ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ

ಮೋಡಗಳು...

ಎಂ.ಆರ್.ಕಮಲ

ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ  ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ.

ಆಷಾಢದ ಮೋಡ ಕವಿದ ವಾತಾವರಣ ಯಾರ ಎದೆಯಲ್ಲಿ ದುಗುಡ ಮೂಡಿಸುವುದಿಲ್ಲ ಹೇಳಿ? ಮಳೆ ಸುರಿಸುವುದು ಅಷ್ಟರಲ್ಲೇ ಇದ್ದರೂ ಮೋಡಗಳು ಮಾತ್ರ ದಟ್ಟೈಸುತ್ತಲೇ ಇರುತ್ತವೆ. ಈ ಕವಿದ ಮೋಡಗಳು, ಹಗಲಲ್ಲಿಯೇ ಕಾರ್ಗತ್ತಲನ್ನು ಸೃಷ್ಟಿಸಿ ಮನಸ್ಸಿಗೆ ಮಂಕು ಕವಿಸಿಬಿಡುತ್ತವೆ. ಭೋರೆಂದು ಬೀಸುವ ಗಾಳಿ ಕ್ಷಣಾರ್ಧದಲ್ಲಿ ಎಲ್ಲವನ್ನು ಚದುರಿಸುವಂತೆ ಕಂಡರೂ ಕಪ್ಪಿಟ್ಟ ಮನಸ್ಸು ಹೊಳವಾಗುವುದಿಲ್ಲ. ಇತ್ತ ವೈಶಾಖದ ಬೇಸಗೆಯ ಧಗೆ, ಅತ್ತ ಶ್ರಾವಣದ ಸಂತಸ ಎರಡನ್ನೂ ಹೊತ್ತು ವಿಚಿತ್ರ ತಳಮಳವನ್ನು ಒಳಗೂ ಹೊರಗೂ ಸೃಷ್ಟಿಸಿಬಿಡುತ್ತದೆ.

ಹಾಡು ಹಗಲೇ ರವಿ ಕಾಣದಂತೆ ಮಾಡುವ ಶ್ರಾವಣದ ಮೋಡಗಳು ಸುರಿಸುವ ಮಳೆಯಿಂದಾಗಿ ಒಳಗೆ ತುಂಬಿದ್ದ ಕೊಳೆ ಕಶ್ಮಲಗಳು ತೊಡೆದು ಬದುಕಿಗೆಂಥ ಹುರುಪು ಹುಟ್ಟುತ್ತದೆ. ಸುತ್ತಲಿನ ಹಸಿರು, ಒಳಮನವನ್ನು ಚಿಗುರಿಸುತ್ತ ಹೋಗುತ್ತದೆ. ಶರದೃತುವಿನ ಬೆಳಗಿನ ತಿಳಿಆಗಸ ಮನಸ್ಸನ್ನು ಹಗುರಗೊಳಿಸುತ್ತ  ಹೋದರೆ, ಹೇಮಂತದ ಸಂಜೆಗಳು ನೀರವವಾಗುತ್ತ, ಒಂಟಿತನದ ನೋವನ್ನು ದ್ವಿಗುಣಗೊಳಿಸುತ್ತದೆ. ಎಲೆ ಕಳಚುವಂತೆ ಮಾಡುವ ಶಿಶಿರನ ಹೆಜ್ಜೆಗಳು ಬದುಕಿನ ನಶ್ವರತೆಯನ್ನು ಎದೆಗೆ ತುಂಬಿ ಕಳವಳ ಹುಟ್ಟಿಸುತ್ತವೆ..

ಹೀಗಾಗಿಯೇ ಹವಾಮಾನಕ್ಕೆ ಅನುಗುಣವಾಗಿಯೇ ಹೆಚ್ಚಿನವರ ಸ್ವಭಾವಗಳು ರೂಪುಗೊಂಡಿರುತ್ತವೇನೋ ಎನ್ನುವ ಭಾವ ಮೂಡುವುದು. ಅದು ಹೆಚ್ಚಿನಂಶ ನಿಜವೂ ಹೌದು. ತಣ್ಣಗಿನ ಯೂರೋಪಿಯನ್ನರಿಗೂ ಕುಣಿತವೇ ಮೈವೆತ್ತ ಆಫ್ರಿಕನ್ನರಿಗೂ ಮತ್ತು ಮಲೆನಾಡಿನ ಜನಗಳ ಸೌಮ್ಯ ಸ್ವಭಾವಕ್ಕೂ ಬಯಲು ಸೀಮೆಯ ಜನರ ಉರಿಮಾರಿತನಕ್ಕೂ ಇರುವ ವ್ಯತ್ಯಾಸ ಗಮನಿಸಿದರೆ ಹೆಚ್ಚು ಅರ್ಥವಾಗುತ್ತದೆ. ಆದರಿದು ವಿಷಯದ ಹೊರಮೈ. ಅಂತರಂಗದಲ್ಲಿ ಎಲ್ಲರೂ ಕೊನೆಗೆ ಮನುಷ್ಯರೇ. ಮನುಷ್ಯನಿಗಿರುವ ಸ್ವಾರ್ಥ, ಕ್ರೌರ್ಯ, ಒಳ್ಳೆಯತನ ಇತ್ಯಾದಿಗಳು ಉಷ್ಣ, ಶೀತ, ಸಮಶೀತೋಷ್ಣ ಹೀಗೆ ಯಾವ ವಲಯದಲ್ಲಿದ್ದರೂ ಇದ್ದೇ  ಇರುತ್ತವೆ.

ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಂತೆ ನಮ್ಮ ಪ್ರತಿಕ್ರಿಯೆ ಇರುವುದು ಕೂಡ ‘Danger of a single story ‘ ಅನ್ನಿಸುತ್ತದೆ. ಮನುಷ್ಯನ ಮನಸ್ಸು ಇವೆಲ್ಲವನ್ನೂ ಮೀರಿ ವರ್ತಿಸುವುದುಂಟು. ನಾನು ಓದಿದ ಪುತಿನ ಅವರ ಒಂದು ಕವಿತೆ ನನಗಿದಕ್ಕೆ ಸಮರ್ಥನೆ ಒದಗಿಸಿತು. ಅದೊಂದು ಶರದೃತುವಿನ ಬೆಳಗು. ಬಾನು ತಿಳಿಯಾಗಿದೆ. ಬಿಳಿಮುಗಿಲಿನ ದೋಣಿ ಆಕಾಶದಲ್ಲಿ ವಿಹಾರಕ್ಕೆ ಹೊರಟಿದೆ. ಕೊಳದ, ಬಯಲ, ಬೆಟ್ಟದ ಮೇಲೆಲ್ಲ ಬೆಚ್ಚನೆಯ ಕಿರುಬಿಸಿಲು ಒರಗಿಕೊಂಡಿದೆ. ಹಸಿರಿನ ಮೇಲಿರುವ ಹಿಮಮಣಿಗಳು ಮುತ್ತಿನ ಬಾಣಗಳನ್ನು ದಿಕ್ಕುದಿಕ್ಕಿಗೂ ಎಸೆದಿವೆ. ಆ ಶರದೃತುವಿನ ಹಗಲಲ್ಲಿ ಚೆಲುವಿದೆ, ಕಳೆಯಿದೆ, ಬಿಡುವಿದೆ. ಎಲೆಯ ಮೇಲುರುಳುತ್ತ , ಮುತ್ತಿನ ಕಂಠಿಯ ಕಮಲಕ್ಕೆ ಕಿರುದೆರೆಗಳು ಹಾರವನ್ನು ಹಾಕಿವೆ. ತಣ್ಣಗೆ ನುಣ್ಣಗೆ ಗಾಳಿ ನುಸುಳಿ ಬಳ್ಳಿಗೆ ಕಚಗುಳಿಯನ್ನು ನೀಡುತ್ತಿದೆ. ಪೆದರಿನಲ್ಲಿ, ಮೆಳೆಯಲ್ಲಿ, ವನದಲ್ಲಿ ಹಕ್ಕಿಯು ಹಾಡನ್ನು ಹರಡುತ್ತಿದೆ. ಅಂತ ಶರದದ ಹಗಲಲ್ಲಿ ಒಲವಿದೆ, ಗೆಲುವಿದೆ, ನಲವಿದೆ.

ಆದರೆ ಕವಿಯ ಮನಸ್ಸು ಮಾತ್ರ ಒಲವಿನ ಪೂರ್ಣತೆಯನ್ನು ಅರಸುವ ದುಂಬಿಯಂತಿದೆ. ಚಿಂತೆಯ ಕಪ್ಪುಮೋಡದಲ್ಲಿ ಬೆಳಕನ್ನು ಕಾಣಲು ತವಕಿಸುತ್ತಿದೆ. ಬಾಳಿನ ಕನಸುಗಳಿಗೂ ಮತ್ತು ನನಸುಗಳಿಗೂ ಇರುವ ಅಪಾರ ಅಂತರವನ್ನು ನೆನೆದು ಉಲ್ಲಾಸ ಕುಗ್ಗಿ ಹೋಗುತ್ತಿದೆ. ಶರದೃತುವಿನ ಗೆಲುವಿನ ಹಗಲಲ್ಲಿ ನಲವಿನ ಸಂದೇಶವಿದ್ದರೆ ವಿಚಿತ್ರ ಎನ್ನುವಂತೆ ಬಾಳಿನ ನಲವನ್ನು ನೀಡುತ್ತಿರುವ ಸಂದೇಶವೇ ಮನಸ್ಸನ್ನು ಕುಗ್ಗಿಸುತ್ತಿದೆ.ಪೂರ್ಣತೆಯನ್ನು ಅರಸುತ್ತ ನವೆಯುವವರ ಕತೆಯೆಲ್ಲ ಹೀಗೆಯೋ ಏನೋ. ಯಾವುದನ್ನು ಕಂಡರೂ ಅಲ್ಲೊಂದು ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ಸಂಪೂರ್ಣವಾಗಿ ಯಾವುದರಲ್ಲೂ ತೊಡಗಿಕೊಳ್ಳಲಾಗದ, ಮತ್ತೇನನ್ನೋ ಬಯಸುವ ಮನಸ್ಸದು. ಅದಕ್ಕೆ ಹೊರಗಿನ ಚಳಿ, ಗಾಳಿ, ಮಳೆ ಯಾವುದೂ ಪರಿಣಾಮ ಬೀರಲಾರದು. ಋತುಮಾನಗಳನ್ನು ಧಿಕ್ಕರಿಸಿ ಏನನ್ನೋ ಅರಸಿ ಹಿಮಾಲಯದ ಗುಹೆಯೊಳಗೆ ತಪಸ್ಸಿಗೆ ಕೂರುವವರ ಮನಃಸ್ಥಿತಿಯದು.

ನಮಗೆಲ್ಲ ಅನೇಕ ಬಾರಿ ಹೀಗಾಗುತ್ತದೆ. ಎಲ್ಲರೂ ಹೊಗಳುವ, ನಾಟಕಕ್ಕೋ, ಚಲನಚಿತ್ರಕ್ಕೋ, ನೃತ್ಯಕ್ಕೋ ಹೋಗುತ್ತೇವೆ. ಸುತ್ತಲಿನವರು ಖುಷಿಯಿಂದ ಕುಣಿಯುತ್ತಿರುತ್ತಾರೆ. ನಮಗೆ  ಆ ದೃಶ್ಯ ಖುಷಿ ಕೊಟ್ಟಿರುವುದೇ ಇಲ್ಲ. ಸುತ್ತಲಿನವರು ನಗುತ್ತಿರುತ್ತಾರೆ. ನಾವು ಬೆಪ್ಪರಂತೆ ಸುಮ್ಮನೆ ಕುಳಿತಿರುತ್ತೇವೆ. ಯಾವುದೋ ವಿಷಯವನ್ನು ಗಹನವೆಂದು ಮಾತಾಡುತ್ತಿರುತ್ತಾರೆ. ನಮಗಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನಮಗೂ ಏನೇನೂ ಸಂಬಂಧವಿಲ್ಲದವರಂತೆ ಇದ್ದುಬಿಡುತ್ತೇವೆ. ಅನೇಕ ಬಾರಿ ವಿದ್ಯಾರ್ಥಿಗಳ ಜೊತೆ ಪ್ರವಾಸ ಹೋದಾಗ ನನಗೆ ಈ ಅನುಭವವಾಗಿದೆ. ಅವರ ಉನ್ಮತ್ತ, ಖುಷಿಯ, ಕುಣಿವ ವಾತಾವರಣಕ್ಕೂ ನನಗೂ ಸಂಬಂಧವಿಲ್ಲವೇನೋ ಎನ್ನುವಂತೆ, ಆ ಜಗತ್ತಿನಿಂದ ನನ್ನನ್ನು ಬೇರೆ ಎಲ್ಲೋ ಇಟ್ಟಂತೆ ಭಾಸವಾಗಿರುತ್ತದೆ. ಆದರದನ್ನು ತೋರ್ಪಡಿಸಿಕೊಳ್ಳಲಾಗಿಲ್ಲ. ಹಾಗೆ ಮಾಡಿದರೆ ಬೇರೊಬ್ಬರ ಸಂತೋಷವನ್ನು ಹಾಳು ಮಾಡಿದಂತಾಗಿಬಿಡುತ್ತದಲ್ಲ. ವಸಂತ ಋತುವಿನಲ್ಲಿ ಶಿಶಿರ ಗಾನ ಹಾಡಿದಂತಾಗುವುದಲ್ಲ! ಈ ರೀತಿ ನರಳುವುದರಲ್ಲೂ ಮನುಷ್ಯನಿಗೆ ಎಂಥದ್ದೋ ಖುಷಿಯಿರಬೇಕು! ಇಲ್ಲದಿದ್ದರೆ ಹಾಗೇಕೆ ವರ್ತಿಸುತ್ತಾನೆ ಎಂದುಕೊಂಡದ್ದಿದೆ.

ಈ ಕಾರಣಕ್ಕಾಗಿಯೇ ಯಾವುದೇ ಬೀಸು ಹೇಳಿಕೆಗಳನ್ನು ಯಾವ ವಿಷಯದ ಬಗ್ಗೆಯೂ ಒಪ್ಪಲಾಗುವುದೇ ಇಲ್ಲ. ಪ್ರತಿಯೊಂದು ವಿಷಯಕ್ಕೆ ಅನೇಕ ಮುಖಗಳಿವೆ, ಸತ್ಯಗಳಿವೆ. ಒಬ್ಬರಿಗೆ ಅನುಭವಕ್ಕೆ ಬಂದದ್ದು ಮತ್ತೊಬ್ಬರಿಗೆ ಬರುವುದೇ ಇಲ್ಲ. ಬಂದರೂ ಉಳಿದವರಿಗೆ ಅರ್ಥವಾಗುವುದೇ ಇಲ್ಲ. ಆಷಾಢದಲ್ಲಿ ಮೋಡಗಳ ದುಗುಡ ಹೆಚ್ಚಿದಂತೆ ಎಲ್ಲರೂ ದುಗುಡಗೊಳ್ಳುತ್ತಾರೆ ಎನ್ನುವುದು ಕೂಡ ಮೂರ್ಖತನ. ಈ ಕಪ್ಪು ಮೋಡಗಳನ್ನು ಸೀಳಿದ ಬೆಳಕಿನ ಗೆರೆಗಳು ಎಲ್ಲೆಲ್ಲೋ ಕುಣಿಯುತ್ತಿರಬಹುದು!

……

(ಕೊಳದ ಮೇಲಿನ ಗಾಳಿ ಪುಸ್ತಕದಿಂದ..ಆಯ್ದ ಬರಹ)

*****************************************

Leave a Reply

Back To Top