ಲಹರಿ
ಭಾವಲಹರಿ
ರಶ್ಮಿ.ಎಸ್.
ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು…
……………………………..
ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು.
ಮೊಮ್ಮ ಇಲ್ಲ..! ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು.
ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು. ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ ಬೀದರ್‌ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್‌ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್‌ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ.
ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್‌ಗನ್ ಹಿಡಿದು ಎನ್‌ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್‌ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು.
ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ.
ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ‍್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್‌ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್‌ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು.
ಫಿರೋಜ್‌ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು.
ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ. ಪ್ರತಿ ಹಬ್ಬಕ್ಕೆ ರಂಜಾನ್‌ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು.
ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು.
ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು.
ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ.
ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್ ಮೇಲಿತ್ತು.
ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ‍್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ…
ಆಮೇನ್…!
***********************************************
ಮೊಮ್ಮನಂತವರು ಮತ್ತೆ ಮತ್ತೆ ಹುಟ್ಟಲಿ ಈ ನೆಲದಲ್ಲಿ, ನೆರೆ ಹೊರೆಯಲ್ಲಿ. ಮತ್ತವರ ಮನೆ ಪಕ್ಕ ನಿಮ್ಮಂತವರು ಇರಲಿ . ಅದ್ಭುತ ನೆನಪನ್ನು ತುಂಬಾ ಆಪ್ತವಾಗಿ ಹಂಚ್ಕೊಂಡಿರುವಿರಿ madam . ಮೊಮ್ಮನ ಮತ್ತೊಂದಿಷ್ಟು ನೆನಪಿಗಾಗಿ ನಾವು ಕಾಯಬಹುದೇ ಮುಂದೆ?
ಕನ್ನಡದ ಬರಹ ಲೋಕಕ್ಕೆ ಅದ್ಭುತ ಸೌಹಾರ್ದತೆಯ ,ಬಾಲ್ಯದ ನೆನಪೊಂದು ಕಟ್ಟಿಕೊಟ್ಟಿದ್ದೀರಿ. ಸೊಗಸಾದ ಹಾಗೂ ವರ್ತಮಾನವನ್ನು ಎಚ್ಚರಿಸುವ ಬರಹ