ಆಧುನಿಕ ವಚನಗಳು

ಆಧುನಿಕ ವಚನಗಳು

ರತ್ನಾ ಕಾಳೇಗೌಡ

Pearls. A background of White pearls stock images

ಅರಮನೆಯ ರಾಜನಾದರೇನು?
ಬಡವ ಭಿಕ್ಷುಕನಾದರೇನು?
ಇಬ್ಬರಿಗೂ ಒಂದೇ ರೀತಿಯ ಹಸಿವು
ಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದು
ಅರಮನೆಯಲ್ಲಿ ಮಲಗುವುದಕ್ಕೆ ಮಂಚ
ಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇ
ಮಂಚ:
ಇಬ್ಬರೂ ಮಾಡುವುದು ನಿದ್ದೆ ಎಂಬುದ
ತಿಳಿದು ಬಾಳಯ್ಯ — ರತ್ನದೀಪ

ನಿರ್ಗತಿಕ ಮಾಡಿ ಬಂಧುಗಳ ಮನೆಗೆ
ಹೋದಾಗ ಗುರುತಿಲ್ಲದವರಂತೆ ಮುಖ
ತಿರುಗಿಸಿಕೊಂಡು ಸೋದರತ್ತೆ
ಧನಿಕಳೆಂದು ತಿಳಿದಾಗ ಮುಗಿ ಬಿದ್ದು
ಬಂದಿರಯ್ಯ
ಎತ್ತೆತ್ತಲೂ ನನ್ನದೆ ಗುಣಗಾನ
ಮಾಡುತಿಹರಯ್ಯ
ಗುಣ ನಡೆ ನುಡಿಯಿಂದಲೇ ಸಮಾಜದಲ್ಲಿ
ಸ್ಥಾನ ಮಾನ ದೊರೆಯುವುದೆಂದು
ತಿಳಿಯರಯ್ಯ
ಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆ
ಬೆಲೆ ಕೊಡುವ ದಾನ ದಾಹಿಗಳನು ಮನೆಗೆ
ಹೇಗೆ ಸೇರಿಸಲಯ್ಯ –ರತ್ನದೀಪ

ಗಜನ ಮಣಿಸಿ ದಂತ ಪಡೆಯಬಹುದು
ವ್ಯಾಘ್ರನ ಒಲಿಸಿ ಉಗುರು ಹಲ್ಲು
ಪಡೆಯಬಹುದು
ಮೊಸಳೆಯ ಮರ್ದಿಸಿ ಪಾರಾಗಬಹುದು
ಉರುಗ ಕಚ್ಚಿದರೆ ಬದುಕಿಸಬಹುದು
ನೆರೆ ಉಕ್ಕಿದರೆ ಈಜಿ ದಡ ಸೇರಬಹುದು
ಮನೆಗೆ ಬೆಂಕಿ ಬಿದ್ದರೆ ನುಸುಳಿ
ಬರಬಹುದು
ಕಾಲು ಕೆರೆದು ನಿಂತ ಗೂಳಿಯನು
ಬಗ್ಗಿಸಬಹುದು
ಜ್ಞಾನದ ಬಡತನವಿರಲು ಎಲ್ಲದರಲ್ಲೂ
ಬೋರಯ್ಯ —ರತ್ನದೀಪ

ಒಪ್ಪಿ ಭಜಿಸುವ ಮನಸ್ಸಿರಬೇಕು
ಒಪ್ಪದಿಂದ ಅರಿವ ಗುಣ ಸಂಪತ್ತು
ಇರಬೇಕು
ನಿತ್ಯ ಪೂಜೆಗೈಯಲು ನಿರ್ಮಲ
ಚಿತ್ತವಿರಬೇಕು
ಭಕ್ತನ ಮನಸು ಏಕಾಗ್ರತೆಯಿಂದಿರಬೇಕು
ಭಕ್ತಿ ತಾನೆಂದು ಹುಂಬಿನಲಿ ಪೂಜೆ
ಗೈಯಲು
ಒಲಿಯುವನೆ ಶಿವನು ಮುನಿದೋಡು
ನಾನಯ್ಯ –ರತ್ನದೀಪ

ಕನ್ನಡಿಯೊಳಗಿನ ಬಿಂಬ ಕಂಡು
ಬೀಗದಿರು ತರುಣಿ
ಅಮೂಲ್ಯ ವೇಳೆಯನ್ನು ಕಬಳಿಸುವುದು
ಕನ್ನಡಿಯೊಳಗಿನ ಬಿಂಬ
ನಿನ್ನ ಗುರಿಯನ್ನು ನುಂಗಿ
ಸೌಂದರ್ಯದ ಹುಚ್ಚು ಹಿಡಿಸಿ.
ಅಲಂಕಾರದ ಅಮಲೇರಿಸಿ
ನಿತ್ಯ ಕಾಯಕದ ಕರ್ತವ್ಯ ಮರೆಸಿ
ದುಃಖದ ಮೂಲಕ್ಕೆ ಹೊಯ್ಯುವುದು
ಎಚ್ಚರವಿರಲಿ —ರತ್ನದೀಪ

ಕಾಮ ಕಿಡಿಯಾಗಬಹುದು
ಕೋಟಿ ಕುರಿತಾಗಿ ಬಹುದು
ಹರಿಯಬಿಟ್ಟು ಮನಸು ಹಾವಾಗಬಹುದು
ಮೋಹ ಮನದ ಪರದೆ ಮುಚ್ಚಬಹುದು
ಕಾಮ ದಾಹಕ್ಕೆ ಕುರುಡಾಗದಿರು
ವಂದಿಸಿದವಳನುಳಿದು ಉಳಿದವರು
ತಾಯಂದಿರು ಸೋದರಿಯರೆಂದೆಣಿಸು
ನಿನ್ನ ಕಣ್ತೆರೆಯುವುದು —ರತ್ನದೀಪ

ಅಗಸನಿಗೆ ಯಾರು ಬಟ್ಟೆಯಾದರೇನು?
ಒಗೆಯುವುದು ಅವನ ಕಾಯಕ
ಕತ್ತೆಗೆ ಯಾವ ಹೊರೆಯಾದರೇನು
ಹೊರುವುದು ಅದರ ಕಾಯಕ
ಅಗಸನಿಗಿಲ್ಲ ಅದರ ಚಿಂತೆ

ಮೌಢ್ಯ ತುಂಬಿದ ಮನಕೆ
ಜ್ಞಾನ ನೀಡಯ್ಯ
ಕತ್ತಲು ತುಂಬಿದ ಮನಕೆ
ಅರಿವಿನ ಬೆಳಕು ನೀಡಯ್ಯ
ಕತ್ತಲಲ್ಲಿ ಹುದುಗಿರುವ ಭಾವನೆಗಳಿಗೆ
ಬೆಳಕು ನೀಡಯ್ಯ
ಬೆತ್ತಲಾದ ಮನಕೆ
ವಚನದ ಬಟ್ಟೆ ತೊಡಿಸಯ್ಯ
ಬೆತ್ತಲಾದ ಮನದಲ್ಲಿ ವಚನಗಳು
ಅರಳುವಂತೆ ಮಾಡಯ್ಯ – ರತ್ನದೀಪ

ಕಾಯಕ ಮಾಡಿದೆ
ಕೈಲಾಸಂ ಬೇಡಿದರೆಂತಯ್ಯ?
ಮೋಹ ತೊರೆಯದೆ
ಮೋಕ್ಷ ಬೇಡಿದರೆಂತಯ್ಯ?
ಸೌಹಾರ್ದತೆ ಇಲ್ಲದೆ
ಸಂಭ್ರಮ ಬೇಡಿದರೆಂತಯ್ಯ?
ಸಂಬಂಧದ ಮೌಲ್ಯವನರಿಯದೆ
ಸ್ನೇಹ ಬೇಡಿದರೆಂತಯ್ಯ?
ಎಲ್ಲರೊಳಗೆ ಒಂದಾಗಿ ಬೆರೆಯದಿರಲು
ಏನಿದ್ದರೂ ಫಲವಿಲ್ಲಯ್ಯ – ರತ್ನದೀಪ

ಅರಗಿನ ಮನೆಯೊಳಗಿದ್ದು
ಅಗ್ನಿಗೆ ಅಂಜಿದೊಡೆಂತಯ್ಯ?
ಅಂದರೆ ಮಡದಿಯನು ಕೂಡಿ
ನಿಂದನೆಗೆ ಅಂಜಿದೊಡೆಂತಯ್ಯ?
ಸಾಕುವ ಶಕ್ತಿಯಿಲ್ಲದೆ ಕಂದನ ಪಡೆದು
ನಾಡಿನ ಮೇಲೆ ಬಿಸುಟರೆಂತಯ್ಯ ?
ಕೈಯಲ್ಲಿ ಖಡ್ಗವಿದ್ದರೂ ರಕ್ಷಿಸಿಕೊಳ್ಳಲು
ಹಿಂಜರಿದರೆಂತಯ್ಯ? – ರತ್ನದೀಪ
************************

One thought on “ಆಧುನಿಕ ವಚನಗಳು

  1. ನಿಮ್ಮ ಎಲ್ಲಾ ಆಧುನಿಕ ವಚನಗಳು ಅರ್ಥಗರ್ಭಿತ ಮತ್ತು ಮನಸ್ಸಿನ ಮೇಲೆ ಆರೋಗ್ಯಕರ ಪರಿಣಾಮ ಬೀರುವಲ್ಲಿ ಸಶಕ್ತವಾಗಿವೆ.ಅಭಿನಂದನೆಗಳು ಮೇಡಂ.- ಡಾ.ಬಸವರಾಜ.ಪಿ.ನಾಯಕ ಕನ್ನಡ ಉಪನ್ಯಾಸಕರು ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು.ಜಿಲ್ಲಾ ರಾಯಚೂರು.8618227755.

Leave a Reply

Back To Top