ಕವಿತೆ
ಯಾರಿಗೂ ನಾವು ಕಾಯುವುದಿಲ್ಲ
ನೂತನ ದೊ ಶೆಟ್ಟಿ
ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿ
ಕಡುಕೆಂಪಾಗಿ ಜೀವ ತುಂಬಿಕೊಂಡಿತ್ತು
ಆ ಗುಲಾಬಿ ಹೂ
ಎಳೆಯ ಹೊನ್ನ ಕಿರಣಗಳು
ಮಲಗಿದ್ದ ಇಬ್ಬನಿಗೊಂದು
ಹೂ ಮುತ್ತನಿಕ್ಕಿದಾಗ
ನಾಚುತ್ತಲೇ ಸುಖಿಸಿತ್ತು.
ಮುಳ್ಳುಗಳ ಸಂಗವೇಕೆಂದು
ದೂರ ನಿಂತ
ಕರಗಳಿಗಾಗಿ ಕಾತರಿಸುತ್ತ
ತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು
ಏರಿದ ಬಿಸಿಲಲ್ಲಿ ಕಿರುಗಣ್ಣಾಗಿ
ಈಗ ಬರಬಹುದೇ?
ಕೇಳಿದ ಪ್ರಶ್ನೆಗೆ
ಇಬ್ಬನಿಯ ನಿರುತ್ತರ
ಹೊನ್ನ ಕಿರಣಗಳ ತೆಕ್ಕೆಯಲ್ಲಿ
ಸೇರಿ ಹೋದ ಇಬ್ಬನಿಯ ಕಂಡು
ಗುಲಾಬಿಗೂ ತವಕ
ಎಲ್ಲಿ ನನ್ನ ತಬ್ಬುವ ಕೈಗಳು
ಬೆಳಕು ಕರಗಿದ ಸಂಜೆಯಲಿ
ರಾತ್ರಿ ರಾಣಿಗಳು ನಕ್ಕು ಕೇಳಿದೆವು
ಏಕೆ ಕಾಯುವೆ?
ಕಿರಣ, ಇಬ್ಬನಿ, ಸಂದೇಶ
ಯಾರಿಗೂ ನಾವು ಕಾಯುವುದಿಲ್ಲ
ಅರಳುತ್ತೇವೆ, ಘಮಿಸುತ್ತೇವೆ
ಎಲ್ಲ ನಮಗಾಗಿ
ಗಾಳಿಯಲಿ ಸುಗಂಧವ ಸೇರಿಸಿ
ಅವರೆದೆಗಳಲ್ಲಿ ಹರಡುತ್ತೇವೆ
********************************
V nice ma
ಥ್ಯಾಂಕ್ಯೂ
ಜೀವನವೇ ಹೀಗೆ.ಕಾಯಕವಿರಬೇಕಷ್ಟೇ.
ಚೆನ್ನಾಗಿದೆ, ನಿಜ ಜೀವನದ ಅರ್ಥ ತಿಳಿಸಿದಂತಿದೆ
ಹೂವಿನಂತೆ ಯಾವ ಪ್ರತಿಫಲಾಕ್ಷೆ ಇಲ್ಲದೆ ಮನುಜ ಬಾಳಿದರೆ ಭೂಮಿಯೇ ಸ್ವರ್ಗ ವಾದೀತು.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಅದಕ್ಕನುಗುಣವಾಗಿ ನಾವು ಇರಬೇಕೆಂದು ಈ ಕವನ ಸೂಚಿಸುತ್ತಿದೆ
ಗುಲಾಬಿ ,ಕಿರಣ, ಇಬ್ಬನಿ ಗಾಳಿ,ಪದಗಳ ಬಳಕೆಯಿಂದ ಕವನ ಚನ್ನಾಗಿ ಇದೆ
ಅರ್ಥ ಗರ್ಭಿತ ಕವನ
ಎಷ್ಟೊಂದು ಹೊಳಹುಗಳು ನಿಮ್ಮೆಲ್ಲರ ಸ್ಪಂದನೆಯಲ್ಲಿ.
ಧನ್ಯವಾದಗಳು
Very nice madam