ಅಂಕಣ ಬರಹ

ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….4

” ಪರಾವಲಂಬನೆಯ ಕಠಿಣ

ದಿನಗಳು…”

“ಆತ್ಮಾನುಸಂಧಾನ “

            ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಆಶ್ರಯ ಗಣಪುವಿನ ಎರಡು ಹೊತ್ತಿನ ಊಟ ತಿಂಡಿಯ ಚಿಂತೆ ಬಗೆಹರಿಸಿತು. ಆದರೆ ಗಣಪು ಬಯಸಿದ್ದು ಅಕ್ಷರಾಭ್ಯಾಸ. ಆಕಸ್ಮಿಕವಾಗಿ ಸಾಣೆಕಟ್ಟೆಗೆ ಬಂದ ನಾಡುಮಾಸ್ಕೇರಿಯ ಬೇಲೆ ಹಿತ್ತಲ ರಾಕು ಎಂಬ ತರುಣ ಹಮ್ಮಜ್ಜಿಯ ಮನೆಯಲ್ಲಿದ್ದ ಗಣಪುವಿನ ಯೋಗಕ್ಷೇಮ ವಿಚಾರಿಸುತ್ತ ಆತನ ಕಲಿಯುವ ಆಸೆಯನ್ನು ಗ್ರಹಿಸಿದ. ಊರಿಗೆ ಮರಳಿದವನು ಗಣಪುವಿಗೆ ಮತ್ತೆ ಹನೇಹಳ್ಳಿ ಹಾಸ್ಟೇಲಿನಲ್ಲಿ ಅವಕಾಶ ದೊರೆಯುವಂತೆ ಪ್ರಯತ್ನಿಸಿ ಆತನನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ. ಕನಿಷ್ಟ ಹದಿನೈದು ದಿನಗಳಿಗೊಮ್ಮೆಯಾದರೂ ಒಮ್ಮೆ ಗಣಪುವನ್ನು ಕಂಡು ಕೈಲಾದ ಹಣಕಾಸಿನ ನೆರವು ನೀಡಿ ಚೆನ್ನಾಗಿ ಓದುವಂತೆ ಹುರುಪು ತುಂಬುತ್ತಿದ್ದ. ರಜೆಯ ದಿನಗಳಲ್ಲಿ ತನ್ನ ಮನೆಗೂ ಕರೆದೊಯ್ದು ಊಟ ತಿಂಡಿ ನೀಡಿ ಉಪಚಾರ ಮಾಡುತ್ತಿದ್ದ.

            ರಾಕುವಿನ ಅಣ್ಣನೆ ಕೃಷ್ಣ ಆಗೇರ. ಆಗಿನ ಕಾಲದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ. ಬೇರೆ ಬೇರೆ ಊರುಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಲು ಹೋಗಿಬರುತ್ತಿದ್ದ. ಆತನೊಂದಿಗೆ ಗಣಪು ಯಕ್ಷಗಾನ ನೋಡುವ ಕುತೂಹಲದಲ್ಲಿ ಜೊತೆ ನೀಡುತ್ತ ಮೆಲ್ಲ ಮೆಲ್ಲನೆ ಯಕ್ಷಗಾನ ಭಾಗವತಿಕೆ, ಅರ್ಥ ಹೇಳುವುದು, ಕುಣಿತ ಇತ್ಯಾದಿಗಳನ್ನು ಅಭ್ಯಾಸ ಮಾಡಿಕೊಂಡ. ಈ ನಡುವೆ ಹನೇಹಳ್ಳಿಯ ಶಾಲೆಯ ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಗಣಪು ಮತ್ತೆ ಗುಂದಿಹಿತ್ತಲ ಪರಿವಾರದ ಕುರಿತು ಚಿಂತೆಮಾಡುವ ಪ್ರಮೇಯವೇ ಬರಲಿಲ್ಲ.

            ೧೯೩೦ ರ ಹೊತ್ತಿಗೆ ಅಂಕೋಲೆಯ ವಂದಿಗೆ ಗ್ರಾಮದಲ್ಲಿ ಸುಕ್ರು ಮಾಸ್ತರ್ ಎಂಬುವವರು ತಮ್ಮ ಆಗೇರ ಸಮಾಜದ ಮಕ್ಕಳ ಕಲಿಕೆಗಾಗಿ ಕ್ರೈಸ್ತ ಮಿಶನರಿ ಸಂಸ್ಥೆಯ ನೆರವಿನಿಂದ ವಂದಿಗೆ ಗ್ರಾಮದ ಆಗೇರ ಕಾಲನಿಯಲ್ಲಿ ಶಾಲೆಯೊಂದನ್ನು ತೆರೆದು ಅಲ್ಲಿ ತಾವೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಸ್ಪೃಶ್ಯತೆ ಆಚರಣೆಯಲ್ಲಿರುವ ಅಂದಿನ ಕಾಲದಲ್ಲಿ ಆಗೇರರ ಮಕ್ಕಳು ಇತರ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವಾದ ಸಂದರ್ಭದಲ್ಲಿ ಸುಕ್ರು ಮಾಸ್ತರರ ಶಾಲೆ ಕಲಿಕೆಯ ಆಸಕ್ತಿಯುಳ್ಳ ಆಗೇರರ ಮಕ್ಕಳಿಗೆ ವರದಾನವಾಗಿತ್ತು.

            ೧೯೩೪ ರಲ್ಲಿ ಗಾಂಧೀಜಿ ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ದೇಶಾದ್ಯಂತ ತಿರುಗಾಟ ಮಾಡುವಾಗ ಅಂಕೋಲೆಗೆ ಬಂದವರು ಸುಕ್ರು ಮಾಸ್ತರರ ಶಾಲೆಗೂ ಭೇಟಿ ನೀಡಿದ್ದು ಒಂದು ಚಾರಿತ್ರಿಕ ಮಹತ್ವದ ಸಂಗತಿಯಾಗಿದೆ. ಮುಂದೆ ಭಾರತಸೇವಾ ಸಮಾಜದ ಆಜೀವ ಸಭಾಸದರೂ,  ಅಖಿಲ ಭಾರತೀಯ ಹರಿಜನ ಸೇವಕ ಸಂಘದ ಮಾನ್ಯ ಕಾರ್ಯದರ್ಶಿಗಳೂ ಆಗಿರುವ ಶ್ರೀಮಾನ್ ಥಕ್ಕರ್ ಬಾಪಾ ಅವರು ೧೯೪೦ ರಲ್ಲಿ ಅಂಕೋಲೆಗೆ ಭೇಟಿ ನೀಡಿದಾಗ ಆಗೇರ ಸಮಾಜದ ಶಿಕ್ಷಣದ ಕುರಿತು ವಿಶೇಷ ಕಾಳಜಿ ವಹಿಸಲು ಚಿಂತನೆ ನಡೆಸಿ ಅಂಕೋಲೆಯಲ್ಲಿ ಒಂದು ವಸತಿ ಶಾಲೆಯನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಇದರ ಪರಿಣಾಮವಾಗಿ ಸುಮಾರು ಇಪ್ಪತ್ನಾಲ್ಕು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ಶಾಲೆಯನ್ನು ತೆರೆಯಲು ಯೋಜನೆಯನ್ನು ರೂಪಿಸಲಾಯಿತು.

Gandhi Jayanti: Here are some lesser-known films on Mahatma Gandhi | India  News | Zee News

            ೧೯೪೧ ರಲ್ಲಿ ಶ್ರೀ ಎಸ್.ಎನ್. ಕೇಶವಾನ್, ಕೃಷ್ಣರಾವ್ ಹಳದೀಪುರ, ಬಿ.ಎಮ್. ಬಸ್ರೂರ, ಹರಿ ಅನಂತ ಪೈ, ಎಸ್.ಎಸ್.ಶಾಸ್ತ್ರೀ,  ಸುಂದರರಾವ್ ಪಂಡಿತ್, ಶ್ರೀ ನಾಯಕ, ಡಿ.ಎಂ.ನಾಡಕರ್ಣಿ ಮುಂತಾದ ಮಹನೀಯರ ಸಮಿತಿಯೊಂದು ರಚನೆಗೊಂಡು ವಂದಿಗೆ ಸುಕ್ರು ಮಾಸ್ತರರ ಶಾಲೆಗೆ ಹೊಂದಿಕೊಂಡಂತೆ ತಾತ್ಕಾಲಿಕವಾಗಿ ತೆಂಗಿನ ಗರಿಗಳ ವಸತಿ ಶಾಲೆಯೊಂದನ್ನು ಆರಂಭಿಸಲಾಯಿತು.

            ಬೇರೆ ಬೇರೆ ಊರುಗಳಿಂದ ಆಗೇರರ ಮಕ್ಕಳು ಇಲ್ಲಿಗೆ ಬಂದು ಸೇರಿಕೊಂಡು ಕಲಿಯಲು ಆರಂಭಿಸಿದರು. ಇಷ್ಟು ಹೊತ್ತಿಗೆ ಹನೇಹಳ್ಳಿ ಶಾಲೆಯಲ್ಲಿ ಆರನೇಯ ಇಯತ್ತೆ ಮುಗಿಸಿದ ಗಣಪು ಮುಲ್ಕಿ ಪರೀಕ್ಷೆಯ ಗಂಭೀರ ಓದಿನ ಅವಕಾಶ ಬಯಸಿ ಸುಕ್ರು ಮಾಸ್ತರರ ವಸತಿ ಶಾಲೆಗೆ ಬಂದು ಸೇರಿದ. ಮೊದಲ ತಂಡದಲ್ಲಿ ಅಂಕೋಲೆಯವರೇ ಆದ ಬಂಟ ಕೃಷ್ಣಮಕ್ಕಿ, ಬುದ್ದು ಆಗೇರ, ಮೊಗಟಾ ಗ್ರಾಮದ ಜಟ್ಟಿ ಆಗೇರ, ಶೇಡಗೇರಿಯ ಬೀರಾ ಆಗೇರ, ನಾಡು ಮಾಸ್ಕೇರಿಯ ಗಣಪು ಆಗೇರ, ಗೋಕರ್ಣದ ಅಮಾಸ್ಯಾ ಆಗೇರ ಮುಂತಾದವರು ಮುಲ್ಕೀ ಪರೀಕ್ಷೆ ಕಟ್ಟಿದರು. ಇವರಲ್ಲಿ ಗಣಪು ಮತ್ತು ಅಮಾಸ್ಯಾ ಆಗೇರ ಇಬ್ಬರು ಮುಲ್ಕಿ ಪರೀಕ್ಷೆ ಪಾಸುಮಾಡಿ ಆಗೇರ ಸಮಾಜದ ಹೆಮ್ಮೆಯ ವಿದ್ಯಾರ್ಥಿಗಳೆಂಬ ಗೌರವಕ್ಕೆ ಪಾತ್ರರಾದರು.

            ನಾಡುಮಾಸ್ಕೇರಿಯ ಕೃಷ್ಣ ಮತ್ತು ರಾಕು ಸಹೋದರರ ಸಹಕಾರದಿಂದ ವಂದಿಗೆಯ ಸುಕ್ರುಮಾಸ್ತರ್ ವಸತಿ ಶಾಲೆಯ ಆಶ್ರಯದಲ್ಲಿ ಗಣಪು ಮುಲ್ಕಿ ಪಾಸು ಮಾಡಿದ ಬಳಿಕ ಉದ್ಯೋಗ ದೊರೆಯುವುದು ಕಠಿಣವಾಗಲಿಲ್ಲ. ನಾಲ್ಕಾರು ತಿಂಗಳ ಅಂತರದಲ್ಲಿಯೇ ಸರಕಾರಿ ಶಾನಭೋಗ ಹುದ್ದೆ ದೊರೆಯಿತು. ಜೋಯ್ಡಾ ಎಂಬ ಬೆಟ್ಟ ಪ್ರದೇಶದಲ್ಲಿ ಗಣಪು ಶಾನಭೋಗ ವೃತ್ತಿಗೆ ಹಾಜರಾದ. ದಟ್ಟ ಕಾಡಿನ ಹಳ್ಳಿಗಾಡು ಎಂಬುದನ್ನು ಬಿಟ್ಟರೆ ಊರ ಜನರ ಸಹಕಾರ ಇತ್ಯಾದಿ ತುಂಬಾ ಅನುಕೂಲಕರ ಪರಿಸರವೇ ದೊರೆಯಿತು. ಆದರೆ ಗಣಪು ತಾನು ಓದುವ ಹಂತದಲ್ಲಿಯೇ ಶಿಕ್ಷಕನಾಗಬೇಕೆಂದು ಕನಸು ಕಾಣುತ್ತಿದ್ದ. ಬಯಸಿದ ಉದ್ಯೋಗವೊಂದು ದೊರೆಯಲಿಲ್ಲ ಎಂಬ ಆತಂಕವೊಂದು ಅವನನ್ನು ಕಾಡುತ್ತಲೇ ಇತ್ತು.

********************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Leave a Reply

Back To Top