ಅಂಕಣ ಬರಹ

ಅರಿತವರ ಮರೆತು ಸಾಗುವುದೆಂದರೆ

Silhouettes of hands are breaking chain. Freedom concept. Silhouettes of hands are breaking chain. Freedom concept royalty free stock photography

ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ ಕಷ್ಟವೇ… ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಮತ್ತೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ.

ನಾವು ಹಸುಗಳನ್ನ ಸಾಕ್ತೇವೆ, ಹೊತ್ತು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಿಸ್ತೇವೆ, ಅದು ಅಲ್ಲಿ ಹೋಗಬಾರದು, ಇಲ್ಲಿ ಮೇಯಬಾರದು ಹೀಗೆ ನಮಗೆ ಬೇಕಾದಂತೆ ಒಂದು ಚೌಕಟ್ಟಿನೊಳಗಿಟ್ಟು ಬೆಳೆಸ್ತೇವೆ. ನಮ್ಮ ಪ್ರಕಾರ ಅದು ಒಂದೂ ತಪ್ಪೇ ಮಾಡಿಲ್ಲ! ಆದರೆ ಬೀದಿಯ ದನ ಹಾಗಲ್ಲ, ಮನಸಿಗೆ ಬಂದ ಕಡೆ ಹೋಗ್ತದೆ, ಮನಸಿಗೆ ಬಂದದ್ದು ಮಾಡ್ತದೆ, ಮನಸಿಗೆ ಬಂದದ್ದನ್ನ ತಿನ್ತದೆ…. ಅದಕ್ಕೆ ಯಾವ ನಿರ್ಬಂಧಗಳಿಲ್ಲ. ಅದು ಗೋ ಮಾತೆ ಎಂದು ಪೂಜೆಗೆ ಸಲ್ಲುವ ಹೊತ್ತಲ್ಲೇ ಹೀನಾಮಾನವಾಗಿ ಒದೆ ಮತ್ತು ಬೈಗುಳಗಳನ್ನೂ ತಿಂದಿರುತ್ತದೆ. ಆದರೆ ಅದರ ಅನುಭವಗಳು ಎಷ್ಟು ಸಂಪದ್ಭರಿತ! ಅದರ ಬದುಕು ಅದೆಷ್ಟು ಸಂಪನ್ನ! ನಿಮಗೆ ಈ ಎರೆಡು ದನಗಳಲ್ಲಿ ಯಾವ ದನದ ಬದುಕು ಇಷ್ಟ ಎಂದು ಯಾರಾದರೂ ಒಂದು ವೇಳೆ ನಮ್ಮನ್ನು ಕೇಳಿದರೆ ನಮಗೆ ಬೀದಿ ದನದ ಬದುಕೇ ಇಷ್ಟ, ಆದರೆ ನಮ್ಮ ಆಯ್ಕೆ ಮಾತ್ರ ಸಾಕಿದ ದನ ಎಂದಾಗಿರುತ್ತದೆ. ಕಾರಣ ನಮಗೆ ಸಮಾಜವನ್ನು ಎದುರಿಸುದಾಗಲೀ, ಧಿಕ್ಕರಿಸುವುದಾಗಲೀ ಬೇಕಾಗೂ ಇಲ್ಲ, ಸಾಧ್ಯವೂ ಇಲ್ಲ ಹಾಗಾಗಿ. ಹಾಗಾಗಿಯೇ ನಾವು ಸಮಾಜದ ನಿರೀಕ್ಷೆಯ ಚಾಳೀಸು ತೊಟ್ಟು ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ  ಅದು ನಿರ್ಮಿಸಿಕೊಟ್ಟ ಚೌಟ್ಟಿನ ಒಳಗೇ ನೋಡಲು ಬಯಸುತ್ತೇವೆ. ಒಂದು ವೇಳೆ

Freedom, peace and spirituality dove, pigeon with olive branch. Freedom, peace, hope and spirituality pigeon silhouette with an olive branch flying in the blue royalty free stock photo

ಯಾರಾದರೂ ಅದನ್ನು ಮೀರಲು ಪ್ರಯತ್ನಿಸಿದರೆ ನಾವೇ ಮೊದಲಾಗಿ ಅವರ ಕಾಲು ಹಿಡಿದು ಹಿಂಜಗ್ಗುತ್ತೇವೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಅಷ್ಟೂ ಮಾತನ್ನು ಒಂದೂ ಬಿಡದಂತೆ ಆಡುತ್ತೇವೆ. ನಮ್ಮ ಮನಃಸಾಕ್ಷಿಗೆ ನಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬಿದ್ದ ತೋಳಕ್ಕೆ ಕಲ್ಲು ಬೀಸುವುದರಲ್ಲಿ ಸಿಗುವ ಸುಖ, ಒಣ ಆತ್ಮಸಾಕ್ಷಿಯ ಗೊಡ್ಡು ಉಪದೇಶಕ್ಕೆ ಕಿವಿಯಾಗುವುದರಲ್ಲಿ ನಮಗೆ ಖಂಡಿತಾ ಸಿಗಲಾರದು

.

ನನಗೆ ಸ್ವಾತಂತ್ರ್ಯ ಎಂದರೆ ಯಾವುದು ಮನುಷ್ಯತ್ವವನ್ನ ಮೀರುವುದಿಲ್ಲವೋ, ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೋ, ದುಷ್ಟ ಮತ್ತು ಕ್ರೂರ ಅಲ್ಲವೋ ಅದೆಲ್ಲವನ್ನೂ ನಾವು ಮಾಡಬಹುದು ಎಂದು. ಆದರೆ ಒಬ್ಬರ ರೆಕ್ಕೆಗಳನ್ನು ಕತ್ತರಿಸಿ ಹಾಕಿ ಅವರ ಹಾರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕಿಂತ ದೊಡ್ಡ ಕ್ರೂರತೆ ಮತ್ತೊಂದಿರಲಾರದು.

ಆದಾಗ್ಯೂ ತಪ್ಪುಗಳು ಒಂದು ಹಂತದವರೆಗೆ ಮನುಷ್ಯನನ್ನು ಮಾಗಿಸುತ್ತವೆ. ತಪ್ಪು ಮಾಡಿದವನು ಒಳಗೊಳಗೆ ಗಟ್ಟಿಯಾಗುತ್ತಾ ಹೋಗುತ್ತಾನೆ. ಅವನ ಬದುಕಿನ ಪಾಠ ಅವನನ್ನು ವಜ್ರಕಠೋರವಾ

ಗಿಸುತ್ತದೆ. ಅವನು ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಸದಾ ತಯಾರಿರುತ್ತಾನೆ. ತಪ್ಪುಗಳು ನಮಗೆ ಬದುಕನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು ತೋರಿಸಿಕೊಡುತ್ತವೆ, ನಮ್ಮ ಸರಿಗಳು ಬದುಕನ್ನು ಹೀಗೇ ನೋಡಬೇಕೆನ್ನುವ ದಾರಿಯ ನಿರ್ದಿಷ್ಟತೆಯನ್ನು ಮನಗಾಣಿಸುತ್ತವೆ. ನಮ್ಮ ತಪ್ಪುಗಳು ನಮಗಷ್ಟೇ ಅಲ್ಲದೆ ಇತರರಿಗೂ ಪಾಠವಾಗಬಲ್ಲವು. ಮತ್ತು ಇತರರ ತಪ್ಪುಗಳು ನಮ್ಮ ಪುಸ್ತಕದ ಪಾಠವೂ ಆಗಬೇಕು.

Broken Chain - Freedom And Separation. Concept stock image

ಆದರೆ ಕೆಲವೊಮ್ಮೆ ಅಮೂಲ್ಯ ಕ್ಷಣಗಳನ್ನು, ಅಮೂಲ್ಯ ವ್ಯಕ್ತಿಗಳನ್ನು ಸುಮಧುರ ಬಾಂಧವ್ಯವನ್ನು ನಮ್ಮ ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಡುತ್ತೇವಲ್ಲ ಅದು ಪರಮ ಯಾತನಾಮಯ… ಅದು ಯಾರಲ್ಲೂ ಹಂಚಿಕೊಂಡು ಹಗುರಾಗುವಂಥದ್ದಲ್ಲ. ನಮ್ಮಿಂದ ಅಪಾರವಾದದ್ದನ್ನು ನೀರೀಕ್ಷಿಸುವ, ನಮ್ಮನ್ನು ತಮ್ಮ ಬದುಕಿನ ಪರಮಾರ್ಥ ಎಂದು ತಿಳಿದವರನ್ನು ಧಿಕ್ಕರಿಸಿ ಹೊರಡುತ್ತೇವಲ್ಲ… ಆ ಕ್ಷಣದ ಬಗ್ಗೆ ನಿಜಕ್ಕೂ ಧಿಕ್ಕಾರವಿದೆ ನನಗೆ. ಒಂದು ಪ್ರೀತಿ, ಅಸಖ್ಖಲಿತ ಪ್ರೇಮ, ಪವಿತ್ರ ಸ್ನೇಹ, ಮಮತೆ ಅಂತಃಕರಣವೆಲ್ಲವನ್ನು ತಿರಸ್ಕರಿಸಿಬಿಡುತ್ತೇವಲ್ಲ… ಬಹುಶಃ ಆ ಒಂದು ಕ್ಷಣ ನಾವು ನಮ್ಮ ಹೃದಯದ ಮಾತುಗಳಿಗೆ ಕಿವುಡರಾಗಿಬಿಟ್ಟಿರುತ್ತೇವೆ. ಅದರಲ್ಲೂ ಆಯ್ಕೆಗಳಿದ್ದು ಒಂದನ್ನು ಮಾತ್ರ ಆರಿಸಬೇಕಾದ ಶರತ್ತಿದ್ದಾಗಲಂತೂ ಆರಿಸಿಕೊಂಡದ್ದರ ಸುಖವೇ ಅನುಭವಕ್ಕೆ ನಿಲುಕದಷ್ಟು ಕಳೆದುಕೊಂಡದ್ದರ ದುಃಖ ಆವರಿಸಿಬಿಟ್ಟಿರುತ್ತದೆ. ಆದರೆ ಬದುಕಿನ ನಿಯಮವೇ ಹಾಗಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಲೇಬೇಕು! ಆದರೆ ನಂಬಿಕೆಯನ್ನು ಕಳೆದುಕೊಳ್ಳುವುದಿದೆಯಲ್ಲ… ಅದು ನಮ್ಮ ಬದುಕಿನ ಬೇರನ್ನೇ ಅಲುಗಾಡಿಸಿಬಿಡುತ್ತದೆ.

ಸರಿ ನಮ್ಮವರನ್ನು ಬಿಟ್ಟು ಹೊರಟಾದ ಮೇಲೆ ಏನಾದೆವು ಎಂದೊಮ್ಮೆ ಹಿಂತಿರುಗಿ ನೋಡಿದರೆ ನಮ್ಮ ಹೆಜ್ಜೆಗಳಷ್ಟೂ ಅವರೇ ಕಲಿಸಿದ ಸಂಸ್ಕಾರದಚ್ಚಿನಲ್ಲಿ… ಇವತ್ತು ನಾವೇನಾಗಿರುತ್ತೇವೋ ಅದಷ್ಟೂ ಅವರು ನೀಡಿದ ಶಿಕ್ಷಣ. ನಮ್ಮ ಬದುಕು ಮುನ್ನಡೆದದ್ದೇ ಅದರ ಸೂಚಕ. ಬಿಟ್ಟುಬಂದೆವೆಂದುಕೊಂಡದ್ದು ಸದಾ ಹಿಂಬಾಲಿಸುತ್ತಲೇ ಬಂದಿರುವುದು ಅರಿವಾಗಿಲ್ಲದ ಸತ್ಯ. ನಮ್ಮ ಪ್ರತಿ ಕೆಲಸದಲ್ಲೂ ಅವರು ನೆನಪಾಗುತ್ತಾರೆ. ನಮ್ಮ ಪ್ರತಿ ನಡೆ ನುಡಿಯಲ್ಲೂ ಅವರೇ ಅವರು ಕಾಣಿಸಿಕೊಂಡು ಹನಿ ನೀರಾಗಿ ಉರುಳುತ್ತಾರೆ. ಅವರೊಂದಿಗಿನ ಒಂದೊಂದು ಕ್ಷಣವೂ ಮುತ್ತುಗಳಾಗುತ್ತವೆ. ಹೊಳೆಯುತ್ತವೆ. ಕರೆಯುತ್ತವೆ. ನೆನಪಾಗಿ ತಬ್ಬುತ್ತವೆ. ಸಂತೈಸಿ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಡುವರಿಲ್ಲದೆ ಖಾಲಿ ಎದೆಯ ಮೀಂಟುವ ನೋವನ್ನು ಸಹಿಸಲಾಗದೆ ನರಳುವಾಗ ತಾವೂ ಮರುಗುತ್ತವೆ. ಅರಿತವರ ಮರೆತು ಸಾಗುವುದೆಂದರೆ ಸಳುಕು ಹಿಡಿದ ಎದೆಯನ್ನು  ಅಬ್ಬೊತ್ತಿಕೊಂಡು, ಬಾಯಿಗೆ ಬಟ್ಟೆ ತುರುಕಿ, ನಿಶ್ಯಬ್ಧವಾಗಿ ಬಿಕ್ಕುವುದು… ಇದರಿಂದ ಯಾರಿಗೆ ತಾನೆ ಮುಕ್ತಿ ಇದೆ…

ನಾವೆಲ್ಲ ಪಕ್ಕಾ ವ್ಯಾಪಾರಿಗಳು. ಲೇವಾದೇವಿ ನಮಗೆ ಬಹಳ ಚನ್ನಾಗಿ ಗೊತ್ತು. ನಮಗೆ ಪ್ರೀತಿಗಿಂತಲೂ ಭೌತಿಕ ವಸ್ತುಗಳೇ ಬದುಕಿನ ಅನಿವಾರ್ಯ ಎನಿಸುತ್ತವೆ.  ಅತ್ಯಂತ ಹೆಚ್ಚು ಪ್ರೀತಿಸುವ ಜೀವ ಪಕ್ಕದಲ್ಲಿ ಇರುವಾಗಲೂ ಹಣ ಐಶ್ವರ್ಯ ಆಸ್ತಿ ಅಂತಸ್ತು ದೊಡ್ಡದು ಎನಿಸುತ್ತದೆ ನಮಗೆ. ಮತ್ತೀ ಸಮಾಜವಾದರೂ ಅದನ್ನೇ ಅನಿವಾರ್ಯವೆನ್ನಿಸಿಬಿಡುವಂತೆ ಮಾಡಿಬಿಡುತ್ತದೆ. ನಾವು ನಮ್ಮ ಆಂತರ್ಯಕ್ಕೆ ಪ್ರಿಯವಾಗುವ ಬದಲು, ದುಡ್ಡಿನ ಬಾಲ ಹಿಡಿಯಲು ಹೊರಟುಬಿಡುತ್ತೇವೆ. ಈಗ ನಮ್ಮಲ್ಲಿ ಬಹಳ ಒಳ್ಳೆಯ ಗಾದೆ ಮಾತುಗಳು ಹುಟ್ಟಿಕೊಳ್ಳುತ್ತವೆ, penny saved is a penny gained, ನಾವು ಉಳಿಸಿಟ್ಟ ಹಣವೇ ನಮ್ಮ ನಿಜವಾದ ಮಿತ್ರ, ತಾಮ್ರದ ಕಾಸು ಅಣ್ಣ ತಮ್ಮಂದಿರನ್ನೇ ಅಗಲಿಸಿತಂತೆ (ಅದಕ್ಕೆ, ಮೊದಲೇ ಅಣ್ಣ ತಮ್ಮಂದಿರು ದೂರ ದೂರ ಇದ್ದು ಬಿಡಬೇಕು!), ದುಡ್ಡಿದ್ದವನೇ ದೊಡ್ಡಪ್ಪ… ಇವೆಲ್ಲ ನಮ್ಮ ಬದುಕಿನ ಮೊಟ್ಟೋಗಳಾಗುವ ಹೊತ್ತಿನಲ್ಲಿ ದುಡ್ಡನ್ನು ಮೀರಿದ ಅನುಭೂತಿಯೊಂದು ಇದೆ ಮತ್ತು ಅದು ನಮ್ಮ ಬದುಕಿನ ಕೇಂದ್ರವಾಗಬೇಕಿದೆ ಎನ್ನುವ ದನಿ ಕೀರಲಾಗಿ ಭೌತಿಕದ ಧ್ವನಿವರ್ಧಕದ ಅಬ್ಬರದ ನಡುವೆ ಇಲ್ಲವೇ ಆಗಿಬಿಡುತ್ತಿರುವುದು ಸಂಕಟ ಉಂಟು ಮಾಡುತ್ತದೆ…

*************************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

3 thoughts on “

Leave a Reply

Back To Top