾವು ಸ್ವರಬದ್ಧ ಮಾಡಲು ಹೋಗಿ ಅವನ ಮುಕ್ತತೆಯನ್ನು ಹರಿಸುತ್ತಿದ್ದೀವಾ ಅಂತ..ನಿಸರ್ಗ ಕೊಡುವ ತನ್ನ ಚಂದದ ಪ್ಯಾಟರ್ನನ್ನು ಅನುಸರಿಸಲೂ ಆಗುವುದಿಲ್ಲ ಎಂದು ರೂಪಿಸುತ್ತದೆ ಈ ಕವಿತೆ. ಒಂದು ಒಪ್ಪಲೇ ಬೇಕಾದ ಅಂಶವೆಂದರೇ ಮನದಲ್ಲಿ ಬರುವ ಭಾವನೆ ಹಾಡಾಗಬಹುದು, ಒಂದು ಚಿತ್ರವಾಗ ಬಹುದು, ಒಂದು ನೃತ್ಯವಾಗ ಬಹುದು, ಒಂದು ರಂಗೋಲೆಯಾಗಬಹುದು. ಅದಕ್ಕೆ ಹೀಗೇ ಇರಬೇಕೆಂಬ ಸೂತ್ರವಿಲ್ಲ. ಆದರೆ ನಿಸರ್ಗ ತನ್ನ ತಾನು ಸುಂದರವಾಗಿ ತೋರ ಬಯಸುತ್ತದೆ. ಆದಕಾರಣ ಅದನ್ನು ಅಷ್ಟು ಸುಂದರವಾಗಿ ರೂಪಿಸುತ್ತದೆ. ಅದು ನಿಸರ್ಗಕ್ಕೆ ಹತ್ತಿರವಿರುವವರಷ್ಟು ದೂರವಿದ್ದವರು ಗ್ರಹಿಸಲಾಗುವುದಿಲ್ಲ. ಆಗಾಗ ಈ ರೀತಿಯ ಕವಿತೆಗಳಿಂದ ಮತ್ತು ಈ ತರದ ಸಮರ್ಪಕ ವಿಶ್ಲಷಣೆಗಳಿಂದ ಮಾತ್ರ ತಿಳಿಯುತ್ತಿರಬೇಕು. ಅಭಿನಂದನೆ ಕವಿಗೂ ನಿಮಗೂ.

    1. ಅಬ್ಬಾ!
      ರಮೇಶ್ ಸರ್, ನೀವು ಅಂಕಣಕ್ಕೆ ಒಳ ಕೋಣೆ ಕಟ್ಟಿ,ಆತ್ಮ ಪ್ರತಿಷ್ಠೆ ಮಾಡಿದಿರಿ.
      ಎಷ್ಟು ಚಂದದ ಉಪಮೆ, ಅನ್ವಯದ ಜಾಣ್ಮೆ ಮತ್ತು ನದಿಯ ಬಳುಕು!

      ಇತ್ತೀಚೆಗೆ ಚೊಕ್ಕಾಡಿಯವರು ನನಗೆ ಹೀಗೆ ಬರೆದಿದ್ದರು

      ” ನಿಜ .ಕವಿತೆಯ ಡಿಸೆಕ್ಷನ್ ನನಗೆ ಇಷ್ಟವಿಲ್ಲ.ಅದರ ನಡುವೆ ಕವಿತೆಯ ಧ್ವನಿ ಸ್ವಾರಸ್ಯ ಜಾರಿ ಹೋಗುತ್ತದೆ.ಕವಿತೆಯ ಸ್ವಾರಸ್ಯ ಹಾಗೂ ಒಳದನಿಯನ್ನು ಅರಿಯುವ ದಾರಿಯನ್ನು ವಿಮರ್ಶಕ ತೋರಿಸಿಕೊಟ್ಟರೆ ಸಾಕು.

      ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
      ಒಣಗಬಾರದು ಒಡಲ ಚಿಲುಮೆ..
      ಈ ಸಾಲುಗಳನ್ನು ಹೇಗೆ ಡಿಸೆಕ್ಟ್ ಮಾಡೋದು?ಅದು ಬೇಕೇ?ಕವಿತೆ ಅರ್ಥವಾಗುವುದಕ್ಕಿಂತ ಅನುಭವ ಆಗಬೇಕು ಎಂದು ನನ್ನ ಅಪೇಕ್ಷೆ ”

      ಇದು ಚೊಕ್ಕಾಡಿಯವರ ಮಾತು.
      ಹಾಗಾಗಿ, ನಾನು ಕವಿತೆಯಿಂದ ನನಗೆ ಆದ ಅನುಭೂತಿಯನ್ನು ಬರೆದೆ ಅಷ್ಟೇ.

      ನಿಮ್ಮ ಕವಿಭಾವದ, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

    2. ಅದೆಷ್ಟು ಚೆನ್ನಾಗಿ ಹೇಳಿರುವಿರಿ ಸರ್.ಧನ್ಯೋಸ್ಮಿ

  7. “ಇಂತಹ ಗಡಿಗಳಿಲ್ಲದ ಬಯಲಲ್ಲಿ ಯಾವುದೇ ಆಟವನ್ನು ಆಡುವದು ಕಷ್ಟ.” ಇಂದಿನ ನಮ್ಮ ಸ್ವಾತಂತ್ರವೇ ನಮ್ಮ ಬಂಧನವೂ ಹೌದು.ಛಂದೋಬದ್ಧವನ್ನು ಆಗಾಗ ಮೀರುವದರಲ್ಲಿ ಸುಖ ಇದೆ.ಇನ್ನೂ ಬಿಡಿಸಿ ಹೇಳುವದಾದರೆ,ಮುಕ್ತ ಛಂಧೋದೊಳಗೆ ಛಂಧೋಗಂಧವನ್ನು ಸೂಚಿಸುವುದು ಸಾಧ್ಯ ಎನ್ನುವ ನುಡಿಗೆ ನ್ಯಾಯ ಒದಗಿಸುತ್ತಿದೆ ನಿಮ್ಮ ಅಂಕಣ.ಪ್ರಕೃತಿ ತೋರುವ ವೈವಿಧ್ಯಮಯ ಮಜಲುಗಳನ್ನು ಅಂದದ ಚಿತ್ತಾರಗಳ ಮೂಲಕ ವರ್ಣಮಯವಾಗಿ ಚಿತ್ತಿಸಿದ್ದೀರಿ. ಸರಿಸಾಟಿಯಾಗಿ ಪಾತರಗಿತ್ತಿ ಪಕ್ಕ ಮತ್ತು ಪೂರ್ಣಿಮಾ ಅವರ ಪದ್ಯ ನಿಮಗೆ ಪ್ರೇರಕವಾಗಿ ನಿಂತಿವೆ. ಸಿಮ್ಮೆಟ್ರಿ ಎಂದು ಕರೆಯುವ ಸಮ್ಮಿತಿ,” ಆಯಾಮಗಳ ತರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ” ಎನ್ನುವ ಸಾಲು , ಮುಕ್ತ ಛಂದದೊಳಗೆ ಛಂದೋಗಂಧ ಸೂಚಿಸೂಚಿಸಿದೆ ಎಂದು ನನ್ನಂತೆ ನಿಮಗೂ ಅನಿಸಿರಬಹುದು ಎಂದುಕೊಳ್ಳುತ್ತೇನೆ.
    ನಿಮಗೂ ಪೂರ್ಣಿಮಾ ಅವರಿಗೆ ಅಭಿನಂದನೆಗಳು.

    1. ಕಿಶನ್ ಸರ್
      ನಿಮ್ಮ ಪಾಂಡಿತ್ಯಪೂರ್ಣ ಪ್ರತಿಕ್ರಿಯೆಗೆ ನಮಿಪೆ.
      ಕನ್ನಡ ಭಾಷೆಯ ಛಂದಸ್ಸಿನ ಬಗ್ಗೆ ಅಥೆಂಟಿಕ್ ಆಗಿ ತಿರುಮಲೇಶ್ ಸರ್, ನೀವು ಬರೆಯ ಬಲ್ಲಿರಿ. ಆ ವಿಷಯದಲ್ಲಿ ನಾನು ತೀರಾ ಅಪೂರ್ಣ. ಹಾಗಾಗಿ, ಅದೇ ವಿಷಯವನ್ನು, ಪ್ರಕೃತಿಯ ಪ್ಯಾಟರ್ನ್ ನ ಜತೆಗೆ ಹೊಂದಿಸಿ ಅನುಭವಿಸಿದೆ. ನೀವಂದಂತೆ
      ‘ಮುಕ್ತ ಛಂದದೊಳಗಿನ ಛಂದೋಗಂಧ’ ಅಂಬೋ ನಿಮ್ಮ ಅನುಭೂತಿಯೇ ನನ್ನದ್ದು.

      ತುಂಬಾ ಧನ್ಯವಾದಗಳು ಸರ್

    2. ಸರ್ ನಮನಗಳು. ಮಹಾದೇವ ಅವರ ಪ್ರತೀ ಅಂಕಣವೂ ನನಗೆ ಸೋಜಿಗ. ನನ್ನ ಕವನ ಅದಕ್ಕೆ ಸೇರಿದ್ದು ಖುಷಿಗಿಂತಲೂ ಹೆಚ್ಚಿನದ್ದು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  8. ಪೂರ್ಣಿಮಾ,ನಿನ್ನ ಕವಿತೆಯೂ, ಕಾನಾತ್ತಿಲ ಸರ್ ಅವರ ವಿಶ್ಲೇಷಣೆಯೂ ಅದ್ಭುತ. ಕವಿತೆಯ ವಿಶ್ಲೇಷಣೆ ಈ ರೀತಿಯಲ್ಲೂ ಬರೆಯ ಬಹುದಾ? ಅಚ್ಚರಿ ಅನ್ನಿಸುವಷ್ಟು ಚೆಂದ. ಅಭಿನಂದನೆ ಈರ್ವರಿಗೂ

    1. ಸ್ಮಿತಾ ಅವರೇ
      ನೋಟಕ್ಕೆ ಬಣ್ಣ ಇರುವುದು ನಿಜ. ನೋಟಕ್ಕೆ ದಿಕ್ಕು ಇರುವುದೂ ನಿಜ
      ನೋಟಕ್ಕೆ ತೇವ, ಜೀವ, ಇರುವುದೂ ನಿಜ.
      ಕವಿತೆ ನನಗೆ ಒಂದೇ ಓದಿಗೆ ದಕ್ಕುವುದಿಲ್ಲ. ವೀಳ್ಯದೆಲೆಗೆ ಚೆನ್ನಾಗಿ ನೀರಲ್ಲಿ ಒದ್ದೆಯಾದ ಸುಣ್ಣ ಉದ್ದಿ ಅಡಿಕೆ ಹೋಳುಗಳ ಜತೆಗೆ ಜಗಿಯುವ ಕ್ರಿಯೆಯ ಹಾಗೆ ಕವಿತೆಯ ಭಾವ ಮನಸ್ಸೊಳಗೆ ಅನುಭವವಾಗಲು ಒಂದಷ್ಟು ಸಮಯ ಬೇಕಾಗುತ್ತೆ.
      ಆ ನಂತರ ಬರೆಯುವುದು ಅಕ್ಷರಗಳೇ.

      ನಿಮ್ಮ ಕವಿಮನಸ್ಸಿನ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

Leave a Reply

Back To Top