ಕನಸುಗಳ ದೊಂಬರಾಟ

ಕವಿತೆ

ಕನಸುಗಳ ದೊಂಬರಾಟ

ಸುಮನಸ್ವಿನಿ. ಎಂ

Free authentic dreams photo on Reshot

ನೀ ಮರಳುವೆಯೆಂಬ
ಪವಾಡವೊಂದು ಘಟಿಸಿಯೇ
ತೀರುತ್ತದೆಂದು ನನ್ನ ನಂಬಿಸಲು
ಹರಸಾಹಸ ಪಡುವ
ಕನಸುಗಳ ದೊಂಬರಾಟಕ್ಕೆ
ನಕ್ಕುಬಿಡುತ್ತೇನೆ ಈಗೀಗ..
ಹೊರಳಿ ನೋಡಿದರೂ ಸಹ
ಕಾಣದಷ್ಟು ದೂರದಲ್ಲಿ ನೀ
ನನ್ನಿರಿಸಿಬಿಟ್ಟಿರುವುದರಿಂದ!

ದಿನಕ್ಕೆರಡು ಬಾರಿಯಾದರೂ
ಕಣ್ತುಂಬಿ ತುಳುಕಿ ಉರುಳಿ
ಹೋಗಲು ನಿನ್ನ ನೆನಪುಗಳು
ನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..
ಎದೆಯೊಳಗೆ ಹನಿಯೊಡೆದು
ಹರಡಿಕೊಂಡಂತೆಲ್ಲಾ ಜಾಗ
ಸಾಲದಾದಾಗ, ಪಾಪ!
ಅಮಾಯಕ ನೆನಪುಗಳು
ತಾನೇ ಏನು ಮಾಡಿಯಾವು?

ಏಳುಸಮುದ್ರಗಳಾಚೆಗಿನ
ಏಳುಸುತ್ತಿನ ಏಕಾಂತ ಕೋಟೆಯ
ತುತ್ತತುದಿಯ ಕೋಣೆಗೂ ನುಗ್ಗಿ
‘ರಾಜ’ಕುಮಾರನೊಬ್ಬ ಬರುತ್ತಾನೆಂಬ
ನಿರೀಕ್ಷೆಯ ಅದಮ್ಯ ನಂಬಿಕೆಗೆ
ಬೆರಗಾಗುತ್ತೇನೆ ಬಹಳವೇ,
ಮುಗಿದ ದಾರಿಯ ಕಡೆಯಲ್ಲೊಂದು
ಹೊಸ ತಿರುವು ಸೃಷ್ಟಿಯಾಗುವ
ಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ!

*************************************

Leave a Reply

Back To Top