ನಿನಗಿಂತ ದೊಡ್ಡವರು…..

ಕವಿತೆ

ನಿನಗಿಂತ ದೊಡ್ಡವರು…..

ಯಮುನಾ.ಕಂಬಾರ

ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡು
ತೆಪ್ಪಗೆ ಮೌನದಲಿ,
ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡು
ಕಾಲ ಹಾಕುವ ಕಾರಣಿಕಳೇ….!!.

ಕ್ರೌರ್ಯ , ಕೋಪ ತಾಪಗಳ
ಗರ್ಭದಲ್ಲಿ ಅಡಗಿ ಕುದಿಗೊಂಡರೂ
ಮತ್ತೆ ಮತ್ತೆ ಅದೇ ಮೌನ
ಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !!

ನಿನ್ನ ಸಹನೆಗೆ ತಾಳ್ಮೆಗೆ
ಇಲ್ಲ – ಸಾಟಿ
ಇತಿಹಾಸದ ಕತ್ತಲಲ್ಲಿ – ಕರಗಿವೆ
ಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !!

ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:
” ದುರಾಸೆ ದುಃಖಕ್ಕೆ ಮೂಲ
ಅಹಿಂಸೆ ಬದುಕಿನಸೂತ್ರ
ಕಾಯಕವೇ ಕೈಲಾಸ “. !!

ನಿನ್ನ ಕಣ ಕಣದ ಕಣ್ಣಲ್ಲೂ
ಮಿಂಚುವ ದೀಪ್ತಿಗೆ
ನನ್ನ ಮೈ ಮನ ಶರಣಾದ ಹೊತ್ತು
ಸವಿಯುತ್ತಿರುವೆ – ನಿನ್ನೆದೆಯ ಸಿರಿಯಲಿ
ಒಂದಾಗಿ ಒಂದಾಗಿ – ಹಗಲು ರಾತ್ರಿಗಳ ಮರೆತು !!

ನಿನ್ನ ವಿನಹ ಗತಿ ಇಲ್ಲ
ಹೆತ್ತ ಒಡಲು
ಹೊತ್ತ ಉದರ – ಒಂದೇ ಒಂದೇ
ನಿನಗಿಂತ ದೊಡ್ಡವರು – ಇಲ್ಲ ಇಲ್ಲ ಇಲ್ಲ…!!

******************************

Leave a Reply

Back To Top