ಮೌನದಲ್ಲಿ ಮಾತುಗಳ ಮೆರವಣಿಗೆ…

ಪುಸ್ತಕ ಪರಿಚಯ

ಮಾತು ಮೌನದ ನಡುವೆ

ಸಾಹಿತ್ಯ ಎನ್ನುವುದು ಮಾನವನ ಪಾರದರ್ಶಕ ಅನುಭವಗಳ ಅನುಪಮ ಅಭಿವ್ಯಕ್ತಿ. ಈ ಅನುಭವ ಅನುಭೂತಿಯ ಮೂಲ ಆಕರವೇ ನಮ್ಮ ಸುಂದರ ಸಮಾಜ. ನಮ್ಮ ಸುತ್ತ ಮುತ್ತಲಿನ ಪರಿಸರ, ಪ್ರಕೃತಿ, ಸನ್ನಿವೇಶ, ಘಟನೆಗಳು ಹಾಗೂ ಮಾನವರ ವ್ಯಕ್ತಿತ್ವವು ಪರಸ್ಪರ ವ್ಯಕ್ತಿಗಳ ಅನುಭವವನ್ನು ರೂಪಿಸುತ್ತವೆ. ವ್ಯಕ್ತಿಯ ಈ ಅನನ್ಯ ಅನುಭವಕ್ಕೆ ರೂಪ ಕೊಡುವ ಸಾಧನವೇ ಭಾಷೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಕೂಸು. ಇದನ್ನು ಬಳಸಿಕೊಂಡೆ ಕವಿಯು ತನ್ನ ಅನುಭವಕ್ಕೆ ಚಿತ್ರ ಬಿಡಿಸುವುದು. ಈ ನೆಲೆಯಲ್ಲಿ ಸಾಹಿತ್ಯವು ಬದುಕಿನಂತೆಯೇ ಅಪರಿಮಿತ ಹಾಗೂ ವಿಶಾಲ. ಇದರ ಜಾಡು ಹಿಡಿದು ಹೊರಟಾಗ ಸಾಹಿತ್ಯಕ್ಕೆ ತೀಕ್ಷ್ಣವಾದ ಸಾಮಾಜಿಕ ಸ್ಪಂದನೆ ಹಾಗೂ ಹೃದಯದ ಕದ ತಟ್ಟಲು ಪ್ರಸ್ತುತ ಪಡಿಸುವ ಮಾರ್ಗ ತುಂಬಾ ಮುಖ್ಯವಾಗುತ್ತದೆ. ಸಾಹಿತ್ಯದ ಬಹುದೊಡ್ಡ ಕೊಂಬೆ ಕಾವ್ಯ ಆ ಕಾವ್ಯ ಹಚ್ಚ ಹಸಿರಾಗಿಸಲು ಕವಿಗೆ ಸಾಮಾಜಿಕ ವ್ಯವಸ್ಥೆ, ಸಂಬಂಧಗಳ ಹೂರಣ ಹಾಗೂ ಮಾನಸಿಕ ತಳಮಳಗಳು ಕಾಡಬೇಕು. ಅಂದಾಗ ಮಾತ್ರ ಆ ಕಾವ್ಯ ಸಾರ್ವತ್ರಿಕ ಪೋಷಾಕು ತೊಡಲು ಸಾಧ್ಯ. ಕೂಸು ಹುಟ್ಟಿದ ಮೇಲೆಯೇ ಹೆಣ್ಣಿಗೆ ಹೆಣ್ತನದ ಅನುಭವ ಆಗುವಂತೆ, ಕವಿತೆಗೊಂದು ರೂಪ ಬಂದ ಮೇಲೆಯೇ ವ್ಯಕ್ತಿಯು ಕವಿಯೆನಿಸಿಕೊಳ್ಳಲು ಸಾಧ್ಯ 

         ಮೇಲಿನ ಈ ಎಲ್ಲ ಅಂಶಗಳನ್ನು ಶಿಲ್ಪಾ ಮ್ಯಾಗೇರಿಯವರ ಮಾತು ಮೌನದ ನಡುವೆ ಕವನ ಸಂಕಲನದಲ್ಲಿ ಕಾಣಬಹುದು. ಇದು ಅವರ ತೃತೀಯ ಕವನ ಸಂಕಲನ. ಸಮಾಜವನ್ನು ಪ್ರೀತಿಸುವ ಕವಯಿತ್ರಿ ಸಮಾಜದಿಂದ ಪಡೆದುಕೊಂಡದ್ದನ್ನು ಪುನಃ ಸಮಾಜಕ್ಕೆ ಹಿಂತಿರುಗಿಸಲು ಬಳಸಿಕೊಂಡಿರುವುದು ಸರಸ್ವತಿಯ ಮಡಿಲನ್ನು….!!

          ಈ ಕವನ ಗುಚ್ಛವು  ೬೬+೦೧ ಕವನಗಳನ್ನು ಹೊಂದಿದೆ. ಕವಯಿತ್ರಿ ಅವರಿಗೆ ಸಾಮಾಜಿಕ ವ್ಯವಸ್ಥೆಗಿಂತಲೂ ಆ ವ್ಯವಸ್ಥೆಯ ಪ್ರಮುಖ ಭಾಗವಾದ ಸ್ತ್ರೀ ಸಂವೇದನೆಯು ಹೆಚ್ಚು ಕಾಡಿದೆ. ಎಲ್ಲದರಲ್ಲಿಯೂ ಸ್ತ್ರೀ ಸಂವೇದನೆಯು ಇಣುಕಿರುವುದನ್ನು ಗಮನಿಸಬಹುದು.‌ ಅದು ಹೆತ್ತವರ ಪ್ರೀತಿಯಾಗಿರಬಹುದು ಅಥವಾ ಮನದರಸನ ಪ್ರೀತಿಯಾಗಿರಬಹುದು… ಅಲ್ಲಿ ಸ್ತ್ರೀ ಸಂವೇದನೆಯೇ ಮುನ್ನೆಲೆಗೆ ಬಂದು ನಿಲ್ಲುತ್ತದೆ. ‘ಹೆಣ್ಣು’, ‘ಯಾರಿಗೂ ಕಾಣಲಿಲ್ಲ’, ‘ಸವಾಲು’, ‘ನನ್ನವನಿಗಾಗಿ’, ‘ಭ್ರಮೆ ವಾಸ್ತವ’, ‘ಪುರುಷೋತ್ತಮ’, ‘ಪುತ್ರ ವ್ಯಾಮೋಹ’, …. ಮುಂತಾದ ಕವನಗಳ ತಿರುಳೆ ಹೆಣ್ಣಿನ ಮನಸ್ಸಿನಲ್ಲಿರುವ ಮಾನಸಿಕ ತುಮುಲಗಳು. 

“ಅಮ್ಮನ ಗರ್ಭದಿಂದಲೆ

ಕಂಡಿರುವೆ

ಅಡೆತಡೆಯ ನಂಟು”

      ಈ ಅಡೆತಡೆ ಅನ್ನುವುದು ಹೆಣ್ಣಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ನೀಡಿರುವ ಮರೆಯಲಾಗದಂತಹ ಸುಂದರ ಬಳುವಳಿ. ಗಂಡು ಮಗುವಿನ ಮೋಹದಲ್ಲಿ ಹೆಣ್ಣನ್ನು ಬಲಿ ಕೊಡುವ ಅಮಾನುಷ ಪದ್ಧತಿಗೆ ನಾಂದಿ ಹಾಡಿದವನೆ ಈ ಬುದ್ಧಿವಂತ ಮತಿಹೀನ ಮಾನವ. ಈ ಅತಿಯಾದ ಬುದ್ಧಿವಂತಿಕೆಯ ಫಲವಾಗಿಯೇ ಹೆಣ್ಣು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಸಾವಿನೊಂದಿಗಿನ ಹೋರಾಟಕ್ಕೆ ಅಣಿಯಾಗುತ್ತಾಳೆ.‌ ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಷಯವೆಂದರೆ ಸ್ತ್ರೀಯು ತನಗೆ ಅರಿವಿದ್ದೋ, ಅರಿವಿಲ್ಲದೆಯೋ ಪುರುಷ ಪ್ರಧಾನ ಸಮಾಜದ ನಿಲುವುಗಳನ್ನು ಬೆಳೆಸಿಕೊಂಡು ಹೋಗುತ್ತಿರುವುದು. ಹೆಣ್ಣಾದ ತಾಯಿಯೇ ತನ್ನ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಇಲ್ಲಿಯ ಕವನವೊಂದು ಪ್ರತಿನಿಧಿಸುತ್ತದೆ.

“ಅಮ್ಮ ನಿನ್ನ ತೋಳೆಂದು

ಆಗಲೆ ಇಲ್ಲ ನನಗೆ ದಿಂಬು

ನಿನ್ನ ಮಡಿಲು ಹಾಸಿಗೆಯಾದದ್ದು

ನನಗೆ ನೆನಪಿಗಿಲ್ಲ….!”

ಇದು‌ ತಾಯಿಯ ಪ್ರೀತಿಯಿಂದ ವಂಚಿತವಾದ‌ ಹೆಣ್ಣು ಮಗುವಿನ ಮಾನಸಿಕ ತೋಳಲಾಟ…!

         ನನ್ನವನಿಗಾಗಿ ಕವನದ ಶೀರ್ಷಿಕೆಯು ಪ್ರೀತಿ, ಪ್ರೇಮವನ್ನು ಸೂಚಿಸಿದರೂ ತನ್ನೊಡಲೊಳಗೆ ಹೆಣ್ಣಿನ ಅಸಹಾಯಕತೆ, ನೋವು, ಅವಮಾನಗಳನ್ನು ಬಚ್ಚಿಟ್ಟುಕೊಂಡಿದೆ.

“ನಾನು ಬರೆಯುತ್ತೇನೆ ಕವನ 

ನನ್ನವನಿಗಾಗಿ

ಹಸುವಂತೆ ತೋರಿದ ಹುಲಿಯಂತ

ಕ್ರೌರ್ಯಕ್ಕಾಗಿ

ಆಸರೆಯಾಗ ಬೇಕಾದವನಲ್ಲಿ

ನಾ ಸೆರೆಯಾಗಿದ್ದಕ್ಕಾಗಿ  !” 

    ಇಲ್ಲಿ ಹೆಣ್ಣಿನ ತಣ್ಣನೆಯ ಪ್ರತಿಭಟನೆ ಇದೆ. ಪ್ರತಿಯೊಂದು ಹೆಣ್ಣು ನೂರಾರು ಕನಸುಗಳೊಂದಿಗೆ ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ. ಆದರೆ ತಾನು ಬಂದದ್ದು ಪ್ರೇಮಿಯ ಮನೆಗಲ್ಲ, ಗಂಡಿನ ಸೆರೆಮನೆಗೆ ಎಂದು ಅನುಭವವಾಗುತ್ತಲೇ ಕುಸಿದು ಬೀಳುತ್ತಾಳೆ.

        ಹೆತ್ತವರು.. ಹೃದಯದ ಬಂಧ. ಸಂಬಂಧಗಳ ತವರೂರು. ಆದರೆ ಅದೆಕೋ ಅಮ್ಮನ ಮಮತೆಯಲ್ಲಿ ಅಪ್ಪನನ್ನು ನಾವು ಮರೆಯುತ್ತಿರುವುದೆ ಹೆಚ್ಚು…!! ಸಮಾಜದ ಪ್ರತಿಬಿಂಬವಾದ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಯಾರಿಗೂ ಕಾಣಲಿಲ್ಲ ಶೀರ್ಷಿಕೆಯ ಕವನವು ತಾಯಿಯ ವೇದನೆಯನ್ನು ಸಾರುತ್ತ ಹೋಗುತ್ತದೆ.

” ಜಗತ್ತಿಗೆ ಒಂದು ದಾರಿಯಾದರೆ

ತನ್ನದೇ ರಾಜಮಾರ್ಗ ಎನ್ನುವ

ಒಂದೊಮ್ಮೆ ಕುಡಿತದ ನಶೆಯಲ್ಲಿ

ಮಗದೊಮ್ಮೆ ಸ್ವಯಾರ್ಜಿತ

ಭ್ರಮೆಯ ಅಮಲಿನಲ್ಲಿ

ಇದ್ದ ಅಪ್ಪನ

ಬಿಟ್ಟಂತೆ ಹಿಡಿಯುತ

ಹಿಡಿದಂತೆ ಬಿಡುತ

ಗಂಟು ನಂಟಿನಾಟದಲಿ

ಅವ್ವ ಜರ್ಜರಿತವಾದದ್ದು

ಯಾರಿಗೂ ಕಾಣಲೇ ಇಲ್ಲ” ‌

ಇಲ್ಲಿ ಅಚ್ಚೊತ್ತಿರುವ ಭಾವ ಸಮಾಜದೆಲ್ಲೆಡೆ, ಕುಟುಂಬದೆಲ್ಲೆಡೆ ಕಾಣುತ್ತೇವೆ. ಮಕ್ಕಳೊಂದಿಗಿನ ತಾಯಿಯ ನಂಟೆ ಅವಳನ್ನು ಕುಟುಂಬದಲ್ಲಿ ಇರುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣಿಗೆ ಕುಟುಂಬ ಮುಖ್ಯವಾದಷ್ಟು ಗಂಡಿಗೆ ಮುಖ್ಯವಾಗಲೇ ಇಲ್ಲ ಎಂಬುದಕ್ಕೆ ನಮ್ಮ ಸಮಾಜವೇ ಸಾಕ್ಷಿ…!!

      ಕುಟುಂಬವನ್ನು ಪ್ರೀತಿಸುವ ಶಿಲ್ಪಾ ಮ್ಯಾಗೇರಿಯವರ ಕವನ ಸಂಕಲನದಲ್ಲಿ ಹಲವು ಕವನಗಳು ಕೌಟುಂಬಿಕ ಆಪ್ತತೆಯ ಮುದವನ್ನು ನೀಡುತ್ತವೆ. ತಂದೆ, ತಾಯಿ, ಗಂಡ, ಮಕ್ಕಳು, ಗೆಳತಿ… ಎನ್ನುವ ಹಲವು ಸಂಬಂಧಗಳ ಕುರಿತು ಕವನಗಳು ಆಪ್ತ ಸಮಾಲೋಚನೆ ಮಾಡುತ್ತವೆ. ಸಂಕಲನದ ಮೊದಲ ಕವನವೇ ಅಪ್ಪ ಅಪ್ಪನ ಗುಣಗಾನ ಮಾಡುತ್ತ, ಅಪ್ಪ ನಡೆದು ಬಂದ ರೀತಿ, ಮಕ್ಕಳನ್ನು ಬೆಳೆಸಿದ ಕ್ರಮ, ಕುಟುಂಬವನ್ನು ಮುನ್ನಡೆಸಿದ ಬಗೆ… ಎಲ್ಲವೂ ಕಣ್ಣಿಗೆ ರಾಚುವಂತೆ ವರ್ಣಗಳಲ್ಲಿ ಸೆರೆ ಹಿಡಿದು ನಿಲ್ಲಿಸಿದ್ದಾರೆ. ಆದರೆ ಅಪ್ಪನ ಹೀರೋಯಿಸಂ ನ ಹಿಂದಿರುವ ನೋವು, ತೊಳಲಾಟ, ದುಗುಡಗಳು ಮರೆಯಾಗಿವೆ. ಮೌಲ್ಯಗಳ ಪಾಲನೆ ಸರಳವಾದುದಲ್ಲ. ಆ ದಾರಿಯು ಬರೀ ಕಲ್ಲು ಮುಳ್ಳುಗಳನ್ನೇ ಹೊಂದಿರುತ್ತದೆ. ಆ ಹಾದಿಯಲ್ಲಿ ಸಾಗುವಾಗಿನ ಗಾಯಕ್ಕೆ ಸಾಹಿತ್ಯ ಸಾಕ್ಷಿಯಾಗಬೇಕಿದೆ…!

” ಕಾಯಕವೇ ಕೈಲಾಸವೆಂದು.

ಎಂದೂ ಹೇಳದೆ 

ಆಚರಣೆಗೆ ತಂದವ”

    ಕಣ್ಣಿಗೆ ಕಂಡ ದೃಶ್ಯಗಳಿಗಿಂತಲೂ ಕಾಣದೇ ಇರುವ ಚಿತ್ರಣವನ್ನು ಬಿಡಿಸುವುದೆ ಕವಿ/ಕವಯಿತ್ರಿಗೊಂದು ಸವಾಲು. ಅದು ಇಲ್ಲಿ ಮರೆಯಾಗಿದೆ. ಯಾವ ಗುಣವೂ ಉದ್ಭವಮೂರ್ತಿಯಲ್ಲ. ಗುಣಗಳಿಗಿಂತ ಗುಣಗಳ ಅನುಷ್ಠಾನದ ದಾರಿಯ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆ ಇದೆ.

    ತಾಯಿ, ಮಗುವನ್ನು ಬೆಳೆಸುವ ರೀತಿ ಅನ್ಯೋನ್ಯ. ತಾಯಿಯೇ ಮೊದಲ ಗುರು. ಈ ಕಾರಣಕ್ಕಾಗಿಯೇ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅವಿಸ್ಮರಣೀಯ..

! ಈ ನೆಲೆಯಲ್ಲಿ ತಾಯಿಯ ಹರಕೆ ಕವನವು ಓದುಗರ ಗಮನವನ್ನು ಸೆಳೆಯುತ್ತದೆ. ಅವಳು ಹೇಳುವ ಬುದ್ಧಿವಾದವು ಸಾರ್ವತ್ರಿಕ ಅನಿಸುವಷ್ಟು ಆಪ್ತವಾಗಿ ಮೂಡಿಬಂದಿವೆ.

” ಹಾಲು ಕುಡಿದರೂ

ಬದುಕದ ಕಾಲವಿದು

ವಿಷದ ನಶೆಯ ಮಾಡಬೇಡ ಕಂದ

ಬದುಕಲಾಗದು

ಜಯವ ಗಳಿಸಲಾಗದು  !”

ವಾಸ್ತವ ಸಮಾಜದ ಚಿತ್ರಣದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದೆ ಈ ಕವನವು.

      ಈ ಸಂಕಲನದ ಕೊನೆಯ ಕಾವ್ಯ ಕರುಳ ಬಳ್ಳಿ ಆಪ್ತವೆನಿಸುತ್ತದೆ. ಇದು ಕವಯಿತ್ರಿ ಶಿಲ್ಪಾ ರವರ ಮಗ ಚಿ‌. ತುಷಾರ್ ಬರೆದಿರುವುದು..! ತಾಯಿ-ಮಗುವಿನ ಬಾಂಧವ್ಯ ಮನಸ್ಸಿಗೆ ಮುದ ನೀಡುತ್ತದೆ. ಇದರೊಂದಿಗೆ ವಿಶೇಷ ಗಮನ ಸೆಳೆಯುವ ಮತ್ತೊಂದು ಕಾವ್ಯವೆಂದರೆ ಎರಡು ನಕ್ಷತ್ರಗಳು ಇಲ್ಲಿ ತಂದೆಯ ಭಾವ ತನ್ನ ತಾಯಿ ಮತ್ತು ಮಗಳ ರೂಪದಲ್ಲಿ ಅನಾವರಣಗೊಂಡಿದೆ.

       ಪ್ರೀತಿ… ಜೀವನದ ಸ್ಥಾಯಿ ಭಾವ. ಸಾಹಿತ್ಯದ ಎಲ್ಲ ಪ್ರಕಾರಗಳ ಮೂಲ ಆಕರವೆ ಈ ನವಿರಾದ ಪ್ರೀತಿ. ಈ ಸಂಕಲನದಲ್ಲಿ ಹಲವು ಕವನಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ…. ವನ್ನು ಹೃದಯದ ಕ್ಯಾನ್ವಾಸ್ ನಲ್ಲಿ ಸ್ಥಿರವಾಗಿ ಎರಕಹೊಯ್ಯುವಲ್ಲಿ ಯಶಸ್ವಿಯಾಗಿವೆ.

“ನೂರೊಂದನೆಯ ನೋವು ನೀನು”

ಎನ್ನುವ ಚರಣವು ಪ್ರೀತಿಯ ಆಳ, ಹರವನ್ನು ಪ್ರತಿಬಿಂಬಿಸುತ್ತದೆ. 

“ಗೆಳೆಯ

ಎದೆ ಭಾರವಾಗಿದೆ

ನಿನ್ನ ಹೆಗಲು ಬೇಕು

ಬಿಕ್ಕಳಿಸಿ ಹಗುರಾಗಲು”

ಎನ್ನುವ ಪಂಕ್ತಿಗಳು‌ ಪ್ರೀತಿಯ ನಿವೇದನೆಯನ್ನು ಸಿಂಪಡಿಸುತ್ತವೆ. ಪ್ರೀತಿಯೊಂದಿದ್ದರೆ ಸಾಕು ಮನುಷ್ಯ ಏನನ್ನಾದರೂ ಗೆಲ್ಲಬಹುದು ಎಂಬುದನ್ನು ಸಾರುತ್ತದೆ. ‘ತುಂಬಿಕೊಂಡಿತು’, ‘ಒಲವ ಸುಳಿ’, ‘ನಾನು ನನ್ನವನು ಮತ್ತು ಚಂದ್ರ’, ‘ಆತ್ಮ ಸಖ’, ‘ನಿವೇದನೆ’, ‘ಅನುರಣನ’, ಕವನಗಳು ಮೆದುವಾದ ಪ್ರೇಮಲೋಕದಲ್ಲಿ ಓದುಗರನ್ನು ವಿಹರಿಸಲು ಪ್ರೇರೇಪಿಸುತ್ತವೆ.

“ವೀಣೆಯಂತೆ ನುಡಿಸಿಬಿಡು

ಸಪ್ತ ಸ್ವರವು ಮೇಳೈಸುವಂತೆ”

ಈ ಸಾಲುಗಳು ಪ್ರೇಮದ ನಾಕವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರೇಮ ರಾಗವನ್ನು ಮೈ ಮನಗಳಲ್ಲಿ ನುಡಿಸುತ್ತದೆ.  ಇದರೊಂದಿಗೆ ಹಲವು ಕವನಗಳು ಜೀವನ ಶ್ರದ್ಧೆಯನ್ನು ಮೂಡಿಸುತ್ತವೆ. ಈ ನೆಲೆಯಲ್ಲಿ ಹಲವು ಸಾಲುಗಳು ಬದುಕಿಗೆ ಪ್ರೇರಣೆ ನೀಡುವಂತೆ ಸಕಾರಾತ್ಮಕವಾಗಿ ಮೂಡಿ ಬಂದಿವೆ. ಕವನಗಳನ್ನು ಓದಿದಾಗ ಸುಭಾಷಿತ, ಸೂಕ್ತಿಗಳ ಅನುಭೂತಿಯನ್ನು ನೀಡುತ್ತವೆ.

“ಸುಲಭದಲ್ಲಿ ಗೆಲುವನ್ನು

ಎಂದಿಗೂ ಕೊಡಬೇಡ !

ಗೆದ್ದು ಬೀಗುವತನಕ

ಉಸಿರು ನಿಲ್ಲಿಸಬೇಡ”

“ಸಂಪೂರ್ಣ ಸೋಲಲಾರದ ಮೇಲೆ

ಪರಸ್ಪರ ಗೆಲ್ಲುವುದು ಹೇಗೆ”

“ಆಮಿಷಗಳಿಂದ

ಹೊರಗುಳಿದು

ಬದುಕು ಕಟ್ಟಿಕೊಳ್ಳುವ

ಶಕ್ತಿ ನೀಡು”  

   ಬಾಳು ಸ್ಥಾವರವಾಗಬಾರದು, ಜಂಗಮವಾಗಬೇಕು. ಆದರೆ ಬದಲಾವಣೆಯ ಬಿರುಗಾಳಿಯಲ್ಲಿ ಅಸ್ಮಿತೆಯನ್ನು ತೊರೆಯಬಾರದು. ದುರಂತವೆಂದರೆ ಇಂದು ನಾವು ಆಧುನಿಕತೆಯ ಒಡ್ಡೋಲಗದಲ್ಲಿ ನಮ್ಮ ಮೂಲವನ್ನೇ ಮರೆಯುತ್ತಿದ್ದೇವೆ. ಜಾಗತಿಕರಣದ ಜಾಲದಲ್ಲಿ ಮನುಕುಲ ಸಿಲುಕಿಕೊಂಡ ಪರಿಯನ್ನು ಧಾವಂತದ ಬದುಕು ಕವನವು ಮನಮುಟ್ಟುವಂತೆ ಅಭಿವ್ಯಕ್ತಿಸಿದೆ. ದಿನನಿತ್ಯದ ಓಡಾಟ, ಮುಖವಾಡದ ಜೀವನ, ಮಾನಸಿಕ ತಳಮಳ, ಬಿಸಿಲುಕುದುರೆ ಶಾಂತಿಗಾಗಿ ಪರದಾಟ…. ಇವೆಲ್ಲವನ್ನು ಈ ಸಾಲುಗಳು ತುಂಬಾ ಸಶಕ್ತವಾಗಿ ಹಿಡಿದಿಟ್ಟುಕೊಂಡಿವೆ.

“ಎಲ್ಲರೊಟ್ಟಾಗಿ ಕುಳಿತು ಹರಟಿದ್ದ ಕಟ್ಟೆ

ಈಗ ಖಾಲಿ ಖಾಲಿಯಾಗಿದೆ”

      ಸಾಮಾಜಿಕ ಸ್ಪಂದನೆಯ ನೆಲೆಯಲ್ಲಿ ‘ರೈತ’, ‘ಅಸ್ಪೃಶ್ಯರು’, ಕವನಗಳು ಓದಿಸಿಕೊಂಡು ಹೋಗುತ್ತವೆ.

       ಇಲ್ಲಿಯ ಕವನಗಳ ವಿಷಯ, ಭಾಷೆ ಹಾಗೂ ಶೈಲಿಯನ್ನು ಗಮನಿಸಿದಾಗ ನವೋದಯದ ವಿಷಯ, ಭಾಷೆ ಹಾಗೂ ನವ್ಯದ ಶೈಲಿಯನ್ನು ಕಾಣುತ್ತೇವೆ. ಕಾವ್ಯ ಮನೆಯಂಗಳದಿಂದ ಸಮಾಜದ ಮೂಲೆ ಮೂಲೆಗಳನ್ನು ಸ್ಪರ್ಶಿಸಿದಾಗ ಅದು ಪರಿಪೂರ್ಣ ಎನಿಸಿಕೊಳ್ಳುತ್ತದೆ. ಕಾವ್ಯವನ್ನು ಪೂರ್ವಾಗ್ರಹ ಪೀಡಿತರಾಗದೆ ಓದಿದಾಗ ಮಾತ್ರ ರಸಸ್ವಾದ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ರಸಭಂಗವಾಗುತ್ತದೆ ಎಂಬುದನ್ನು ಇಲ್ಲಿಯ ಹಲವು ಕವನಗಳು ಸಾರಿ ತೋರಿಸುತ್ತವೆ. ಈ ಮಾತು ಮೌನದ ನಡುವೆ ಕಲಾಕೃತಿಯು ಪ್ರತಿಯೊಬ್ಬ ಸಹೃದಯ ಓದುಗನ ಮೌನದೊಂದಿಗೆ ಮಾತಾಡಲಿ ಎಂದು ಹಾರೈಸುತ್ತೇನೆ.

*************************************************

ಡಾ. ಮಲ್ಲಿನಾಥ ಎಸ್. ತಳವಾರ

Leave a Reply

Back To Top