ಅಂಕಣ ಬರಹ

ರಂಗ ರಂಗೋಲಿ -೨

 ‘ಸಿರಿ’ ತುಂಬಿದ ಬಾಲ್ಯ

ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು.

 ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ  ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ ಮೂಡಿಬಂದ ಶಕ್ತಿ ಸ್ವರೂಪಿಣಿ. ಮನವು ಮತ್ತೆ ಅಲ್ಲಿಗೆ ಓಡುತ್ತಿದೆ. ಅದು ಹುಚ್ಚು ಅಮಲಿನ ಹೊಳೆ…ಆ ಸಿರಿಯ ಪಾದದ ಬಳಿಗೆ. ಬನ್ನಿ! ,ಹೀಗೆ ಬನ್ನಿ!!

ಇದೋ ನೋಡಿ ನನ್ನೂರಿನ ಜಾತ್ರೆ, ಉತ್ಸವ.  ನಿಮಗೆ ನಾನು ಸಿರಿಯನ್ನು ತೋರಿಸುವೆ. ನಾನು ಸಿರಿಯನ್ನು ಮೊದಲು ಕಂಡದ್ದೂ ಅಲ್ಲೇ. ಆಗ ನನ್ನದು ಬಾಲ್ಯ ಸಹಜ ಆಟದ ಉತ್ಸಾಹ,  ಕುತೂಹಲ, ಅಚ್ಚರಿಗಳು ಬೆರೆತುಕೊಂಡ ವಯಸ್ಸು. ನಮ್ಮೂರಲ್ಲಿ ಚಂದ್ರನ ಹುಣ್ಣಿಮೆ ಸಂಭ್ರಮವೂ ಸಿರಿ ಜಾತ್ರೆಯೂ ಜತೆ ಜತೆಗೆ. ಊರಿನ ದೇವರ ಉತ್ಸವ  ಜನಜೀವನ ತುಂಬಾ ಬಣ್ಣವೋ ಬಣ್ಣ.

ಆ ಹುಣ್ಣಿಮೆಯ ರಾತ್ರಿ ವರ್ಷದ ಬೇರೆ ಹುಣ್ಣಿಮೆ ಇರುಳಿನಂತಲ್ಲ. ಊರ ಮಣ್ಣಿನ ಕಣಕಣದಲ್ಲಿ ಮೊಳಕೆಗೊಳ್ಳುತ್ತವೆ ಹೆಣ್ಣು ಹೃದಯಗಳು. ಬಲಿಯುತ್ತದೆ ಆತ್ಮಸಮ್ಮಾನದ ಕೂಗು.  ಅನಾವರಣಗೊಳ್ಳತ್ತಲೇ ಹೋಗುತ್ತದೆ ಆ ಸುಪ್ತ ಮನಸ್ಸು. ಮನಸ್ಸಿನ ಒಳಪದರದಲ್ಲಿ ಹುಗಿದಿಟ್ಟ ದುಗುಡ ದುಮ್ಮಾನ, ನಿರಾಸೆ, ಹತಾಶೆ, ಆಸೆ, ಈಡೇರದ ಕನಸು, ಆ ಬೆಳದಿಂಗಳ ಸ್ಪರ್ಶಕ್ಕೆ ಬುಳಬುಳ ಎಂದು ಮನಸ್ಸಿನಾಚೆ ಆ ದೇವಾಲಯದ ಎದುರಿನ ಬಯಲು ಗದ್ದೆಗೆ ಹರಿದು ಬಗೆಬಗೆಯ ಆಕಾರ ತಾಳುತ್ತದೆ. ರೋಷ, ಸಿಟ್ಟು,ಆರ್ಭಟ, ಹೂಂಕಾರ, ನಿರ್ವಿಕಾರತೆ ಬಗೆಬಗೆಯಾಗಿ ನವರಸ ಪಾಕ ಹೊಯ್ದಂತೆ. ಹೆಂಗಸರು ಸಿರಿಯಾಗಿ ಅರಳುತ್ತಾರೆ. 

ಆಗೆಲ್ಲ ಹೆಂಗಸರ ಈ ನಡೆ, ಅದಕ್ಕೆ ಕಾರಣಗಳು ಅರ್ಥ ಆಗುವ, ಅಥವಾ ಆಲೋಚನೆಗಳು ಆ ದಿಕ್ಕಿನತ್ತ ಒಂದಿಷ್ಟೂ ತಿರುಗುವಷ್ಟು ಬುದ್ಧಿ ಬಲಿತಿರಲಿಲ್ಲ. ಹುಣ್ಣಿಮೆಯ ಮುನ್ನ ದಿನವೇ ನಾವು ಮಕ್ಕಳು ಸಂಭ್ರಮವನ್ನು ಮೈ ಮನಸ್ಸಿಗೆ ಹೊಯ್ದುಕೊಂಡಂತೆ ಓಡಾಟ ಆರಂಭಿಸುತ್ತಿದ್ದೆವು. ಹೊಸ ಅಂಗಿ, ಅದರ ಹೊಸತನದ  ಪರಿಮಳ ಮೂಸಿ ಮೂಸಿ ನೋಡಿ ಗೆಳತಿಯರ ಮನೆಗೆ ಓಡುವುದು. ಅಲ್ಲಿ ಅವಳ ಫ್ರಾಕ್,ಅದರ ಬಣ್ಣವನ್ನು  ಹೀರಿಕೊಂಡ ಮನಸ್ಸು ಮತ್ತೆ ಓಟವನ್ನು ಮುಂದುವರೆಸುತ್ತದೆ. ಕೊನೆಗೆ ನಾಲ್ಕೈದು ಮಂದಿ ಒಂದೆಡೆ ಸೇರಿ ಹೊಸ ಜಂಭದಲ್ಲಿ ದೇವಾಲಯದ ಸಮೀಪ ಹೋಗುವುದು. ದೇವಾಲಯದ ಎದುರಿನ ಗದ್ದೆ, ಆ ರಸ್ತೆಗಳಲ್ಲಿ ಗಸ್ತು ತಿರುಗುವ ಕಾಯಕ.

 ಜಾತ್ರೆಗೆ ಎರಡು ದಿನ ಇದೆ ಎನ್ನುವಾಗ  ರಾಶಿರಾಶಿ ಗೊರಬುಗಳು ಮಾರಾಟಕ್ಕೆ ಬರುತ್ತಿದ್ದವು. ರೈತರು ಮಳೆ ಬಿಸಿಲಲ್ಲಿ ತೋಟ-ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಧರಿಸಿ ಬೆನ್ನಿಗೆ ಇಳಿಬಿಡುವ ತೆರೆದ ಜನಪದ ಜಾಕೆಟ್ಟು ಇದು.  ಉತ್ಸವದ ಸಮಯದಲ್ಲಿ ಲಾರಿ ಲಾರಿಗಳಲ್ಲಿ ಈ ಗೊರಬುಗಳು ಬರುತ್ತಿದ್ದವು. ನಮಗೆ ಈ ಲಾರಿಗಳನ್ನು ಹಾಗೂ  ತುಂಬಿಕೊಳ್ಳುವ ಗೊರಬುಗಳ ರಾಶಿ ಇವನ್ನು ಎಣಿಕೆ ಮಾಡುವುದೇ ಅತ್ಯಂತ ಖುಷಿ ಕೊಡುವ ಸಂಗಾತಿಯಾಗಿತ್ತು. ಮತ್ತೆ ಹೊಸ ಲಾರಿ ಬಂದರೆ ಮೊದಲಿನಿಂದ ಲೆಕ್ಕ ಶುರು.

ಗೊರಬುಗಳ ಲೆಕ್ಕಾಚಾರದಿಂದ  ಮುಂದೆ ಬಂದರೆ ನಮಗೆ ಕಾಣುವುದು ನಿರ್ಮಾಣ ಹಂತದ ಸಂತೆ ಅಂಗಡಿಗಳು, ಜಾತ್ರೆಗೆ ಬಂದ ಸರ್ಕಸ್ ನ  ಇನ್ನೂ ಜೋಡಣೆಯಾಗದ ಉಪಕರಣಗಳು, ಬೋನಿನೊಳಗಿನ ಪ್ರಾಣಿಗಳು, ಸೊಂಟ ಕೈ ಕಾಲು ಬಿಡಿ ಬಿಡಿಯಾಗಿ ಬಿದ್ದ ವಿವಿಧ ಬಗೆಯ ಆಟದ  ಯಂತ್ರಗಳು, ಮಕ್ಕಳಾಟದ ಸಾಮಾನುಗಳು. ಡೇರೆಯೊಳಗೆ ಕೂತಿರುವ ಬೆಂಚು, ಟೇಬಲ್. ಮರುದಿನ ರಾತ್ರಿ ಆ ಜಾಗ ಮಸಾಲೆ ದೋಸೆ ಪರಿಮಳ ಬರುವ ಹೋಟೇಲ್ ಆಗಿರುತ್ತದೆ. ಗೋಣಿ ಚೀಲದಲ್ಲಿ ಕೂತ ಪ್ಲಾಸ್ಟಿಕ್, ಸ್ಟೀಲ್ ಪಾತ್ರೆಗಳು. ಮುಚ್ಚಿದ ದೊಡ್ಡ ಪ್ಲಾಸ್ಟಿಕ್ ಹೊದಿಕೆಯೊಳಗೆ ಮುಸುಗುಡುವ ಅಪರಿಚಿತ ವಸ್ತುಗಳು. ಅವುಗಳ ಬಗ್ಗೆ ಅತೀವ ಕುತೂಹಲ, ಚರ್ಚೆಯಾಗುತ್ತ ಎಲ್ಲವನ್ನೂ ಕಣ್ಣು,ಬಾಯಿ ಬಿಟ್ಟು ನೋಡುತ್ತಾ, ಕತ್ತಲು ನಮ್ಮ ಸುತ್ತಲೂ ಆವರಿಸುವುದನ್ನು ನೋಡಿ ಮನೆಗೆ ಓಡುತ್ತಿದ್ದೆವು.

ಹುಣ್ಣಿಮೆಯ ದಿನ ಎಳೆಯ ಮನಸ್ಸುಗಳಿಗೆ ಸಂಭ್ರಮ, ಕುತೂಹಲ, ಆಸಕ್ತಿ. ದೊಡ್ಡವರಲ್ಲಿ ಮಕ್ಕಳ ಪ್ರಶ್ನೆ!  “ಎಷ್ಟು ಹೊತ್ತಿಗೆ ಜಾತ್ರೆ ಶುರು?”. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆ. ಸಂಜೆ ಅವಸರದಲ್ಲಿ ಸಿಕ್ಕಿದ್ದು ಒಂದಷ್ಟು ಮುಕ್ಕಿ ಜಾತ್ರೆಗೆ ಜಾಗವಾದ ಗದ್ದೆಗೆ ಹಾಜಾರಾತಿ ಕೊಡುತ್ತಿದ್ದೆವು. ಆಗಲೇ ವಾದ್ಯಗಳು, ಪಾಡ್ದನದ ನಾದ ಕಿವಿ ತುಂಬುತ್ತಿತ್ತು.

” ನಾರಾಯಣ

ಓ ನಾರಾಯಿಣೋ

ಓ..ಓ..ಆ..ಆ..

ಇನಿ ಯೆನ್ನ ಪಡಿಸಂಪಗೆ

ಓ ಈರ್ ಪತ್ತಲೆ ಬೆರಮ್ಮಣಂದ್ ಪನ್ಪೋಲ್ ಆಲ್ ದಾರು

 ಆಲ್..ಓ….ಓ…”

ಜನ ತುಂಬುತ್ತಿದ್ದರು. ಅದು ಸಿರಿ ಜಾತ್ರೆ. ಎಲ್ಲಿ ನೋಡಿದರೂ ಹೆಂಗಳೆಯರು. ಒತ್ತೊತ್ತಾಗಿ ಕೂತು, ನಿಂತು, ಮುಡಿ ಕೆದರಿ ಏನನ್ನೋ ಮೆಲು ಧ್ವನಿಯಲ್ಲಿ ಮಣಮಣಿಸುತ್ತಿದ್ದರು. ಸಣ್ಣನೆಯ ಆಲಾಪದಂತೆ ಪಾಡ್ದನ ಆರಂಭಗೊಳ್ಳುತ್ತಿತ್ತು.

“ಡೆನ್ನ ಡೆನ್ನ ಡೆನ್ನನಾ…ಓ..ಓ..”

 ಆ ಎಳೆ ಹಿಡಿಯುವುದೇ ಖುಷಿ.

“ನಾರಾಯಿಣ ಓ ನಾರಾಯಿಣೋ…

ಓ..ಓ…ಓ..ಆ…

ಆಹ್ಹ..ಹ್ಃ..ಹ್ಹ..ಓ..ಓ..ಸ್ಹ್ ಉ…”

ನಾವು ಜನರ ಗುಂಪಿನಲ್ಲಿ ತೂರಿಕೊಳ್ಳುತ್ತ ಒಬ್ಬಬ್ಬ ಸಿರಿಯ ಬಳಿಗೂ ಹೋಗಿ ನಿಂತಿರುತ್ತಿದ್ದೆವು. ಚಂದ್ರನ ಒಡೆತನ ತುಂಬಿದಂತೆ,  ಬೆಳದಿಂಗಳು ಚೆಲ್ಲಿದ ನಶೆಗೆ, ಮನಕಡಲು ಅಲೆಯೆದ್ದು  ಹೆಂಗಳೆಯರ ಕೊರಳಿಗೆ ಶಕ್ತಿ ತುಂಬಿಕೊಳ್ಳುತ್ತದೆ. ಉಸಿರಿಗೆ ಹೊಸ ಆಯಾಮ..ಕಣ್ಣು ಸಹಜತೆಯ ಮಿತಿಯಾಚೆಗೆ ಚಾಚಿ  ಯಾವುದೋ ಉನ್ಮಾದ, ನಿಂತಲ್ಲಿ ಭಾರವಾಗುವ ಹೆಜ್ಜೆ,  ತೇಲುವ ದೇಹ. ಪಿಸು ನುಡಿಯಂತೆ ,ನಿಧಾನವಾಗಿ ನಾಭಿಯಾಳದಿಂದ ಹೊರಬರುವ ಧ್ವನಿ ಕ್ರಮೇಣ ತನ್ನ ಮೃದುತ್ವ ಕಳಕೊಂಡು ಏರುಧ್ವನಿಯಾಗುತ್ತದೆ. ಕಣ್ಣಲ್ಲಿ ಉನ್ಮಾದ , ಶಾಂತ ವಾಗಿರುವ ಸ್ವರ ಅದರಾಚೆಗೆ ನಡೆದು ಯಾವುದೋ ಅನಾಮಿಕ ಭಾವ.‌ ನಾವು ಹೊಟ್ಟೆಯೊಳಗೆ ಭೀತಿ ಅದುಮಿಟ್ಟು ಅದನ್ನೂ ಮೀರಿದ ಕುತೂಹಲದಿಂದ ಇಣುಕುತ್ತಿದ್ದೆವು.

 “ನಾರಾಯಿಣೊ..ನಾರಾಯಿಣೋ “

ಅವರ ಪ್ರತೀ ಹಾವ ಭಾವ ನನ್ನೊಳಗೆ ಅಚ್ಚಾಗುತ್ತಿತ್ತು. ಕೈಯಲ್ಲಿ ಆಯುಧದಂತೆ ಹಿಡಿದಿರುವ ಹಿಂಗಾರ ಹೂ. ಮುಖದ ಇಕ್ಕಡೆ, ಹಿಂದುಗಡೆ ಕೆದರಿ ಹರಡಿಕೊಂಡ ಮುಡಿ, ಉಸಿರಿನ ಏರಿಳಿತಕ್ಕೆ ಸರಿಯಾಗಿ ಧ್ವನಿಸುವ ಆ ಆಳದ ಸ್ವರ, ಆಗಾಗ ತಲೆಗೂದಲನ್ನೇ ಕಣ್ಣಿಗೆ ಮುಖಕ್ಕೆ ಅಡ್ಡವಾಗಿ ಹಿಡಿದು ಬಿಕ್ಕುವ ಪರಿ, ಹಿಂಗಾರವನ್ನು ಆಗಾಗ ಸಮಾಧಾನದಿಂದ,ಮತ್ತೆ ರೋಷದಿಂದ ಮುಖದ ಮೇಲೆಯೇ ಬಡಿಯುತ್ತ ಕೈಗಳನ್ನು ಅದೇ ರಭಸದಲ್ಲಿ ಹಿಂದೆ ಮುಂದೆ ಆಡಿಸುತ್ತ ಸಣ್ಣನೆ ಹೆಜ್ಹೆ ಹಾಕಿ ಕುಣಿವ, ಆವೇ ಶದಲ್ಲಿ ಹಿಂಗಾರ ಹೂವಿನೊಂದಿಗೆ ಮೇಲಕ್ಕೆ ಹಾರುವ, ನವ ನಶೆಯು ಮೈಯ ಕೋಶ ಕೋಶಗಳಲ್ಲೂ ತುಂಬಿಕೊಂಡು ಎದೆಯನ್ನು ಆಲಾಪದೊಂದಿಗೆ ಪ್ರಾಣದ ಜೊತೆಗೆ ಆಟವಾಡುವಂತೆ ಆಡಿಸುವ ಅವರ ಆ ಪರಿ.

ಎದುರುಗಡೆ ದೀನರಾಗಿ ನಿಲ್ಲುವ ಆ ‘ಸಿರಿ’ ರೂಪೀ ಹೆಂಗಳೆಯರ ಮನೆಯವರು. ಅವರ ಕಣ್ಣಿನಾಳದ ಭಯದ ಜೊತೆಜೊತೆಗೆ ತುಂಬಿಕೊಂಡ ಭಕ್ತಿ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಗಮನಿಸುವ ನನ್ನೊಳಗೂ ಅಂತಹುದೇ ಅದಾವುದೋ ಅಪರಿಚಿತ ಭಾವ ಶಕ್ತಿ ಸಂಚಯಿಸುತ್ತಿತ್ತು. ಎಲ್ಲಿ ಎದುರಿನ ಸಿರಿ ಜೋರಾಗಿ ಒಮ್ಮೆ ಕಿರುಚಿದಳೋ ಡವಗುಡುವ ಎದೆಯನ್ನು ಅಂಗೈಯಲ್ಲಿ ಒತ್ತಿ ಹಿಡಿದು ನಿಂತ, ದಪ್ಪ ದಪ್ಪ ಕಾಲುಗಳ ಸಂದಿಯಲಿ ನೂರಿಕೊಳ್ಳುತ್ತ ಮತ್ತೊಬ್ಬ ‘ಸಿರಿ’ಯ ಕಡೆ ಓಡುತ್ತಿದ್ದೆ.

ಅಲ್ಲಿ  ಒಬ್ಬೊಬ್ಬ ‘ಸಿರಿ’ಯ ಬಳಿಯೂ ಒಂದು ಕಥೆ ತೆರೆದುಕೊಂಡು  ಆ ಮಣ್ಣಿಗೆ ಬಿದ್ದು ಆವಿಯಾಗುತ್ತಿತ್ತು. ಹೆಣ್ಣು ತನ್ನ ಕಥೆಯನ್ನು ಒಳ ಚಿಪ್ಪಿನಿಂದ ಹರಿದು ತೆಗೆದು  ತಾನು  ಕಳಚಿಕೊಂಡಂತಹ ನಿರಾಳತೆಗೆ ಒಳಗಾಗುತ್ತಿದ್ದಳೇನೋ.

ಮತ್ತೆ ನಾಳೆಗಳು ಅದೇ ಕಥೆಗಳ ಮುನ್ನುಡಿ ಬರೆಯಲಾರದೇ?. ಈ ಯೋಚನೆ ಆಗ ಬರುವುದು ಸಾಧ್ಯವೇ ಇರಲಿಲ್ಲ. ಅದು ಮಕ್ಕಳ ಮನಸ್ಸು. ಸ್ವಚ್ಛ ಖಾಲಿ ಕಾಗದ. ಏನು ಕಂಡೆನೋ ಅಷ್ಟೇ ಅಚ್ಚಾಗುತ್ತಿತ್ತು. ಹೊಸದನ್ನು ಕಾಣುವ ಸಂಭ್ರಮಕ್ಕೆ ಇಲ್ಲಿ ಹಸಿವು. ಬಲು ಆಸಕ್ತಿ, ಕುತೂಹಲ, ಅಚ್ಚರಿಯಿಂದ ಆ ಕಥೆಗಳನ್ನು ನನ್ನೊಳಗೆ ಬರಮಾಡಿಕೊಳ್ಳುತ್ತಿದ್ದೆ.

ಎಲ್ಲವೂ ಕೆಳವರ್ಗದ, ಬಡವರ, ಹಳ್ಳಿಯಲ್ಲಿ ಗದ್ದೆ, ತೋಟಗಳಲ್ಲಿ ದುಡಿವ ಹೆಣ್ಣುಮಕ್ಕಳ, ಹೆಂಗಸರ ಹರಳುಗಟ್ಟಿದ ನೋವುಗಳು, ‘ಸಿರಿ’ರೂಪದಲ್ಲಿ ಕರಗುತ್ತಿತ್ತು. ಒಳಗಿರುವ ಭಗವಂತ ಅವರಿಗೆ ಮೂರ್ತ,ಅಮೂರ್ತ ಸಾಕ್ಷಿ. ಪ್ರತಿ ಹೆಣ್ಣು ಮನಸ್ಸೂ ಅಂತರಂಗದ ಭಾವ ಹೊರತೆಗೆದು ಆಟವಾಡಿದಂತೆ. ಆಕೆ ತನಗಾಗುತ್ತಿರುವ ಅನ್ಯಾಯಕ್ಕೆ ಹಾವಿನಂತೆ ಭುಸುಗುಡುತ್ತಾಳೆ, ಕಣ್ಣನ್ನು ಉರುಟುರುಟಾಗಿ ರಪರಪನೆ ತಿರುಗಿಸಿ ಎದುರಿನವರ ಬಲವನ್ನೇ ಉಡುಗಿಸುತ್ತಾಳೆ. ಆಕ್ರೋಶದಲ್ಲಿ ಒಮ್ಮೆಲೆ ಕಿಟಾರನೆ ಕಿರುಚುತ್ತಾಳೆ. ಒಳಕೋಪಕ್ಕೆ ಕೈಯಲ್ಲಿ ಹಿಡಿದ ಹಿಂಗಾರ ಪರಪರ ಹೊಡೆದುಕೊಳ್ಳುತ್ತಾಳೆ. ಪ್ರಶ್ನಿಸುತ್ತಾಳೆ.

ಸಹಜ ಬದುಕಿನ ಪಾತ್ರಗಳು ಇಲ್ಲಿ ಅದಲು ಬದಲಾದಂತೆ. ಎಲ್ಲ ಬಗೆಯ ಭಾವಾಭಿವ್ಯಕ್ತಿಗೆ ಇಲ್ಲಿ ಮುಕ್ತ ವೇದಿಕೆ. ಮುಂದೆ ಹೋದರೆ ಸುಸ್ತಾಗಿ ಒರಗಿರುವ ‘ಸಿರಿ’ಯರು. ಅಕ್ಷತೆ ಚೆಲ್ಲಿದಂತೆ ಎಲ್ಲೆಡೆ ಬಿದ್ದಿರುವ ಹಿಂಗಾರದ ಹೂಗಳು.

ದೇಗುಲದ ಪ್ರಾಂಗಣದೊಳಗೆ  ಬರಬೇಕು. ಅಲ್ಲಿ ಸುತ್ತ ಚಾವಡಿಯಲ್ಲಿ ಸಿಂಗಾರಗೊಂಡು ಬಿಳಿ ಝರಿ ಲಂಗ ಮಲ್ಲಿಗೆ ಹೂ ಮುಡಿದು ಅಲಂಕರಿಸಿ ಕೂತ ಹೆಣ್ಣು ಮಕ್ಕಳು. ಗರ್ಭಗುಡಿಗೆ ಒಂದು ಪ್ರದಕ್ಷಿಣೆಗೊಂಡು ಎದುರು ಬಂದರೆ ಸೇವಂತಿಗೆ, ಮಲ್ಲಿಗೆ, ಕೇಪುಳ ರಾಶಿ ರಾಶಿ ಹೂಗಳು, ಕುಂಕುಮ, ಊದುಬತ್ತಿ, ಅರಶಿನ ಗುಪ್ಪೆ ಗುಪ್ಪೆಯಾಗಿ  ಕೂತಿರುತ್ತಿದ್ದವು.

 ಒಳಗಡೆ ಅಲಂಕಾರಗೊಂಡ ಊರ ದೇವರು ವೀರಭದ್ರ. ಉರಿಯುತ್ತಿರುವ ಹಣತೆಗಳು. ಅರೆಬರೆ ನಮಿಸಿ. ಮತ್ತೆ ಹೊರಗೆ ಓಟ. ಅಲ್ಲಿ ಸುತ್ತ ವಿವಿಧ ದೈವದೇವರುಗಳು. ವ್ಯಾಘ್ರಮುಖೀ ಚಾಮುಂಡಿ. ಇಲ್ಲಿ ನೋಡಬೇಕು ಥೇಟು ಹುಲಿಯ ಹಾವಭಾವ ತೋರುವ ಗಂಡು ಸಿರಿ. ಹುಲಿ ಆರ್ಭಟದಲ್ಲಿ ಆವೇಶಗೊಳ್ಳುವ ಗಂಡಸರು.

 ಅಂದು ಕಾಣುತ್ತಿದ್ದುದೇ  ಸಿರಿ ಲೋಕ.  ಅದು ಬಾಲಕಿಯ ಮನಸ್ಸಿನ  ಪುಟ್ಟ ಕಣ್ಣೊಳಗೆ ಹಲವು ಪಾತ್ರ ರೂಪ,ಸ್ವರ, ಅಚ್ಚಾಗಿ ರಂಗ  ‘ಸಿರಿ’ ಪ್ರಪಂಚ ಬೀಡು ಬಿಟ್ಟಿತ್ತು.

************************************************************

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

7 thoughts on “

  1. ಮಸ್ತ್ ಬರದೀಯೇ ಸಿರಿ. ಪ್ರಾದೇಶಿಕ ಭಿನ್ನತೆ ಮತ್ತು ಅಂಥ ಆಚರಣೆಗಳ ಮೇಲೆ ಬೆಳಕು ಚೆಲ್ಲುವ ಬುದ್ಧಿ ಭಾವಗಳನ್ನು ಹದವಾಗಿ ಬೆರೆಸಿದ ಇಂಥ ಬರಹಗಳ ಜರೂರತ್ತನ್ನು ನಿರಂತರ ತುಂಬುತ್ತಿರು.
    – ಶಮ, ನಂದಿಬೆಟ್ಟ

    1. ಶಮಾ..ನಿನ್ನಂತ ಗೆಳತಿಯರ ಪ್ರೋತ್ಸಾಹ ನನ್ನ ಅಕ್ಷರಗಳಿಗೆ ಶಕ್ತಿ. ವಂದನೆಗಳು

  2. ಸಿರಿ ದೇವಿಯೇ…ನಿನ್ನ ಬರಹದ ಲಾಲಿತ್ಯಕ್ಕೆ ಶರಣು

  3. ಮನಸ್ಸಿನ ಹಾಳೆಯಲ್ಲಿ ಬಣ್ಣಗಳು ತುಂಬುವುದು, ನಿಧಾನವಾಗಿ ರೇಖೆಗಳು ಅವಕ್ಕೆ ಅಂಚು ಕೊಡುವುದು, ಚಿತ್ರಗಳಾಗಿ ರೂಪವಾಗುವುದು, ಬದುಕಿನ ರಂಗೋಲಿಯಾಗುವುದು, ಬಿಡುಗಡೆಯೇ?, ಬಂಧನವೇ? ಅಥವಾ ಇವೆರಡಕ್ಕೂ ಮೀರಿದ exploration ನ ಒಂದು ವಿಕಸನವೇ?.
    ತುಂಬಾ ಒಳನೋಟದ, ಅಂಕಣ. ಅಭಿನಂದನೆಗಳು ಪೂರ್ಣಿಮಾ ಅವರೇ.

    1. ನಿಮ್ಮ ಪ್ರತಿಕ್ರಿಯೆಯೂ ಕಾವ್ಯ. ನಿಮ್ಮ ಅಂಕಣ ಬರಹದಂತೆ. ಧನ್ಯವಾದಗಳು

Leave a Reply

Back To Top