ಅಂಕಣ ಬರಹ

ರಂಗ ರಂಗೋಲಿ-03

ಜಾತ್ರೆಯ ಲೋಕ

Popular Fairs & Festivals in Karnataka, South India

ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು.

ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.

 ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ ಜಾತ್ರೆಗದ್ದೆ ಖಾಲಿ ಖಾಲಿ. ಗದ್ದೆಯಲ್ಲಿ ಚದುರಿ ಬಿದ್ದಿರುವ ಒಡೆದ ಬಳೆ, ಮಣ್ಣಿನೆದೆಗೆ ಒತ್ತಿಕೊಂಡ ಕುಂಕುಮದ ಗುರುತು, ಹಿಂಗಾರ ಹೊರಕವಚ, ಮತ್ತೆ ಇನ್ನಾವುದೋ ಊರಿನ ಜಾತ್ರೆ ಮಿನುಗಲು ಹೋಗುವ ಕಾಯಕಕ್ಕೆ ತಮ್ಮ ಸಂತೆ ಸರಂಜಾಮು ಕಟ್ಟುತ್ತಿರುವ ಕೆಲಸಗಾರರು, ಮಕ್ಕಳನ್ನು ಹೊತ್ತು, ಜೀಕಿ ಜೀಕಿ ಆ ಹದಬಿಸಿಯ ಬಿಸುಪು ಕಳಚಿಕೊಳ್ಳದೆ ಮೌನವಾಗಿ ಕೂತ ಆಟದ ಕುದುರೆಗಳು, ಕೊಂಡಿ ಕಳಚಿಕೊಂಡ ತೊಟ್ಟಿಲು, ಇನ್ನೂ ಸಾಮಾನುಗಳನ್ನು ಕಟ್ಟುವ ಮುನ್ನದ ಕೊನೆಯ ವ್ಯಾಪಾರದ ನಿರೀಕ್ಷೆಯಲ್ಲಿ ಕಣ್ಣಪಿಳುಕಿಸುವ ಪಾತ್ರೆ ಅಂಗಡಿಯವನು, ರಟ್ಟಿನ ಪೆಟ್ಟಿಗೆಯೊಳಗೆ ಸೇರಿಕೊಳ್ಳುತ್ತಿರುವ ಚಪ್ಪಲಿಗಳು,  ಎಸೆದ ಪತ್ರ, ಐಸ್ ಕ್ಯಾಂಡಿ ರಸಿಕ ಬಾಯಲ್ಲಿ ಕರಗಿ ಅನಾಥವಾದ ಕಡ್ಡಿಗಳು.ಮಣ್ಣಿಗೆ ಸಿಲುಕಿಕೊಂಡ ಜಿಲೇಬಿ ತುಂಡು, ಮಿಠಾಯಿ, ಒಂದು ರೂಪಾಯಿ ನಾಣ್ಯ, ಒಂದು ನೋಟು.

Kundapur: Thousands converge for car festival at Uppunda Durgaparameshwari  temple - Daijiworld.com

ಅದೆಷ್ಟು ನೋಟಗಳು! ಒಂದೇ ಎರಡೇ ಈ ಪಳೆಯುಳಿಕೆಗಳು. ನಿನ್ನೆ ತೆರೆದುಕೊಂಡ ಕಥೆಗಳು ಇದೀಗ ಬಾಯಿ ಕಳೆದು ಚೌಕಿಯಲ್ಲಿ ಮುಖ ಬಣ್ಣ ತೊಳೆಯುತ್ತಿವೆ.

ಎಲ್ಲವನ್ನೂ ಕಣ್ಣಿನಲ್ಲೇ ಹೆಕ್ಕಿಕೊಂಡರೂ ನಾವು ಗೆಳತಿಯರು ಮುಗಿ ಬೀಳುವುದು ಜಾತ್ರೆಯ ಸಮಯದಲ್ಲಿ ಬಳೆ ಮಾರುತ್ತಿದ್ದ ಅಂಗಡಿಗಳಿದ್ದ ಸಾಲಿಗೆ. ಇನ್ನೂ ಒಂದೆರಡು ಹೆಂಗಸರು ಬಟ್ಟೆಯ ಒಡಲಿಗೆ ಕಟ್ಟಿದ ಬಳೆಗಳನ್ನು ಹಾಕಿ ಗಂಟು ಬಿಗಿಯುತ್ತಿರುತ್ತಾರೆ. ನಾವು ಅಲ್ಲಿ ಬಿದ್ದಿರುವ ಬಣ್ಣದಬಳೆಗಳ ಚೂರುಗಳನ್ನು ಆಯುತ್ತಿದ್ದೆವು. ಜಾಸ್ತಿ ಸಿಕ್ಕಿದಷ್ಟು ನಮ್ಮ ಹರ್ಷ ಹೆಚ್ಚುತ್ತಿತ್ತು. ಅವನ್ನು ತಂದು ಆ ಚೂರುಗಳನ್ನು ಒಂದೊಂದಾಗಿ ಬೆಂಕಿಯ ಮುಖಕ್ಕೆ  ಅದರ ನಡು ಭಾಗ ಹಿಡಿದು ಸಣ್ಣನೆಯ ಬಲದಲ್ಲಿ ಬಾಗಿಸಿ ತುದಿ ಜೋಡಿಸುತ್ತಿದ್ದೆವು. ಇದು ಕಡಿದ ತುಂಡನ್ನು ಜೋಡಿಸುವ ಕಲೆ, ಅಂಕಗಳನ್ನು ಸೂತ್ರಧಾರ ಕಟ್ಟಿ ಒಂದಾಗಿಸಿದ ರಂಗಾವಳಿ. ಬಹಳ ಸಂಭ್ರಮದ ಕೆಲಸವದು.

 ಮುಂದಿನ ಕೆಲವು ದಿನಗಳು ಮನೆಯ ಹಿಂದಿನ ಹಿತ್ತಲಲ್ಲಿ ನಾವು ಗೆಳತಿಯರು ಯಾವಯಾವುದೋ ಗಿಡದ ಸೊಪ್ಪು ಕೈಯಲ್ಲಿ ಹಿಡಿದು ಆವೇಶಗೊಳ್ಳುವ ಸಿರಿಯ ಲಯದಲ್ಲಿ ಕಾಲು ಹಿಂದೆ ಮುಂದೆ ಹೆಜ್ಜೆ ಹಾಕುತ್ತ ಸಿರಿಯನ್ನು ಅಭಿನಯಿಸುತ್ತಿದ್ದೆವು.

” ಯಾಕೆ ಈ‌ ಪ್ರಾಣಿಗೆ ಅನ್ಯಾಯ ಮಾಡಿದೆ?.. ಈ ಊಟ ಸರಿಕೊಡದೆ ಗುಡ್ಡೆಗೆ ಸೊಪ್ಪುತರಲು ಕಳುಹಿಸಿದೆಯಾ..? “

ಕಣ್ಣು ಮೇಲೆ ಕೆಳಗೆ, ಉರುಟು ಉರುಟಾಗಿ ತಿರುಗಿಸಿ ‘ಸಿರಿ’ವಂತೆಯ ಪ್ರಶ್ನೆ.

ಉಳಿದ ಗೆಳತಿಯರು ಪಾದಕ್ಕೆ ತಲೆಯೂರಿ ತಪ್ಪಾಯ್ತು, ಎಂಬ ಕ್ಷಮಾಪಣೆ. ಒಳಮನೆಯಲ್ಲಿ ಕೆಲಸದಲ್ಲಿದ್ದ ಅಜ್ಜಿ ಹೊರಬಂದಳೋ ಸಿರಿ ಅಡಗಿ ನಾವು ನಾವಾಗುತ್ತಿದ್ದೆವು.

“ಏನದು.. ಕೂದಲೆಲ್ಲ ಬಿಚ್ಚಿಕೊಂಡು, ಏನು ನಿಮ್ಮ ಅವತಾರ. ಜಾತ್ರೆಯಲ್ಲಿ ಸಿರಿ ಆವೇಶಗೊಂಡ ಹಾಗೆ..ಅದೆಲ್ಲ ಆಟ ಆಡಬಾರದೂ..ದೇವರಿಗೆ ಕೋಪ ಬರ್ತದೆ.”

ಎಂದು ಎಚ್ಚರಿಸುತ್ತಿದ್ದಳು. ಅವಳು ಸರಿದು ಹೋದ ತಕ್ಷಣ ನಮ್ಮ ಆಟ ಮುಂದುವರಿಯುತ್ತಿತ್ತು. ದೇವರ ಪೂಜೆ, ಆರತಿ, ಪಂಚಕಜ್ಜಾಯ, ಮಡಿಯುಟ್ಟ ಪೂಜೆಯ ಭಟ್ಟರು, ದೇವಾಲಯ ಶುಚಿಗೊಳಿಸುವ ಕೆಲಸಗಾರರು, ವಾದ್ಯ ಎಲ್ಲವೂ ಆಟದ ಪಾತ್ರಗಳು. ಊರ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಈ ಬಗೆಯ ಉತ್ಸವಗಳು ಮಕ್ಕಳ ಹಸಿ ಮನಸ್ಸಿಗೆ ಚಿತ್ತಾರ ಬರೆಯುತ್ತಿತ್ತು.

ಸಾಂಸ್ಕೃತಿಕ ಆಚರಣೆ,ಸಂಸ್ಕೃತಿಯ ಪರಿಚಯವು ಥಿಯರೀ ಆಂಡ್ ಪ್ರಾಕ್ಟಿಕಲ್ ರೂಪದಲ್ಲಿ ಮಸ್ತಿಷ್ಕಕ್ಕೆ ಸೇರಿ ಒಂದು ಪರಿಮಳ ವ್ಯಂಜನದ ಸಂಚಲನ. ಹಲವಾರು ದಿನಗಳು ನಮಗೆ ಚರ್ಚೆಗೆ ಮುಖ್ಯ ವಿಷಯವೂ ಅದೇ ಆಗಿರುತ್ತಿತ್ತು. ಇದರಿಂದ ಬದುಕಿನ ಬಗೆಬಗೆಯ ಪಾತ್ರಗಳ ಚಲನೆ, ಭಾವನೆ, ಆ ವ್ಯವಹಾರಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ನೋಡುವ,ಕಾಣುವ ಅವಕಾಶವನ್ನು ನಾವು ಪಡಕೊಂಡೆವು.

   ಜಾತ್ರೆಯ ಕೊನೆಯ ರಾತ್ರೆ ರಥೋತ್ಸವದಂದು ಊರಲ್ಲಿ ಟೆಂಟಿನ ಯಕ್ಷಗಾನ ಆಟ. ತಪ್ಪಿಸದೇ ಹೋಗಬೇಕಾದ ಹರಕೆಯಂತಹ ಒಳಬದ್ದತೆ. ಮನೆಯಲ್ಲಿ ಬೇಡವೆಂದರೂ ಹೋಗುವುದೇ. ರಂಗಸ್ಥಳದ ಹತ್ತಿರ, ಎದುರು ಸಾಲಲ್ಲಿ  ರಾತ್ರಿಯಿಡೀ ಮಣ್ಣು ನೆಲದಲ್ಲಿ ಕೂತು ನೋಡುತ್ತ ಅಲ್ಲೇ ನಿದ್ದೆಯ ಭಾರಕೆ ರೆಪ್ಪೆ ಮುಚ್ಚಿ ದೇಹ ಅಡ್ಡವಾದಾಗಲೂ ಒಳಲೋಕದಲ್ಲಿ ಆಟವು ಮುಂದುವರಿಯುತ್ತಿತ್ತು. ಅಲ್ಲಿ ನಾನೇ ಬಣ್ಣದ ವೇಷವಾಗಿ ಕುಣಿಯುತ್ತಿದ್ದೆ. ಸಿರಿ, ಆವೇಶ, ವೀರಭದ್ರ, ಯಕ್ಷಗಾನದ ನೂತನ ಪ್ರಸಂಗ. ಅಲ್ಲಿ ಬರುವ ಗೆಜ್ಜೆ ನಾದದ ಸುಂದರ ಸ್ತ್ರೀ ವೇಷ. ಎಲ್ಲ  ಕನಸಿಗೆ ಧಾಳಿ ಇಟ್ಟು ಹೊಸ ಪ್ರಸಂಗವೊಂದು ನಡೆಯುತ್ತಿತ್ತು. ಮತ್ತೆ ಭಾರದ ರೆಪ್ಪೆ ತೆರೆದು ಯಕ್ಷಗಾನದ ವೀಕ್ಷಣೆ.

ಜಾತ್ರೆ ಮುಗಿದು ಅದೆಷ್ಟೋ ಕಾಲದವರೆಗೆ  ನನ್ನ ಒಳಗೆ ಈ ಪ್ರಸಂಗಗಳು ಆಟ ಆಡುತ್ತಿದ್ದವು. ಬೇಸಿಗೆ ಕಳೆದು ಮಳೆ. ಒಳಹೊರಗೆ ಮಳೆಯಂತೂ ಸುರಿದಿತ್ತು. ಅದು ಮುಂಗಾರಿನ ಮಳೆ..ಕರಾವಳಿಯ ಮಳೆ. ಧೋ. ಎಡೆಯಿರದೇ ಸುರಿ ಸುರಿದು ಹೊಸ ಲೋಕವನ್ನು ಕಟ್ಟಿಕೊಡುವ ಮಳೆ. ಭೂಮಿ  ಬಿತ್ತನೆಗೆ ತಯಾರಾಗಿ, ಒದ್ದೆ.ಒದ್ದೆ‌, ಒಳಗೆ ಅತೃಪ್ತ ಮನಸ್ಸು ಚಿಗುರಲು ಚಡಪಡಿಸುತ್ತಿತ್ತು. ಸಿರಿ, ಕುಣಿತ, ಯಕ್ಷಗಾನ ನಲಿತ, ಮಾತು, ಚೆಂಡೆ ನಾದ.

ಎಂತದೋ ಸುಪ್ತ ಆಸೆ. ಬಲವಾಗುತ್ತ ಹೋಗುತ್ತಿತ್ತು. ಅದಕ್ಕೆ ಪೂರಕ ಆಹಾರವಾಗಿ ಸಿಕ್ಕಿದ್ದು ಅಕ್ಷರ ಲೋಕ, ಅಕ್ಕರೆಯ ಪುಸ್ತಕಗಳ ಲೋಕ.

******************************************

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

6 thoughts on “

  1. ಬಾಲ್ಯದಲ್ಲಿ ಬಾಹ್ಯಾಕಾಶಕ್ಕೆ ಬೆರಗುಗಣ್ಣು ತೆರೆದು ನೋಡಿ ಮನಸೇರಿದ ವರ್ಣಚಿತ್ರಗಳು ಮುಂದೊಂದು ದಿನ ರಂಗೋಲಿ ಬಿಡಿಸುವ ಬೆರಳುಗಳ ಮೂಲಕ ರಂಗ ಸಂಯೋಜನೆಯಾಗುವ ಪ್ರಕ್ರಿಯೆಯ ಆಪ್ತ ಚಿತ್ರಣ ಇದು.
    ದೃಶ್ಯ ಕಾವ್ಯದಂತಹಾ ಬರಹ.
    ಪೂರ್ಣಿಮಾ ಅವರೇ, ಅಭಿನಂದನೆಗಳು

    1. ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು

Leave a Reply

Back To Top