ಕಾಗೆ…

ಲೇಖನ

ಕಾಗೆ…

ಡಾ. ಅರಕಲಗೂಡು ನೀಲಕಂಠ ಮೂರ್ತಿ

The crows on the fence. Three crows on the metal fence stock image

ನಾನೊಂದು ಕಾಗೆ, ನಿಜ. ಅಪ್ಪಟ ಕಪ್ಪು, ನಿಜ. ನನ್ನ ‘ಮಧುರ’ ಧ್ವನಿ ನಿಮಗೆ ಕರ್ಕಷ! ಬಹುಶಃ ಅದೂ ಕೂಡ ನಿಜ! (ನಿಮ್ಮದೇ ಕಣ್ಣು ಕಾಣುವ ಕೋನದಿಂದ ಮಾತ್ರ).

ನಿಮ್ಮ ಹಾಗೆ ನಮ್ಮ ಪಕ್ಷಿ ಲೋಕದ ಲ್ಲಿ, ಕಪ್ಪು ಅಂದಾಕ್ಷಣ ಅಸಹ್ಯವಿಲ್ಲ. ನಿಮ್ಮಲ್ಲೋ ಎಂಥೆಂತಹ ಅಸಹ್ಯ ಭಾವನೆಗಳಿಲ್ಲ ಹೇಳಿ – ಒಬ್ಬನನ್ನೊಬ್ಬ  ಕಂಡಾಗ ನಿಮ್ಮ ನಿಮ್ಮ ನಡುವೆ!  ನಾವು ವೈವಿಧ್ಯಮಯ ಜಗತ್ತನ್ನು ನಮ್ಮ ಉಗಮದಿಂದಲೇ ಗೌರವದಿಂದ ಭಾವಿಸಿಕೊಂಡು ಬಂದವರು; ಇಂದಿಗೂ ಹಾಗೇ, ಸ್ವಲ್ಪವೂ ಲೋಪವಿಲ್ಲದ ಹಾಗೆ  ಗೌರವಿಸುವವರು! ಯಾವ ಹಕ್ಕಿಯೂ ಇತರರ ಬಣ್ಣದ ಬಗ್ಗೆ,

ಬಾಳಿನ  ಬಗ್ಗೆ, ಧ್ವನಿಯ ಬಗ್ಗೆ,  ನಿಮ್ಮನಿಮ್ಮಲ್ಲೇ ನೀವು ಮೂಗು ಮುರಿಯುವ ಹಾಗೆ, ನಾವು ನಮ್ಮ ನಮ್ಮ ಕೊಕ್ಕು ಮುರಿದವರಲ್ಲ ಎಂದೆಂದೂ,  ಮುಂದೂ ಕೂಡ. ಕಾಗೆ ದೂರವಿರು ಎಂದು ಕೋಗಿಲೆಯಾಗಲೀ, ಮುದ್ದು ಗಿಣಿಯಾಗಲೀ ಅಥವಾ ಇನ್ನೊಂದು ಪಕ್ಷಿಯಾಗಲೀ ಎಂದೂ ಕೂಗಿದ್ದು, ರಂಪ ಮಾಡಿದ್ದು ಕಂಡಿಲ್ಲ!

ನೀವೋ  ‘ಓದು-ಬರೆಹ’ ಅನ್ನುವುದನ್ನು ತಿಳಿಯದವರೂ ಅಲ್ಲ  – ನಮ್ಮ ಹಾಗೆ (ಹಾರುವ ಹಕ್ಕಿಗೆ ಎಲ್ಲಿಯ, ಅದೆಂಥ ಓದು, ಎಂತಹ ಶಾಲೆ – ಹಾರುವ ಪಾಠ ಅಲ್ಲದೆ)! ಬಹಳ ತಿಳಿದವರೂ ಸಹ, ಹೌದಲ್ಲವೇ; ಬುದ್ಧಿ ಇರುವವರು. ವಾಸ್ತವವಾಗಿ ವಿಪರೀತ ಬುದ್ಧಿ ಇರುವವರು. ಬಹುಶಃ ವಿನಾಶೀ  ಬುದ್ಧಿ ಇರುವವರೂ, ಹೌದು…

ನೀವು ಎಂತಹವರೇ ಆದರೂ ಕೂಡ, ನೀವು ಸತ್ತು ಬಿದ್ದಾಗ, ನಿಮ್ಮ ಬಾಯಿಂದ ನಮ್ಮದೇ ಸ್ತುತಿ! ನಾವೇ ದೇವರೋ ಎಂಬಂತೆ, ಕಾಗೆಗಳದ್ದೇ ಜಪ…ನಿಜ ಅಲ್ಲವೇ; ನೀವೇ ಕೊಟ್ಟು ಕೂರಿಸಿದ್ದೀರಲ್ಲವೇ, ನಮಗೆ ಶನಿ ಮಹಾತ್ಮನ ವಾಹನದ ಪಟ್ಟ! ಮತ್ತೆ, ಭಯವಲ್ಲವೇ…

ಆಹಾ…ಅದೇನು ಬಾಯಿ ಬಿಡುವಿರೋ; ನಮಗಾಗಿ ಕಾಯುತ್ತ, ಕಾಯತ್ತ ಕೂರುವಿರೋ, ನಿಮಗೇ ಪ್ರೀತಿ…

ಅಷ್ಟೇ ಅಲ್ಲ! ನೀವು ಹರಿಶ್ಚಂದ್ರನಂಥ  ಮಹಾತ್ಮನನ್ನೇ ಬಿಟ್ಟಿಲ್ಲ. ಅವನನ್ನೂ ಕೂಡ ‘ಸ್ಮಶಾನ’ದ ‘ವಾಚ್ಮನ್’ ಕೆಲಸಕ್ಕೆ ಅಂತ ಇಟ್ಟಿಬಿಟ್ಟಿದ್ದೀರಲ್ಲವೇ! ಅಲ್ಲದೆ, ಅದೇ ಸ್ಥಳದಲ್ಲಿ ನಾವು ಕೂಡ ಅತಿಥಿಗಳು, ನಿಮ್ಮವರು ಸತ್ತುಬಿದ್ದಾಗ…ನಮಗೆ ಕೂಳು, ಹರಿಶ್ಚಂದ್ರನಿಗೆ ಕೈತುಂಬಾ ಕಾಯಕ! ಎಂಥ ಭಾಗ್ಯ…

ಹೌದು, ನಾವು ಅಕಸ್ಮಾತ್, ನೀವು ಭಯದಿಂದ ನೀಡುವ ‘ಕೂಳು’ ತಿನ್ನದೇ ಹಾಗೆಯೇ ಮೂಸಿ ಹಾರಿಹೋದರೆ, ನಿಮ್ಮ ನಿಮ್ಮಲ್ಲೇ ಆ  ಸಂದರ್ಭದಲ್ಲಿ ಎಂಥೆಂಥಾ ಚಿಂತೆಗಳು ಆರಂಭವಾಗಿ ಎಷ್ಟು ಹಿಂಸೆ ಅಲ್ಲವೇ. ಎಲ್ಲ ಪಾಪಗಳು, ಪ್ರಾಯಶ್ಚಿತ್ತಗಳು ಒಟ್ಟೊಟ್ಟಿಗೆ ಕಾಣುತ್ತವೆ! ನಮ್ಮ ಪ್ರಾಣಿ ಪಕ್ಷಿಗಳು ಸತ್ತರೆ, ನಮಗೆ ಅಂಥ ಯಾವ ಚಿಂತೆಯೂ ಇಲ್ಲ; ಬದಲಿಗೆ, ರಣಹದ್ದಿಗೆ ಅಹಾರವಾಗಿ ‘ಪುಣ್ಯ’ ಪಡೆಯುತ್ತೇವೆ!

ಅಂತಹ ಸಂದರ್ಭದಲ್ಲಿ, ನಾವು ನಿಮ್ಮ ಕೂಳು ತಿನ್ನದ ಹೊತ್ತಿನಲ್ಲಿ, ಸತ್ತವರ ಗತಿ! ಸ್ವರ್ಗವಂತೂ ಖಂಡಿತ ಇಲ್ಲ; ಹಾಗಾದರೆ, ನರಕವೋ ಅಥವಾ ತ್ರಿಶಂಕುವೋ, ಇನ್ನೆಲ್ಲೋ ಎಂಬ ಜಿಜ್ಞಾಸೆ, ಅಲ್ಲವೇ? ಅಲ್ಲ ರೀ, ನೀವೇ ಇಲ್ಲದೆ, ಜಡವಾಗಿ, ಉಸಿರೇ ನಿಂತು, ಇನ್ನೇನು ಹಾಗೇ ಬಿಟ್ಟರೆ ಗಬ್ಬು ನಾತ ಅನ್ನುವ ಪರಿಸ್ಥಿತಿ ಯಲ್ಲೂ, ಅಯ್ಯೋ, ಇನ್ನೇನು ಗತಿಯೋ ಅನ್ನುವ ಹಾಸ್ಯಾಸ್ಪದ ಚಿಂತನೆ…

ಅದಿರಲಿ ಈ ರೀತಿಯ ಯೋಚನೆ, ಹೊರಟು ಹೋದವರ ಮುಂದಿನ ಗತಿಯ ಬಗ್ಗೆಯೋ ಅಥವ ಹೋದವರು ಬಂದು ಇರುವವರಿಗೆ ಪೀಡನೆ ಉಂಟು ಮಾಡಿ, ಅವರ ಬಾಳನ್ನೇ ನರಕಕ್ಕೆ ನೂಕಿಬಿಡುವರು ಎಂಬ ಗಾಢ ನಂಬಿಕೆಯ, ಸ್ವಾರ್ಥವೋ…!

ಎಂಥಹವರಯ್ಯ ನೀವು, ಮನುಷ್ಯರು, ಯಾವ ಪ್ರಾಣಿಪಕ್ಷಿ ಬೇಕಾದರೂ ತಿಂದು ತೇಗಿಬಿಡುವವರು, ಅಥವ ಅವುಗಳ ಇರುವನ್ನೇ ಇಲ್ಲವಾಗಿಸಿ ಧೂಳೀಪಟ ಮಾಡುವವರು; ಈಗಾಗಲೇ ಅರ್ಧಂಬರ್ದಕ್ಕೂ ಮಿಗಿಲಾಗಿ ನಾಶ ಮಾಡಿರುವವರು, ಒಂದು ಯಕಃಶ್ಚಿತ್ ಕಾಗೆಗಾಗಿ ಬಾಯಿಬಿಡುತ್ತೀರಿ ನಿಮ್ಮ ಸಾವಿನ ಸಮಯದಲ್ಲಿ! ಮತ್ತು, ಅದೇ ಕಾಗೆ ಅಂದರೆ ದೂರವೋ ದೂರ ಇದ್ದುಬಿಡುವಿರಿ, ಹೆದರಿ! ಶನಿದೇವರ ವಾಹನವೆಂದೋ; ಅಥವ ಶನಿಯೇ ನಿಮ್ಮ ಹೆಗಲೇರಿಬಿಡುವನೋ ಎಂಬಂತೆ; ಅಥವಾ ನೀವೂ ಸತ್ತೇಹೋಗುವ ಭಯವೋ. ಎಲ್ಲಿ, ಈ ಕರಿಕಾಗೆಯ ಕಪ್ಪು ಶಾಪ ಕೂಡ  ಹೆಗಲೇರುವುದೋ ಎಂಬ ಭಯವೋ? ಇರಬಹುದು, ಅದಕ್ಕಾಗಿಯೇ ಅಲ್ಲವೇ, ನೀವು ಕಾಗೆಗಳನ್ನೇ ತಿನ್ನದೇ ಇನ್ನೂ ಉಳಿಸಿರುವುದು!

ಎಲೈ, ಜ್ಞಾನ-ವಿಜ್ಞಾನಗಳೆಲ್ಲದರ ಪ್ರಭೃತಿಗಳಾಗಿರುವ ಮಾನವರೇ, ಇಂತಹ ಅನನ್ಯ ತಿಳಿವು ತುಂಬಿರುವ ತಲೆಯಲ್ಲಿ ಮತ್ತು ನಿಮ್ಮೆದೆಯಲ್ಲಿ ಒಂದೇ ಒಂದಿಷ್ಟಾದರೂ ಕರುಣೆ ಬೇಡವೇ–ಪ್ರಾಣಿ ಪಕ್ಷಿಗಳ ಬಗ್ಗೆ! ಕೇವಲ ಸ್ವಾರ್ಥಕ್ಕೆ ಮಾತ್ರ  ಅವುಗಳ ಉಪಯೋಗವೇ? ನಿಮ್ಮ ಮೃಗಾಲಯಗಳು ಕೂಡ ಅದೇ ರೀತಿಯ ಮೋಜಿನ ಸ್ವಾರ್ಥಕ್ಕಾಗಿ ಅಲ್ಲವೇ…

ಹಾಗಂತ, ನೀವು ಪ್ರಪ್ರಥಮ ಬಾರಿಗೆ ಈ ಭುವಿಯ ಮೇಲೆ ಜೀವ ತಳೆದು, ನಿಮ್ಮ ನಿಮ್ಮ ಸಂತಾನವನ್ನೇ ಬೆಳೆಯತೊಡಗಿದಾಗ, ಈ ಜಗದೊಳು ಇದ್ದ ಪ್ರಾಣಿ ಪಕ್ಷಿಗಳ ಸಂಖ್ಯೆಯಾದರೂ ಎಷ್ಟೆಂದು ನಿಮಗೆ ಅರಿವಿಲ್ಲದೆ ಇಲ್ಲ ಅಲ್ಲವೇ? ಇದೆ, ಹೌದು ತಾನೆ? ಅಂದಮೇಲೆ ನಿಮಗೇ ತಿಳಿದಿರಬೇಕಲ್ಲವೇ “ಈ ಜಗದ ನೆಲದಮೇಲೆ ನೀವು ಫ್ರಥಮರೋ ಅಥವಾ ನಾವೋ…!”

ನಮ್ಮ ಪಕ್ಷಿಗಳ ಸಮಾಚಾರ ಬಂದಾಗ, ಹ್ಞಾ, ಇನ್ನೊಂದು ಮುಖ್ಯ ವಿಷಯ! ನೀವು ನಿಮ್ಮ ‘ಬೆಳೆ’ಯನ್ನೇ  ವೃದ್ಧಿಪಡಿಸುವ ಕ್ರಾಂತಿಯಲ್ಲಿ, ಇಡೀ ಭೂಮಿಯನ್ನೇ ಒಂದಿಷ್ಟೂ ಜಾಗವಿರದ ಹಾಗೆ ತುಂಬಿಕೊಂಡರೂ ಕೂಡ, ನಮಗೇನೂ ಚಿಟಕಿಯಷ್ಟೂ ಚಿಂತೆಯಿರದು! ಆಗಲೂ ನೀವೇ ನೋಡುವಿರಿ: ನಮಗೆ ದಷ್ಟ ಪುಷ್ಟ ವೃಕ್ಷಗಳಿರುತ್ತವೆ ಗೂಡು ಕಟ್ಟಲು, ಅನಂತ ನೀಲಿ ನಭವಿರುತ್ತದೆ ಸ್ವಚ್ಛಂದದ ಹಾರಾಡಲು ಮತ್ತು ನಿರಂಬಳ ಉಸಿರಾಡಲು…ಆದರೆ..

.

ನಿಮ್ಮ ಮುಂದಿನ ವಂಶಜರು ಈ ವಸುಂಧರೆಯ ಹವಾಮಾನದಲ್ಲಿ ಏರುಪೇರಾಗದ ಹಾಗೆ, ಇನ್ನೂ ಒಂದಿಷ್ಟು ಗಾಳಿ ಮುಂತಾಗಿ ಉಳಿಸಿದ್ದರೆ…ಮಾತ್ರ!

ನಿಮ್ಮ ನಭೋಮಂಡಲವನೆ ಭೇದಿಸಿರುವ ತಿಳಿವಿಗೆ, ಕ್ಷುಲ್ಲಕ ಕಾಗೆ- ಯಂತಹ, ಕಗ್ಗತ್ತಲೆಯಲೂ ಕಾಣದ ಈ ಕರಿಜೀವಿಯ ಇಷ್ಟು ಸಣ್ಣ ಅಹವಾಲು ಸಾಕಲ್ಲವೇ, ಗ್ರಹಿಕೆಗೆ: ನೀವು ಪೂಜಿಸುವ ಭಗವಂತನ ಅನುಗ್ರಹದಿಂದಲಾದರೂ, ಭಾರವಾಗುವತ್ತ ನಡೆದಿರುವ ಈ ಭುವನದಲ್ಲಿ, ನಮ್ಮಂತಹ ಪ್ರಾಣಿ ಪಕ್ಷಿಗಳಿಗಾಗಿ ಕಿಂಚಿತ್ತಾದರೂ ಇರಲಿ ಜಾಗ…ಮತ್ತು ಕರುಣೆ…

**********************************************************

.

2 thoughts on “ಕಾಗೆ…

Leave a Reply

Back To Top