ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ

ಒಂದು ಫ್ಯಾಷನ್ ಬೊಂಬೆಯೇ

ಬಾರ್ಬಿ ಕತೆ

ಆಶಾ ಸಿದ್ದಲಿಂಗಯ್ಯ

ಅಮೆರಿಕಾದ ಗೊಂಬೆ-ತಯಾರಿಕಾ ಕಂಪೆನಿ ಮಾಟೆಲ್ ಇಂಕ್ 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ. ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್ (1916-2002) ಬಿಲ್ಡ್ ಲಿಲ್ಲಿ ಎಂಬ ಜರ್ಮನ್‌ ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಲೇ ಟೀಕೆಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ ಬ್ರಾಜ್ಸರಣಿಯ ಗೊಂಬೆಗಳು ಹುಟ್ಟಿಕೊಂಡಿವೆ.

ತಮ್ಮ ಮಗಳು ಬಾರ್ಬರಾ ಕಾಗದದ ಬೊಂಬೆಗಳಿಗೆ ದೊಡ್ಡವರ ಪಾತ್ರ ನೀಡಿ ಆಟ ಆಡುತ್ತ ಖುಷಿ ಪಡುತ್ತಿರುವುದನ್ನು ರುತ್ ಹ್ಯಾಂಡ್ಲರ್ ಗಮನಿಸಿದರು. ಆಗೆಲ್ಲ ಮಕ್ಕಳ ಗೊಂಬೆಗಳು ನವಜಾತ ಶಿಶುವಿನ ಪ್ರತಿನಿಧಿಗಳಾಗಿದ್ದವು. ಗೊಂಬೆ ಮಾರುಕಟ್ಟೆಯಲ್ಲಿ ಇಂಥ ಕಂದರ ಇದ್ದುದನ್ನು ಗಮನಿಸಿದ ಹ್ಯಾಂಡ್ಲರ್ ತಮ್ಮ ಗಂಡ ಹಾಗೂ ಮಾಟೆಲ್ ಗೊಂಬೆ ಕಂಪೆನಿಯ ಸಹ ಸಂಸ್ಥಾಪಕ ಎಲಿಯಟ್ ಅವರಿಗೆ ದೊಡ್ಡವರ ದೇಹ ಹೊಂದಿದ ಗೊಂಬೆ ತಯಾರಿಸುವಂತೆ ತಿಳಿಸಿದರು. ಆದರೆ ಆತ ಕೂಡ ಮಾಟೆಲ್‌ನ ನಿರ್ದೇಶಕರಂತೆ ಈ ಬಗ್ಗೆ ಉತ್ಸಾಹ ತೋರಲಿಲ್ಲ.

1956 ರಲ್ಲಿ ತಮ್ಮ ಮಕ್ಕಳಾದ ಬಾರ್ಬರಾ ಮತ್ತು ಕೆನೆತ್ ಅವರೊಂದಿಗೆ ಯೂರೋಪ್ ಪ್ರವಾಸ ಕೈಗೊಂಡ ರುತ್ ಹ್ಯಾಂಡ್ಲರ್ ಜರ್ಮನ್ ಗೊಂಬೆ ಬಿಲ್ವ್ ಲಿಲಿಯ ಬಗ್ಗೆ ಅರಿತರು. ಹ್ಯಾಂಡ್ಲರ್ ಮನಸ್ಸಿನಲ್ಲಿದ್ದ ದೊಡ್ಡ-ವಯಸ್ಸಿನ ಗೊಂಬೆಯಂತೆಯೇ ಇದ್ದುದನ್ನು ಕಂಡ ಹ್ಯಾಂಡ್ಲರ್ ಮೂರು ಗೊಂಬೆಗಳನ್ನು ಖರೀದಿಸಿದರು. ಅದರಲ್ಲಿ ಒಂದನ್ನು ತಮ್ಮ ಮಗಳಿಗೆ ಕೊಟ್ಟ ಆಕೆ ಉಳಿದವನ್ನು ಮಾಟೆಲ್ ಕಂಪೆನಿಗಾಗಿ ಕೊಂಡೊಯ್ದರು. ರೈನ್‌ಹರ್ಡ್ ಬ್ಯೂತಿನ್ ವೃತ್ತಪತ್ರಿಕೆ ಡೈ ಬಿಲ್ಡ್ ಜೈತುಂಗ್‌ ಗಾಗಿ ಬರೆದ ಕಾಮಿಕ್ ಸರಣಿ ಲಿಲಿ ಗೊಂಬೆಯ ಸೃಷ್ಟಿಗೆ ಪ್ರೇರಣೆ ನೀಡಿತ್ತು.

1955 ರಲ್ಲಿ ಲಿಲ್ಲಿ ಗೊಂಬೆ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಮಾರಾಟವಾಯಿತು.ಮೊದಲು ದೊಡ್ಡವರೇ ಅದನ್ನು ಹೆಚ್ಚಾಗಿ ಕೊಂಡರೂ ಮಕ್ಕಳ ಮನಗೆಲ್ಲುವಲ್ಲಿ ಅದು ಯಶಸ್ವಿಯಾಯಿತು. ಆಕೆಗೆ ತೊಡಿಸುವ ಉಡುಪುಗಳು ಪ್ರತ್ಯೇಕವಾಗಿ ಲಭ್ಯ ಇದ್ದವು. ಅಮೆರಿಕಕ್ಕೆ ಹಿಂತಿರುಗಿದ ಹ್ಯಾಂಡ್ಲರ್ ಎಂಜಿನಿಯರ್ ಜಾಕ್ ರ್ಯಾನ್ ಅವರ ಸಹಾಯ ಪಡೆದು ಹೊಸ ಗೊಂಬೆ ತಯಾರಿಸಿ ಅದಕ್ಕೆ ತಮ್ಮ ಮಗಳು ಬಾರ್ಬರಾ ಹೆಸರನ್ನು ಹೋಲುವಂತೆ ಬಾರ್ಬಿ ಎಂಬ ಹೆಸರಿಟ್ಟರು.

9 ಮಾರ್ಚ್ , 1959ರಂದು ನ್ಯೂಯಾರ್ಕ್‌ನಲ್ಲಿ ನಡೆದ ಅಮೆರಿಕ ಅಂತರರಾಷ್ಟ್ರೀಯ ಗೊಂಬೆ ಮೇಳದಲ್ಲಿ ಈ ಗೊಂಬೆ ಮೊದಲ ಪ್ರದರ್ಶನ ಕಂಡಿತು. ಈ ದಿನದಂದೇ ಬಾರ್ಬಿಯ ಅಧಿಕೃತ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.1964ರಲ್ಲಿ ಮಾಟೆಲ್ ಬಿಲ್ಡ್ ಲಿಲ್ಲಿ ಗೊಂಬೆ ಯ ಎಲ್ಲ ಹಕ್ಕುಗಳನ್ನು ಖರೀದಿಸಿ ನಂತರ ಅದರ ಉತ್ಪಾದನೆ ಸ್ಥಗಿತಗೊಳಿಸಲಾಯಿತು.ಮೊದಲ ಬಾರ್ಬಿ ಗೊಂಬೆಗೆ ಕಪ್ಪು ಬಿಳುಪು ಜೀಬ್ರಾ ಪಟ್ಟಿಗಳಿರುವ ಈಜುಡುಗೆ ತೊಡಿಸಿ ಜುಟ್ಟು ಕಟ್ಟಿದಂತೆ ಅಲಂಕರಿಸಲಾಗಿತ್ತು.

ಹೊಂಬಣ್ಣ ಅಥವಾ ಕಂದು ಗೌರವರ್ಣದ ಜುಟ್ಟು ಕಟ್ಟಿಕೊಂಡ ಗೊಂಬೆಗಳು ಮಾರುಕಟ್ಟೆ ಯಲ್ಲಿ ಲಭ್ಯ ಇದ್ದವು. ಮಾಟೆಲ್ ವಸ್ತ್ರ ವಿನ್ಯಾಸಕ ಚಾರ್ಲಟ್ ಜಾನ್ಸನ್ ಅವರು ರೂಪಿಸಿದ ಉಡುಪುಗಳನ್ನು ಧರಿಸಿದ ಗೊಂಬೆಯನ್ನು “ಹದಿ ಹರೆಯದ ಫ್ಯಾಷನ್ ರೂಪದರ್ಶಿ” ಎಂದು ಬಿಂಬಿಸಿ ಮಾರಲಾಯಿತು. ಜಪಾನ್‌ನ ಗುಡಿ ಕಾರ್ಮಿಕರು ಕೈಯಲ್ಲಿ ಹೊಲಿದ ವಸ್ತ್ರಗಳನ್ನು ಧರಿಸುವ ಮೂಲಕ ಮೊದಲ ಬಾರ್ಬಿ ಗೊಂಬೆಗಳು ಜಪಾನ್‌ನಲ್ಲಿ ಮಾರಾಟವಾದವು.

ಮೊದಲ ವರ್ಷ ಸುಮಾರು 350,000 ಬಾರ್ಬಿ ಗೊಂಬೆಗಳು ಮಾರಾಟವಾದವು. ವಯಸ್ಕ ರೀತಿಯ ಪೋಷಾಕು ಬಾರ್ಬಿಗೆ ಅಗತ್ಯ ಎಂದು ತಿಳಿದಿದ್ದ ಹ್ಯಾಂಡ್ಲರ್ ಅವರಿಗೆ ಮೊದಲ ಮಾರುಕಟ್ಟೆ ಸಂಶೋಧನೆಯಲ್ಲಿ ಗೊಂಬೆಯ ಉಬ್ಬಿದ ಎದೆಭಾಗದ ಬಗ್ಗೆ ಪೋಷಕರು ಅಸಂತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂತು.

ಬಾರ್ಬಿಯ ಚಹರೆಯನ್ನು ಅನೇಕ ಬಾರಿ ಬದಲಾಯಿಸಲಾಗಿದ್ದು 1971ರಲ್ಲಿ ಆಕೆಯ ಕಣ್ಣುಗಳನ್ನು ವಾರೆನೋಟಕ್ಕೆ ಬದಲಾಗಿ ನೇರವಾಗಿ ನೋಡುವಂತೆ ಗಮನಾರ್ಹ ಮಾರ್ಪಾಡು ಮಾಡಲಾಯಿತು.ಟೆಲಿವಿಷನ್ ಜಾಹೀರಾತು ಬಳಸಿ ಮಾರುಕಟ್ಟೆ ತಂತ್ರದಲ್ಲಿ ಯಶಸ್ವಿಯಾದ ಮೊದಲ ಗೊಂಬೆ ಬಾರ್ಬಿಯಾಗಿದ್ದು ನಂತರ ಬಂದ ಗೊಂಬೆಗಳು ವ್ಯಾಪಕವಾಗಿ ಈ ತಂತ್ರವನ್ನು ಅನುಸರಿಸಿದವು. 150 ದೇಶಗಳಲ್ಲಿ ಈವರೆಗೆ ೧೦೦ ಕೋಟಿ ಬಾರ್ಬಿ ಗೊಂಬೆಗಳು ಮಾರಾಟವಾಗಿದ್ದು ಮಾಟೆಲ್ ಕಂಪೆನಿ ಹೇಳಿಕೊಂಡಿರುವಂತೆ ಪ್ರತಿ ಸೆಕೆಂಡಿಗೆ ಮೂರು ಬಾರ್ಬಿ ಗೊಂಬೆಗಳು ಮಾರಾಟವಾಗುತ್ತವೆಯಂತೆ.

ಬಾರ್ಬಿ ಕೇವಲ ಗೊಂಬೆ ಹಾಗೂ ಅದರ ಉಡುಪಿನ ಮಾರಾಟಕ್ಕೆ ಸೀಮಿತವಾಗಿಲ್ಲ ಬಾರ್ಬಿ ಬ್ರಾಂಡ್‌ನ ಪುಸ್ತಕಗಳು, ಫ್ಯಾಷನ್ ವಸ್ತುಗಳು ಹಾಗೂ ವೀಡಿಯೊ ಗೇಮ್‌ಗಳು ಕೂಡ ಲಭ್ಯ ಇವೆ. ಬಾರ್ಬಿ ಅನೇಕ ಅನಿಮೇಷನ್ ಸರಣಿ ಚಿತ್ರಗಳಲ್ಲಿ ಭಾಗವಹಿಸಿದ್ದು 1999ರ ಟಾಯ್ ಸ್ಟೋರಿ 2 ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. ಗೊಂಬೆ ಪ್ರಪಂಚದಲ್ಲಿ ಅತಿ ವಿರಳವಾಗಿ ಸಿಗುವಂತದ್ದು ಎಂದು ಗೌರವಿಸಲ್ಪಟ್ಟಿದೆ. 1974ರಲ್ಲಿ ನ್ಯೂಯಾರ್ಕ್ ಸಿಟಿಯ ಒಂದು ವಿಭಾಗವಾದ ಟೈಮ್ಸ್ ಸ್ಕ್ವೇರ್‌ಅನ್ನು ಒಂದು ವಾರದವರೆಗೆ ಬಾರ್ಬಿ
ಬೊಲಿವರ್ಡ್ ಎಂದು ಮರುಹೆಸರಿಸಲಾಗಿತ್ತು. 1985ರಲ್ಲಿ ಕಲಾಕಾರ ಆಂಡಿ ವರೊಲ್ ಬಾರ್ಬಿಯ ವರ್ಣಚಿತ್ರವನ್ನು ರಚಿಸಿದ್ದನು

********************************************

Leave a Reply

Back To Top