ಅನುಭವ
ದೊಡ್ಡವರ ಮನೆಯ ಸಣ್ಣ ಕತೆ
ವೀಣಾ ನಿರಂಜನ್
ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ.
ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ ಸಿದ್ಧ ಮಾಡಿ ಕೊಳ್ಳುತ್ತಿದ್ದಳು. ನಡು ನಡುವೆ ಮಗನನ್ನು ಮಾತನಾಡಿಸುತ್ತ ಮಾತಲ್ಲೇ ಮುದ್ದುಗರೆಯುತ್ತಿದ್ದಳು.
ಹಾಗೆಯೇ ತಿಂಡಿ ತಯಾರಿಸುತ್ತಿದ್ದ ಶರಾವತಿ ತರಕಾರಿ ಮಾರಲು ಬಂದವನೊಡನೆ ಐವತ್ತು ರೂಪಾಯಿಗೆ ಚೆನ್ನಾಗಿ ಚೌಕಾಶಿ ಮಾಡಿ ಕೊಂಡಳು. ಮಗನಿಗೆ ಸಾವಿರಾರು ರೂಪಾಯಿಗಳ ಇಂಪೋರ್ಟೆಡ್ ಫುಡ್ ನಿಂದ ಬ್ರೆಕ್ ಫಾಸ್ಟ್ ತಯಾರಿಸಿದಳು. ಅದು ಇಂಪೋರ್ಟೆಡ್ ಅಲ್ವಾ, ನೀಟಾಗಿ ಜಬರ್ದಸ್ತಾಗಿ ಪ್ಯಾಕ್ ಮಾಡಿದ ಫುಡ್. ಅದರಲ್ಲಿ ಚೌಕಾಶಿ ಇರುವುದಿಲ್ಲ. ಇದರ ಮಧ್ಯೆಯೇ ಕೆಲಸಕ್ಕೆ ಬಂದ ಹೊನ್ನಮ್ಮಳಿಗೆ ಮಹಡಿ ಮೇಲಿನ ರೂಂಗಳನ್ನು, ಬಾಲ್ಕನಿ, ಫೊರ್ಟಿಕೊ ಎಲ್ಲವನ್ನೂ ಗುಡಿಸಿ ಒರೆಸುವಂತೆ ನಿರ್ದೇಶಿಸಿದಳು. ಹಾಗೇ ವಾರಕ್ಕೆ ಒಂದೆರಡು ಸಲ ಮಾತ್ರ ಆ ಕೆಲಸವಾದ್ದರಿಂದ ಹೊನ್ನಮ್ಮನ ಸಂಬಳವನ್ನು ತುಸು ಎಳೆದಾಡಿ ಇಷ್ಟು ಅಂತ ಗೊತ್ತು ಮಾಡಿದಳು.
ಸಂಜೆಯಾಗುತ್ತಿದ್ದಂತೆ ಬಂದವರಿಗೆಂದು ಆರ್ಡರ್ ಮಾಡಿದ ಅಗ್ಗದ ಕೇಕು, ಮನೆಗೆಂದು ಆರ್ಡರ್ ಮಾಡಿದ ಪೇಸ್ಟ್ರಿ ಎಲ್ಲವೂ ಬಂದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಡಗರದಿಂದ ಓಡಾಡುತ್ತಿದ್ದರು. ಅತಿಥಿಗಳು ಬಂದು ಸೇರಿದ ಮೇಲೆ ಭರ್ಜರಿ ಪಾರ್ಟಿ ನಡೆಯಿತು. ಬರ್ಥಡೇ ಬಾಯ್ ಜೊತೆಗೆ ಮನೆಯವರ, ಅತಿಥಿಗಳ ಫೋಟೋ ಶೂಟ್ ಆಯಿತು. ಎಲ್ಲರೂ ಡಿನ್ನರ್ ಗೆಂದು ಕುಳಿತಾಗ ಒಂದು ಅಹಿತಕರ ಘಟನೆ ನಡೆದು ಬಿಟ್ಟಿತು. ಮೇಲೆ ಓಪನ್ ಬಾಲ್ಕನಿಯಲ್ಲಿ ನಡೆಯುತ್ತಿದ್ದ ಡಿನ್ನರ್ ಗೆ ಎಲ್ಲಿಂದಲೋ ಮೂರು ಕೋತಿಗಳು ಪ್ರತ್ಯಕ್ಷವಾಗಿ ಕಿಸ್ ಕಿಸ್ ಎಂದು ಗುರುಗುಟ್ಟ ತೊಡಗಿದವು. ಶೇಖರ್ ಬಾಬು ಮಗನನ್ನು ಕೋತಿಗಳನ್ನು ಓಡಿಸಲು ಛೂ ಬಿಟ್ಟರು. ಕೋತಿಗಳು ಅವನನ್ನು ನೋಡಿ ಮತ್ತೊಮ್ಮೆ ಕಿಸ್ ಎಂದವು. ಅವನು ಹೆದರಿ ಶರಾವತಿಯ ಕಾಲ ಬುಡದಲ್ಲಿ ಸುತ್ತುತ್ತಾ ಕುಂಯ್ ಗೂಡ ತೊಡಗಿದ. ಶೇಖರ್ ಬಾಬು ಒಮ್ಮೆಲೇ ಕೋಪದಿಂದ ಗುಡುಗಿದರು, ” ಥೂ ನೀನೆಂಥ ನಾಯಿಯೋ ಬೊಗಳೋ ಬೊಗಳು”. ಅತಿಥಿಗಳು ಉಕ್ಕಿ ಬರುವ ನಗೆಯನ್ನು ತಡೆಯುತ್ತ ಸಭ್ಯತೆ ಮೆರೆದರು. ಶರಾವತಿ ಕಣ್ಣಂಚಿನ ನೀರು ತುಳುಕುವುದನ್ನು ತಡೆದಳು!
************************************************************************