ಕವಿತೆ
ನೀವು ಎದೆಗೆ ಗುಂಡು ಹೊಡೆದರೆ
ಅಲ್ಲಾಗಿರಿರಾಜ್ ಕನಕಗಿರಿ
ನೀವು ಜಲ ಫಿರಂಗಿ
ಸಿಡಿಸಬಹುದು ನಮ್ಮ ಮೈ ಮೇಲೆ.
ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.
ಏಕೆಂದರೆ ನೀರು ನಮ್ಮ ವೈರಿಯಲ್ಲ.
ನೀವು ಲಾಠಿ ಬೂಟುಗಳಿಂದ
ದಾಳಿ ಮಾಡಬಹುದು ನಮ್ಮ ಮೈ ಮೇಲೆ.
ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,
ಪ್ರೀತಿಯೆಂದು ಭಾವಿಸುತ್ತೇವೆ.
ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ.
ನೀವು ಅಶ್ರುವಾಯು ಸಿಡಿಸಿ
ಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.
ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.
ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ.
ಆದರೆ….. ಆದರೆ
ನೀವು ದಲ್ಲಾಳಿಗಳ ಮಾತು ಕೇಳಿ, ಎದೆಗೆ ಗುಂಡು ಒಡೆದರೆ
ನೆತ್ತರು ಕುಡಿದ ನೆಲ, ಬೆಳೆದು ನಿಂತ ಬೆಳೆ
ಹೋರಾಟದ ಹಾಡು ಬರೆಯುತ್ತವೆ ಮರೆಯಬೇಡಿ.
ಏಕೆಂದರೆ…….
‘ಸರಕಾರ ರೊಕ್ಕ ಮುದ್ರಿಸಬಹುದೆ ಹೊರತು
ತುಂಡು ರೊಟ್ಟಿಯನ್ನಲ್ಲ ನೆನಪಿರಲಿ’.
******************************************
ಪ್ರಿಯ ಅಲ್ಲಾಗಿರಿರಾಜ್ ಅವರೇ,
ನಿಮ್ಮ “ನೀವು ಎದೆಗೆ ಗುಂಡು ಹೊಡೆದರೆ” ಕವನ, ನೆಟ್ಟ ನೇರವಾಗಿ ಓದಿದವರ ಎದೆಗೆ ನಾಟುವಷ್ಟು ಮೊನಚಾಗಿದೆ; ಮತ್ತು ಬಹಳ ಕಾಲ
ಅಲ್ಲೇ ಬೀಡುಬಿಡುವಂತಿದೆ. ಉತ್ತಮ ಕವನ. ಧನ್ಯವಾದಗಳು…