ಕವಿತೆ
ನೀಲ ಮೋಹ.
ನಂದಿನಿ ವಿಶ್ವನಾಥ ಹೆದ್ದುರ್ಗ

ಪ್ರೀತಿ ನೆರೆನುಗ್ಗಿದಾಗೆಲ್ಲಾ
ನಾನವನ ನಿನ್ನ ಹೆಸರಲ್ಲೇ
ಕರೆಯುವೆ,ಬಲ್ಲೆಯಾ?
ನನ್ನ ಉತ್ಕಟತೆಗೆ ಒದಗುತ್ತಿ ನೀನು
ಆಗಾಗ ಚಲುವ.
ನವುರಾಗಿ ನಿನ್ನ ಉಸುರುವಾಗೆಲ್ಲಾ
ಅಂಗುಲಂಗುಲದಲ್ಲೂ
ಸಂಗಕ್ಕೆ ಅರಳುವ
ಬಂಗಾರದ ಹೂವು ನಾನು.
ಆಗೆಲ್ಲಾ ಬೆಚ್ಚಿ ಬೀಳುತ್ತಾನೆ
ಇವನು.
ಮತ್ತ ಮತ್ಸರದಲಿ ಪ್ರೇಮದ ಹೊಸ
ಸಂವತ್ಸರ ಶುರುವಾಗುತ್ತದೆ
ಇಲ್ಲಿ.
ಬಿಗಿ ಕಳೆದುಕೊಂಡಿದ್ದ ನನ್ನ
ಹಳೆಯ ಒಲವಿಗೆ
ಸಿಹಿಹಗೆಯಿಂದಲೆ ಸೊಗ ನೀಡುತಾನೆ
ಮತ್ತೆ.
ಅಡಿಗಡಿಗೆ ಬಣ್ಣ ಬದಲಿಸುವ
ನಭದ ಮೋಹನನೇ
ನೆಲ ಮುಗಿಲ ಹೊಲೆಯುವ
ಚತುರ ಚಮ್ಮಾರನೇ
ನೇವರಿಕೆಯೂ ಇರದೆ ನೆನಪಿಗೇ
ನಲುಗುವಾಗೆಲ್ಲಾ
ನೀನಾರೆಂದು ತಿಳಿವ ಕುತೂಹಲ
ನನಗೆ.
ಅವಳಾರೋ ನಿತ್ಯ ಕನ್ನೆ
ಬಿಚ್ಚಿ ಬಿಸುಟ ಸೀರೆಯೆನಿಸುತ್ತಿ
ನಕಾಶೆ ನಕ್ಷೆ ಹೆಸರು ವಿಳಾಸವಿರದ
ಊರೆನಿಸುತ್ತಿ.
ಆಕಾರವಿರದ ಮಳೆಯ ತತ್ತಿಗಳ
ಹೊತ್ತು ನಡೆವ ಬಟಾಬಯಲೆನಿಸುತ್ತಿ.
ನೆಲದ ನೀರೆಲ್ಲಾ ಹರಳಾಗಿ
ಅಡಗಿಸಿಡುವ ಗೋದಾಮು ಎನಿಸುತ್ತಿ.
ಭಂಗವಿಲ್ಲದೇ ಭಗವಂತ ಎಸೆದ ಚೆಂಡು
ನಿನ್ನಂಗಳ ಮುಟ್ಟುವಾಗೆಲ್ಲಾ
ಮುಟ್ಟಾದ ನಾನೇ
ಎನಿಸುತ್ತಿ.
ಹಾರುಹಕ್ಕಿಗೆ ಏರುತ್ತೇರುತ್ತಾ
ಹೋರುವ ದಾರಿಯೆನಿಸುತ್ತಿ
ರಚ್ಚೆ ಹಿಡಿದ ಪುಟ್ಟಿ ಅಪ್ಪನ
ಹೆಗಲೇರಿ ಮುಟ್ಟ ಬಯಸುವ
ಅಟ್ಟವೆನಿಸುತ್ತಿ
ಜಡೆಬಿಲ್ಲೆ ಮುಡಿದ ಮರಕ್ಕೆ
ಸಮಸ್ತ ವಿವರವೆನಿಸುತ್ತಿ.
ನೀಲನೇ..ಪ್ರೇಮಲೋಲನೇ
ಎದೆಯ ಖಾಲಿಯೇ
ಜಗದ ಮಾಲಿಯೇ
ನನ್ನ ಕಾವು ನೀನು
ತುಯ್ಯುವ ಸಾವು ನೀನು.
ಮೋಹದ ನೋವು ನೀನು
ಅಪ್ಪುಗೆಗೆ ದಕ್ಕಿಬಿಡು ಒಮ್ಮೆ
ನಿನ್ನ ಪರಿಮಳಕೆ ಅರಳಿ
ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ
ಚೆಲುವ.
ಮಂತ್ರ ಹೇಳಿ
ಹೊಳೆವ ಕನ್ನಡಿಯಲಿ ಕೂಡಿ
ಹೆರುವೆ ನಿನ್ನನ್ನೆ ದಮ್ಮಯ್ಯ.!!
ಅರೆ..
ಬೆಚ್ಚುವೇ ಏಕೆ.?
ಆಗದೋ..?
ಬಾ ಹೋಗಲಿ.
ತುಸು ಹೊತ್ತು ಕುಳಿತು ಮಾತಾಡುವ.
********************************
ಬಹಳ ಚೆನ್ನಾಗಿದೆ ಅಕ್ಕ
ಚೆನ್ನಾಗಿದೆ ಕವಿತೆ