ಮುಂಜಾವಿನ ಬೆರಗು

ಕವಿತೆ

ಮುಂಜಾವಿನ ಬೆರಗು

ಡಾ.ಪ್ರೀತಿ ಕೆ.ಎ.

Field, Teddy Bear, Grass, Model, Nature

ಅದೊಂದು ತಿಳಿ ಮುಂಜಾವು
ಎದ್ದಿದ್ದೆ ನಿನ್ನ ನೆನಪುಗಳಿಂದ
ಕಣ್ಣ ಮೇಲಿನ ಮುಂಗುರುಳನ್ನು
ಹಗೂರಕ್ಕೆ ಹಿಂದೆ ಸರಿಸಿ
ಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇ
ಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ

ನಿನ್ನೆವರೆಗೆ ಮೊಗ್ಗಾಗಿದ್ದ
ಕೆಲವೇ ಕೆಲವು ಗಳಿಗೆಗಳ
ಹಿಂದಷ್ಟೇ ಹೂವಾಗಿ ಬಿರಿದ
ಆ ಸೇವಂತಿಗೆಯ ಮೃದು ಪಕಳೆಗಳಿಗೆ
ನಿನ್ನದೇ ಮೈಯ ಘಮ

ಚೀವ್ ಚೀವ್ ಗುಬ್ಬಿಮರಿಗಳ
ಜೊತೆ ಸೇರಿದ ಹೊಸ ಹಕ್ಕಿಗಳ
ಸಂಗೀತ ಸುಧೆಯಲ್ಲಿ
ನಿನ್ನದೇ ನಾದ

ಮೆಲ್ಲನೇ ಬೀಸುತ್ತಿರುವ
ತಂಗಾಳಿಗೆ ಸಾಥ್ ಕೊಡುವಂತೆ
ಅತ್ತಿಂದಿತ್ತ ಓಲಾಡುತ್ತಿರುವ
ಆ ಎಳೇ ಸಂಪಿಗೆ ಗಿಡಕ್ಕೆ
ನಿನ್ನದೇ ಲಯ

ನೀಲಾಕಾಶದಲ್ಲಿ ತುಸುವೇ
ಮೊಗವನ್ನು ತೋರುತ್ತಿದ್ದ
ಇದೀಗ ಬಂಗಾರದ ಬಣ್ಣದಿಂದ
ಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆ
ನಿನ್ನ ಕಣ್ಣುಗಳಲ್ಲಿದ್ದಷ್ಟೇ ಪ್ರಖರತೆ

ಅರೇ ! ಇದೇನಿದು
ನಿನ್ನ ನೆನಪುಗಳ ಬಂಧದಿಂದ
ಬಿಡಿಸಿಕೊಂಡೆ ಎಂಬುವುದು
ಬರೆಯ ಭ್ರಮೆಯಲ್ಲವಷ್ಟೇ?

ನನ್ನನ್ನು ನೀನು ಆವರಿಸಿಕೊಂಡ
ಪರಿಗೆ ಬೆರಗಾಗುತ್ತಿರುವಾಗ
ಹಿತವಾಗಿ ತಬ್ಬಿ ನಿಂತೆ
ಇದು ಕನಸಲ್ಲವೆಂದು
ಸಾಬೀತು ಪಡಿಸುವನಂತೆ…!


**********************

8 thoughts on “ಮುಂಜಾವಿನ ಬೆರಗು

Leave a Reply

Back To Top