ಪಾರಿಜಾತ ಗಿಡ

ಲಲಿತ ಪ್ರಬಂಧ

ಪಾರಿಜಾತ ಗಿಡ

ವಿದ್ಯಾ ಶ್ರೀ ಎಸ್ ಅಡೂರ್.

ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.

            ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು ಮಣ್ಣಿನೊಳಗೆ ಬೇರಿಳಿಸಿ, ಚಿಗುರಿ,ನಿಧಾನವಾಗಿ ತನ್ನ ಪಾಡಿಗೆ ಬೆಳೆದು, ಈಗ ಅಗಾಧವಾಗಿ ಹಬ್ಬಿ ನಿಂತಿದೆ. ಸಂಜೆಯಾದರೆ ಸಾಕು ಮೈಯೆಲ್ಲ ಮುತ್ತು ಸುರಿದಂತೆ ಮೊಗ್ಗು ತುಂಬಿಕೊಂಡು ಗಾಳಿಗೆ ತೊಯ್ದಾಡುತ್ತದೆ. ಮುಸ್ಸಂಜೆಯ ವೇಳೆಯಲ್ಲಿ ಮೈಮೇಲೆ ಬೆಣ್ಣೆ ಚೆಲ್ಲಿದಂತೆ, ಮಂಜು ಮುಸುಕಿದಂತೆ, ಹೂವುಗಳೆಲ್ಲಾ ಅರಳಿ ಹೊಳೆಯತೊಡಗುತ್ತವೆ. ಹುಣ್ಣಿಮೆಯ ಮತ್ತು ಅದರ ಆಚೆ ಈಚೆ ಗಿನ ರಾತ್ರಿ ಗಳಲ್ಲಿ ದೇವಲೋಕವೇ ಭೂಮಿಗಿಳಿದಂತೆ ತನ್ನ ಮಂದ ಘಮ ದೊಂದಿಗೆ ಮನಕ್ಕೆ ಮುದ ನೀಡುತ್ತದೆ.

            ಹಿಂದೆಲ್ಲ ಮನೆಯ ಹಿತ್ತಿಲಲ್ಲಿ ಇದ್ದ ಈ ಮರ ಈಗ ಕೆಲ ವರ್ಷಗಳ ಹಿಂದೆ ಹಳೆ ಮನೆ ಕೆಡವಿ ಹೊಸ ಮಾಳಿಗೆ ಮನೆ ಕಟ್ಟಿ, ಮಾಳಿಗೆ ಮೇಲೆ ನನಗೊಂದು ರೂಮು ಅಂತ ಮಾಡಿ, ಅದಕ್ಕೊಂದು ಬಾಲ್ಕನಿ ಅಂತ ಮಾಡಿ ಕೊಂಡು,ಸಂಜೆಯ ವೇಳೆಗೆ ಅಲ್ಲಿ ಒಂದು ಕುರ್ಚಿ ಹಾಕಿ ಕೂತರೆ, ಎಲ!ಕೈಗೆಟುಕುವ ದೂರ ದಲ್ಲಿ “ಪಾರಿಜಾತ ಹೂವಿನ ಮರ “.ಆನಂತರದ  ದಿನಗಳಲ್ಲಿ ಅದೆಷ್ಟು ಸಂಜೆ ನಾನು ಅದರ ಸೌಂದರ್ಯ, ಘಮ ಸವಿದಿಲ್ಲ??.ನನ್ನ ರೂಮಿನ ಕಿಟಕಿ ತೆರೆದರೆ ನೇರ ನನ್ನ ಮಂಚಕ್ಕೇ ಕಾಣುವ ಮರ, ಅದೆಷ್ಟು ದಿನ ತನ್ನ ಘಮದಿಂದಲೇ ನನ್ನನ್ನು ಲಾಲಿ ಹಾಡಿ ಮಲಗಿಸಿಲ್ಲ??ನನ್ನ ಅದೆಷ್ಟು ಒಂಟಿ ಸಂಜೆಗಳನ್ನು ನಾನು ಅದರ ಜೊತೆಗೆ ಕಳೆದಿಲ್ಲ??ಲೆಕ್ಕ…….ನನಗೂ ಇಲ್ಲ……ಅದಕ್ಕೂ ಇಲ್ಲ..

       ಬೆಳಗಾದರೆ ಸಾಕು, ಸಣ್ಣ ಸಣ್ಣ ಹಕ್ಕಿ ಗಳು  ಅದೇನೋ ದೊಡ್ಡ ಆಲದಮರ ವೇನೋ ಎಂಬಂತೆ, ನನ್ನ ಪಾರಿಜಾತ ಗಿಡದ ಕೊಂಬೆಯಿಂದ ಕೊಂಬೆಗೆ ಹಾರುತ್ತ,ಜಿಗಿಯುತ್ತ ಸಂಭ್ರಮ ಪಡುವಾಗ ಬೆಳ್ಳನೆಯ ಪಾರಿಜಾತ ಹೂವುಗಳು ಹಿಮದ ಮಳೆಯಂತೆ ನೆಲಕ್ಕೆ ಉದುರುವುದ ನೋಡುವುದೇ ಒಂದು ಸೊಬಗು. ನನ್ನ ಬೆಳಿಗಿನ ಅವಶ್ಯ ಕೆಲಸ ಗಳನ್ನು ಪೂರೈಸಿ,ದೇವರ ಪೂಜೆಗೆ ಹೂವು ಕೊಯ್ಯಲು ಹೊರಟು, ಪಾರಿಜಾತ ಮರದ ಅಡಿಗೆ ಬಂದರೆ, ಬೆಳ್ಳನೆಯ ಹೂವಿನ ಹಾಸು ನೆಲದ ತುಂಬೆಲ್ಲಾ…….ಆ ಸುಂದರ ನೋಟ,..ಘಮ..ಮನಸಿಗೆ ನೀಡುವ ಖುಷಿ ಕೋಟಿಕೊಟ್ಟರೂ ಸಿಗದು.

                ಇತ್ತೀಚೆಗೆ ನನ್ನ ಯಜಮಾನರಿಗೆ  ಅಂಗಳ ದೊಡ್ಡದು ಮಾಡುವ ಮನಸ್ಸಾಗಿ, ಮನೆಯ ಸುತ್ತಲ ಗಿಡ ಗಳನ್ನೆಲ್ಲಾ ತೆಗೆಯಬೇಕು ಎಂದುಬಿಟ್ಟರು. ಅವರು ಹೇಳುವಂತೆ ಅದನ್ನು ಕಡಿದು, ಗೆಲ್ಲು ಬೇರೆ ಕಡೆ ಊರಿದರೆ ಇನ್ನೊಂದು ಗಿಡ ತಯಾರಾಗುತ್ತದೆ. ವಿಷಯವೇನೋ ಸರಿ. ಆದರೆ ನಾನು ಹಾಗೆ ಭಾವಿಸಲು ಹೇಗೆ ಸಾಧ್ಯ?? … ಅದರ ಸಾನ್ನಿಧ್ಯ ಕ್ಕೆ ನಾನು ಹೇಗೆ ಚಡಪಡಿಸುತ್ತೇನೋ.ಹಾಗೆಯೇ..ಅದೂ ನನ್ನ ಇರುವಿಕೆಯನ್ನು ಬಯಸುತ್ತದೆ…ಎಂದು ನನಗೆ ಗೊತ್ತಿದ್ದಮೇಲೆ….

              ಬದಲಾಗುವ ಜಗತ್ತು, ಕಾಲಮಾನ, ಮನುಷ್ಯನ ನಡುವೆ, ಉದ್ದುದ್ದ…ಅಗಲಗಲ…..ಬೆಳೆದು, ಬಂದು ನನ್ನ ಬಾಲ್ಕನಿ ಬಳಿ ಇಣುಕಲು ಕಲಿತ ಒಂದು ಯಃಕಶ್ಚಿತ್ ‘ಪಾರಿಜಾತ ಗಿಡ ‘ ,ಆಚೆ ಈಚೆ ಹೋಗಲು ಯಾಕೆ ಕಲಿತಿಲ್ಲ!!? ಕಲಿತಿದ್ದರೆ ಸ್ವಲ್ಪ ಬದಿಗೆ ಕರೆದು ಕೂರಿಸಬಹುದಿತ್ತಲ್ಲ, ಎಂದು ಅನಿಸುತ್ತದೆ ನನಗೆ. ಮತ್ತೆ ಅನಿಸುತ್ತದೆ….ಅದರ ಪುಣ್ಯ, ಅದು ಇನ್ನೂ ಪಾರಿಜಾತ ಗಿಡ ವಾಗಿಯೇ ಉಳಿದಿದೆ. ಮನುಷ್ಯನಂತೆ ಬುಧ್ಧಿ ಬೆಳೆದು ಅಸಂಬದ್ಧ ಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಉಳಿದರೂ ಪಾರಿಜಾತ ಗಿಡ ವಾಗಿ ಯೇ…ಅಳಿದರೂ ಪಾರಿಜಾತ ಗಿಡ ವಾಗಿ ಯೇ…

            ಮನುಷ್ಯನ ಜೀವನ ತೀರ ವ್ಯಾವಹಾರಿಕ ವಾಗಿ ಉಳಿದಿರುವ, ದಿನಕ್ಕೊಂದು ಐವತ್ತು ಮುಖವಾಡಗಳನ್ನು ಹಾಕಿ ಅಸಲಿಯತ್ತು ಮರೆಮಾಡುವ, ನೈಜತೆಗೆ ಬೆಲೆಯೇ ಇಲ್ಲದ ಇಂದಿನ ಕಾಲಮಾನ ದಲ್ಲಿ “ಪಾರಿಜಾತ ಗಿಡ ,ಪಾರಿಜಾತ ಗಿಡ ವಾಗಿ ಯೇ ಉಳಿದದ್ದು ಅದರ ತಪ್ಪೇ??”ಎಂದು ಯೋಚಿಸತೊಡಗಿದೆ….

************************************

Leave a Reply

Back To Top